ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಮೀಣ ಯುವಕರು ಸಂಘಟಿತರಾಗಲಿ

Srinivasa Murthy VN
Updated On : 22 Mar 2013, 11:16 am

ಕ.ಪ್ರ ವಾರ್ತೆ ಪಾವಗಡ ಮಾ.22
ಗ್ರಾಮೀಣ ಯುವಕರು ಸಂಘಟಿತರಾಗಿ ಸಂವಿಧಾನದಲ್ಲಿ ಕಲ್ಪಿಸಿದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಕರೆ ನೀಡಿದರು.
ಅವರು ಬೊಮ್ಮತನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಶುಕ್ರವಾರ ಏರ್ಪಾಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಯುವಕ ಸಂಘಗಳು ರಚನೆಯಾಗಬೇಕು. ಗ್ರಾಮೀಣ ಯುವಕರು ಸಂಘಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಉತ್ತಮ ರೀತಿಯ ಚಟವಟಿಕೆಗಳನ್ನು ಹಮ್ಮಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಿ ಮಾದರಿಯಾಗಬೇಕು ಎಂದರು. ಅಲ್ಲದೆ ಆಂಬೇಡ್ಕರ್ ಅವರು ಸಂವಿಧಾನದಲ್ಲಿ ಕಲ್ಪಿಸಿದ ಎಸ್‌ಸಿ, ಎಸ್‌ಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ  ಸಲಹೆ ನೀಡಿದರು.
ಸರ್ಕಾರಿ ಅಧಿಕಾರಿಗಳು ದಲಿತರ ಸಮಸ್ಯೆಗಳಿಗೆ ಸ್ವಂದಿಸಿ ತಮ್ಮ ಪಾಲಿನ ಕರ್ತವ್ಯ ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಬಡವರು, ವೃದ್ಧರು, ಅಂಗವಿಕಲರು ಸರ್ಕಾರಿ ಇಲಾಖೆಗಳ ಬಳಿ ಅಲೆಯುವುದು ತಪ್ಪಿಸಬಹುದು. ಅಂತಹ ಕೆಲಸ ಮಾಡುವಲ್ಲಿ  ಶಾಸಕರು ಆಸಕ್ತಿ ವಹಿಸಿಬೇಕಿದೆ ಎಂದರು.
ಅಸಮಾಧಾನ: ಶೇ.18 ಹಾಗೂ 22ರ ಅನುದಾನ ಎಸ್‌ಸಿ ಹಾಗೂ ಎಸ್‌ಟಿಗಳ ಅಭಿವೃದ್ಧಿಗೆ ಮೀಸಲಿದ್ದು ಆ ಯೋಜನೆಗಳ ಹಣ ಪ.ಜಾತಿ ಹಾಗೂ ಪಂಗಡ ಜನಾಂಗಗಳ ಅಭಿವೃದ್ಧಿಗೆ ವಿನಿಯೋಗಿಸದೇ ಶಾಸಕರ ಆದೇಶದಂತೆ ರಸ್ತೆ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ವಿನಿಯೋಗಿಸುವುದರಿಂದ ಅಭಿವೃದ್ಧಿಯಲ್ಲಿ ಈ ಜನಾಂಗಗಳಿಗೆ ವಂಚನೆ ಆಗಿದೆ ಎಂದ ಅವರು ಸಂವಿಧಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಎಲ್ಲಾ ಜನಾಂಗಗಳ ಪ್ರಗತಿಗೆ ಸಮಾನತೆಯ ಕಲ್ಪಿಸಿದ್ದು ಅದರಲ್ಲಿ ಶೋಷಿತ ವರ್ಗಗಳ ಏಳಿಗೆಗೆ ಮೀಸಲಿಟ್ಟ ಯೋಜನೆಗಳು ಶಾಸಕರ ಹಸ್ತಕ್ಷೇಪದಿಂದ ದುರುಪಯೋಗವಾಗುವ ಕಾರಣ ಇಂದು ಈ ಜನಾಂಗಗಳು ಅದೇ ಪರಿಸ್ಥಿತಿಯಲ್ಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ಎಸ್‌ಟಿ, ಎಸ್‌ಟಿಗಳಿಗೆ ಮೀಸಲಿದ್ದ ಶೇ.18ರ ಅನುದಾನ ರಸ್ತೆ ಕಾಮಗಾರಿಯೊಂದಕ್ಕೆ ವಿನಿಯೋಗಿಸಿದ ಕಾರಣ ಅದನ್ನು ಪತ್ತೆ ಹಚ್ಚಿ ವಿಧಾನ ಸಭೆಯಲ್ಲಿ ಗಲಾಟೆ ಮಾಡಿದ ಪ್ರಯುಕ್ತ ಕೂಡಲೇ ರದ್ದುಪಡಿಸಿ ಎಸ್‌ಟಿ ಕಾಲೋನಿಗಳ ಅಭಿವೃದ್ಧಿಗೆ ವಿನಿಯೋಗಿಸಿದರು. ಇಂದು ಶೇ.18ರ ಅನುದಾನದಿಂದ ಅನೇಕ ಕಾಲೋನಿಗಳಿಗೆ ಕುಡಿಯುವ ನೀರು, ಸಿಸಿ ರಸ್ತೆ ಹಾಗೂ ಇನ್ನಿತರೆ ಪ್ರಗತಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಯಿತು ಎಂದರು.
ಅಭಿವೃದ್ಧಿಗೆ ಒತ್ತು: ಅಂಬೇಡ್ಕರ್ ಅವರ ಅನೇಕ ವಿಚಾರ ಧಾರೆಗಳನ್ನು ವಿವರಿಸಿದ ಅವರು ಗ್ರಾಮಗಳಲ್ಲಿ ಅಹಿತರಕ ಘಟನೆಗಳಿಗೆ ಅವಕಾಶ ನೀಡದೆ ಎಲ್ಲಾ ವರ್ಗದವರೊಂದಿಗೆ ಉತ್ತಮ ಬಾಂಧವ್ಯಹೊಂದಿ ಪರಸ್ಪರ ಸಹಕಾರ, ವಿಚಾರ ವಿನಿಮಯದೊಂದಿಗೆ ಯುವಕ ಸಂಘಗಳು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುವಂತೆ ಅವರು ಮನವಿ ಮಾಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ರಂಗಪ್ಪ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಎಸ್‌ಸಿ, ಎಸ್‌ಟಿ ಜಿಲ್ಲಾ ಘಟಕದ ಅಧ್ಯಕ್ಷ ವಕೀಲ ಅಂಬರೀಶ್, ಜಿಲ್ಲಾ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ, ತಾ.ಸಂಚಾಲಕ ಬಿ.ಪಿ. ಪೆದ್ದಣ್ಣ, ಮುಖಂಡರಾದ ತಿಪ್ಪೇಸ್ವಾಮಿ, ಪೂಜಾರಿ ಓಬಳನರಸಿಂಹಪ್ಪ ಗ್ರಾಪಂ ಸದಸ್ಯ, ಓಬಳನರಸಿಂಹಪ್ಪ, ಪಾಂಡುರಂಗಪ್ಪ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement