ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಸರ್ಕಾರಿ ಶಾಲೆಗಳೇ ಮುಂಚೂಣಿಯಲ್ಲಿ
ಕ.ಪ್ರ. ವಾರ್ತೆ ಮಧುಗಿರಿ ಮಾ.20
ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಮುಂಚೂಣಿಯಲ್ಲಿವೆ ಎಂದು ಬಿಆರ್ಪಿ ನರಸರೆಡ್ಡಿ ಹೇಳಿದ್ದಾರೆ.
ತಾಲೂಕಿನ ದೊಡ್ಡೇರಿ ಹೋಬಳಿ ಲಿಂಗಸಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಶೈಕ್ಷಣಿಕ ಪ್ರಗತಿಯಲ್ಲಿ ಹಿಂದೆ ಬೀಳದೆ ಕ್ರಿಯಾಶೀಲ ಶಿಕ್ಷಕರಿಂದ ಮಕ್ಕಳು ಗುಣ ಮಟ್ಟದ ಶಿಕ್ಷಣ ಕಲಿಯುವ ನಿಟ್ಟಿನಲ್ಲಿ ಸುಧಾರಣೆಯಾಗುತ್ತಿದೆ. ಆದ ಕಾರಣ ಪೋಷಕರು ತಮ್ಮ ಮಕ್ಕಳನ್ನು ತಪ್ಪದೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ಅಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಕಲಿಯಲು ಪ್ರೋತ್ಸಾಹಿಸಬೇಕು ಎಂದರು. ಅಧ್ಯಕ್ಷೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸುವಲ್ಲಿ ನಮ್ಮ ಶಾಲೆ ಒಂದು ಹೆಜ್ಜೆ ಮುಂದಿದೆ ಎಂದರು. ಮುಖ್ಯ ಅತಿಥಿ ಟಿ.ಸಿ.ದಾಸಪ್ಪ ಈ ಶಾಲೆಯ ಶಿಕ್ಷಕರ ಮುತುವರ್ಜಿ ವಹಿಸಿದ ಹಿನ್ನೆಲೆಯಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು. ಎಂದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇಂದು ಪೌರಾಣಿಕ ನಾಟಕ
ಹುಳಿಯಾರು: ಕೆಂಕೆರೆ ಸಮೀಪದ ಬರದಲೇಪಾಳ್ಯದಲ್ಲಿ ಅಂಬಿಕಾ ಕೃಪಾ ಪೋಷಿತ ನಾಟಕ ಮಂಡಳಿ ಹಾಗೂ ಗ್ರಾಮಸ್ಥರಿಂದ ಗುರುವಾರ ಸಂಜೆ ಗ್ರಾಮದೇವತೆ ಕಾಳಿಕಾಂಬದೇವಿ ಹಾಗೂ ಅಂಬಿಕಾದೇವಿಯ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ ರಾತ್ರಿ 10 ಗಂಟೆಗೆ ವೇ.ನೀಲಕಂಠಯ್ಯ ನಿರ್ದೇಶನದ ದೇವಿ ಮಹಾತ್ಮೆ ಅಥವಾ ರಕ್ತಬೀಜನ ವಧೆ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದಿನಿಂದ ಜಾತ್ರೋತ್ಸವ
ತಿಪಟೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡೆಣ್ಣೇಗೆರೆಯಲ್ಲಿ ಭೀಮಾಸತಿ ತೀರ್ಥ ರಾಜಸ್ವಾಮಿ ದೇವರ ಜಾತ್ರೋತ್ಸವ ಮಾ.21ರಿಂದ 24 ರವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಲಂಬಾಣಿ ಜನಾಂಗದ ಗುರುಗಳು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತರು ಭಾಗವಹಿಸಲಿದ್ದಾರೆ. ಆದ್ದರಿಂದ ತಿಪಟೂರು ತಾಲೂಕು ಮತ್ತು ಜಿಲ್ಲೆಯ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದ ಪಡೆಯುವಂತೆ ತಾಲೂಕು ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಬಿ.ಟಿ.ಕುಮಾರ್ ತಿಳಿಸಿದ್ದಾರೆ.
