ಶಿಕ್ಷಣ ಜ್ಞಾನ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ
ಕ.ಪ್ರ.ವಾರ್ತೆ ಮಧುಗಿರಿ ಮಾ, 18
ಶಿಕ್ಷಣ ಮನುಷ್ಯನ ವ್ಯಕ್ತಿತ್ವ ಹಾಗೂ ಸರ್ವತೋಮುಖ ಜ್ಞಾನ ವಿಕಾಸಕ್ಕೆ ದಾರಿದೀಪ ಎಂದು ಕರ್ನಾಟಕ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅಭಿಪ್ರಾಯಪಟ್ಟರು.
ಮಧುಗಿರಿ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜು, ಶಿಕ್ಷಣ ಮಹಾವಿದ್ಯಾಲಯ, ಎಂಇಎಸ್, ಪಾಲಿಟೆಕ್ನಿಕ್ ಹಾಗೂ ಐಟಿಐ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಏರ್ಪಟಾಗಿದ್ದ ಕಾಲೇಜು ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಾವು ಹಳ್ಳಿಗರೆಂಬ ಕೀಳರಿಮೆ ಬಿಟ್ಟು ಸ್ವಸಾಮರ್ಥ್ಯದ ಮೂಲಕ ಆತ್ಮವಿಶ್ವಾಸದಿಂದ ಗುಣ ಮಟ್ಟದ ಶಿಕ್ಷಣ ಕಲಿಯುವ ನಿಟ್ಟಿನಲ್ಲಿ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳಸಬೇಕು. ವ್ಯಕ್ತಿಯ ಸರ್ವತೋಮುಖ ಜ್ಞಾನ ವಿಕಾಸಕ್ಕೆ ಶಿಕ್ಷಣ ಅಡಿಪಾಯ ಎಂದ ಅವರು, ಶಿಕ್ಷಣ ನಗರ ಪ್ರದೇಶದ ಮಕ್ಕಳಿಗಿರುವ ಸೌಲಭ್ಯಗಳಂತೆಯೇ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸರಿಸಮಾನಾಗಿ ಸಿಗುತ್ತಿದೆ. ಆ ನಿಟ್ಟಿನಲ್ಲಿ ಮಧುಗಿರಿ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿಯೇ ಸಾಕಷ್ಟು ಸೌಲಭ್ಯ ಒದಗಿಸಿ ಮಹತ್ತರ ಸಾಧನೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅಡಿ, ನಾನೂ ಕೂಡ ಹಳ್ಳಿಯಿಂದ ಬಂದವ. ಸಾಧನೆ ಮೂಲಕ ನನ್ನ ಸಾಮಥ್ಯ ಗುರುತಿಸಿ ಹಂತ ಹಂತವಾಗಿ ಉನ್ನತ ಹುದ್ದೆಗೇರಲು ಸಹಾಯವಾಯಿತು. ಅದೇ ರೀತಿ ವಿದ್ಯಾರ್ಥಿಗಳು ಸುಭಾಷ್‌ಚಂದ್ರ ಭೋಸ್, ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಅವರ ಸಾಧನೆಗಳು ನಮಗೆ ದಾರಿದೀಪ, ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆದು ಹೆತ್ತು, ಹೊತ್ತು ಬೆಳೆಸಿದ ತಂದೆ-ತಾಯಿಗೆ ವಿದ್ಯೆ ಕಲಿಸಿದ ಗುರುವಿಗೆ ಗೌರವ ಕೊಡುವ ಮೂಲಕ ಪ್ರತಿಯೊಬ್ಬರು ತಂತಮ್ಮ ಕರ್ತವ್ಯದಲ್ಲಿ ಮುತುವರ್ಜಿ ವಹಿಸಿ ನಿರ್ವಹಿಸಿದರೆ ಸಂಸ್ಕೃತಿ, ಸಮಾಜ ಪ್ರಗತಿ ಕಾಣಲಿದೆ ಎಂದರು.
ಸಂತಸ: ಕರ್ನಾಟಕದ ಮೂಲೆಯೊಂದರ ಊರು ಮಧುಗಿರಿಯಲ್ಲಿನ ಜನ ಉದಾರವಂತರು. ಪ್ರೀತಿ, ವಿಶ್ವಾಸದಿಂದ ಕಾಣುವ ಮಂದಿ ಇಲ್ಲಿದ್ದಾರೆ ಎಂಬುದನ್ನು ನೋಡಿ ನನಗೆ ಸಂತಸವಾಯಿತು. ಈ ಮಧುಗಿರಿ ವಿದ್ಯಾ ಸಂಸ್ಥೆ ಅತಿ ಹಿಂದುಳಿದ ಪ್ರದೇಶದಲ್ಲಿ ದೊಡ್ಡದಾಗಿ ಬೆಳೆದು ಗುಣ ಮಟ್ಟದ ಶಿಕ್ಷಣ ಕೊಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಕ್ರೀಡಾಮನೋಭಾವ ಬೆಳೆಸಿಕೊಳ್ಳಿ: ರಾಷ್ಟ್ರೀಯ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ.ಸುರೇಶ್ ವಿವಿಧ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಕಿರುತೆರೆ ಕಲಾವಿದೆ ವಿದ್ಯಾ ವಿಜಯಸಾಯಿ, ಖಜಾಂಚಿ ಎಂ.ಎಸ್. ಧರ್ಮವೀರ, ಕಾರ್ಯದರ್ಶಿ ಆರ್.ಸಿ. ವಿಜಯ್ ಕುಮಾರ್ ಜೈನ್ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷ ಎಂ.ವಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಎಂ.ಎಸ್.ರಘುವೀರ್, ಕೆ.ಗೋವಿಂದ ರೆಡ್ಡಿ, ಶಂಕರನಾರಾಯಣ ಶೆಟ್ಟಿ, ಸಿಎಒ ಬಿ.ಎಂ.ಪ್ರೇಮನಾಥ್, ನಿವೃತ್ತ ಪ್ರಾಂಶುಪಾಲ ಎಸ್. ಕೆಂಪಯ್ಯ, ಪ್ರಾಂಶುಪಾಲ ಪಿ.ಹನುಮಂತರಾಯ, ಸಿ.ರಾಜಣ್ಣ, ನಾಗರಾಜು, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಂಶುಪಾಲ ಎಸ್.ಕೆಂಪಯ್ಯ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.