ಲೆವಿ ಅಕ್ಕಿ ಯೋಜನೆ ರೈತ ವಿರೋಧಿ: ಎಚ್ಡಿಕೆ ಆರೋಪ
ಕ.ಪ್ರ. ವಾರ್ತೆ ಶಿರಾ ಜೂ.28
ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಸೇರಿದಂತೆ ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಇದೀಗ ರೈತರಿಂದ ಲೆವಿ ಅಕ್ಕಿ ಪಡೆಯುವ ಚಿಂತನೆ ನಡೆಸುತ್ತಿರುವುದು ರೈತ ವಿರೋಧಿ ನೀತಿ ಅನುಸರಿಸಿದಂತಾಗಿದೆ ಎಂದು ಜೆಡಿಎಸ್ ವರಿಷ್ಠ, ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ನೀತಿ ವಿರುದ್ಧ ಹರಿಹಾಯ್ದಿದ್ದಾರೆ.
ತಾಲೂಕಿನ ಮೇಲ್ಕುಂಟೆ ಗೊಲ್ಲರಹಳ್ಳಿಯಲ್ಲಿ ಸಾಲ ಬಾಧೆ ತಾಳದೆ ವಿಷ ಸೇವಿಸಿ 5 ದಿನಗಳ ಹಿಂದೆ ಮೃತಪಟ್ಟ ರೈತ ಜಯರಾಮ ರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಸಂದರ್ಭ ಅವರು ಪಟ್ಟನಾಯಕನಹಳ್ಳಿ ಶ್ರೀಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳವರೆಗೆ ವಿರೋಧ ಪಕ್ಷದಿಂದ ಯಾವುದೇ ಟೀಕೆ ಮಾಡಬಾರದು ಎಂದು ತೀರ್ಮಾನಿಸಲಾಗಿತ್ತು. ಆದರೆ, ಸರ್ಕಾರ ಪ್ರಾರಂಭದಿಂದಲೇ ತನ್ನ ಆಡಳಿತದಲ್ಲಿ ತಪ್ಪು ದಾರಿ ತುಳಿಯುತ್ತಿರುವಾಗ ಈಗಲೇ ಎಚ್ಚರಿಸಬೇಕಾದುದು ವಿರೋಧ ಪಕ್ಷದ ಕಾರ್ಯ ಹಾಗೂ ಅನಿವಾರ್ಯ ಎಂದರು.
ರಾಜ್ಯದಲ್ಲಿ ಲೆವಿ ಪದ್ಧತಿ ಜಾರಿಗೆ ಬಂದರೆ ಬತ್ತ ಬೆಳೆಯುವ ರೈತ ಸರ್ಕಾರಕ್ಕೆ ಇಂತಿಷ್ಟು ಪ್ರಮಾಣದಲ್ಲಿ ಬತ್ತವನ್ನು ನೀಡಬೇಕಾಗುತ್ತದೆ. ದರ ನಿಗದಿ ಮಾಡುವ ಅಧಿಕಾರ ಕೂಡ ರೈತರಿಗೆ ಇರುವುದಿಲ್ಲ. ಅಗತ್ಯ ಬತ್ತ ಸರ್ಕಾರಕ್ಕೆ ನೀಡದಿದ್ದರೆ ಸಾಲ ಸೂಲ ಮಾಡಿ ಬೆಳೆದ ರೈತ ಕಾನೂನು ಶಿಕ್ಷೆಗೂ ಒಳಪಡಬೇಕಾಗುತ್ತದೆ. ದೇಶದ ಬೆನ್ನೆಲುಬು ರೈತನಿಗೆ ನೆಮ್ಮದಿಯಾಗಿ ಬದುಕಲೂ ಬೀಡಲಾಗದಂತಹ ನಿರ್ಧಾರಗಳನ್ನು ಕಾಂಗ್ರೆಸ್ ಸರ್ಕಾರ ಕೈಗೊಳ್ಳುತ್ತಿರುವುದು ಸರಿಯೇ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಬೆಂಗಳೂರು ಸುತ್ತಮುತ್ತಲ ರೈತರ ಭೂಮಿ, ಕೆರೆ-ಕಟ್ಟೆಗಳನ್ನು ಕಬಳಿಸುವಂತಹ ಹುನ್ನಾರಗಳು ಕಾಂಗ್ರೆಸ್ ನೇತೃತ್ವದರಾಜ್ಯ ಸರ್ಕಾರದಿಂದ ನಡೆಯುತ್ತಿದೆ. ಇದು ರೈತ ವಿರೋಧಿ ಸರ್ಕಾರ ಎಂದರು.
