ವ್ಯಕ್ತಿ ಕೊಲೆ: ದಂಪತಿಗೆ ಜೀವಾವಧಿ
ತಿಪಟೂರು: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ದಂಪತಿಗೆ ನಗರದ ತ್ವರಿತ ವಿಲೇವಾರಿ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿರುವುದರಿಂದ ನ್ಯಾಯಾಧೀಶರಾದ ಟಿ.ಬಿ.ಗೀತಾ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರು. ದಂಡ, ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ 4ವರ್ಷ ಕಠಿಣ ಶಿಕ್ಷೆ 5 ಸಾವಿರ ರು. ದಂಡ, ಅದೂ ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಶಿಕ್ಷೆ ವಿದಿಸಿದ್ದು, ದಂಡ ಮೊತ್ತದಲ್ಲಿ 15 ಸಾವಿರ ರು. ಹಣವನ್ನು ಫಿರ್ಯಾದಿಗೆ ಕೊಡಬೇಕಾಗಿ ಆದೇಶಿಸಿದ್ದಾರೆ.
ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ವಾಸಿ ಉಮಾದೇವಿ ಮತ್ತು ಈಕೆಯ ಗಂಡ ಪಂಚಾಕ್ಷರಿ ಶಿಕ್ಷೆಗೆ ಗುರಿಯಾದ ಆರೋಪಿಗಳು. ಮಾರ್ಚ್ 18, 2012ರಂದು ಕಾಣೆಯಾಗಿದ್ದ ಇದೇ ಗ್ರಾಮದ ಲೀಲಾವತಿ ಎಂಬುವವರ ಪತಿ ಪಂಚಾಕ್ಷರಿ (ಇವರದ್ದು ಒಂದೇ ಹೆಸರು) ಅವರ ಶವ ಮಾರ್ಚ್ 23, 2012ರಂದು ಕರಡಿ ಬಳಿಯ ಜಯಂತಿ ಗ್ರಾಮದ ಹತ್ತಿರ ಎನ್.ಹೆಚ್.206ರಸ್ತೆ ಸೇತುವೆ ಪಕ್ಕದ ಪೊದೆಯಲ್ಲಿ ಒಂದು ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು. ಮೃತನ ಮೊಬೈಲ್ನಲ್ಲಿ ದಾಖಲೆಯಾಗಿದ್ದ ಫೋನ್ ಕರೆಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಾಗ ಕಟ್ಟಿಗೇನಹಳ್ಳಿ ಗ್ರಾಮದ ಉಮಾದೇವಿ ಪಂಚಾಕ್ಷರಿಯನ್ನು ದೂರ ಇಟ್ಟಿದ್ದರೂ ಮೃತ ಪಂಚಾಕ್ಷರಿಯು ಪದೇ ಪದೇ ಉಮಾದೇವಿಗೆ ತೊಂದರೆ ಕೊಡುತ್ತಿದ್ದ.
ಮಾರ್ಚ್ 18, 2012ರಂದು ಉಮಾದೇವಿ ತವರು ಮನೆಗೆ ಹೋಗಿದ್ದಾಗ ಪಂಚಾಕ್ಷರಿ ಅಲ್ಲಿಗೆ ಹೋಗಿ ಉಮಾದೇವಿಯ ಮೇಲೆ ಗಲಾಟೆ ಮಾಡುತ್ತಿರುವಾಗ ಉಮಾದೇವಿ ಮತ್ತು ಆಕೆಯ ಗಂಡ ಪಂಚಾಕ್ಷರಿ ದೊಣ್ಣೆಯಿಂದ ಹೊಡೆದು ಹಾಗೂ ಹಗ್ಗದಿಂದ ಪಂಚಾಕ್ಷರಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಮಾರ್ಚ್ 30, 2012ರಂದು ದಸ್ತಗಿರಿ ಮಾಡಿ ತಿಪಟೂರು(ಗ್ರಾ) ವೃತ್ತದ ಸಿಪಿಐ ಕೆ.ಜೆ.ರಾಮಕೃಷ್ಣ ಅವರು ಪೂರ್ಣ ತನಿಖೆ ಪೂರೈಸಿ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಚಿ.ನಾ.ಹಳ್ಳಿ ಠಾಣೆಗೆ ವರ್ಗಾವಣೆ ನೀಡಿದ್ದು, ಸಿಪಿಐ ಪ್ರಭಾಕರ್ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಟಿ.ಎನ್. ಆಶಾಕಿರಣ್ ವಾದ ಮಂಡಿಸಿದ್ದರು.
ಗೋಪಾಲ್ ನಾಯ್ಕ್ ಕೆಜೆಪಿಗೆ ರಾಜಿನಾಮೆ
ಪಾವಗಡ: ಕಳೆದ ಸುಮಾರು 7 ತಿಂಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ವಿಧಾನ ಸಭೆ ಚುನಾವಣೆಯ ಕೆಜೆಪಿ ಅಭ್ಯರ್ಥಿ ಆಕಾಂಕ್ಷಿ ಉಪ್ಪಾರಹಳ್ಳಿ ಕೆ.ಗೋಪಾಲನಾಯ್ಕ್ ಕೆಜೆಪಿಗೆ ರಾಜಿನಾಮೆ ನೀಡುವ ಸಿದ್ಧತೆಯಲ್ಲಿ ತೊಡಗಿದ್ದು ಅನ್ಯ ಪಕ್ಷದತ್ತ ಮುಖ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಗೋಪಾಲನಾಯಕ್ ಕಳೆದ 7 ತಿಂಗಳಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ತಾಲೂಕಿನಾದ್ಯಂತ ಪಕ್ಷವನ್ನು ಪ್ರಬಲವಾಗಿ ಸಂಘಟಸಲಾಗಿದ್ದು ಸಾವಿರಾರು ಕಾರ್ಯಕರ್ತರ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಯಿತು. ಆದರೆ ಇದುವರೆವಿಗೂ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ನಾನು ಹಾಗೂ ನಮ್ಮ ಕಾರ್ಯಕರ್ತರು ಮುನ್ನಡೆಯುತ್ತಿದ್ದು ಈಗ ಪಕ್ಷದ ಸ್ಥಳೀಯ ನಿಷ್ಠಾವಂತರನ್ನು ಕಡೆಗಣಿಸಿ ತುಮಕೂರಿನಲ್ಲಿ ವಾಸವಾಗಿರುವ ಮುಖಂಡರೊಬ್ಬರನ್ನು ಪಕ್ಷದ ಅಭ್ಯರ್ಥಿಯೆಂದು ಬಿಂಬಿಸುತ್ತಿರುವುದು ಅಸಮಾಧಾನ ತಂದಿದೆ ಎಂದರು.
ಅನೇಕ ತಿಂಗಳಿಂದ ಪಕ್ಷದ ಅಭಿವದ್ಧಿಗಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿದ ಕಾರಣ ಕಾರ್ಯಕರ್ತರ ಅಭಿಪ್ರಾಯ ಪಡೆದು ಕೆಜೆಪಿಗೆ ರಾಜಿನಾಮೆ ನೀಡುವ ಮೂಲಕ ಪಕ್ಷಕ್ಕೆ ಗುಡ್ ಬೈ ಹೇಳುವುದಾಗಿ ಅವರು ತಿಳಿಸಿದರು.
ರಾಯಚರ್ಲ ಶಾಲಾ ವಾರ್ಷಿಕೋತ್ಸವ
ಪಾವಗಡ: ಶಾಲೆಯ ಅಭಿವೃದ್ಧಿಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯವೆಂದು ಪಾವಗಡ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಸಾಂಬಸದಾಶಿವರೆಡ್ಡಿ ಅಭಿಪ್ರಾಯಪಟ್ಟರು. ಶನಿವಾರ ತಾಲೂಕಿನ ರಾಯಚರ್ಲ ಗ್ರಾಮದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕ್ಯೋತ್ಸವ ಪಟೇಲ್ ಪೋತರೆಡ್ಡಿ ವೇದಿಕೆ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗಡಿ ಪ್ರದೇಶ ರಾಯಚರ್ಲು ಗ್ರಾಮದಲ್ಲಿ ಜನಿಸಿದ ನಾನು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿದ್ಯಾವಂತನಾದೆ ಎಂದು ಮೆಲಕು ಹಾಕಿ ಇದೇ ಶಾಲೆಯಲ್ಲಿ ನನ್ನಂತೆ ವ್ಯಾಸಂಗ ಮಾಡಿದ ಬಹುತೇಕ ಮಂದಿ ವಿದ್ಯಾವಂತರಾಗಿ ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿ ವಿದೇಶಗಳಲ್ಲಿ ನೆಲೆಸಿದ್ದಾರೆ ಎಂದರು.1910ರಲ್ಲಿ ರಾಯಚರ್ಲು ಗ್ರಾಮ ಹೋಬಳಿ ಕೇಂದ್ರವಾಗಿದ್ದ ಬಗ್ಗೆ ಶಾಸನಗಳಲ್ಲಿ ದೊರೆತಿದ್ದು ಇಲ್ಲಿದ್ದ ಹೋಬಳಿ ಕೇಂದ್ರವನ್ನು ಇತ್ತೀಚಿಗೆ ನಾಗಲಮಡಿಕೆ ಗ್ರಾಮಕ್ಕೆ ವರ್ಗಾಯಿಸಿರುವುದಾಗಿ ಅವರು ತಿಳಿಸಿ ಶಾಸನದಲ್ಲಿ ಉಲ್ಲೇಖವಾಗಿರುವ ಗ್ರಾಮದ ಮಾಹಿತಿಯನ್ನು ಅವರು ವಿವರಿಸಿದರು. ಇಲ್ಲಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆ 1935ರಲ್ಲಿ ಸ್ಥಾಪಿತವಾಗಿದ್ದು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಎಸ್.ಕೆ. ವೆಂಕಟರೆಡ್ಡಿ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಚಿತ್ರದುರ್ಗ ಬೆಸ್ಕಾಂ ಎಸ್ಇ ಆದಿನಾರಾಯಣ ಮುಂತಾದವರು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಸುರೇಶ್ಬಾಬು ಮತಯಾಚನೆ
ಚಿಕ್ಕನಾಯಕನಹಳ್ಳಿ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ಪಟ್ಟಣದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. 20 ನೇ ವಾರ್ಡಿನ ಸಿ.ಆರ್.ಗೀತಾ ಪರವಾಗಿ ಮತಯಾಚಿಸುತ್ತಿದ್ದ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಏಜೆಂಟ್ ಗಂಗಣ್ಣ, ಸಿ.ಟಿ. ದಯಾನಂದ್, ಮಾಜಿ ಸದಸ್ಯೆ ರುಕ್ಮಿಣಮ್ಮ, ಮಹಿಳಾ ಮಂಡಳಿ ಅಧ್ಯಕ್ಷೆ ಚಂದ್ರಿಕಾ ಮುಂತಾದವರಿದ್ದರು.
ಇಂದು ಪಾವಗಡದಲ್ಲಿ ಸಿಪಿಎಂ ಜಾಥಾ
ತುಮಕೂರು: ಆಹಾರ ಭದ್ರತೆ, ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಒತ್ತಾಯಿಸಿ, ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಸಿಪಿಎಂ ಪಾವಗಡಲ್ಲಿ ಮಾ.3 ರಂದು ಜಾಥಾ ಹಮ್ಮಿಕೊಂಡಿದೆ. ಜಾಥಾದಲ್ಲಿ ಪಾಲಿಟ್ ಬ್ಯೂರೋ ಸದಸ್ಯ ರಾಮಚಂದ್ರ ಪಿಳೈ, ಕೇರಳದ ಮಾಜಿ ಶಿಕ್ಷಣ ಸಚಿವ ಎಂ.ಎ. ಬೇಬಿ,ಅಖಿಲ ಭಾರತ ಕಿಸಾನ್ ಸಭಾದ ಕೆ. ವರದರಾಜನ್, ರಾಷ್ಟ್ರೀಯ ಮಹಿಳಾ ಮುಖಂಡರಾದ ಸುಧಾ ಸುಂದರ ರಾಮನ್, ರಾಜ್ಯ ಮುಖಂಡರಾದ ಜಿ.ವಿ. ಶ್ರೀರಾಮರೆಡ್ಡಿ, ಮೀನಾಕ್ಷಿ ಸುಂದರಂ, ವರಲಕ್ಷ್ಮಿ ಇತರರು
ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಬಹಿರಂಗ ಸಭೆ ಏರ್ಪಾಟಾಗಿದೆ.
