ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇಸಿ ಆರ್ಟಿಸಾನ್, ಕ್ಲಸ್ಟರ್ ಹಬ್ ಬಗ್ಗೆ ಸಿಎಂಗೆ ಸಂಸದರ ಮನವರಿಕೆ

Srinivasa Murthy VN
Updated On : 28 Jun 2013, 11:11 am

ಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಸಂಸದ ಜಿ.ಎಸ್. ಬಸವರಾಜು ಮನವಿ
ಕ.ಪ್ರ.ವಾರ್ತೆ ತುಮಕೂರು ಜೂ.28

ತುಮಕೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ದೇಸಿ ಆರ್ಟಿಸಾನ್, ಕ್ಲಸ್ಟರ್ ಹಬ್ ಬಗ್ಗೆ ಮುಖ್ಯಮಂತ್ರಿ  ಸಿದ್ಧರಾಮಯ್ಯ ಅವರಿಗೆ ಸಂಸದ ಜಿ.ಎಸ್. ಬಸವರಾಜ್ ಅವರು, ವಿಧಾನ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ವಿ.ಎಸ್. ಉಗ್ರಪ್ಪ ಅವರು ಯೋಜನೆಯ ರೂಪುರೇಷೆ ಬಗ್ಗೆ ಮನವರಿಕೆ ಮಾಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಭೇಟಿಯಾಗಿ ಯೋಜನೆ ಅನುಷ್ಠಾನಕ್ಕೆ ಮುಂಗಡ ಪತ್ರದಲ್ಲಿ ಹಣ ಮೀಸಲಿಡಲು ಸಹ ಮನವಿ ಮಾಡಲಾಯಿತು. ತುಮಕೂರು ಜಿಲ್ಲೆಯಲ್ಲಿ ಸುಮಾರು 100 ಸಮುದಾಯಗಳಿಗೂ ಹೆಚ್ಚು ಜನಾಂಗ ವಾಸಿಸುತ್ತಿದ್ದಾರೆ. ಅವರ ಮೂಲ ಕಸುಬುಗಳ ಜೊತೆಗೆ ಆಸಕ್ತರು ಎಲ್ಲಾ ಕಸುಬುಗಳನ್ನು ಕೈಗೊಂಡಿದ್ದಾರೆ.
ಜಿಲ್ಲೆಯ ರೈತರು ತನ್ನ ಬೆಳೆಗಳನ್ನು ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ಮಾಡುವುದು ಸಹ ಕುಲ ಕಸುಬುಗಳೇ ಆಗಿವೆ. ತುಮಕೂರು ಜಿಲ್ಲೆಗೆ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪನ್ನ ವಲಯ ಮಂಜೂರಾಗಿದೆ. ಈ ಯೋಜನೆಗೆ ಸುಮಾರು 12500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಇದರಲ್ಲಿ ಶೇ 30 ರಷ್ಟು ಎಂಎಸ್‌ಎಂಇ ಯೋಜನೆಗೆಳು ಜಾರಿಯಾಗಬೇಕಿದೆ.
ಇದರಲ್ಲಿ ಸುಮಾರು 150 ಉತ್ಪನ್ನಗಳ ಕ್ಲಸ್ಟರ್ ಸ್ಥಾಪಿಸಲು ತಲಾ 10 ಎಕರೆಯಂತೆ 1500 ಎಕರೆ ಪ್ರದೇಶದಲ್ಲಿ  ಮೀಸಲಿಡುವುದು. ಮಾಸ್ಟರ್ ಪ್ಲಾನ್‌ನಲ್ಲಿ ನಿರ್ದಿಷ್ಟ ಉತ್ಪನ್ನದ ಕ್ಲಸ್ಟರ್‌ಗಾಗಿ ಜಾಗ ಮೀಸಲಿಡಬೇಕು. ಸುಮಾರು 3750 ಕೋಟಿ ವೆಚ್ಚದ ವಿಶೇಷ ಪ್ಯಾಕೇಜ್ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ರಾಜ್ಯ ಸರ್ಕಾರ ತನ್ನ ಪಾಲಿನ 637.50 ಕೋಟಿ ಮುಂಗಡ ಪತ್ರದಲ್ಲಿ ಮೀಸಲಿಡಲು ಒತ್ತಾಯಿಸಿದ್ದಾರೆ.
ಸಣ್ಣ ಕೈಗಾರಿಕಾ ಸಚಿವ ಪ್ರಕಾಶ್ ಬಿ.ಹುಕ್ಕೇರಿ ರವರನ್ನು ಭೇಟಿ ಮಾಡಿ ಹಬ್‌ನ ಅನುಷ್ಠಾನದ ಬಗ್ಗೆ ಮನವರಿಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಪತ್ರ ಬರೆದಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಹಂತದ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಿರ್ದಿಷ್ಟ ರೂಪುರೇಷೆಗಳೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಚರ್ಚಿಸಲು ಸಹ ಪ್ರಸ್ತಾಪಿಸಿದ್ದಾರೆ.
ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವ ಕೆ.ಎಚ್. ಮುನಿಯಪ್ಪ ಅವರು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಅಧಿಕಾಗಳೊಂದಿಗೆ ಚರ್ಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದಲ್ಲಿ ನೆರವು ನೀಡುವ ಭರವಸೆ ನೀಡಿದ್ದಾರೆ. ಫೋರಂ ನಿಯೋಗ ಒಂದು ವಾರ ದೆಹಲಿಯಲ್ಲಿ ಮೊಕ್ಕಾಂ ಮಾಡಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಂಸದರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ನೂತನವಾಗಿ ತುಮಕೂರಿಗೆ ಆಗಮಿಸಿರುವ ಜಿಲ್ಲಾಧಿಕಾರಿ ಹಾಗೂ ತುಮಕೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್‌ನ ಪದನಿಮಿತ್ತ ಅಧ್ಯಕ್ಷರಾದ ಕೆ.ಎಸ್. ಸತ್ಯಮೂರ್ತಿ ಅವರೊಂದಿಗೂ ಈ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಅವರು ಸಹ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇಂದು ಡಿಸಿ ನೇತೃತ್ವದಲ್ಲಿ ಸಭೆ

ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಆರ್ಟಿಸಾನ್ ಹಬ್ ಪ್ರಸ್ತಾವನೆ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಸೂಕ್ತ ಶಿಫಾರ್ಸು ಮಾಡಲು ಮಹತ್ವದ ಸಭೆಯನ್ನು ಜೂ.29ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರೆಯಲಾಗಿದೆ. ಸಭೆಗೆ ಆಸಕ್ತ ಜಿಲ್ಲೆಯ ಸಂಘ ಸಂಸ್ಥೆಗಳು ಮತ್ತು ಪರಿಣಿತರನ್ನು ಸಹ ಆಹ್ವಾನಿಸಿದ್ದು, ಆಸಕ್ತರು ಸಭೆಗೆ ಆಗಮಿಸಲು ಮನವಿ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ದೇಸಿ ಆರ್ಟಿಸಾನ್, ಕ್ಲಸ್ಟರ್ ಹಬ್ ಬಗ್ಗೆ ವಿವಿಧ ಹಂತದಲ್ಲಿ ಚರ್ಚಿಸುತ್ತಿದ್ದು, ಈಗ ಅಧಿಕೃತವಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಚಾಲನೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement