ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಡ್ಡಗೆರೆ ನಾಗರಾಜಯ್ಯ ಭಾಷಣಕ್ಕೆ ಅಡ್ಡಿ

Srinivasa Murthy VN
Updated On : 1 Jul 2013, 12:20 pm

ಕ.ಪ್ರ.ವಾರ್ತೆ ತುಮಕೂರು ಜೂ.30
ಸಮ್ಮೇಳನದ ಸರ್ವಾಧ್ಯಕ್ಷ ಸಿ.ಎಚ್. ಮರಿದೇವರು ಅವರು ಬಸವಣ್ಣನವರ ವಿಚಾರಗಳಿಗೆ ವಿರುದ್ಧವಾಗಿ ದಲಿತ ಚಳವಳಿಯ ಆಶಯಗಳಿಗೆ ಧಕ್ಕೆ ತಂದವರಿಗೆ ಅಧ್ಯಕ್ಷ ಪದವಿ ನೀಡಿದ್ದಾರೆ ಎಂದು ಮರಿದೇವರು ಸಮ್ಮುಖದಲ್ಲೆ ವಡ್ಡಗೆರೆ ನಾಗರಾಜಯ್ಯ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು.
ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡುತ್ತಿದ್ದ ಅವರು ಒಬ್ಬ ದಲಿತ ಚರ್ಮವಾದ್ಯಗಾರ ನುಡಿಸುತ್ತಿದ್ದ ಟುಮುಕಿಯ ಕಾರಣದಿಂದಾಗಿ ತುಮಕೂರು ಎಂಬ ಹೆಸರು ಬಂತು. ಹಾಗಾಗಿ ಈ ಜಿಲ್ಲೆಯಲ್ಲಿ ದಲಿತ ಆಧ್ಯಾತ್ಮಿಕ ಅನುಭೂತಿಯ ಹಲವು ಕ್ಷೇತ್ರಗಳು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟವನ್ನು ಉದಾಹರಿಸುತ್ತಾ ಅಲ್ಲಿಗೆ ಅಲ್ಲಮಪ್ರಭು, ಅಕ್ಕಮಹಾದೇವಿ, ಕೈವಾರ ನಾರಾಯಣತಾತನಂತವರು ಭೇಟಿ ನೀಡುತ್ತಿದ್ದ ಕ್ಷೇತ್ರ ತುಮಕೂರು ಜಿಲ್ಲೆಯಲ್ಲೇ ಇದೆ. ಇಂತಹ ಅವಧೂತ ಆಧ್ಯಾತ್ಮಿಕ ನೆಲೆಯಿರುವ ತುಮಕೂರು ಜಿಲ್ಲೆಯ 9ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಆಯ್ಕೆಯಾಗುವಾಗ ಬಸವಣ್ಣನ ತತ್ವವನ್ನು ಪಾಲಿಸದೇ ಇರುವುದು ವಿಷಾದನೀಯ ಅಂಶ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಳಜಾತಿಯವರನ್ನು ಶ್ರೇಷ್ಠಿಕರಿಸುವ ಬಸವಣ್ಣನವರ ತತ್ವಗಳಿಗೆ ಸಮ್ಮೇಳನಾಧ್ಯಕ್ಷರು ವಿರುದ್ಧವಾಗಿದ್ದಾರೆ. ಅಲ್ಲಮನನ್ನು, ಬಸವಣ್ಣ ಶೂನ್ಯ ಸಿಂಹಾಸನಾಧೀಶ್ವರನನ್ನಾಗಿ ನೇಮಿಸಿದ್ದ ಸಂದರ್ಭವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ದೊಡ್ಡತನ: ಇದೇ ಸಂದರ್ಭದಲ್ಲಿ ತುಮಕೂರು ವಿವಿಗೆ ಸಿದ್ಧಗಂಗಾ ಶ್ರೀಗಳ ಹೆಸರನ್ನು ಇಡಲು ಪ್ರಯತ್ನಗಳು ನಡೆಯುವಾಗ ಸಿದ್ಧಗಂಗಾ ಶ್ರೀಗಳೇ ಅದನ್ನು ವಿರೋಧಿಸಿದ್ದು ಅವರ ದೊಡ್ಡತನವನ್ನು ನಾಗರಾಜಯ್ಯ ಮೆಚ್ಚುಗೆಯಿಂದ ಹೇಳಿದರು.
ಈ ಸಂದರ್ಭದಲ್ಲಿ ಮರಿದೇವರು ಮತ್ತು ಅವರ ಬೆಂಬಲಿಗರು ವರ್ತಿಸಿದ ರೀತಿಯನ್ನು ವಡ್ಡಗೆರೆ ನಾಗರಾಜಯ್ಯ ಖಂಡಿಸಿದರು. ಈ ಸಂದರ್ಭದಲ್ಲಿ ಅವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು.
ಈ ವೇಳೆಯಲ್ಲಿ ಮಾತು ನಿಲ್ಲಿಸುವಂತೆ ಆಗ್ರಹಿಸಿದ ಪ್ರೇಕ್ಷಕರ ಒತ್ತಾಯದಿಂದ ವೇದಿಕೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರ ಸಮ್ಮುಖದಲ್ಲಿ ಗೋಷ್ಠಿ ಆರಂಭಿಸಬೇಕಾಯಿತು.
ವೇದಿಕೆಯಲ್ಲಿಯೇ ಸಂಘಟಕರ ವಿರುದ್ಧ ಧಿಕ್ಕಾರ ಕೂಗಿದ ನಾಗರಾಜಯ್ಯ ವೇದಿಕೆಯಿಂದ ಕೆಳಗಿಳಿದರು. ನಂತರ ಅವರನ್ನು ವೇದಿಕೆಗೆ ಕರೆತರಲಾಯಿತು. ನಾಗಪ್ಪ ಅಧ್ಯಕ್ಷತೆಯಲ್ಲಿ ಗೋಷ್ಠಿ ಮುಂದುವರೆಸಲಾಯಿತು. ಕವಿಗೋಷ್ಠಿ ಮಧ್ಯೆ ಮತ್ತೆ ಮಾತನಾಡಲು ನಿಂತ ವಡ್ಡಗೆರೆಗೆ ವಿರೋಧ ವ್ಯಕ್ತವಾಯಿತು. ಆದರೆ ವಡ್ಡಗೆರೆ ನಾಗರಾಜಯ್ಯ ಅವರು ಆಶಯ ಮಾತುಗಳನ್ನು ಹೇಳಲೇಬೇಕು ಎಂದು ಪಟ್ಟು ಹಿಡಿದು ಮಾತು ಮುಗಿಸಿ ಕವಿತೆ ವಾಚಿಸಿದರು.
ಅರ್ಪಣೆಗೆ ಅಡ್ಡಿ: ನಂತರ ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ಅವರ ತಾವು ಓದಿದ ಬಯಕೆ ಮತ್ತು ಅಂಬೇಡ್ಕರ್  ಕವನವನ್ನು ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಚಿಂತಕ ನಟರಾಜ್ ಹುಳಿಯಾರ್ ಹಾಗೂ ಮಾಕಳ್ಳಿ ಎಸ್. ಗಂಗಾಧರಯ್ಯನವರಿಗೆ ಅರ್ಪಣೆ ಮಾಡಿದರು. ಆಗಲೂ ಕೂಡ ವಿರೋಧ ವ್ಯಕ್ತವಾಯಿತು. ಈ ಬಾರಿ ಸ್ವತಃ ಸಮ್ಮೇಳನಾಧ್ಯಕ್ಷರೇ ವಿರೋಧಿಸಿದರು.
ವಡ್ಡಗೆರೆ ನಾಗರಾಜಯ್ಯ ಅವರ ಆಶಯ ಭಾಷಣಕ್ಕೆ ಅಡ್ಡಿಯುಂಟು ಮಾಡಿದನ್ನು ವಿರೋಧಿಸಿ ದಲಿತ ಪರ ಸಂಘಟನೆಯ ಪದಾಧಿಕಾರಿಗಳು ಕಪ್ಪು ಬಾವುಟ ಪ್ರದರ್ಶಿಸಿದರು. ಅಲ್ಲದೇ ವಡ್ಡಗೆರೆ ನಾಗರಾಜಯ್ಯ ಅವರ ಭಾಷಣಕ್ಕೆ ಅಡ್ಡಿಯುಂಟು ಮಾಡಿದ ಕ್ರಮಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಪಟ್ಟು ಹಿಡಿದರು. ನಂತರ ಪ್ರತಿಭಟನಾಕಾರರನ್ನು ಸಮಾಧಾನಿಸಿ ಕವಿಗೋಷ್ಠಿ ಮುಂದುರೆಸಲಾಯಿತು.

ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟಕ್ಕೆ ಅಲ್ಲಮಪ್ರಭು, ಅಕ್ಕಮಹಾದೇವಿ, ಕೈವಾರ ನಾರಾಯಣ ತಾತನಂತವರು ಭೇಟಿ ನೀಡುತ್ತಿದ್ದ ಕ್ಷೇತ್ರ ತುಮಕೂರು ಜಿಲ್ಲೆಯಲ್ಲೇ ಇದೆ.
-ವಡ್ಡಗೆರೆ ನಾಗರಾಜಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement