ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಮಾನಿಕೆರೆ ಈಗ ಬಯಲು ಶೌಚಾಲಯ

Srinivasa Murthy VN
Updated On : 22 Mar 2013, 11:15 am

ಕ.ಪ್ರ ವಾರ್ತೆ ತುಮಕೂರು ಮಾ.22
ತುಮಕೂರು ಅಮಾನಿಕೆರೆ ಒಂದೆಡೆ ಒತ್ತುವರಿ ಆರೋಪ ಎದುರಿಸುತ್ತಿದ್ದರೆ, ಮತ್ತೊಂದೆಡೆ ಅನೈರ್ಮಲ್ಯದ ಆರೋಪಕ್ಕೀಡಾಗಿದೆ. ಕೇಂದ್ರ ಸರ್ಕಾರದ ಅನುದಾನ ಹಾಗೂ ರಾಜ್ಯ ಸರ್ಕಾರದ ಮೇಲ್ವೀಚಾರಣೆಯಲ್ಲಿ ಕೆರೆ ಸೌಂದರ್ಯೀಕರಣ, ನಡುಗಡ್ಡೆ, ಉದ್ಯಾನವನ, ತಂತಿ ಬೇಲಿ ನಿರ್ಮಾಣಕ್ಕೆ ಸುಮಾರು 13 ಕೋಟಿ ರು. ಅಂದಾಜು ವೆಚ್ಚದಲ್ಲಿ (ಇನ್ನೂ ಕೆಲ ಕಾಮಗಾರಿ ಬಾಕಿಯಿದೆ)ಅಭಿವೃದ್ಧಿ ಕಾಮಗಾರಿ ನಡೆದು, ಇದೇ ವರ್ಷ ಜನವರಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಕೊನೆಗೂ ಉದ್ಘಾಟನೆಗೊಂಡಿತು.
ಬಯಲು ಶೌಚಾಲಯ: ಅಮಾನಿಕೆರೆ ಅನೈರ್ಮಲ್ಯದ ಕುರಿತು ಹೇಳಿಕೆ ನೀಡಿರುವ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ. ಗುಂಡಪ್ಪ, ಅಮಾನಿಕೆರೆ ಸೌಂದರ್ಯೀಕರಣಕ್ಕೆ ಕೋಟ್ಯಂತರ ರು. ವೆಚ್ಚ ಮಾಡಲಾಗಿದೆ. ಆದರೆ ನಿರ್ವಹಣೆ ಮಾಡುತ್ತಿಲ್ಲ. ಅಮಾನಿಕೆರೆ ಈಗ ನೂರಾರು ಮಂದಿಗೆ ಬಯಲು ಶೌಚಾಲಯವಾಗಿದೆ. ಹೇಳುವವರು, ಕೇಳುವವರು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 13 ಕೋಟಿ ರು. ವೆಚ್ಚದ ಈ ಅಮಾನಿಕೆರೆ ಸೌಂದರ್ಯೀಕರಣದ ಕಾಮಗಾರಿಗೆ ಈಗ ಬೆಲೆಯೇ ಇಲ್ಲದಂತಾಗಿದೆ. ಅಭಿವೃದ್ಧಿ ಅರ್ಥವನ್ನೇ ಕಳೆದುಕೊಳ್ಳುತ್ತಿದೆ ಎಂದು ಗುಂಡಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಬಟ್ಟೆ ಸ್ವಚ್ಛತಾ ಕೇಂದ್ರ: ಹಾಲಿ ಅಮಾನಿಕೆರೆ ಬಟ್ಟೆ ಸ್ವಚ್ಛತಾ ಕೇಂದ್ರವಾಗಿದೆ. ತುಮಕೂರು ನಗರದ ಖಾಸಗಿ ನರ್ಸಿಂಗ್ ಹೋಂಗಳು, ಹಾಸ್ಟೆಲ್‌ಗಳು, ನಗರವಾಸಿಗಳ ಬಟ್ಟೆ ಒಗೆಯುವ ಕಾರ್ಯ ನಿರಾತಂಕವಾಗಿ ನಡೆದಿದ್ದು, ಅಮಾನಿಕೆರೆ ಮಲಿನಗೊಳ್ಳುತ್ತಿದೆ. ಕೋಟ್ಯಂತರ ರು. ಖರ್ಚು ಮಾಡಿದರೂ ಕೆರೆಯ ನೈರ್ಮಲ್ಯ ಕಾಪಾಡಿಕೊಳ್ಳಲಾಗದೆ ಇರುವುದಕ್ಕೆ ಗುಂಡಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ನಿಷ್ಪ್ರಯೋಜಕ ನಡುಗಡ್ಡೆಗಳು: ಅಮಾನಿಕೆರೆ ಮಧ್ಯೆ ನಿಷ್ಪ್ರಯೋಜಕ ನಡುಗಡ್ಡೆಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಸಸ್ಯಗಳಿಗೆ ಬದಲಾಗಿ ಅಲಂಕಾರಿಕ ಸಸ್ಯಗಳನ್ನು ಹೆಚ್ಚು ಬೆಳೆಸಿರುವುದು. ವಿಹಾರಕ್ಕಾಗಿ ಬರುವ ಜನರಿಗೆ ನಿರ್ದಿಷ್ಟ ಸಮಯ ನಿಗದಿಗೊಳಿಸದಿಲ್ಲದಿರುವುದು ಮಹತ್ವವಾದುದನ್ನು ನಿರೀಕ್ಷಿಸಿದವರಿಗೆ ಸಹಜವಾಗಿಯೇ ನಿರಾಸೆಯಾಗಿದೆ ಎಂದು ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ.
ಪುನಶ್ಚೇತನ ಅಪೂರ್ಣ: ತುಮಕೂರು ನಗರದ ಚರಂಡಿ ನೀರಿನಿಂದ ತುಂಬಿ ತುಳುಕಾಡುತ್ತಿದ್ದ, ಅಂತರಗಂಗೆಯಂತಹ ಕಳೆ ಸಸ್ಯಗಳಿಂದ ತುಂಬಿ ಹೋಗಿದ್ದ ಅಮಾನಿಕೆರೆ ಅಪೂರ್ಣವಾಗಿ ಪುನಶ್ಚೇತನಗೊಂಡಿದ್ದು, ಅವಸರದಲ್ಲಿ ರೂಪುಗೊಂಡ ವಿಹಾರ ತಾಣವಾಗಿದೆ ಎಂದು ಬಿ.ವಿ. ಗುಂಡಪ್ಪ ಆರೋಪಿಸಿದ್ದಾರೆ.
15 ಎಕರೆಗೂ ಹೆಚ್ಚು ಒತ್ತುವರಿ: ಈ ಮಧ್ಯೆ ಅಮಾನಿಕೆರೆ ಕಾಮಗಾರಿ ಕಳಪೆ ಎಂದು ಆರೋಪಿಸಿದ್ದ ತುಮಕೂರು ಸಂಸದ ಜಿ.ಎಸ್. ಬಸವರಾಜು, ಸುಮಾರು 15 ಎಕರೆಗೂ ಹೆಚ್ಚು ಅಮಾನಿಕೆರೆ ಜಾಗ ಒತ್ತುವರಿಯಾಗಿದೆ ಎಂದು ದೂರಿ ಲೋಕಾಯುಕ್ತ ತನಿಖೆಗೆ ಪತ್ರ ಬರೆದಿದ್ದಾರೆ. ಅಮಾನಿಕೆರೆ ವಿಸ್ತೀರ್ಣ 500 ಎಕರೆಗೂ ಹೆಚ್ಚಿದ್ದು, ತುಮಕೂರು ನಗರದ ಮಧ್ಯಭಾಗದಲ್ಲೇ ಇರುವುದು ಗಮನಾರ್ಹ.

ಅಮಾನಿಕೆರೆ ಪಕ್ಷಿಧಾಮವಾಗಿ ಘೋಷಿಸಿ
ಕ.ಪ್ರ ವಾರ್ತೆ ತುಮಕೂರು ಮಾ.22

ತುಮಕೂರು ಅಮಾನಿಕೆರೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಕಣ್ಮರೆಯಾಗಿದ್ದ ವಲಸೆ ಹಾಗೂ ಸ್ಥಳೀಯ ಪಕ್ಷಿಗಳು ಈಗ ಮತ್ತೆ ಕಾಣಿಸಿಕೊಂಡಿವೆ ಎಂದು ತುಮಕೂರಿನ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ತಿಳಿಸಿದೆ. ಕೆರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು (ಕಾಮಗಾರಿ ಕೆಲವೆಡೆ ಬಾಕಿಯಿದೆ) ಕೆರೆ ಅಪೂರ್ಣವಾಗಿ ಪುನಶ್ಚೇತನಗೊಂಡಿದ್ದರೂ, ಪಕ್ಷಿಗಳು ಬರಲಾರಂಭಿಸಿವೆ.
ಕೆರೆ ಅಭಿವೃದ್ಧಿಯಾದ ನಂತರ ಇದೇ ಮೊದಲ ಬಾರಿಗೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಸದಸ್ಯರು ಅಮಾನಿಕೆರೆಗೆ ಬಂದಿರುವ ಪಕ್ಷಿಗಳ ಗಣತಿ ಹಾಗೂ ಅಧ್ಯಯನ ಮಾಡಿ ಒಟ್ಟು 42 ಪ್ರಭೇದದ ಪಕ್ಷಿಗಳನ್ನು ಗುರುತಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ಅಮಾನಿಕೆರೆಯನ್ನು ಪಕ್ಷಿಧಾಮವಾಗಿ ಘೋಷಿಸುವಂತೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಒತ್ತಾಯಿಸಿದೆ.
10 ವರ್ಷಗಳ ಹಿಂದೆ 135 ಪ್ರಭೇದ ಪತ್ತೆ: ಇತಿಹಾಸ ಪ್ರಸಿದ್ಧವಾದ ಈ ಕೆರೆಯಲ್ಲಿ 10 ವರ್ಷಗಳ ಹಿಂದೆ 135 ಪ್ರಭೇದದ ಪಕ್ಷಿಗಳನ್ನು ದಾಖಲಿಸಿ ಗುರುತಿಸಲಾಗಿತ್ತು. ಆದರೆ ಇಂದು ಕೇವಲ 42 ಪ್ರಭೇದದ ಪಕ್ಷಿಗಳು ಮಾತ್ರ ಕಂಡು ಬಂದಿವೆ. ಯುರೋಪ್, ಭೂತಾನ್, ನೇಪಾಳ್‌ಗಳಿಂದ ಬಂದಿರುವ  ಗಾರ್ಗೆನಿ, ಕಾಮನ್‌ಟೀಲ್, ಮಾರ್ಷ್ ಹಾರಿಯರ್, ಸ್ಯಾಂಡ್ ಪೈಪರ್‌ಗಳು, ಟರ್ನ್‌ಗಳು, ವ್ಯಾಗ್ ಟೇಲ್‌ಗಳು ಹಾಗೂ ಸ್ಥಳೀಯ ಪಕ್ಷಿಗಳಾದ ಜಲ ಚತುರೆ, ಪುಟ್ಟ ನೀರುಕಾಗೆ, ಭತ್ತಹಕ್ಕಿ, ಬೂದುಬಕ, ದೊಡ್ಡ ಬೆಳ್ಳಕ್ಕಿ, ಮಧ್ಯಮ ಬೆಳ್ಳಕ್ಕಿ, ಹಸು ಬೆಳ್ಳಕ್ಕಿ, ಬಿಳಿಕೊಕ್ಕರೆ, ಸಿಳ್ಳು ಹಾಕುವ ನೀರು ಬಾತು, ನೀಲಿ ಪಕ್ಷಿ, ನಾಮದ ಕೋಳಿ, ಬಿಳಿ ಎದೆಯ ನೀರು ಕೋಳಿ, ಕಂಚು ರೆಕ್ಕೆಯ ನೀರು ಕೋಳಿ, ಬಣ್ಣದ ಉಲ್ಲಂಗಿ, ಕುಡುಗೋಲು, ಬಾಲದ ಜಸಾನ, ಬಿಳಿ ಐಬಿಸ್, ಬಣ್ಣದ ಕೊಕ್ಕರೆ, ತೆರೆದ ಕೊಕ್ಕಿನ ಕೊಕ್ಕರೆ, ಚುಕ್ಕೆ ಕೊಕ್ಕಿನ ಬಾತು, ನೀರಿನಲ್ಲಿ ಡೈವ್ ಮಾಡುವ ಬಿಳಿ ಎದೆಯ ಮಿಂಚುಳ್ಳಿ, ಸಣ್ಣ ನೀಲಿ ಮಿಂಚುಳ್ಳಿ, ಕಪ್ಪು-ಬಿಳುಪು  ಮಿಂಚುಳ್ಳಿ ಇತ್ಯಾದಿ ಸೇರಿದಂತೆ ಒಟ್ಟು 42 ಪ್ರಭೇದದ ಹಕ್ಕಿಗಳನ್ನು ಗುರುತಿಸಲಾಗಿದೆ.
