ಸಾಹಿತ್ಯ ಸಮ್ಮೇಳನಕ್ಕೆ ಮುನ್ನ ಸಾಹಿತ್ಯ ಭವನ: ಸಭೆ ನಿರ್ಣಯ
ಹೊಳೆನರಸೀಪುರ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೊದಲು ಸಾಹಿತ್ಯ ಭವನಕ್ಕೆ ಮೀಸಲಾಗಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಂಡು ನಂತರ ತಾಲೂಕು ಸಮ್ಮೇಳನ ನಡೆಸಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭೆ ನಿರ್ಣಯ ಕೈಗೊಂಡಿತು. ತಾಲೂಕು ಕಸಾಪ ಅಧ್ಯಕ್ಷ ಪುಟ್ಟಸೋಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪುಟ್ಟಸೋಮಪ್ಪ ಮಾತನಾಡಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದಲ್ಲಿ ಈಗಾಗಲೆ ತಾಲೂಕು ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಅದರಂತೆ ನಮ್ಮ ತಾಲೂಕಿನಲ್ಲಿಯೂ ನವೆಂಬರ್ನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ಬಹುತೇಕ ಹಿರಿಯ ಸದಸ್ಯರು ಮಾತನಾಡಿ, ಪ್ರಸ್ತುತ ಪಟ್ಟಣದಲ್ಲಿ ಕಸಾಪಕ್ಕೆ ಶಾಶ್ವತ ಕಟ್ಟಡ ಇಲ್ಲದೆ ಬೇರೆ ಕಡೆಗಳಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಸಮ್ಮೇಳನಕ್ಕೆ ಮೊದಲು ಶಾಶ್ವತ ಕಟ್ಟಡವನ್ನು ನಿರ್ಮಿಸಿ ನಂತರ ಸಮ್ಮೇಳನದ ಬಗ್ಗೆ ಮುಂದುವರೆಯುವುದು ಸೂಕ್ತವೆಂದು ಸಲಹೆ ನೀಡಿದರು.
ಈ ಸಲಹೆ ಮೇರೆಗೆ ಅಧ್ಯಕ್ಷ ಪುಟ್ಟಸೋಮಪ್ಪ ಅವರು ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಾಗಿ ಒಂದು ಸಮಿತಿ ರಚಿಸಿ ಅದರ ಮೂಲಕ ಮುಂದುವರಿಯ ಬೇಕೆಂದು ನೀಡಿದ ಸಲಹೆಗೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಹಾಗೂ ಈ ಹಿಂದೆ ಒಂದು ಕಟ್ಟಡ ಸಮಿತಿ ಇದೆ. ಈಗ ಮತ್ತೊಂದು ಕಟ್ಟಡ ಸಮಿತಿ ರಚನೆಗೆ ಅವಶ್ಯತೆ ಇದ್ದಲ್ಲಿ ಈ ಹಿಂದಿನ ಕಟ್ಟಡ ಸಮಿತಿಯನ್ನು ವಿಸರ್ಜನೆ ಮಾಡಿ ನೂತನ ಸಮಿತಿ ರಚಿಸುವಂತೆ ನಿರ್ಣಯಿಸಲಾಯಿತು.
ಪಟ್ಟಣದ ಕಾರಂಜಿ ಕಟ್ಟೆಯಲ್ಲಿ ಒಂದು ನಿವೇಶನವಿದ್ದು, ಅದರಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಿಗೆ ಪೂರ್ಣ ಅಧಿಕಾರವನ್ನು ಸದಸ್ಯರು ನೀಡಿದರು.
ಕೆಲ ಸದಸ್ಯರು ಕಸಾಪ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳುವುದಾದರೆ ಕನ್ನಡ ಚಲನಚಿತ್ರ ರಂಗದ ಧೀಮಂತ ಗಾಯಕ ಪಿ.ಬಿ.ಶ್ರೀನಿವಾಸ್ ಅವರ ಸ್ಮರಣಾರ್ಥ ಒಂದು ಕಾರ್ಯಕ್ರಮ ಮಾಡುವಂತೆ ನೀಡಿದ ಸಲಹೆಗೆ ಸಭೆ ಒಮ್ಮತ ವ್ಯಕ್ತಪಡಿಸಿ ಅದಕ್ಕೆ ಬೇಕಾದ ರೂಪು ರೇಷೆಗಳನ್ನು ಸದಸ್ಯ ದಿವಾಕರ್ ಹಾಗೂ ಕುಮಾರಸ್ವಾಮಿಅವರಿಗೆ ವಹಿಸಿಕೊಡಲಾಯಿತು. ಮುನ್ನ ಖ್ಯಾತ ಗಮಕ ವಿದುಷಿ ಪ್ರಿಯದರ್ಶಿನಿ ಅಯ್ಯಂಗಾರ್ ನಿಧನಕ್ಕೆ ಸಭೆ ಸಂತಾಪ ಸೂಚಿಸಿತು.