ವೀರಶೈವ ಜನಾಂಗ ಆರ್ಥಿಕ ಪ್ರಗತಿ ಸಾಧಿಸಲಿ'
ಕ.ಪ್ರ ವಾರ್ತೆ ಕುಣಿಗಲ್ ಮಾ.20
ತಾಲೂಕಿನ ವೀರಶೈವ ಜನಾಂಗದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ರಂಗದಲ್ಲೂ ಪರಿಣಾಮಕಾರಿಯಾಗಿ, ಮತ್ತಷ್ಟು ಹೆಚ್ಚಿನ ಪ್ರಗತಿ ಸಾಧಿಸಲು, ವೀರಶೈವ ಸಮಾಜದ ಪ್ರಮುಖರು, ಬಾಂಧವರು, ಸಮಾಜದ ಮಠಗಳ ಮಾರ್ಗದರ್ಶನದಲ್ಲಿ ಶ್ರಮಿಸುವಂತೆ ಬಾಳೆಹೊನ್ನೂರು ಖಾಸಾಶಾಖಾ ಮಠಾಧೀಶರಾದ ರೇಣುಕಾಶಿವಾಚಾರ್ಯ ಸ್ವಾಮೀ ತಿಳಿಸಿದರು.
ತಾಲೂಕಿನ ಯಡೆಯೂರಿನಲ್ಲಿರುವ ಬಾಳೆಹೊನ್ನೂರು ಖಾಸಾಶಾಖಾ ಮಠದ ಅವರಣದಲ್ಲಿ, ನಡೆದ ವೀರಶೈವ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ, ತಾಲೂಕಿನ 103 ಹಳ್ಳಿಗಳಲ್ಲಿ 13 ಸಾವಿರಕ್ಕೂ ಹೆಚ್ಚಿನ ವೀರಶೈವ ಜನಾಂಗದವರು ವಾಸಿಸುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಒಗ್ಗಟ್ಟು ಪ್ರತಿಪಾದಿಸುವುದು ಕಷ್ಟಕರವಾಗಿರುವುದಕ್ಕೆ ವಿಷಾದಿಸಿದ ಅವರು, ಇನ್ನಾದರೂ, ಜನಾಂಗದ ಎಲ್ಲರೂ ಎಚ್ಚೆತ್ತು ಎಂಟು ಮಠಗಳ ಶ್ರೀಗಳ ಮಾರ್ಗದರ್ಶನದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಎಲ್ಲಾ ರೀತಿಯಲ್ಲೂ ಮುಂದುವರೆಯುವ ದಿಸೆಯಲ್ಲಿ ಶ್ರಮಿಸಬೇಕಾಗಿದೆ. ಅಲ್ಲದೆ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದವರನ್ನು ಸಬಲೀಕರಣಗೊಳಿಸುವತ್ತಲೂ ಚಿಂತನೆ ನಡೆಸಬೇಕಾಗಿದೆ ಎಂದರು.
ಸದೃಢವಾಗಿಸಿ: ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ವೃತ್ತಿಕರ್ಮದಿಂದ ತಾಲೂಕಿನ ವಿವಿಧೆಡೆಯಲ್ಲಿ ಹರಿದು ಹಂಚಿಹೋಗಿರುವ ವೀರಶೈವ ಸಮಾಜದವರಲ್ಲಿ ಸಂಘಟನೆಯ ಕೊರತೆಯಿಂದ, ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿಯುವಂತಾಗಿದೆ, ಸಮಾಜದ ಏಳಿಗೆಗೆ, ಸಂಸ್ಕೃತಿಯ ಸಂರಕ್ಷಣೆಗೆ ಸಂಘಟಿತರಾಗಿ, ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜವನ್ನು ತಾಲೂಕಿನಲ್ಲಿ ಮತ್ತಷ್ಟು ಸದೃಢವಾಗಿಸುವತ್ತ ಮುಂದಾಗಬೇಕೆಂದರು.
ಹುಲಿಯೂರುದುರ್ಗ ಮಠದ ಸಿದ್ದಲಿಂಗಶಿವಾನಂದ ಸ್ವಾಮಿ, ಅಂಕನಹಳ್ಳಿ ಮಠದ ಶಿವರುದ್ರಶಿವಾಚಾರ್ಯ ಸ್ವಾಮೀಜಿ, ಕಗ್ಗೆರೆ ಮಠದ ತೋಂಟದ ಸಿದ್ದಲಿಂಗಸ್ವಾಮಿ, ಸೇರಿದಂತೆ ತಾಲೂಕಿ ವಿವಿಧ ಮಠಗಳ ಶ್ರೀಗಳು, ತಾಲೂಕು ವೀರಶೈವ ಸಮಾಜದ ಪ್ರಮುಖರು, ತಾಲೂಕು ಅಕ್ಕಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.