ಅಧಿಕಾರಿಯೇ ಮುಖ್ಯಮಂತ್ರಿ: ಕೇಂದ್ರ ಸರ್ಕಾರದ ಎಫ್ಡಿಐ ಪಾಲಿಸಿ ಒಂದು ಗೊಂದಲದ ವಿಚಾರವಾಗಿ ಪರಿಣಮಿಸಿದೆ. ಇಂತಹ ನಿರ್ಧಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಸರ್ಕಾರ ಒಂದು ಮಹತ್ವದ ಚಿಂತನೆ ನಡೆಸಬೇಕು. ಆದರೆ ರಾಜ್ಯದ ಸಾಮಾನ್ಯ ಸರ್ಕಾರಿ ಅಧಿಕಾರಿಯೊಬ್ಬರು ತಾನೇ ಮುಖ್ಯಮಂತ್ರಿ ಎನ್ನುವಂತೆ ಎಫ್ಡಿಐ ಪಾಲಿಸಿ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಿರುವುದು ಸರಿಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಕೆಲವು ಅಧಿಕಾರಿಗಳೇ ಮುಖ್ಯಮಂತ್ರಿಗಳಂತೆ ವರ್ತಿಸುತ್ತಿದ್ದಾರೆ ಎಂದು ವಿಷಾಧಿಸಿದರು.
ಮೃತ ರೈತ ಕುಟುಂಬಕ್ಕೆ ಹತ್ತು ಸಾವಿರ ನಗದು: ಗೊಲ್ಲಹಳ್ಳಿ ಗೇಟ್ನಲ್ಲಿದ್ದ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣ 10000 ನಗದನ್ನು ಪರಿಹಾರ ರೂಪದಲ್ಲಿ ಕುಟುಂಬಕ್ಕೆ ನೀಡಿದರು.
ಶ್ರೀಮಠಕ್ಕೆ: ನಂತರ ಪಟ್ಟನಾಯಕನಹಳ್ಳಿ ಶ್ರೀಮಠಕ್ಕೆ ತೆರಳಿದ ಎಚ್.ಡಿ. ಕುಮಾರಸ್ವಾಮಿ ಅವರು ಶ್ರೀ ನಂಜಾವಧೂತ ಮಹಾಸ್ವಾಮಿಗಳ ಆರ್ಶೀವಚನ ಪಡೆದು ಅವರಿಂದ ಕೆಲ ಸಮಯ ಚರ್ಚೆ ನಡೆಸಿದರು.
ವಿಧಾನಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಮಾಜಿ ಸಚಿವ ಬಿ.ಸತ್ಯನಾರಾಯಣ, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ರಾಜ್ಯ ಸದಸ್ಯ ಬರಗೂರು ಶಿವಕುಮಾರ್, ತಾ.ಪಂ. ಅಧ್ಯಕ್ಷೆ ಗಂಗಮ್ಮ, ನಗರಸಭೆ ಸದಸ್ಯರಾದ ಆರ್.ಉಗ್ರೇಶ್, ಜಿ.ಪಂ. ಸದಸ್ಯರಾದ ಸಿ.ಆರ್. ಉಮೇಶ್, ಬಿ.ಕೆ. ಬಡೀರಣ್ಣ, ಮುದಿಮಡು ರಂಗಶಾಮಯ್ಯ, ಎಂ.ಚಿದಾನಂದ್, ಎಸ್.ಆರ್. ಗೌಡ, ಜೆಡಿಎಸ್ ವಕ್ತಾರ ಬಾಂಬೆ ರಾಜಣ್ಣ, ಎಸ್.ಎಲ್. ಗೋವಿಂದರಾಜು, ತಾ.ಪಂ. ಸದಸ್ಯರಾದ ವಿನಯ ತ್ಯಾಗರಾಜು, ಬಂಡೆ ರಾಮಕೃಷ್ಣ, ಪುಟ್ಟಸಿದ್ದಪ್ಪ ಯಾದವ್, ಚಂಪಕಮಾಲ, ಟಿ.ಡಿ. ಮಲ್ಲೇಶ್ ಸೇರಿದಂತೆ ಹಲವರು ಹಾಜರಿದ್ದರು.