ಬಸ್ ಪಾಸ್ ನೀಡಲು ಮನವಿ
ತುಮಕೂರು: ಕೆಎಸ್‌ಆರ್‌ಟಿಸಿ ಸಂಸ್ಥೆಯ ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ನಿವೃತ್ತ ನೌಕರರಿಗೆ ಉಚಿತ ಬಸ್ ಪಾಸ್ ಹಾಗೂ ಉಚಿತ ವೈದ್ಯಕೀಯ ಸೌಲಭ್ಯ ನೀಡುವಂತೆ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ಮನವಿ ಮಾಡಿದೆ. ನಿವೃತ್ತ ನೌಕರರು ಆರ್ಥಿಕವಾಗಿ ಮುಗ್ಗಟ್ಟು ಅನುಭವಿಸುತ್ತಿದ್ದು ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದೇ ಬರುವ 200 ಅಥವಾ 300 ಪೆನ್‌ಷನ್‌ನಲ್ಲಿ ಜೀವಿಸಬೇಕಾಗಿದೆ. ಸಂಸ್ಥೆಗೆ ನಿಷ್ಠೆರಾಗಿ ದುಡಿದು ನಿಗಮಕ್ಕೆ ಉತ್ತಮ ಆದಾಯ ಗಳಿಸಿಕೊಟ್ಟಿದ್ದೇವೆ. ಹಾಗಾಗಿ ನಿಗಮದ ನಿವೃತ್ತ ನೌಕರರಿಗೆ ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕೆಂದು ಕೋರಲಾಗಿದೆ.
ಶಾಸಕ ಷಡಕ್ಷರಿಗೆ ಯಾದವ ಸೇನೆ ಸನ್ಮಾನ
ಕ.ಪ್ರ.ವಾರ್ತೆ ತಿಪಟೂರು ಜೂ.27
ರಾಜ್ಯ ಯಾದವ ಸೇನೆ ವತಿಯಿಂದ ಶಾಸಕರಾದ ಕೆ.ಷಡಕ್ಷರಿ ಅವರಿಗೆ ಶನಿವಾರ ಅವರ ಗೃಹ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಯಾದವ ಸೇನೆಯ ರಾಜ್ಯಾಧ್ಯಕ್ಷ ಪ್ರಕಾಶ್ ಯಾದವ್ ಮಾತನಾಡಿ, ತಾಲೂಕಿನ ಜನತೆಗೆ ನೂತನ ಶಾಸಕರು ಸ್ಪಂದಿಸಿ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿಕೊಡಬೇಕು. ತಾಲೂಕಿನ ಯಾದವ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಮನವಿ ಮಾಡಿದರು. ಹಾಲೇನಹಳ್ಳಿ ಬಸವರಾಜು, ಪರಮೇಶ್ ಸೇರಿದಂತೆ ತಾಲೂಕಿನ ಯಾದನ ಸೇನೆಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಂಕುಸ್ಥಾಪನಾ ಸಮಾರಂಭ ಇಂದು
ತುಮಕೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ತುಮಕೂರು ಜಿಲ್ಲೆ ದೇವರಾಯನದುರ್ಗದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಿತ್ಯ ಅನ್ನ ಸಂತರ್ಪಣಾ ಭವನದ ಶಂಕುಸ್ಥಾಪನಾ ಸಮಾರಂಭವು ಜೂ.28ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಅವರು ವಹಿಸುವರು. ಕಾನೂನು ನ್ಯಾಯ ಮತ್ತು ಮಾನವಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನರಚನೆ ಹಾಗೂ ಪಶುಸಂಗೋಪನಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಶಿಲಾನ್ಯಾಸ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಗಣ್ಯರು ಆಗಮಿಸುವರು.