ಪಕ್ಷಿಧಾಮವೆಂದು ಘೋಷಿಸಲಿ: ಇಂತಹ ಅಪರೂಪದ ಪಕ್ಷಿಗಳಿರುವ ಅಮಾನಿಕೆರೆಯನ್ನು ಪಕ್ಷಿಧಾಮವೆಂದು ಘೋಷಿಸಿ, ಅಲ್ಲಿ ಸ್ವಾಭಾವಿಕವಾಗಿ ವಾಸಿಸುವ ಪಕ್ಷಿಗಳಿಗೆ ಕಾನೂನಿನ ರಕ್ಷಣೆ ಒದಗಿಸಿ, ಸಂರಕ್ಷಿಸುವುದು. ಅಮಾನಿಕೆರೆ ಪಕ್ಷಿಧಾಮ - ರಕ್ಷಿತ ಪ್ರದೇಶ ಎಂದು ಬರೆದ ನಾಮಫಲಕವನ್ನು ಹಾಕುವುದು. ಅಮಾನಿಕೆರೆಯಲ್ಲಿ ಗುರುತಿಸಿರುವ ಈಜುಪಕ್ಷಿಗಳು, ನೀರ್ನಡಿಗೆಯ ಪಕ್ಷಿಗಳು, ದಡವಾಸಿ ಪಕ್ಷಿಗಳು, ಜಲಸಸ್ಯಗಳ ಮೇಲೆ ನಡೆದಾಡುವ ಪಕ್ಷಿಗಳ ಬಗ್ಗೆ ಒಂದು ಟಿಪ್ಪಣಿಯನ್ನು ಫಲಕದಲ್ಲಿ ಬರೆಸುವಂತೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಆಗ್ರಹಿಸಿದೆ.
ಮಹತ್ವದ ಹೆಜ್ಜೆಯೇ ಸರಿ: ತುಮಕೂರಿನ ಅಮಾನಿಕೆರೆಯನ್ನು ಪಕ್ಷಿಧಾಮವೆಂದು ಘೋಷಿಸಿ, ಸಂರಕ್ಷಿಸುವುದು ಒಂದು ಸಣ್ಣ ವಿಷಯವೆನಿಸಿದರೂ, ಜೀವ ವೈವಿಧ್ಯ ಸಂರಕ್ಷಣೆಯ ದೃಷ್ಟಿಯಲ್ಲಿ ಒಂದು ಮಹತ್ವದ ಹೆಜ್ಜೆಯೇ ಸರಿ. ಬಹು ಉಪಕಾರಿಗಳಾದ ಪಕ್ಷಿಗಳನ್ನು ವೀಕ್ಷಿಸಿ, ಗುರುತಿಸಿ, ಅವುಗಳ ಹಾರಾಟ, ಚಲನ-ವಲನಗಳನ್ನು ಅಭ್ಯಸಿಸುವುದು ಖಂಡಿತವಾಗಿಯೂ ಮನಸ್ಸಿಗೆ ಆನಂದ ನೀಡುವ ಹವ್ಯಾಸ.
ಅದರಲ್ಲಿಯೂ ವಲಸೆಗಾರ ಹಕ್ಕಿಗಳ ಆಗಮನ, ನಿರ್ಗಮನಗಳ ಬಗ್ಗೆ ಅಧ್ಯಯನ ಮಾಡುವುದಂತೂ ರೋಚಕ ವಿಷಯ. ನಗರದ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಅತ್ಯಾಕರ್ಷಕ ಪಕ್ಷಿ ವೀಕ್ಷಣೆ ಹವ್ಯಾಸ ಬೆಳೆಸಿಕೊಳ್ಳಲು ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಅಮಾನಿಕೆರೆಯನ್ನು ಪಕ್ಷಿಧಾಮವೆಂದು ಘೋಷಿಸುವಂತೆ, ಹಾಗೂ ಅಮಾನಿಕೆರೆ ಮಲಿನಗೊಳ್ಳದಂತೆ ಎಚ್ಚರಿಕೆ ವಹಿಸುವಂತೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಸರ್ಕಾರವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement