ಕುಡಿದು ರಾದ್ಧಾಂತ ಮಾಡಿದ ಸರ್ಕಾರಿ ದಂತ ವೈದ್ಯ!
ಕ.ಪ್ರ.ವಾರ್ತೆ, ಶ್ರೀರಂಗಪಟ್ಟಣ, ಮಾ.22
ಈ ದಂತ ವೈದ್ಯನಿಗೆ ಸರ್ಕಾರಿ ಆಸ್ಪತ್ರೆಯೆ ಬಾರ್. ತಾನು ಸೇವೆ ಸಲ್ಲಿಸುತ್ತಿರುವ ಜಾಗದಲ್ಲಿ ಕಂಠಪೂರ್ತಿ ಕುಡಿದು ರೋಗಿಗಳನ್ನು ನೋಡುವುದು ಈತನ ಖಯಾಲಿ.
ಶ್ರೀರಂಗಪಟ್ಟಣ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯ ಡಾ.ಬಾನುಪ್ರಕಾಶ್, ಆಸ್ಪತ್ರೆ ಕೊಠಡಿಯಲ್ಲಿ ಗುರುವಾರ ರಾತ್ರಿ ಕುಡಿದು ರಾದ್ಧಾಂತ ಮಾಡಿದ ಘಟನೆ ಜರುಗಿದೆ.
ಶುಕ್ರವಾರ ಬೆಳಗ್ಗೆಯೂ ಕುಡಿದುಕೊಂಡೆ ಕೆಲಸ ಆರಂಭಿಸಿದ್ದನ್ನು ಪ್ರಶ್ನಿಸಿದ ಆಸ್ಪತ್ರೆಯ ರೋಗಿಗಳು ಹಾಗೂ ಕನ್ನಡಪರ ಸಂಘಟನೆಗಳ ವಿರುದ್ಧ ಕಾದಾಟಕ್ಕೆ ನಿಂತ ವೈದ್ಯ ಗುರುವಾರ ರಾತ್ರಿ ಕುಡಿದ ಅಮಲು ಶುಕ್ರವಾರವಾದರೂ ಇಳಿದಿರಲಿಲ್ಲ. ಶುಕ್ರವಾರ ಬೆಳಗ್ಗೆ 10.30ಕ್ಕೆ ಕಚೇರಿ ಕೆಲಸಕ್ಕೆ ಆಸ್ಪತ್ರೆಗೆ ಬೇಟಿ ನೀಡಿದ ಕನ್ನಡಪರ ಸಂಘಟನೆಗಳ ನಾಯಕರಿಗೆ ಈ ವೈದ್ಯನ ಕೊಠಡಿಯಲ್ಲಿದ್ದ ಬಾಟಲ್‌ಗಳು, ತಿಂಡಿ, ಲೋಟ, ತಟ್ಟೆಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಇದನ್ನು ಕಂಡ ಕನ್ನಡಪರ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು, ವೈದ್ಯನನ್ನು ತರಾಟೆ ತೆಗೆದುಕೊಂಡು ಛೀಮಾರಿ ಹಾಕಿದರು. ಸರ್ಕಾರಿ ಆಸ್ಪತ್ರೆ ಸಾರ್ವಜನಿಕ ವಿಶ್ವಾಸಾರ್ಹತೆ ಕಾಪಾಡುವಲ್ಲಿ ವಿಫಲವಾಗಿದೆ. ನಿಮ್ಮಂತಹ ವೈದ್ಯರು ರೋಗಿಗಳನ್ನು ಯಾವ ರೀತಿ ಶುಶ್ರೂಷೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಈ ನಡುವೆ ಆಸ್ಪತ್ರೆ ಕೊಠಡಿಯೊಂದರಲ್ಲಿ ಬಾರ್ ರೀತಿಯಲ್ಲಿ ಹಲವಾರು ಮದ್ಯದ ಬಾಟಲ್‌ಗಳನ್ನು ತಂದಿಟ್ಟುಕೊಂಡ ವೈದ್ಯನ ಕ್ರಮವನ್ನು ಕೂಡಾ ಕಾರ್ಯಕರ್ತರು ಖಂಡಿಸಿದರು.
ಕ್ಷಮೆಯಾಚನೆ: ಆಸ್ಪತ್ರೆಯನ್ನು ಬಾರ್ ಮಾಡಿಕೊಂಡು ಕಂಠಪೂರ್ತಿ ಕುಡಿದ ವೈದ್ಯ ಡಾ.ಭಾನುಪ್ರಕಾಶ್, ಇನ್ನೂ ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಸಂಘಟನೆ ನಾಯಕರಲ್ಲಿ ಕ್ಷಮೆಯಾಚಿಸಿದರು. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಕುಮಾರಸ್ವಾಮಿ, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಶಿವರಾಂ, ದಸಂಸ ಹೊನ್ನಪ್ಪ, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುಟ್ಟರಾಮು ಉಪಸ್ಥಿತರಿದ್ದರು
'ಗ್ರಾಹಕ ನ್ಯಾಯ ಈಗಲೇ': ವಿಶ್ವ ಗ್ರಾಹಕರ ದಿನಾಚರಣೆ
ಕನ್ನಡಪ್ರಭ ವಾರ್ತೆ ಹಾಸನ ಮಾ.22
ವಿಶ್ವ ಗ್ರಾಹಕರ ದಿನಾಚರಣೆಯನ್ನು ಶುಕ್ರವಾರ 'ಗ್ರಾಹಕ ನ್ಯಾಯ ಈಗಲೇ' ಎಂಬ ಘೋಷ ವಾಕ್ಯದ ಮೂಲಕ ನಗರದಲ್ಲಿ ಆಚರಿಸಲಾಯಿತು.
ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕರ ಸರಬರಾಜು ನಿಗಮ ನಿಯಮಿತ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕಂದಾಯ ಭವನದಲ್ಲಿ ಕಾರ್ಯಕ್ರಮ ನಡೆಯಿತು.
ಬಳಕೆದಾರರ ವೇದಿಕೆ ಅಧ್ಯಕ್ಷ ಎಸ್.ಬೋರೇಗೌಡ ಮಾತನಾಡಿ, ಕಾಳಸಂತೆಯಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಗ್ರಾಹಕರು ಖರೀದಿಸದೆ, ಆ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಒಂದು ವೇಳೆ ಕಾಳಸಂತೆಯಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಖರೀಸಿದರೂ, ಅದಕ್ಕೆ ಸೂಕ್ತ ಬಿಲ್ ಪಡೆದುಕೊಳ್ಳಬೇಕು. ಬಿಲ್ ಇಲ್ಲದೆ ಯಾವುದೇ ವಸ್ತುಗಳನ್ನು ಗ್ರಾಹಕರು ಖರೀದಿಸಬಾರದು ಎಂದು ಹೇಳಿದರು.
ತೆರಿಗೆ ಉಳಿಸುವುದಕೋಸ್ಕರ ಬಿಲ್ ಪಡೆಯದೆ, ವಸ್ತುಗಳನ್ನು ಖರೀದಿಸುವುದು ಸರಿಯಲ್ಲ. ಈ ವಿರುದ್ಧ ಗ್ರಾಹರಿಕರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಡಬೇಕಾದ ಅನಿರ್ವಾಯತೆ ಇದೆ ಎಂದರು.