ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲಿಗಾಡೆ ಬದುಕು ದಾರಿದೀಪವಾಗಲಿ: ಕರಿಬಸವಶ್ರೀ

Srinivasa Murthy VN
Updated On : 28 Jun 2013, 11:12 am

ಡಾ.ಜಯದೇವಿ ಲಿಗಾಡೆ ಜನ್ಮಶತಮಾನೋತ್ಸವ ನಿಮಿತ್ತ 100ನೇ ಉಪನ್ಯಾಸ ಕಾರ್ಯಕ್ರಮ
ಕ.ಪ್ರ.ವಾರ್ತೆ ತುಮಕೂರು ಜೂ.28
ಮಾನವ ಮೌನಿಯಾದಂತೆ ಮಹಾಜ್ಞಾನಿ ಆಗುತ್ತಾನೆ ಎಂದು ತಿಪಟೂರಿನ ವೀರಶೈವ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಕಾರಹುಣ್ಣಿಮೆಯಂದು ನಡೆದ 200ನೇ ಬೆಳದಿಂಗಳ ಶರಣಧರ್ಮ ಚಿಂತನಾಗೋಷ್ಠಿ ಹಾಗೂ ಡಾ. ಜಯದೇವಿ ತಾಯಿ ಲಿಗಾಡೆ ಅವರ ಜನ್ಮಶತಮಾನೋತ್ಸವ ನಿಮಿತ್ತ 100ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬುದ್ಧ, ಬಸವ, ಅಲ್ಲಮರು ತಮ್ಮ ಇಡೀ ಜೀವಮಾನ ಎಲ್ಲವನ್ನೂ ಜ್ಞಾನದ ಹುಡುಕಾಟದಲ್ಲಿ ಮೌನಿಯಾಗಿಯೇ ಬೆಳೆದರು. ಅವರ ಅಂತರಂಗದ ಭಾವನೆಗಳೇ ಇಂದು ಜಗತ್ತಿಗೆ ದಾರಿದೀಪವಾಗಿವೆ. ಮನುಷ್ಯ ಸ್ವಾರ್ಥದ ಬೆನ್ನೇರಿದ್ದಾರೆ. ಧಾರ್ಮಿಕ ಚಿಂತನೆಗಳಿಂದ ದೂರವಾಗಿದ್ದಾನೆ. ಕ್ಷುಲ್ಲಕ ಕಾರಣಗಳಿಂದ ರೋಷ, ದ್ವೇಷ, ಸೇಡುಗಳಿಂದ ಆತ್ಮಘಾತುಕನಾಗಿ ಕಂಟಕ ಪ್ರಾಯನಾಗಿದ್ದಾನೆ. ಜಯದೇವಿ ತಾಯಿ ಶರಣೆಯರ ಬದುಕು ಎಲ್ಲರಿಗೂ ದಾರಿದೀಪ ಆಗಲಿ. ಈ ನಿಟ್ಟಿನಲ್ಲಿ ಎಂ.ಜಿ. ಸಿದ್ದರಾಮಯ್ಯ ಅವರ 100 ಉಪನ್ಯಾಸಗಳು ಸಾರ್ಥಕವಾಗಿ ಮುಗಿದಿವೆ ಎಂದು ಆಶೀರ್ವದಿಸಿದರು.
ಸುಮಾರು 1 ವರ್ಷದಿಂದ ಡಾ.ಜಯದೇವಿ ತಾಯಿ ಲಿಗಾಡೆಯವರ ಬದುಕು, ಬರೆಹ ಸಾಧನೆ ಕುರಿತು ಮಠ, ಮಂದಿರ, ಶಾಲಾ- ಕಾಲೇಜುಗಳು, ಸಂಘ ಸಂಸ್ಥೆಗಳು, ಮನೆ ಮನೆಗಳಲ್ಲಿ ಅಲ್ಲದೇ ಕರೆದಲ್ಲಿ ಹೋಗಿ 100 ಉಪನ್ಯಾಸ ನೀಡುವ ಮೂಲಕ ಈ ಭಾಗದ ಜನರಿಗೆ ತಾಯಿಯವರ ಪರಿಚಯ ಮಾಡಿಸಿದ ಕೀರ್ತಿ ವಿದ್ವಾನ್ ಸಿದ್ದರಾಮಯ್ಯ ಅವರದ್ದು ಎಂದರು.