ಶಾಲೆಗಳಿಗೆ ಕಂಪ್ಯೂಟರ್ ಭರವಸೆ
ಪಾವಗಡ: ಪ್ರತಿ ತಿಂಗಳ ವೇತನದಲ್ಲಿ ಶೇ. 20ರಷ್ಟು ತಾಲೂಕಿನ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದು ಆಸಕ್ತಿ ಇರುವ ಶಾಲೆಗಳಿಗೆ ಕಂಪ್ಯೂಟರ್ಗಳನ್ನು ಕೊಡಿಸಿಕೊಡುವುದಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಸ್.ಕೆ. ವೆಂಕಟರೆಡ್ಡಿ ತಿಳಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ರಾಯಚೆರ್ಲು ಗ್ರಾಮದ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ, ಪಟೇಲ್ ಪೋತರೆಡ್ಡಿ ವೇದಿಕೆ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅನಿವಾರ್ಯದ ಹಿನ್ನೆಲೆಯಲ್ಲಿ ರಾಯಚರ್ಲು ಗ್ರಾಮದ ಪ್ರಾಥಮಿಕ ಶಾಲೆಗೆ ಉಚಿತ ಕಂಪ್ಯೂಟರ್ ನೀಡಲಾಗಿದ್ದು ಶಾಲೆ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸುವ ಆಸಕ್ತಿ ಇರುವ ಶಿಕ್ಷಕರು ಹಾಗೂ ಗ್ರಾಮಸ್ಥರು ಮುಂದೆ ಬಂದರೆ ಎಲ್ಲಾ ಪ್ರಾಥಮಿಕಾ ಶಾಲೆಗಳಿಗೆ ಉಚಿತ ಕಂಪ್ಯೂಟರ್ ಕೊಡಿಸುವ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿ ತಾಪಂ ಇಒ ರಂಗನಾಥ್ ಮಾತನಾಡಿ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಅರಿತಾಗ ಮಾತ್ರ ಅಭಿವೃದ್ಧಿ ಸಾಧ್ಯವೆಂದರು. ಬಯಲು ಪ್ರದೇಶಗಳಲ್ಲಿ ಮಲಮೂತ್ರ ವಿಸರ್ಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಪ್ರತಿಯೊಬ್ಬರು ಶೌಚಾಲಯಗಳನ್ನು ನಿರ್ಮಿಸಿಕೊಂಡರೆ ತಾಪಂನಿಂದ 10ಸಾವಿರ ಸಹಾಯಧನ ನೀಡುವುದಾಗಿ ತಿಳಿಸಿದರು. ಪ್ರಸ್ತಾವಿಕ ನುಡಿಗಳನ್ನಾಡಿದ ಸಂಘಟನಾ ಕಾರ್ಯದರ್ಶಿ ಸಾಂಬಸದಾಶಿವರೆಡ್ಡಿ ಶಾಲೆಗೆ ಗಣಕ ಯಂತ್ರಗಳನ್ನು ವಿತರಿಸಿ ಮಾತನಾಡಿ, ತಂದೆ, ತಾಯಿ, ಗುರು, ಸಮಾಜದ ಋಣ ತೀರಿಸಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗಲಿದೆ. ಗ್ರಾಮದ ಶಾಲೆಯ ಅಭಿವೃದ್ಧಿಗೆ ಎಲ್ಲರು ಕೈಜೋಡಿಸೋಣವೆಂದರು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಿಂದ ನಿವೃತ್ತ ನ್ಯಾಯಾಧೀಶ ಎಸ್.ಕೆ. ವೆಂಕಟರೆಡ್ಡಿ, ಸಾಂಬಸದಾಶಿವರೆಡ್ಡಿ ಮುಂತಾದವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ವೆಂಕಟರಮಣಪ್ಪ, ಬಿಆರ್ಪಿ ನರಸಿಂಹಪ್ಪ ಎಸ್.ಕೆ. ಖಾಜಾಹುಸೇನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.