ಏ.6 ರಂದು ಶ್ರೀನಿವಾಸ ಕಲ್ಯಾಣ
ತುರುವೇಕೆರೆ: ಪಟ್ಟಣದ ಗುರುಭವನದ ಆವರಣದಲ್ಲಿ ಏ.6 ರಂದು ಸಾಯಂಕಾಲ ಶ್ರೀನಿವಾಸ ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಚಲನಚಿತ್ರ ನಿರ್ಮಾಪಕ ಕೆ.ಮಂಜು ತಿಳಿಸಿದರು. ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಸಮಸ್ತ ಭಕ್ತರು ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಣ್ತುಂಬಿಕೊಳ್ಳಬೇಕೆಂಬ ಇಚ್ಛೆಯಿಂದ ತಿರುಪತಿ ದೇವಾಲಯ ಟ್ರಸ್ಟ್ ವತಿಯಿಂದ ನಡೆಸುವ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಏ.6 ರಂದು ಸಂಜೆ 5.30 ರಿಂದ 8.30ರ ವರೆಗೆ ತಮ್ಮ ಚಿತ್ರ ಸಂಸ್ಥೆಯಿಂದ ಆಯೋಜಿಸಲಾಗಿದೆ. ಕಲ್ಯಾಣೋತ್ಸವವನ್ನು ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸುವ ಸಾಧ್ಯತೆ ಇರುವುದರಿಂದ ಬೃಹತ್ ವೇದಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಗುವುದು. ನೇರ ಪ್ರಸಾರವನ್ನು ಬೃಹತ್ ಪರದೆ ಮೇಲೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕೆ.ಮಂಜು ಹೇಳಿದರು. ಅಂದು ಸಾಯಂಕಾಲ ಪಟ್ಟಣದ ಬೇಟೇರಾಯಸ್ವಾಮಿ ದೇವಾಲಯದ ಮುಂಭಾಗದಿಂದ ತಿರುಪತಿಯಿಂದ ಬರುವ ಶ್ರೀನಿವಾಸರ ಉತ್ಸವ ಮೂರ್ತಿಯನ್ನು ವಿವಿಧ ಮಂಗಳ ವಾದ್ಯಗಳ ಸಹಿತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿಕೊಂಡು ಗುರುಭವನದ ಪ್ರಾಂಗಣಕ್ಕೆ ತರಲಾಗುವುದು ಎಂದು ಪ್ರಾಯೋಜಕರಾದ ಕೆ.ಮಂಜು ಹೇಳಿದರು.
ಅಂಗನವಾಡಿ: ಅರ್ಜಿ ಆಹ್ವಾನ
ತಿಪಟೂರು: ಶಿಶು ಅಭಿವೃದ್ಧಿ ಯೋಜನೆಯಡಿ ತಾಲೂಕಿನ ವಾಸುದೇವರಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ನಗರ ವ್ಯಾಪ್ತಿಯ ಟಿ.ಎಲ್. ಪಾಳ್ಯ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಗೌರವಧನ ಸೇವೆಗೆ ಸಾಮಾನ್ಯ ವರ್ಗದ ಅರ್ಹ ಅಭ್ಯರ್ಥಿಗಳಿಂದ ಆರ್ಜಿ ಆಹ್ವಾನಿಸಲಾಗಿದೆ ಎಂದು ಸಿಡಿಪಿಓ ತಿಳಿಸಿದ್ದಾರೆ. ಅರ್ಜಿ ನಮೂನೆಗಾಗಿ ಕೆಲಸದ ಅವಧಿಯಲ್ಲಿ ಈ ಕಚೇರಿಯನ್ನು ಸಂಪರ್ಕಿಸಬೇಕು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಏ.8 ರಂದು ಸಂಜೆ 5.30 ರೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿಟ್ಟಿರುವ ಟೆಂಡರ್ ಪೆಟ್ಟಿಗೆಯಲ್ಲಿ ಹಾಕತಕ್ಕದ್ದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.
ಮುರಳೀಧರ್ಗೆ ಬೀಳ್ಕೊಡುಗೆ
ತುಮಕೂರು: ವೃತ್ತಿ ಜೀವನದುದ್ದಕ್ಕೂ ಸಾವಿರಾರು ಶಿಷ್ಯಂದಿರ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿ ವೃತ್ತಿಯಿಂದ ವಿಶ್ರಾಂತಿ ಪಡೆದ ಎಂ. ಮುರಳೀಧರ್ ಅವರನ್ನು ಇಲ್ಲಿನ ಮರಳೂರು ದಿಣ್ಣೆ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಬೀಳ್ಕೊಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಮ್ಮ, ಬಿಆರ್ಸಿ ಚೌಡಯ್ಯ, ಸಿಆರ್ಪಿ ನಿರ್ಮಲ್ ಕುಮಾರ್, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ನಗರಸಭಾ ಸದಸ್ಯೆ ಜಯಲಕ್ಷಮ್ಮ, ಅವರ ಪತಿ ವೆಂಕಟೇಶಗೌಡ ಹಾಗೂ ಕೊಳಗೇರಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಸೈಯದ್ ಅಲ್ತಾಫ್, ಉರ್ದು ಶಾಲಾ ಮುಖ್ಯ ಶಿಕ್ಷಕರು, ಮರಳೂರು ಜನತಾ ಕಾಲೋನಿಯ ಕನ್ನಡ ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಪೋಷಕರು ಹಾಜರಿದ್ದರು. ಕೆ.ಎಚ್. ನಾಗರಾಜು ಸ್ವಾಗತಿಸಿದರು. ಬಿಇಓ ಅವರು ನಿವೃತ್ತಿ ಶಿಕ್ಷಕರನ್ನು ಸನ್ಮಾನಿಸಿದರು. ವಿಜಯಕುಮಾರ್ ವಂದಿಸಿದರು.
25 ರಂದು ಕೆಜೆಪಿ ಸಮಾವೇಶ
ಪಾವಗಡ: ಮಾ.25ರಂದು ಬೆಳಿಗ್ಗೆ 11ಗಂಟೆಗೆ ಪಟ್ಟಣದ ಎಸ್ಎಸ್ಕೆ ಸಮುದಾಯ ಭವನದಲ್ಲಿ ಕೆಜೆಪಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಎಚ್.ಶ್ರೀನಿವಾಸ್, ಮಾಜಿ ಸಚಿವೆ ಶೋಭ ಕರಂದ್ಲಾಜೆ, ಹಿಂ.ವರ್ಗಗಳ ರಾಜ್ಯಾಧ್ಯಕ್ಷ ಮುಕುಟಪ್ಪ, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಪಾವಗಡ ಸ್ಮಿತಾನಾಯ್ಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಸಾಮಯ್ಯ, ವಿಧಾನಸಭಾ ಕ್ಷೇತ್ರ ಉಸ್ತುವಾರಿ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪಾವಗಡ ಶಿವಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ. ಮಹತ್ತರವಾದ ಕೆಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಾವಗಡ ಶ್ರೀರಾಮ್ ಮನವಿ ಮಾಡಿದ್ದಾರೆ.
ರು. 80 ಲಕ್ಷ ವೆಚ್ಚದಲ್ಲಿ 2 ಕೆರೆಗಳ ಅಭಿವೃದ್ಧಿ: ಕೃಷ್ಣಪ್ಪ
ಕ.ಪ್ರ. ವಾರ್ತೆ ತುರುವೇಕೆರೆ ಮಾ.20
ತಾಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ಅಂತರ್ಜಲ ಕುಸಿತ ಕಂಡ ಪರಿಣಾಮ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ರೈತರ ಜೀವನಾಡಿಯಾಗಿರುವ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಪ್ರಮುಖ ಆರ್ಥಿಕ ಬೆಳೆಯಾಗಿರುವ ತೆಂಗು ಬೆಳೆಯೂ ನಾಶಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತರ್ಜಲ ವೃಧ್ಧಿಗಾಗಿ ಹೋಬಳಿಯ ಎರಡು ಕೆರೆಗಳನ್ನು ಅಭಿವೃಧ್ಧಿ ಪಡಿಸುವ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ದಬ್ಬಘಟ್ಟ ಹೋಬಳಿಯ ಎರಡು ಕೆರೆಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಕೆ.ಬೇವಿನಹಳ್ಳಿಯ ಕೆರೆಯನ್ನು ಸಣ್ಣ ನೀರಾವರಿ ಇಲಾಖಾ ವತಿಯಿಂದ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಜಿನುಗು ಕೆರೆಯನ್ನಾಗಿ ಮಾರ್ಪಡಿಸಲಾಗುತ್ತಿದೆ. ಈ ಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಸುಮಾರು 50 ಹೆಕ್ಟೇರ್ನಷ್ಟು ವಿಸ್ತೀರ್ಣದಲ್ಲಿ ಅಂತರ್ಜಲ ವೃಧ್ಧಿಯಾಗಿ ಬೆಳೆ ಬೆಳೆಯಲು ಸಹಾಯಕವಾಗಲಿದೆ ಎಂದರು. ಸುಮಾರು 304 ಮೀಟರ್ ಉದ್ದ, 4.20 ಮೀಟರ್ ಎತ್ತರ ಹಾಗೂ ಸುಮಾರು 1.80 ಮೀಟರ್ ನಷ್ಟು ಅಗಲವುಳ್ಳ ಏರಿಯ ನಿರ್ಮಾಣ ಮಾಡಲಾಗುವುದು ಎಂದರು.
ಸಣ್ಣ ನೀರಾವರಿ ಸಹಾಯಕ ಎಂಜಿನಿಯರ್ ಆನಂದ್ ಕುಮಾರ್, ಸಹಾಯಕ ಎಂಜಿನಿಯರ್ ಸುಧಾಕರ್, ನರಸಿಂಹಮೂರ್ತಿ ಇದ್ದರು.
ಕುಡಿದ ಅಮಲಿನಲ್ಲಿ ಪತ್ನಿ ಕೊಲೆ
ಕ.ಪ್ರ. ವಾರ್ತೆ ಚಿಕ್ಕನಾಯಕನಹಳ್ಳಿ ಮಾ.20
ತಾಲೂಕಿನ ದೊಡ್ಡರಾಂಪುರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಪತಿರಾಯನೊಬ್ಬ ತನ್ನ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮಂಗಳವಾರ ಕದುರಯ್ಯ ಎಂಬಾತ ತನ್ನ ಹೆಂಡತಿ ನರಸಮ್ಮ(40)ಳನ್ನು ಕುಡಿದ ಅಮಲಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆರೋಪಿ ಕದುರಯ್ಯ ಪ್ರತಿನಿತ್ಯ ಕುಡಿದು ಬಂದು ಹೆಂಡತಿಯ ಜೊತೆ ಜಗಳ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಈ ಸಂಬಂಧ ಆರೋಪಿ ಕದುರಯ್ಯನ ಮಗ ಶ್ರೀನಿವಾಸ ದೂರು ನೀಡಿದ್ದು, ಚಿ.ನಾ.ಹಳ್ಳಿ ಪೊಲೀಸರು, ಆರೋಪಿ ಕದುರಯ್ಯನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.