ಹೊರ ರಾಜ್ಯದ ಮಹಾರಾಷ್ಟ್ರದಲ್ಲಿ ಜನಿಸಿದ ಜಯದೇವಿ ತಾಯಿ ಲಿಗಾಡೆ ವಿವಾಹ ನಂತರ ಕನ್ನಡ ಕಲಿತು ಮರಾಠಿ ಮತ್ತು ಕನ್ನಡ ಭಾಷೆಗಳಲ್ಲಿ ಕಾವ್ಯ ರಚಿಸಿ, ಸ್ವಾತಂತ್ರ್ಯ ಆಂದೋಲನ, ಏಕೀಕರಣ ಚಳವಳಿಗಳಲ್ಲಿ ಭಾಗವಹಿಸಿ ಸಾಮಾಜಿಕವಾಗಿ ತೊಡಗಿಸಿಕೊಂಡು ಮಾಡಿದ ಇಡೀ ಜೀವನ ಚಿತ್ರಣವನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ತುಮಕೂರಿನ ವಕೀಲರಾದ ಎಸ್.ವಿ. ರವೀಂದ್ರನಾಥ ಠಾಗೂರ್ ಮಾತನಾಡಿ ವಿಶಾಲ ಪ್ರಪಂಚದಲ್ಲಿ ಬಾಳಿ ಬದುಕಲು ಹಿರಿಯರ ಆದರ್ಶಗಳು ದಾರಿದೀಪ. ಮಾನವೀಯ ಸಂಬಂಧಗಳಲ್ಲಿ ಸ್ಪಂದನ ಬೆರೆತಾಗ ತಾಯಿ,ತಂದೆ, ಅಣ್ಣ, ತಮ್ಮ, ಬಂಧು ಬಾಂಧವರಲ್ಲಿ ಬಿರುಕು ಮೂಡುತ್ತದೆಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಮಾಜ ಸೇವಾಕರ್ತ, ನಿವೃತ್ತ ಎಂಜಿನಿಯರ್ ಎಂ.ಟಿ. ವಿಶ್ವನಾಥಯ್ಯ ಮಾತನಾಡಿ, ಜಯದೇವಿ ಲಿಗಾಡೆ ಅವರನ್ನು ಕಣ್ಣಾರೆ ಕಂಡ ಅವರೊಂದಿಗೆ ಪಡೆದ ಅನುಭವವನ್ನು ಮೆಲುಕು ಹಾಕಿದರು.ಪೌಳಿ ಶಂಕರಾನಂದಪ್ಪ ಮಾತನಾಡಿ, ಹುಣ್ಣಿಮೆಯ ದಿನ ಅಂತರಂಗದಲ್ಲಿ ಜ್ಞಾನದ ಬೆಳಕು ತುಂಬಲಿ ಎಂದರು.
ಈ.ಲೋಕೇಶ್ವರಪ್ಪ, ಸುಮಂಗಳ ರೇಣುಕಾರಾಧ್ಯ, ವೀರಶೈವ-ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಉಪಸ್ಥಿತರಿದ್ದರು. ಮಿಮಿಕ್ರಿ ಈಶ್ವರಯ್ಯ ಪ್ರಾರ್ಥಿಸಿದರು. ಪ್ರಾಚಾರ್ಯ ಬಿ. ನಾಗರಾಜು ಸ್ವಾಗತಿಸಿದರು.
ಕೆ.ಎಂ. ಪರಮಶಿವಯ್ಯ ಶ್ರೀಗಳ ಸಂದೇಶ ವಾಚಿಸಿದರು. ಜಿ.ಎಸ್. ರಘು ಅನಿಸಿಕೆ ವ್ಯಕ್ತಪಡಿಸಿದರು. ಪರಶುರಾಮನಾಯಕ್ ವಂದಿಸಿದರು. ಎಂ.ಡಿ. ಶಿವಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement