ವಿವಿಧ ರಾಜಕೀಯ ಪಕ್ಷಗಳ ಮುಖಂಡರಲ್ಲಿ ತಲ್ಲಣ
ಕ.ಪ್ರ ವಾರ್ತೆ ಕುಣಿಗಲ್ ಮಾ.22
ವಿಧಾನಸಭೆ ಚುನಾವಣೆಗಳು ಘೋಷಣೆಯಾದಾಗಿನಿಂದ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರಲ್ಲಿ ತಲ್ಲಣ ಉಂಟು ಮಾಡಿದೆ.
ಕೆಲ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು, ಕೈ ಪಾಳೆಯದ ಮುಖಂಡರು ಟಿಕೆಟ್ಗಾಗಿ ದೆಹಲಿಗೆ ಎಡತಾಕಿ ತಮ್ಮದೆ ಆದ ಮೂಲಗಳಿಂದ ಬಿ ಫಾರಂ ಪಡೆಯಲು ಹಲವು ತರಹದ ಕೈ ಚಳಕ ತೋರುವುದರಲ್ಲಿ ನಿರತರಾಗಿದ್ದಾರೆ. ಜೆಡಿಎಸ್ನಲ್ಲಿ ಟಿಕೆಟ್ ಆಖೈರುಗೊಳ್ಳಲು ಮುಖಂಡರು ರಾಜಧಾನಿಗೆ ಎಡತಾಕುತ್ತಿರುವುದು ವಿಶೇಷವಾಗಿದೆ. ತಾಲೂಕು ಕಾಂಗ್ರೆಸ್ನಲ್ಲಿ ಹಾಲಿ ಶಾಸಕ ಬಿ.ಬಿ.ರಾಮಸ್ವಾಮಿಗೌಡರಿಗೆ ಟಿಕೆಟ್ ಎಂದು ಪಕ್ಷದ ಜಿಲ್ಲಾಧ್ಯಕ್ಷರು ಕೆಲ ತಿಂಗಳ ಹಿಂದೆ ಘೋಷಣೆ ಮಾಡಿ ಹೋಗಿದ್ದರೂ, ಪಕ್ಷದಲ್ಲಿ ಇತರೆ ಮುಖಂಡರಾದ ರವಿಕಿರಣ್, ಡಾ.ರುದ್ರಯ್ಯ ಟಿಕೆಟ್ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಈಗಾಗಲೆ ಶಾಸಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರೆ, ಡಾ.ರುದ್ರಯ್ಯ ದೆಹಲಿಗೆ ತೆರಳಿದ್ದಾರೆಂಬ ವದಂತಿ ಪಟ್ಟಣದ ತುಂಬೆಲ್ಲಾ ಹರಡಿದೆ. ಈ ಮಧ್ಯೆ ಮುಖಂಡ ರವಿಕಿರಣ್, ತಮಗಿರುವ ಪ್ರಭಾವ ಬಳಸಿಕೊಂಡು ಬೆಂಗಳೂರಿನಲ್ಲಿದ್ದುಕೊಂಡೆ, ತಮ್ಮ ಬೆಂಬಲಿಗರ ಮೂಲಕ ಲಾಬಿ ನಡೆಸುತ್ತಿದ್ದಾರೆ.
ನಂಬಿಕೆ: ಹಾಲಿ ಶಾಸಕರಿಗೆ ಟಿಕೆಟ್ ಅಂತಿಮಗೊಳ್ಳುತ್ತದೆ ಎಂಬುದು ಕಾರ್ಯಕರ್ತರಲ್ಲಿ ನಂಬಿಕೆ ಇದ್ದರೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಆಖೈರುಗೊಳ್ಳುವುದು ದೆಹಲಿಯ ಹೈಕಮಾಂಡ್ ಕಚೇರಿಯಲ್ಲಾಗುವುದರಿಂದ ಬಿ ಫಾರಂ ಕೈಗೆ ಸಿಗುವ ತನಕ ಯಾವುದೇ ನಾಯಕರಿಗೂ ದೃಢ ನಂಬಿಕೆ ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಕಾರಣ 2008ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಗೆದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್.ಪಿ. ಮುದ್ದಹನುಮೇ ಗೌಡರಿಗೆ, ಶಾಸಕ ಬಿ.ಬಿ.ರಾಮಸ್ವಾಮಿಗೌಡರು ಲಾಬಿ ನಡೆಸಿದ ಪರಿಣಾಮ ಎಸ್.ಪಿ.ಎಂಗೆ ಟಿಕೆಟ್ ತಪ್ಪಿ ರಾಮಸ್ವಾಮಿಗೌಡರ ಪಾಲಾಯಿತು. ಹೀಗಾಗಿ ಕೈಪಾಳೆಯದಲ್ಲಿ ಟಿಕೆಟ್ಗಾಗಿ ಲಾಬಿ ನಡೆಸದ ಹೊರತು ಟಿಕೆಟ್ ದೊರೆಯದ ಸ್ಥಿತಿ ಇದೆ.
