ಅಣ್ಣನ ಮಗಳನ್ನೆ ಬಂಧನದಲ್ಲಿಟ್ಟು ಅನೈತಿಕ ಸಂಪರ್ಕ ಬೆಳೆಸಿದವನಿಗೆ 7 ವರ್ಷ ಜೈಲು
ಕ.ಪ್ರ. ವಾರ್ತೆ ಮಧುಗಿರಿ ಮಾ.24
ತನ್ನ ಸ್ವಂತ ಅಣ್ಣನ ಮಗಳನ್ನೆ ಗೃಹ ಬಂಧನದಲ್ಲಿಟ್ಟು ದೈಹಿಕ ಸಂಪರ್ಕ ಹೊಂದಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಆರೋಪಿಗೆ 7 ವರ್ಷ ಜೈಲು 10 ಸಾವಿರ ರು.ದಂಡ ವಿಧಿಸಿ ಇಲ್ಲಿನ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಧೀಶ ಪಿ.ನಾರಾಯಣ ಆಚಾರ್ಯ ಮಹತ್ವದ ತೀರ್ಪು ನೀಡಿದ್ದಾರೆ.
ಪಾವಗಡ ಟೌನ್ ಎ.ಕೆ.ಕಾಲೋನಿ ನಿವಾಸಿ ಶಿವಶಂಕರಪ್ಪ (42) ಎಂಬಾತನೇ ಆರೋಪಿ. ಅಣ್ಣ ಸಿಂದ್ದಲಿಂಗಪ್ಪನಿಗೆ 3 ಹೆಣ್ಣು, 1 ಗಂಡು ಮಕ್ಕಳಿದ್ದು ಅಣ್ಣನ ಹೆಂಡತಿ ಲಕ್ಷ್ಮಮ್ಮ ಅಕಾಲಿಕ ಮರಣಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ. ಆಗ ಸಿದ್ದಲಿಂಗಪ್ಪ ಮಕ್ಕಳನ್ನು ತನ್ನ ತಾಯಿ ಬಳಿ ಬಿಟ್ಟು ಬೇರೊಬ್ಬಳನ್ನು ಕಟ್ಟಿಕೊಂಡು ಉದ್ಯೋಗ ಅರಸಿ ಬೆಂಗಳೂರು ಕಡೆ ಹೋಗಿದ್ದಾನೆ.
ಶಿವಶಂಕರಪ್ಪ ತನ್ನ ಅಣ್ಣನ ಹಿರಿ ಮಗಳನ್ನು ನಾನೇ ಸಾಕಿ ಕೊಳ್ಳುವುದಾಗಿ ಹೇಳಿ ಮನೆಗೆ ಕರೆ
ತಂದಿದ್ದಾನೆ. ಆಗ ಈತನ ಹೆಂಡತಿ ಅಣ್ಣನ ಮಗಳನ್ನು ಕರೆ ತಂದನೆಂಬ ಕಾರಣಕ್ಕೆ ತನಗಿದ್ದ 3 ಮಂದಿ ಗಂಡು ಮಕ್ಕಳನ್ನು ಬಿಟ್ಟು ತವರು ಸೇರುತ್ತಾಳೆ. ಆಗ ಶಿವಶಂಕರಪ್ಪ ತನ್ನ ಅಣ್ಣನ ಮಗಳು ಎಂಬುದನ್ನು ಲೆಕ್ಕಿಸದೇ ಬಾಲಕಿಯನ್ನು ಹೆದರಿಸಿ, ಬೆದರಿಸಿ ಗೃಹ ಬಂಧನದಲ್ಲಿಟ್ಟು ಅನೈತಿಕ ಸಂಬಂಧ ಬೆಳೆಸಿದ. ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಅಜ್ಜಿ ಕರಿಯಮ್ಮ ಈತನ ಅಟ್ಟಹಾಸ ಸಹಿಸಲಾಗದೇ ಪಾವಗಡ ಟೌನಿನ ಅಂಗನವಾಡಿ ಕಾರ್ಯಕರ್ತೆ ಗಿರಿಜಮ್ಮ ಅವರಿಗೆ ದೂರು ನೀಡಿದಳು. ನಂತರ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಉಷಾ, ಮೇಲ್ವಿಚಾರಕಿ ವಿಜಯಲಕ್ಷ್ಮೀ ಪೊಲೀಸರಿಗೆ ದೂರು ಮುಟ್ಟಿಸಿದರು. ಪಿಎಸ್‌ಐ ಅನಿಲ್ ಪ್ರಕರಣ ದಾಖಲಿಸಿ ಶಿವಶಂಕರಪ್ಪನನ್ನು ಬಂಧಿಸಿದರು.
ಸಿಪಿಐ ಶೇಷಾದ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ವಿ. ಸ್ವರ್ಣ ಜನಾರ್ದನ್ ವಾದ ಮಂಡಿಸಿದ್ದರು. ವಾದ- ವಿವಾದ ಆಲಿಸಿದ ತ್ವರಿತ ವಿಲೇವಾರಿ ನ್ಯಾಯಲಯದ ನ್ಯಾಯಾಧೀಶ ಪಿ.ನಾರಾಯಣ ಆಚಾರ್ಯ ಶಿವಶಂಕರಪ್ಪನಿಗೆ 7 ವರ್ಷ ಜೈಲು ಹಾಗೂ 10 ಸಾವಿರ ರು.ದಂಡ, ದಂಡ ಕಟ್ಟಲು ಆಗದಿದ್ದ ಪಕ್ಷದಲ್ಲಿ 3 ವರ್ಷ ಕಠಿಣ ಸೆರೆವಾಸ ಆದೇಶಿಸಿ ಮಹತ್ವದ ತೀರ್ಪು ನೀಡಿದ್ದಾರೆ.
ಗ್ರಾಮೀಣ ಮಕ್ಕಳಿಂದಲೂ ಉತ್ತಮ ಫಲಿತಾಂಶ ಸಾಧ್ಯ
ಕ.ಪ್ರ. ವಾರ್ತೆ ಮಧುಗಿರಿ ಮಾ.24
ಗ್ರಾಮೀಣ ಮಕ್ಕಳು ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಓದಿ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಉಪವಿಭಾಗಾಧಿಕಾರಿ ಸಿ.ಅನಿತಾ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಏರ್ಪಟಾಗಿದ್ದ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ಹೆಚ್ಚು ಹೆಚ್ಚು ಮಾಹಿತಿ ಲಭ್ಯವಿದ್ದು, ವಿದ್ಯಾರ್ಥಿಗಳು ಅಂತಹ ವಿಚಾರಗಳನ್ನು ನಿರಂತರವಾಗಿ ಓದುವ ಮೂಲಕ ಜ್ಞಾನ ಸಂಪಾದನೆ ಹೆಚ್ಚಿಸಿ ಕೊಳ್ಳಬೇಕು ಎಂದು ಕರೆಯಿತ್ತರು.
ಹೆಚ್ಚಿನ ಅವಕಾಶ: ಭಾರತೀಯ ಸೇವಾ ಪರೀಕ್ಷೆ ಎದುರಿಸಲು ಆತ್ಮ ವಿಶ್ವಾಸ ಅತಿ ಮುಖ್ಯ ಎಂದ ಅವರು, ಐಎಎಸ್, ಐಪಿಎಸ್, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ವಿಜೇತರಾಗುವ ನಿಟ್ಟಿನಲ್ಲಿ ಉದ್ಯೋಗ ಪಡೆಯಲು ಹೆಚ್ಚು ಅವಕಾಶಗಳು ಸಿಗುತ್ತವೆ ಎಂದರು. ಬೆಂಗಳೂರು ವಿವಿ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಎಂ.ಕುಳ್ಳಾಯಪ್ಪ ಪ್ರಚಲಿತ ವಿದ್ಯಮಾನಗಳಿಗೆ ಅಧಿಕ ಒತ್ತು ನೀಡಿ ಮಾಹಿತಿ ಸಂಗ್ರಹಿಸಿ ಗಮನ ಕೊಟ್ಟು ಅಭ್ಯಾಸ ಮಾಡಿದಲ್ಲಿ ಹಳ್ಳಿ ಮಕ್ಕಳೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಡಿ.ಎಸ್. ಮುನೀಂದ್ರ ಕುಮಾರ್ ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಏಕಾಗ್ರತೆಯಿಂದ ಓದಿದರೆ ಸಾಧನೆ ಕಾಣಲು ಸಾಧ್ಯ ಎಂದರು.
ಪ್ರಾಧ್ಯಾಪಕ ನಾಗರಾಜು, ರಾಮಾಂಜಿನಪ್ಪ, ಎನ್. ಮಹಾಲಕ್ಷ್ಮೀ, ಎಂ.ಎನ್. ಅಶೋಕ್, ಹಿರಿಯ ಪತ್ರಕರ್ತ ಕೆ.ಸುಬ್ಬರಾವ್, ಯುವ ರೆಡ್‌ಕ್ರಾಸ್ ಅಧಿಕಾರಿ ಪ್ರೊ.ಟಿ.ಎನ್. ನರಸಿಂಹಮೂರ್ತಿ, ಜಗದೀಶ್, ದೀಲೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.