ಬಿ.ಕಾಂಗೆ ಪ್ರವೇಶ ಕಲ್ಪಿಸಲು ಒತ್ತಾಯ
ಗುಬ್ಬಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಬಿ.ಕಾಂ. ವಿಭಾಗಕ್ಕೆ ಆಸಕ್ತಿ ತೋರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿತು. ಬಿ.ಕಾಂ. ಪ್ರವೇಶಕ್ಕೆ ಇಂತಿಷ್ಟೇ ಅವಕಾಶ ಎಂದು ನಿಗದಿಗೊಳಿಸಿ ಹಲವು ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಶ ವಂಚಿತರಾಗಿತ್ತಿರುವುದು ಸರಿಯಲ್ಲ. ವಿಶ್ವವಿದ್ಯಾಲಯ ಯಾವುದೇ ನಿಯಮಾವಳಿ ಹೇರಿಲ್ಲ. ಸಾಮಾನ್ಯ ಪದವಿಯ ಎಲ್ಲಾ ವಿಭಾಗಗಳಿಗೆ ಪ್ರವೇಶ ಬಯಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಪರಿಷತ್‌ನ ಸಂಚಾಲಕ ಸಂಜಯ್ ಆಗ್ರಹಿಸಿದ್ದಾರೆ. ಕಳೆದ ವರ್ಷವು ಇದೇ ಸಮಸ್ಯೆ ತಲೆದೋರಿತ್ತು. ಈ ನಿಟ್ಟಿನಲ್ಲಿ ವಿವಿ ಜತೆಗೆ ಮಾತುಕತೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ ಎ ಬಿ ವಿ ಪಿ ಕಾರ್ಯಕರ್ತರು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಪ್ರಾಚಾರ್ಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ಟಿ. ಭೈರಪ್ಪ, ಎಬಿವಿಪಿ ಕಾರ್ಯಕರ್ತರಾದ ಮಂಜುನಾಥ್, ಶಿವಣ್ಣ, ಸುರೇಶ್, ಬಸವರಾಜು ಇದ್ದರು.
ಜಿಲ್ಲಾ ತೋಟಗಾರಿಕೆ ಸಂಘಕ್ಕೆ ಆಯ್ಕೆ
ತುಮಕೂರು: ಜಿಲ್ಲಾ ತೋಟಗಾರಿಕೆ ಸಂಘದ ತುಮಕೂರು ನಿರ್ದೇಶಕರ ಕಾರ್ಯಕಾರಿ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾಗಿ ಪಿ.ಕೃಷ್ಣಪ್ಪ, ಟಿ.ದಾಸಪ್ಪ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಪದನಿಮಿತ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನ
ಬಾಲನ್ಯಾಯಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ, ತುಮಕೂರು ಇಲ್ಲಿನ ಸದಸ್ಯತ್ವಕ್ಕಾಗಿ ಈ ಹಿಂದೆ ಅರ್ಹರಿಂದ ಈಗಾಗಲೇ ಅರ್ಜಿಗಳನ್ನು ಪಡೆಯಲಾಗಿದ್ದು, ಇತ್ತೀಚೆಗೆ ಬಂದ ಪರಿಷ್ಕೃತ ಆದೇಶದನ್ವಯ ಅಭ್ಯರ್ಥಿಗಳ ವಯೋವುತಿಯನ್ನು 35 ವರ್ಷಗಳಿಂದ 30 ವರ್ಷಗಳಿಗೆ ಹಾಗೂ ಕ್ಷೇತ್ರದಲ್ಲಿನ ಅನುಭವದ ಮಿತಿ 7 ವರ್ಷಗಳಿಂದ 3 ವರ್ಷಗಳಿಗೆ ನಿಗಧಿಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಸಮಾಜಶಾಸ್ತ್ರ, ಸಮಾಜ ಕಾರ್ಯ, ಮಕ್ಕಳ ಮನಃಶಾಸ್ತ್ರ, ಕಾನೂನು, ಮಕ್ಕಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 5ನೇ ಅಡ್ಡರಸ್ತೆ, ಅಶೋಕ ನಗರ, ತುಮಕೂರು ಇವರನ್ನು ಸಂಪರ್ಕಿಸಲು ಕೋರಿದೆ. ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಜೂ.29 ರೊಳಗೆ ಸಲ್ಲಿಸಬೇಕು, ಈಗಾಗಲೇ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ. 0816-2260020 ಸಂಪರ್ಕಿಸಬಹುದು.
ಮಾಸಾಶನ ಹೆಚ್ಚಿಸಲು ಮನವಿ
ಕಲಾವಿದರ ಮಾಸಾಶನ 1000 ದಿಂದ 3000 ವರೆಗೆ ಹೆಚ್ಚಿಸಬೇಕು ಎಂದು ಕೊರಟಗೆರೆ ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಮೈಲಾರಪ್ಪ ಮನವಿ ಮಾಡಿದ್ದಾರೆ. ಕಲಾವಿದರಿಗೆ ಮಾಸಾಶನ ಕೊಡಲು 58 ವರ್ಷದಿಂದ 55 ವರ್ಷಕ್ಕೆ ಇಳಿಸಬೇಕು. ಕಲಾವಿದರು ಮರಣ ಹೊಂದಿದ ಮೇಲೆ ಅವರ ಪತ್ನಿಗೆ 500 ಗೌರವಧನ ಅನ್ನು 1000 ಹೆಚ್ಚಿಸಬೇಕು. ಸೋಭಾನೆ ಪದ, ಜಾನಪದ ಗೀತೆ, ಕೋಲಾಟ, ಭಜನೆ ಮುಂತಾದ ಕಲಾವಿದರಿಗೆ ಯಾವುದೇ ವಿಧವಾದ ದಾಖಲೆ ಇರುವುದಿಲ್ಲ. ಆದ್ದರಿಂದ ಅವರನ್ನು ಗ್ರಾಮೀಣ ಮಟ್ಟದಲ್ಲಿ ಗುರುತಿಸಿ ಮಾಸಾಶನ ನೀಡಬೇಕು ಎಂದಿದ್ದಾರೆ.
ದೇಗುಲಕ್ಕೆ ಮೊತ್ತ ಹೆಚ್ಚಳಕ್ಕೆ ಅಭಿನಂದನೆ
ರಾಜ್ಯ ಮುಜರಾಯಿ ದೇವಾಲಯಗಳ 26988 ದೇವಾಲಯಗಳಿಗೆ ವಾರ್ಷಿಕ 12000 ಗಳಿಂದ 24000 ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿರುವುದಕ್ಕೆ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘ ಅಭಿನಂದನೆ ಸಲ್ಲಿಸಿದೆ. ಸಿದ್ಧಗಂಗಾ ಶ್ರೀಗಳ ಆಶೀರ್ವಾದದಿಂದ ಕೊಳದ ಮಠದ ಶಾಂತವೀರ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮತ್ತು ದೇವಿ ಶ್ರೀ ಗುರೂಜಿ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಈಗ ದೇವಾಲಯಕ್ಕೆ ಮೊತ್ತ ಹೆಚ್ಚಿಸಿ ಆದೇಶ ನೀಡಿರುವುದಕ್ಕೆ ಸಂಘದ ಅಧ್ಯಕ್ಷ ವಿ. ರಾಮತೀರ್ಥನ್, ಕಾರ್ಯದರ್ಶಿ ಗಿರಿಧರ ಭಟ್ಟಾಚಾರ್ಯ, ಎಸ್‌ಎಲ್‌ಎನ್ ಭಟ್ಟ, ಎಚ್.ಎನ್. ರಾಮಸ್ವಾಮಿ, ಶಿವಣ್ಣ, ಸಿದ್ಧಲಿಂಗರಾಧ್ಯ, ಬಸವರಾಜು, ನಾಗಲಿಂಗಚಾರ್, ರಂಗಸ್ವಾಮಿ, ಸದಾಶಿವಯ್ಯ, ಕೆ.ಟಿ.ಲಕ್ಷ್ಮೀಪತಿ, ಪ್ರಹ್ಲಾದ್, ಶಿವಕುಮಾರ್, ಮುಕುಂದರಾಜ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದಿಸಿದ್ದಾರೆ.
ಸಸಿ ನೆಟ್ಟ ಸ್ಕೌಟ್, ಗೈಡ್ ಮಕ್ಕಳು
ಅರಣ್ಯ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಆಶ್ರಯದಲ್ಲಿ ಪರಿಸರ ಅಧ್ಯಯನದ ಅಂಗವಾಗಿ ಸುಮಾರು 5 ಶಾಲೆಯಿಂದ 180 ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಪರಿಸರ ಪ್ರೀತಿ ಮೆರೆದರು. ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಮುಖ್ಯ ಆಯುಕ್ತೆ ಆಶಾ ಪ್ರಸನ್ನಕುಮಾರ್, ಶುಭಾಷಿಣಿ ಆರ್. ಕುಮಾರ್, ಸುರೇಂದ್ರ ಷಾ, ಕರಿಸಿದ್ದಪ್ಪ, ನರಸಿಂಹಮೂರ್ತಿ ಮುಂತಾದವರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.
ಅರ್ಜಿ ಆಹ್ವಾನ
ಅವೋಪ ಮತ್ತು ಅವೋಪ ಚಾರಿಟಬಲ್ ಟ್ರಸ್ಟ್ ವತಿಯಿಂದ ತುಮಕೂರಿನಲ್ಲಿ ನಡೆಯುತ್ತಿರುವ ಅವೋಪ ಉಚಿತ ವಿದ್ಯಾರ್ಥಿ ನಿಲಯಗಳಿಗೆ 2013-14ನೇ ಸಾಲಿನ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರ್ಯವೈಶ್ಯ ಜನಾಂಗದ ಬಡ ಹಾಗೂ ಅರ್ಹ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಇದೆ. ಡಿಪ್ಲೋಮಾ ಹಾಗೂ ಪಿಯುಸಿ ಮೇಲ್ಪಟ್ಟ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಂ.ನಾಗಸುಂದರ್, ಚಾರ್ಟರ್ಡ್ ಅಕೌಂಟೆಂಟ್, 1ನೇ ಮೈನ್, 1ನೇ ಕ್ರಾಸ್, ಮೊದಲನೇ ಮಹಡಿ, ಚಂದ್ರಪ್ಪ ಕಾಂಪೌಂಡ್, ಸಿದ್ಧಗಂಗಾ ಬಡಾವಣೆ, ತುಮಕೂರು ಇಲ್ಲಿ ಅರ್ಜಿ ಪಡೆದು ಜುಲೈ 10ರೊಳಗೆ ಸಲ್ಲಿಸಬೇಕು.
ಚಿತ್ರಕಲೆ, ಪ್ರಬಂಧ ಸ್ಪರ್ಧೆ ವಿಜೇತರು
ವಿಶ್ವ ಪರಿಸರ ದಿನ ಅಂಗವಾಗಿ ತುಮಕೂರು ನಗರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವಿದ್ಯಾರ್ಥಿಗಳಿಗೆ ಆಹಾರ ವ್ಯರ್ಥ ಪರಿಸರಕ್ಕೆ ಮಾರಕ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ತುಮಕೂರು ವಿಜ್ಞಾನ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಕಾರದೊಂದಿಗೆ ನಡೆಸಿದ ಸ್ಪರ್ಧೆಯಲ್ಲಿ ಈ ಕೆಳಕಂಡ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಚಿತ್ರಕಲಾ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಥಮ, ವಂದನ ದ್ವಿತೀಯ, ಎಂ.ವಿ. ಜಯಂತ ತೃತೀಯ ಹಾಗೂ ಯಶಸ್ ಡಿ.ಕೆ. ಸಮಾಧಾನಕರ. ಹಾಗೆಯೇ ಪ್ರಗತಿ ಪ್ರಥಮ, ಪೂಜಾ ಎನ್. ದ್ವಿತೀಯ ಶ್ರೀಕೃಷ್ಣ ಎಸ್ ತೃತೀಯ ಹಾಗೂ ರಾಹುಲ್ ಜೈನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಕೀರ್ತನಾ ಪ್ರಥಮ, ದಿನೇಶ್ ಕೆ.ಆರ್. ನಾವಡ ದ್ವಿತೀಯ, ಹರ್ಷಿತ ಎ.ಬಿ. ತೃತೀಯ ಹಾಗೂ ಸಾದಿಯಾ ಫರ್‌ಹೀನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಹಾಗೆಯೇ ಸೌಖ್ಯ ಪ್ರಥಮ, ವಿಸ್ಮಯ ದ್ವಿತೀಯ, ಜ್ಞಾನೇಶ್ ತೃತೀಯ ಸ್ಥಾನ ಪಡೆದಿದ್ದಾರೆ. ಇದೇ ತಿಂಗಳ 27 ರಂದು ಎಂಪ್ರೆಸ್ ಕಾಲೇಜಿನಲ್ಲಿ ಈ ಪ್ರಶಸ್ತಿ ವಿತರಿಸಲಾಗುವುದು.
ನಾಳೆ ಅಲೆಮಾರಿ ಸಭೆ
ತುಮಕೂರು: ಇಲ್ಲಿನ ಕೆ.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಇದೇ ತಿಂಗಳ 29 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲೆಯ 10 ತಾಲೂಕುಗಳ 11 ವಿಧಾನಸಭಾ ಕ್ಷೇತ್ರಗಳ ತಾಲೂಕು ಸಮಿತಿಗಳ ರಚನೆ ಮತ್ತು ಜನಾಂಗದ ಕುಂದುಕೊರತೆ ನಿವಾರಣೆ ಕುರಿತ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ಬಾಲಗುರುಮೂರ್ತಿ ಹಾಗೂ ಚಿಂತಕ ಕೆ. ದೊರೆರಾಜು ಭಾಗವಹಿಸಲಿದ್ದಾರೆ. ಸಂಘದ ಜಿಲ್ಲಾ ಅಧ್ಯಕ್ಷೆ ರಾಮಕ್ಕ ಉಪಸ್ಥಿತರಿರುವರು. ಈ ಸಭೆಗೆ 10 ತಾಲೂಕುಗಳ 11 ವಿಧಾನಸಭಾ ಕ್ಷೇತ್ರಗಳ ಅಲೆಮಾರಿ ಬುಡಕಟ್ಟು ಸಮುದಾಯದ ಮುಖಂಡರು ಭಾಗವಹಿಸಿ ಸಲಹೆ, ಸೂಚನೆ ನೀಡುವುದರ ಜತೆಗೆ ತಾಲೂಕು ಸಮಿತಿಗಳ ಪುನಾರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷೆ ರಾಮಕ್ಕ ಮನವಿ ಮಾಡಿದ್ದಾರೆ. ಮಾಹಿತಿಗೆ ಡಾ. ಬಾಲಗುರುಮೂರ್ತಿ 9341341124 ಹಾಗೂ ರಾಮಕ್ಕ 9945740580 ಸಂಪರ್ಕಿಸಬಹುದು.
ಕ್ಯಾಂಪಸ್ ಸಂದರ್ಶನ
ಇಲ್ಲಿನ ಸಿದ್ಧಗಂಗಾ ಐಟಿಐನಲ್ಲಿ ಇದೇ ತಿಂಗಳ 28ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಡಾಬಸ್‌ಪೇಟೆಯ ಡಸ್ಟ್‌ವೆನ್ ಕಂಪನಿಯು ಕ್ಯಾಂಪಸ್ ಸಂದರ್ಶನ ಏರ್ಪಡಿಸಿದೆ. ಉದ್ಯೋಗಾರ್ಥಿಗಳು ಐಟಿಐ ನಲ್ಲಿ ತೇರ್ಗಡೆ ಹೊಂದಿರಬೇಕು. ಫಿಟ್ಟರ್ ಮತ್ತು ವೆಲ್ಡರ್ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ, ಐಟಿಐ ಫ್ರೆಷರ್ಸ್ ಮತ್ತು ಅನುಭವಸ್ಥರು ಸಂದರ್ಶನಕ್ಕೆ ಬರಬಹುದು. ಸಂದರ್ಶನಕ್ಕೆ ಎಸ್ ಎಸ್‌ಎಲ್‌ಸಿ ಮತ್ತು ಐಟಿಐ ಅಂಕಪಟ್ಟಿ ತರಬೇಕು ಎಂದು ಪ್ರಾಂಶುಪಾಲ ಎನ್. ಸುನಿಲ್ ತಿಳಿಸಿದ್ದಾರೆ.