ಜನರ ಪ್ರತಿನಿಧಿ ಆಗುವುದು ಪೂರ್ವಜನ್ಮದ ಪುಣ್ಯ
ಕ.ಪ್ರ. ವಾರ್ತೆ ಮಧುಗಿರಿ ಜೂ.28
ತನ್ನ ಹುಟ್ಟೂರಿನ ಋಣ ತಿರೀಸಲು ಗ್ರಾಮೀಣ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉಚಿತ ಸಮವಸ್ತ್ರ, ನೋಟ್ ಪುಸ್ತಕ ವಿತರಿಸುವ ನಿಟ್ಟಿನಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಎಂ.ಜಿ. ಶ್ರೀಧರ್ ಅವರ ಕಾರ್ಯ ಮೆಚ್ಚುವಂಥದ್ದು ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ಇಲ್ಲಿನ ಮುದ್ದೇನಹಳ್ಳಿಯಲ್ಲಿ ಸಮಾಜ ಸೇವಕ ಎಂ.ಜಿ.ಶ್ರೀಧರ್ ಏರ್ಪಡಿಸಿದ್ದ 2ನೇ ವರ್ಷದ ಗ್ರಾಮೀಣ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ ಹಾಗೂ ನೂತನ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ಏರ್ಪಡಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಂ.ಜಿ. ಶ್ರೀಧರ್ ಚಿಕ್ಕ ವಯಸ್ಸಿನಲ್ಲಿಯೇ ಬಡತನದಿಂದ ಬೇಸತ್ತು ಬೆಂಗಳೂರಿಗೆ ಹೋಗಿ ಶ್ರಮ ವಹಿಸಿ ದುಡಿದು ಹುಟ್ಟೂರಿನ ನೆಲದ ಋಣ ತೀರಿಸಲು ಪಣತೊಟ್ಟು, ಶಾಲಾ ಮಕ್ಕಳಿಗೆ ಕೈಲಾದ ಮಟ್ಟಿಗೆ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದರು.
ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ, ವಿಶ್ವಾಸದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಿಮ್ಮ ಪ್ರೀತಿಗೆ ನಾನು ಎಂದೆಂದಿಗೂ ಚಿರಋಣಿ. ಅದನ್ನು ಉಳಿಸಿಕೊಳ್ಳುವ ವಿಶ್ವಾಸ, ಶಕ್ತಿ ನನಗಿದೆ. ಜನರ ಪ್ರತಿನಿಧಿ ಆಗುವುದೆಂದರೆ ಅದು ಪೂರ್ವ ಜನ್ಮದ ಪುಣ್ಯ. ಆ ಸ್ಥಾನಕ್ಕೆ ಬಂದ ನಂತರ ಜನರ ನಿರೀಕ್ಷೆ ಅನುಗುಣವಾಗಿ ಸ್ಪಂದಿಸಿ ಕೆಲಸ ಮಾಡಬೇಕು. ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿದರೆ ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ. ಈ ಕ್ಷೇತ್ರದ ಜನರು ಮತ ನೀಡಿ ಗೆಲ್ಲಿಸಿದ್ದಾರೆ. ಆದ ಕಾರಣ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ನನ್ನ ಜವಾಬ್ದಾರಿ ಎಂದರು.
ಈ ಭಾಗಕ್ಕೆ ಪಶು ವೈದ್ಯ ಆಸ್ಪತ್ರೆ, ಪಿಯು ಕಾಲೇಜು ಹಾಗೂ ಸಾರಿಗೆ ವ್ಯವಸ್ಥೆ ಕೇಳಿದ್ದು, ಇನ್ನು 3 ತಿಂಗಳ ಒಳಗಾಗಿ ಉಪ ಸಾರಿಗೆ ಕಚೇರಿ, 6 ತಿಂಗಳ ಒಳಗೆ ಕೆಎಸ್ಆರ್ಟಿಸಿ ಡಿಪೋ, ಮಂಜೂರು ಮಾಡಿಸುವುದಾಗಿ ರಾಜಣ್ಣ ಭರವಸೆ ನೀಡಿದರು.
ಈಗಾಗಲೇ ಮುದ್ದೇನಹಳ್ಳಿ ಪಕ್ಕದಲ್ಲೇ ಸಿದ್ಧಗಂಗಾ ಮಠದ ಪ್ರೌಢಶಾಲೆ ನಡೆಯುತ್ತಿದೆ. ಅವರ ಮನವೊಲಿಸಿ ಪಿಯು ಕಾಲೇಜು ಪ್ರಾರಂಭಿಸುವಂತೆ ಮನವಿ ಮಾಡೋಣ. ಈ ಭಾಗದಲ್ಲಿ ಗ್ರಾಮೀಣ ಸೇರಿಗೆ ಕೇಳಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ರಾಜಣ್ಣ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಸೇವಕ ಎಂ.ಜಿ.ಶ್ರೀಧರ, ಈ ಕುಗ್ರಾಮದಲ್ಲಿ ಹುಟ್ಟಿ ಬೆಂಗಳೂರಿಗೆ ಹೋಗಿ 18 ವರ್ಷಗಳ ಕಾಲ ನಿರಂತರವಾಗಿ ದುಡಿದಿದ್ದೇನೆ. ಹುಟ್ಟೂರಿನ ಋಣ ತಿರೀಸಲು ಶಾಲಾ ಮಕ್ಕಳಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಹಸ್ತ ನೀಡಬೇಕು ಎಂಬ ಹಂಬಲ ನನ್ನದಾಗಿತ್ತು. ಆದ್ದರಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಸಮವಸ್ತ್ರ ಕೊಡುವ ಮೂಲಕ ಸಮಾಜ ಸೇವೆಗೆ ತೊಡಗಿಸಿಕೊಂಡಿದ್ದನೆ. ದಿನದ ನನ್ನ ಸಂಪಾದನೆಯಲ್ಲಿ ಇಂತಿಷ್ಟು ಹಣ ಸಮಾಜ ಸೇವೆಗೆ ಮೀಸಲಿಟ್ಟು ಅದನ್ನು ಗ್ರಾಮದ ದೇವಾಲಯ ಹಾಗೂ ಸಮಾಜ ಮುಖಿ ಕೆಲಸಕ್ಕೆ ಬಳಸುತ್ತೇನೆ ಎಂದರು.
ಜಿ.ಪಂ. ಸದಸ್ಯ ಎಚ್.ಕೆ. ಚಮಾರಯ್ಯ ಮಾತನಾಡಿದರು. ಮುಖಂಡ ಎಸ್.ಡಿ. ಕೃಷ್ಣಪ್ಪ, ತಾ.ಪಂ. ಅಧ್ಯಕ್ಷೆ ಯಶೋದಾ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಗಂಗಾಂಬಿಕೆ, ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಂ.ಬಿ. ಮರಿಯಣ್ಣ, ಎನ್.ಗಂಗಣ್ಣ, ಮಧುಚಂದ್ರ, ಶ್ರೀಧರ, ಎಂ.ಜಿ.ಶ್ರೀನಿವಾಸಮೂರ್ತಿ, ಸಿದ್ಧಪ್ಪ, ಸದಾನಂದದಾಸ್, ನಾಗರಾಜು ಮತ್ತಿತರರು ಇದ್ದರು.
ಇದೇ ಸಂದರ್ಭ ಕೆ.ಎನ್. ರಾಜಣ್ಣ ಅವರನ್ನು ಗೌರವಿಸಲಾಯಿತು. ಡಿ.ಟಿ.ಸಂಜೀವಮೂರ್ತಿ ಸ್ವಾಗತಿಸಿ ವಂದಿಸಿದರು.