ಜೆಡಿಎಸ್ ಶಾಸಕರ ಅಳಿಯ ಬಿಜೆಪಿಗೆ ಸೇರ್ಪಡೆ
ಕ.ಪ್ರ. ವಾರ್ತೆ ತುರುವೇಕೆರೆ ಮಾ.23
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರ ಅಳಿಯ ಡಾ.ಚೌದ್ರಿ ನಾಗೇಶ್ ಬಿಜೆಪಿ ಸೇರುವುದರೊಂದಿಗೆ ತಾಲೂಕಿನಲ್ಲಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದ್ದಾರೆ.
ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಶನಿವಾರ ತಾಲೂಕು ಅಧ್ಯಕ್ಷ ಟಿ.ಎಸ್. ಬೋರೇಗೌಡ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರುಕ್ಮಿಣಮ್ಮ, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಶಿವಯೋಗೀಶ್ವರ ಸ್ವಾಮಿಯವರ ಸಮ್ಮುಖ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.
ಅವಕಾಶ ನೀಡಿದರೆ ಸ್ಪಧೆ: ತಾವು ಈಗ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಿಜೆಪಿಗೆ ಪಾದಾರ್ಪಣೆ ಮಾಡಿದ್ದೇನೆ. ಪಕ್ಷದಲ್ಲಿನ ಹಲವಾರು ನಾಯಕರ ಸರಳ ಸಜ್ಜನಿಕೆ ಇಷ್ಟವಾಯಿತು. ಉತ್ತಮ ಸಿದ್ದಾಂತ ಉಳ್ಳ ಪಕ್ಷವನ್ನು ಯಾರೋ ಸ್ವಾರ್ಥಕ್ಕಾಗಿ ಹಾಳು ಮಾಡಿದ್ದಾರೆ. ಈಗ ಪುನರ್ ಸ್ಥಾಪನೆ ಮಾಡಿ ಪಕ್ಷವನ್ನು ಸದೃಢಗೊಳಿಸುವ ಆಸೆಯಿಂದ ಬಿ ಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಡಾ.ಚೌದ್ರಿ ನಾಗೇಶ್ ಹೇಳಿದರು. ಸದ್ಯಕ್ಕೆ ತಾವು ಯಾವುದೇ ಆಸೆ ಆಮಿಷ ಇಟ್ಟುಕೊಂಡು ಪಕ್ಷಕ್ಕೆ ಸೇರಿಲ್ಲ. ಆಕಸ್ಮಿಕವಾಗಿ ಪಕ್ಷ ತಮ್ಮನ್ನು ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ನೀಡಿದರೆ ಸ್ಪರ್ಧಿಸುವುದಾಗಿ ಡಾ.ಚೌದ್ರಿ ನಾಗೇಶ್ ಹೇಳಿದರು.
ಬಿಜೆಪಿಗೆ ಹಾರಿದ ಹೆಲಿಕ್ಯಾಫ್ಟರ್ ವಿನಯ್ ರಾಜಶೇಖರ್ : ಕೆಜೆಪಿಯ ವರಿಷ್ಠ ಬಿಎಸ್‌ವೈ ಅವರ ಬಲಗೈ ಭಂಟರಾಗಿರುವ ಮಾಜಿ ಸಚಿವ ಪುಟ್ಟಸ್ವಾಮಿಯವರ ಪರಮಾಪ್ತರಲ್ಲಿ ಒಬ್ಬರಾಗಿದ್ದ ರಾಜ್ಯ ಗಾಣಿಗ ಸಮುದಾಯದ ಮಾಜಿ ಅಧ್ಯಕ್ಷ ವಿನಯ್ ರಾಜಶೇಖರ್ ಅವರು ಕೆಜೆಪಿ ತೊರೆದು ಬಿಜೆಪಿಗೆ ಹಾರಿದ್ದಾರೆ. ಕೆಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ರಾಜಶೇಖರ್‌ರಿಗೆ ಕೆಜೆಪಿಯಿಂದ ಟಿಕೆಟ್ ಸಿಗದಿದ್ದುದರಿಂದ ಬೇಸರಗೊಂಡು ಬಿಜೆಪಿಗೆ ಸೇರಿದ್ದಾರೆ.
ಪರ್ತಕರ್ತರೊಂದಿಗೆ ಮಾತನಾಡಿದ ಅವರು ತಾವು ಮೊದಲೂ ಸಹ ಬಿಜೆಪಿಯಲ್ಲೇ ಇದ್ದದ್ದು. ಪುಟ್ಟಸ್ವಾಮಿಯವರ ಆಶೀರ್ವಾದದಿಂದ ತಮಗೆ ಕೆಜೆಪಿಯಲ್ಲಿ ಟಿಕೆಟ್ ಸಿಗುತ್ತದೆ ಎಂಬುದು ಖಚಿತವಾಗಿತ್ತು. ಆದರೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಡಿ. ಲಕ್ಷ್ಮೀನಾರಾಯಣ್ ಅವರ ಕುತಂತ್ರದಿಂದಾಗಿ ತಮಗೆ ಟಿಕೆಟ್ ಇಲ್ಲವಾಯಿತು ಎಂದು ದೂರಿದರು.
ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೂ ಸರಿಯೇ ಇಲ್ಲದಿದ್ದರೂ ಸರಿಯೇ ತಾವು ಬಿಜೆಪಿಯಲ್ಲೇ ಇದ್ದು ಪಕ್ಷದ ಅಭಿವೃಧ್ಧಿಗೆ ಶ್ರಮಿಸುವುದಾಗಿ ವಿನಯ್ ರಾಜಶೇಖರ್ ಹೇಳಿದರು.
ಇವರೊಂದಿಗೆ ಕೆ.ಬೇವಿನಹಳ್ಳಿಯ ಮಾಜಿ ಮಂಡಲ ಪ್ರಧಾನ ಬಿ.ಕೆ.ನಾಗರಾಜು, ಡ್ರೈವಿಂಗ್ ಸ್ಕೂಲ್ ಬಸವರಾಜು, ತಳವಾರನಹಳ್ಳಿ ಜಯಪ್ರಕಾಶ್ ಮೊದಲಾದ ಮುಖಂಡರು ಬಿಜೆಪಿಯನ್ನು ಸೇರಿದರು.
9 ಮಂದಿ ಟಿಕೇಟ್ ಆಕಾಂಕ್ಷಿಗಳು: ತಾಲೂಕಿನಲ್ಲಿ ಬಿಜೆಪಿ ಸದೃಢವಾಗಿದೆ. ಸದ್ಯ ತಮ್ಮ ಪಕ್ಷದಿಂದ ಸುಮಾರು 9 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ರಾಜ್ಯ ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷೆಯೂ ಆಗಿರುವ ರುಕ್ಮಿಣಮ್ಮ ಸಹ ಒಬ್ಬರು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಸ್. ಬೋರೇಗೌಡ ಹೇಳಿದರು.
ನಮ್ಮಲ್ಲಿ ಯಾರಿಗೆ ಟಿಕೇಟ್ ನೀಡಿದರೂ ಸಹ ಎಲ್ಲರೂ ಪ್ರಾಮಾಣಿಕವಾಗಿ ಪಕ್ಷದ ಪರವಾಗಿ ಹೋರಾಟ ಮಾಡಿ ಪಕ್ಷವನ್ನು ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯಿಂದ ಸರ್ವ ಅನುಕೂಲವನ್ನು ಪಡೆದುಕೊಂಡ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ್ ಎಲ್ಲಾ ಅಧಿಕಾರವನ್ನು ಉಂಡು ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಕ್ಷೇತ್ರದ 53 ಸಾವಿರ ಮಂದಿ ಮತ ನೀಡಿದ್ದರೂ ಸಹ ತಾಲೂಕಿನ ಜನತೆಯ ಅಭಿಮಾನವನ್ನು ಮರೆತು ಸ್ವಾರ್ಥ ಸಾಧನೆ ಮಾಡಿಕೊಂಡರು ಎಂದು ದೂರಿದರು. ಇಂತಹ ದ್ರೋಹವೆಸಗಿದ ಎಂ.ಡಿ.ಲಕ್ಷ್ಮೀನಾರಾಯಣ್ ಅವರಿಗೆ ಹಾಗೂ ಅವರ ಪಕ್ಷಕ್ಕೆ ಕ್ಷೇತ್ರದ ಜನತೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಬೋರೇಗೌಡ ಹೇಳಿದರು.