ಇನ್ನು ತಾಲೂಕು ಜೆಡಿಎಸ್ನಲ್ಲಿ ಮಾಜಿ ಸಚಿವ ಡಿ. ನಾಗರಾಜಯ್ಯ ಹಾಗೂ ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡರ ನಡುವೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತಿದ್ದು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲು ಮುಖಂಡರು ರಾಜಧಾನಿಗೆ ಎಡತಾಕುತಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ತೆನೆಹೊತ್ತ ಮಹಿಳೆಯ ಲಾಂಛನ ಹೊರುವುದು ಯಾರು ಎಂಬುದು ಅಂತಿಮಗೊಳ್ಳಲಿದೆ. ಕಳೆದ ಪುರಸಭಾ ಚುನಾವಣೆಯ ಬಿ ಫಾರಂ ವಿತರಣೆಯಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯನವರನ್ನು ಪಕ್ಷದ ವರಿಷ್ಠರು ಕಡೆಗಣಿಸಿದ ಕಾರಣ, ಮಾಜಿ ಸಚಿವರು ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿದರು. ಜೆಡಿಎಸ್ಗೆ ಮರ್ಮಾಘಾತ ನೀಡಿದರಲ್ಲದೆ, ಚಿಹ್ನೆ ಇಲ್ಲದಿದ್ದರೂ ಪಕ್ಷದ ಅಧಿಕೃತ ಅಭ್ಯರ್ಥಿಗಳು ಗಳಿಸಿದಷ್ಟು ಸ್ಥಾನಗಳನ್ನು ಗಳಿಸಿ, ತಮ್ಮ ಪ್ರಾಬಲ್ಯ ಮೆರೆದಿದ್ದರು. ಈಗಾಗಲೆ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಮಾಜಿ ಸಚಿವರ ಬೆಂಬಲಿಗರು ಸಭೆ ನಡೆಸಿ, ತಮ್ಮ ಬೆಂಬಲ ಏನಿದ್ದರೂ ಮಾಜಿ ಸಚಿವ ಡಿ.ನಾಗರಾಜಯ್ಯನವರಿಗೆ ಎಂದು ಘೋಷಣೆ ಮಾಡಿದರು.
ಗೊಂದಲ: ಮಾಜಿ ಸಚಿವ ಡಿ.ನಾಗರಾಜಯ್ಯನವರನ್ನು ಒಂದು ವೇಳೆ ಪಕ್ಷ ಕಡೆಗಣಿಸಿದ್ದೇ ಆದಲ್ಲಿ ಬಂಡಾಯ ಸ್ಪರ್ಧೆಗೆ ಇಳಿಸಲು ಹಿಂದೆಮುಂದೆ ನೋಡೊಲ್ಲಾ ಎಂಬ ಸಂದೇಶವನ್ನು, ಬೆಂಬಲಿಗರು ರವಾನಿಸುವ ಮೂಲಕ, ಜೆಡಿಎಸ್ ಪಕ್ಷದಲ್ಲಿನ ಟಿಕೆಟ್ ಗೊಂದಲ ತಾರಕಕ್ಕೇರುವಂತೆ ಮಾಡಿದ್ದಾರೆ. ಇನ್ನು ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರು ಸದ್ದಿಲ್ಲದೆ ತಮ್ಮದೇ ಆದ ಸಂಘಟನೆಯಲ್ಲಿ ತೊಡಗಿದ್ದು ಕ್ಷೇತ್ರದಾದ್ಯಂತ ಸಂಚರಿಸುತ್ತಾ ಮುಂಬರುವ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಕೃಷ್ಣಕುಮಾರ್ ಬಿಜೆಪಿ ಅಭ್ಯರ್ಥಿ: ಬಿಜೆಪಿ ಪಕ್ಷದಲ್ಲಿ ಮುಖಂಡ ಡಿ.ಕೃಷ್ಣಕುಮಾರ್ ಮುಂದಿನ ಅಭ್ಯರ್ಥಿಯಾಗಿರುವುದರಿಂದ, ಕೃಷ್ಣಕುಮಾರ್ ಈಗಾಗಲೆ ಪ್ರಚಾರಕಣಕ್ಕೆ ಧುಮುಕಿ, ನಗರ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಹಲವು ಮುಖಂಡರೊಂದಿಗೆ ಚುನಾವಣೆ ಸಮರ್ಥವಾಗಿ ಎದುರಿಸುವ ಲೆಕ್ಕಾಚಾರದಲ್ಲಿ ಮುಳುಗಿದ್ದು, ಪುರಸಭೆ ಚುನಾವಣೆ ಫಲಿತಾಂಶದ ಬಗ್ಗ ತಲೆಕೆಡಿಸಿಕೊಳ್ಳದೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಜಯಗಳಿಸಲು ಕಾರ್ಯಕರ್ತರೊಂದಿಗೆ ಕ್ಷೇತ್ರದುದ್ದಗಲಕ್ಕೂ ಮತಬೇಟೆಯಲ್ಲಿ ತೊಡಗಿದ್ದಾರೆ.