'5 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ'
ವಿದ್ಯುಚ್ಛಕ್ತಿ ಉತ್ಪಾದನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಕ.ವಿ.ನಿ. ಮುಖ್ಯ ಎಂಜಿನಿಯರ್ ಎಂ.ಶಿವಮಲ್ಲು
ಕ.ಪ್ರ.ವಾರ್ತೆ ತುಮಕೂರು ಜೂ.28
ರಾಯಚೂರು, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಮುಂದಿನ 5 ವರ್ಷಗಳಲ್ಲಿ 5 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಎಂಜಿನಿಯರ್ ಎಂ. ಶಿವಮಲ್ಲು ತಿಳಿಸಿದರು.
ಇಲ್ಲಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ವಿಭಾಗ ಹಮ್ಮಿಕೊಂಡಿದ್ದ ವಿದ್ಯುಚ್ಛಕ್ತಿ ಉತ್ಪಾದನೆ ಕುರಿತ ಮೂರು ದಿವಸಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸುವ ಸಲುವಾಗಿ ಬೃಹತ್ ಪ್ರಮಾಣದ ಶಾಖೋತ್ಪನ್ನ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸೂಪರ್ ಕ್ರಿಟಿಕಲ್ ತಂತ್ರಜ್ಞಾನದ ಮೂಲಕ ಯೆರಮರಸ್ನಲ್ಲಿ 800 ಮೆಗಾವ್ಯಾಟ್ ಸಾಮರ್ಥ್ಯದ ಎರಡು, ಬಿಟಿಪಿಎಸ್ನಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕ ನಿರ್ಮಿಸಲಾಗುವುದು. ರಾಮನಗರ ಜಿಲ್ಲೆ ಬಿಡದಿ ಸಮೀಪ 700 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ಸ್ಥಾವರ ನಿರ್ಮಾಣಕ್ಕೆ ಪರವಾನಗಿ ದೊರೆತಿದೆ. ಶೀಘ್ರವೇ ಯೋಜನೆ ಆರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಶಾಖೋತ್ಪನ್ನ ಘಟಕಗಳಿಂದ ಅಲ್ಲದೇ ಛತ್ತೀಸ್ಗಡದಲ್ಲಿ 800 ಮೆಗಾವ್ಯಾಟ್ ಸಾಮರ್ಥ್ಯದ 2 ಪಿಟ್ಹೆಡ್ ಘಟಕಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ರಾಯಚೂರಿನ ಎಡ್ಲಾಪುರದಲ್ಲಿ 800 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ಆರಂಭಿಸಲು ಪರಿಸರ ಹಾಗೂ ಅರಣ್ಯ ಸಚಿವಾಲಯದ ಪರವಾನಗಿಗೆ ಕಾಯಲಾಗುತ್ತಿದೆ. ಅನುಮತಿ ಸಿಕ್ಕ ಕೂಡಲೇ ಯೋಜನೆ ಆರಂಭಿಸಲಾಗುವುದು ಎಂದರು.
ಜಲವಿದ್ಯುತ್ಯೋಜನೆಗಳ ಪೈಕಿ ಗುಂಡ್ಯಾದಲ್ಲಿ 200, ಶಿವನಸಮುದ್ರದಲ್ಲಿ 345 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ಈ ಯೋಜನೆಗಳಿಗೆ ವಿವಿಧ ಸಂಸ್ಥೆಗಳಿಂದ ಇನ್ನೂ ಪರವಾನಗಿ ದೊರೆತಿಲ್ಲ ಎಂದರು.
1970ರಲ್ಲಿ ಕರ್ನಾಟಕ ವಿದ್ಯುತ್ ನಿಗಮ 746 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿತ್ತು. ಪ್ರಸ್ತುತ ಇದು 6500 ಮೆಗಾವ್ಯಾಟ್ಗೆ ಹೆಚ್ಚಳವಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯುತ್ ಗುಣಮಟ್ಟದಲ್ಲಿ ಬದಲಾವಣೆ ತರಲಾಗುವುದು. ಈಗ ಇರುವ ಯಂತ್ರೋಪಕರಣ ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಶರಾವತಿ ವಿದ್ಯುತ್ ಕೇಂದ್ರದಲ್ಲಿ 891 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಸಿದ್ಧಾರ್ಥ ತಾಂತ್ರಿಕ ಕಾಲೇಜು ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ, ಪ್ರಾಂಶುಪಾಲ ಡಾ. ಕೆ.ಎ. ಕೃಷ್ಣಮೂರ್ತಿ, ಬಿ.ರಾಜೇಶ್ ಕಾಮತ್, ಕೆ.ಆರ್.ಜಗದೀಶ್, ಕೆ.ಆರ್.ಪುನೀತ್ ಇದ್ದರು.