ಕೇಂದ್ರೀಯ ವಿವಿಗಳಿಗೆ ಹೆಚ್ಚಿನ ಆದ್ಯತೆ, ಕಳವಳಕಾರಿ ವಿಷಯ
ಕ.ಪ್ರ. ವಾರ್ತೆ ತುಮಕೂರು ಮಾ.24
12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರೀಯ ವಿಶ್ವ ವಿದ್ಯಾಲಯಗಳಿಗಷ್ಟೇ ಹೆಚ್ಚಿನ ಆದ್ಯತೆ ನೀಡಿರುವುದು ಕಳವಳಕಾರಿ ವಿಷಯ ಎಂದು ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ ಬಿ.ಎಲ್. ಭಾಗ್ಯಲಕ್ಷ್ಮಿ ಅಭಿಪ್ರಾಯಪಟ್ಟರು.
ಅವರು ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘದ ವತಿಯಿಂದ 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣ ಎಂಬ ವಿಷಯ ಕುರಿತು ಏರ್ಪಾಟಾಗಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣಕ್ಕೆ 1 ಲಕ್ಷದ 10 ಸಾವಿರದ 700 ಕೋಟಿ ರು. ಮೀಸಲಿಡಲಾಗಿದೆ. ಆದರೆ ಇದರಲ್ಲಿ ಶೇ. 40 ರಷ್ಟು ಅಂದರೆ 48 ಸಾವಿರ ಕೋಟಿ ರು.ಗಳನ್ನು ಕೇಂದ್ರೀಯ ವಿಶ್ವ ವಿದ್ಯಾಲಯಗಳಿಗಷ್ಟೇ ಮೀಸಲಿಡಲಾಗಿದೆ. ಹಾಗಾದರೆ ಮಿಕ್ಕ ವಿಶ್ವ ವಿದ್ಯಾಲಯಗಳ ಗತಿ ಏನು, ಸರ್ಕಾರದ ಗುರಿ-ಉದ್ದೇಶ ಏನಿದೆ, ಇದೊಂದು ಉನ್ನತ ಶಿಕ್ಷಣಕ್ಕೆ ಕಣ್ಣೊರೆಸುವ ತಂತ್ರವೇ ಎಂದು ಭಾಗ್ಯಲಕ್ಷ್ಮೀ ಮಾರ್ಮಿಕವಾಗಿ ಪ್ರಶ್ನಿಸಿದರು.
11 ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣಕ್ಕೆ 80 ಸಾವಿರ ಕೋಟಿ ನೀಡಲಾಗಿತ್ತು. 9 ನೇ ಯೋಜನೆಯಲ್ಲಿ ಕೇವಲ 9 ಸಾವಿರ ಕೋಟಿ ಇತ್ತು. 12 ನೇ ಯೋಜನೆಯಲ್ಲಿ ಶೇ. 30 ರಷ್ಟು ಅನುದಾನ ಹೆಚ್ಚಿದ್ದರೂ, ಇದು ತುಂಬಾ ಕಡಿಮೆ. ಕೇವಲ ಕೇಂದ್ರೀಯ ವಿಶ್ವ ವಿದ್ಯಾಲಯಗಳಿಗಷ್ಟೇ ಆದ್ಯತೆ ನೀಡಲಾಗಿದೆ ಎಂದು ವಿಷಾದಿಸಿದರು.
ಯೋಜನಾ ಆಯೋಗ ಕಡಿಮೆ ಮಾಡಿದೆ: ಉನ್ನತ ಶಿಕ್ಷಣಕ್ಕೆ 2013-14 ನೇ ಸಾಲಿಗೆ 16,210 ಕೋಟಿ ರು. ನೀಡಲಾಗಿದೆ. ಕಳೆದ ವರ್ಷ 15,450 ಕೋಟಿ ರು. ನೀಡಲಾಗಿತ್ತು. ಇದು ತುಂಬಾ ಕಡಿಮೆ ಎಂದು ಶಿಕ್ಷಣ ತಜ್ಞರು ಟೀಕಿಸಿದ್ದರು. ಯೋಜನಾ ಆಯೋಗ ಉನ್ನತ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಿದೆ ಎಂದು ವಿಷಾದಿಸಿದರು.
ಮಹಿಳಾ ವಿವಿಗಳು ಹೆಚ್ಚಾಗಬೇಕು: 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಮಹಿಳಾ ವಿವಿಗಳು, ಸ್ವಾಯತ್ತ ಸಂಸ್ಥೆಗಳು ಹೆಚ್ಚಾಗಬೇಕು. ಸ್ತ್ರೀಯರು, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹೆಚ್ಚಿನ ಶಿಕ್ಷಣ ಪಡೆಯಬೇಕು ಅಂತಿದೆ. ಉನ್ನತ ಶಿಕ್ಷಣವನ್ನು ಪ್ರಚಾರ ಮಾಡುವ ಉದ್ದೇಶ ಹೊಂದಿದೆ. ಇಂದು ಕೌಶಲ್ಯವನ್ನು ಅತ್ಯಗತ್ಯವಾಗಿ ಬೆಳೆಸಿಕೊಳ್ಳಬೇಕಾಗಿದೆ. ಕೈಗಾರಿಕೆ ಸೇರಿದಂತೆ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಡಿಪ್ಲೊಮೋ ಕೋರ್ಸ್ಗಳು, ಸರ್ಟಿಫಿಕೇಟ್ ಕೋರ್ಸ್ಗಳು ಇರುತ್ತವೆ ಎಂದು ಭಾಗ್ಯಲಕ್ಷ್ಮಿ ತಿಳಿಸಿದರು.
ಖಾಸಗಿ ವಿವಿಗಳಿಗೆ ಆದ್ಯತೆ: 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ತುಂಬಾ ಬದಲಾವಣೆಗಳಾಗಿವೆ. ವಿವಿಧ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಉನ್ನತ ಶಿಕ್ಷಣದಲ್ಲಿ ಖಾಸಗಿ ವಿಶ್ವ ವಿದ್ಯಾನಿಲಯಗಳಿಗೆ ಆದ್ಯತೆ ನೀಡಲಾಗಿದೆ. ಕೇವಲ ಹಣಗಳಿಕೆಯೊಂದನ್ನೇ ಗುರಿಯಾಗಿರಿಸಿಕೊಂಡಿರುವ ಖಾಸಗಿ ವಿವಿಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು, ಶಿಕ್ಷಣ ಸಂಸ್ಥೆಗಳೆಂದು ಕರೆಯಲ್ಪಡುವ ಸಂಸ್ಥೆಗಳು ತಂತ್ರಗಾರಿಕೆ ರೂಪಿಸಿ, ಶಿಕ್ಷಣದ ಮಾರುಕಟ್ಟೆಯನ್ನು ಮಾಡಿಕೊಳ್ಳುತ್ತಿವೆ. ಇದನ್ನು ನೋಡಿದರೆ ಎಲ್ಲರಿಗೂ ಶಿಕ್ಷಣ ಸಿಗಲ್ಲ ಅನ್ನೊ ಆತಂಕ ಕಾಡುತ್ತಿದೆ ಎಂದರು.
ಉನ್ನತ ಶಿಕ್ಷಣ ಎಲ್ಲಕ್ಕೂ ಮದ್ದು: ಎಲ್ಲರಿಗೂ, ವಿಶೇಷವಾಗಿ ಅರ್ಹರಿಗೆ ಉನ್ನತ ಶಿಕ್ಷಣ ದೊರಕಲೇಬೇಕು. ಹಾಲಿ ದೇಶದಲ್ಲಿ 700 ವಿಶ್ವ ವಿದ್ಯಾಲಯಗಳು, 38 ಸಾವಿರ ಕಾಲೇಜುಗಳಿವೆ. ಲಭ್ಯತೆ, ವಿಸ್ತರಣೆಯಾಗದೇ ಎಲ್ಲರಿಗೂ ಉನ್ನತ ಶಿಕ್ಷಣ ಸಿಗಲು ಸಾಧ್ಯವಿಲ್ಲ. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉನ್ನತ ಶಿಕ್ಷಣವೇ ಎಲ್ಲಕ್ಕೂ ಮದ್ದು. ಉನ್ನತ ಶಿಕ್ಷಣದ ಸಮಸ್ಯೆಗಳಿಗೆ ಗುಣಮಟ್ಟವೇ ಮದ್ದು. ಈ ನಿಟ್ಟಿನಲ್ಲಿ ಎಲ್ಲ ಅಧ್ಯಾಪಕರು ಚಿಂತಿಸಬೇಕು ಎಂದರು.
ಎಲ್ಲರೂ ಚರ್ಚಿಸಬೇಕು: ಉನ್ನತ ಶಿಕ್ಷಣದಲ್ಲಿ ಬೇರೆ-ಬೇರೆ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅವಕಾಶ ನೀಡಬೇಕು. ಶಿಕ್ಷಣದಲ್ಲಿ ಕನಿಷ್ಠ ಗುಣಮಟ್ಟವನ್ನು ಕಾಪಾಡಿಕೊಳ್ಳಲೇಬೇಕು. ಉನ್ನತ ಶಿಕ್ಷಣಕ್ಕೆ ತೊಡಕಾಗಿರುವ ವಿಷಯಗಳ ಕುರಿತಂತೆ, 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣ ಕುರಿತಂತೆ ಶಿಕ್ಷಣ ತಜ್ಞರು ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಚರ್ಚೆ ಮಾಡುವಂತೆ ಭಾಗ್ಯಲಕ್ಷ್ಮೀ ಕರೆ ನೀಡಿದರು.
ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ.ವೈ.ಎಂ. ಜಯರಾಜ್ ವಿಶೇಷ ಉಪನ್ಯಾಸ ನೀಡಿದರು. ಪುಕ್ಟಕ್ ಅಧ್ಯಕ್ಷ ಸಿ.ಎಚ್. ಮುರುಗೇಂದ್ರಪ್ಪ, ಪ್ರೊ. ಕೆ.ಎಂ. ನಾಗರಾಜ್, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಟಿ. ಗಂಗಾಧರಯ್ಯ, ಟುಕ್ಟಾ ಮಾಜಿ ಅಧ್ಯಕ್ಷ ಡಾ.ಎಂ.ಪಿ. ಶಂಕರಪ್ಪ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಟುಕ್ಟಾ ಅಧ್ಯಕ್ಷ ಪ್ರೊ. ಎಚ್.ವಿ. ವೇಣುಗೋಪಾಲ್ ವಹಿಸಿದ್ದರು. ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಜಯಪ್ರಕಾಶ್ ಸ್ವಾಗತಿಸಿದರು. ಖಜಾಂಚಿ ಪ್ರೊ.ಎಚ್.ಪಿ. ವೀರಭದ್ರಸ್ವಾಮಿ, ಸಹಕಾರ್ಯದರ್ಶಿ ಡಾ.ಡಿ.ಎನ್. ಯೋಗೀಶ್ವರಪ್ಪ, ಪ್ರೊ. ದೇವೀರಮ್ಮ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕರೇ ಜಾತಿ, ರಾಜಕಾರಣ ಬಿಡಿ, ಪ್ರಾಮಾಣಿಕತೆ ರೂಢಿಸಿಕೊಳ್ಳಿ
ತುಮಕೂರು: ಶಿಕ್ಷಕರೇ ಜಾತಿ, ರಾಜಕಾರಣ ಬಿಡಿ, ಪ್ರಾಮಾಣಿಕತೆ ರೂಢಿಸಿಕೊಳ್ಳಿ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಬಿ.ಎಲ್. ಭಾಗ್ಯಲಕ್ಷ್ಮಿ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನಲ್ಲಿ ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘದ ವತಿಯಿಂದ ಏರ್ಪಾಟಾಗಿದ್ದ 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣ ಎಂಬ ವಿಷಯ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ. ಆದರೆ ಶಿಕ್ಷಕರಲ್ಲೇ ಮೇಲಿನ ಅವಗುಣಗಳು ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿ ಎಂದರು. ಉತ್ತಮ ಸಮಾಜ ನಿರ್ಮಾಣಕ್ಕೆ ಜಾತಿ, ಧರ್ಮ ಮೀರಿ ಉನ್ನತ ಶಿಕ್ಷಣ ನೀಡಬೇಕಾಗಿದೆ. ಬಡತನ ದೂರವಾಗಲು, ಉತ್ತಮ ಗುಣಮಟ್ಟದ ಜೀವನ ನಡೆಸಲು ಬಯಸುವ ಮಂದಿಗೆ, ಜಾತಿ, ಧರ್ಮ ಮೀರಿ ಉನ್ನತ ಶಿಕ್ಷಣ ನೀಡಬೇಕು. ಅತ್ತ್ಯುತ್ತಮ ಸಮಾಜ ನಿರ್ಮಾಣ ಮಾಡುವುದೇ ಶಿಕ್ಷಕರ ಗುರಿ. ಆರೋಗ್ಯಕರ ಸಮಾಜ ಮಾಡಲು ಶಿಕ್ಷಕರು ಕಟಿಬದ್ಧರಾಗಬೇಕು. ಜಾಗೃತರಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ದುಡ್ಡಿಲ್ಲದೇ ಏನೂ ಮಾಡಲಾಗದು. ಯುಜಿಸಿ ಹಣ ನೀಡುತ್ತಿದೆ. ಆದರೆ ಕೆಲವೆಡೆ ಹಣ ಬಳಕೆಯಾಗದೆ ವಾಪಸ್ ಹೋಗುತ್ತಿದೆ ಎಂಬ ದೂರುಗಳು ಬಂದಿವೆ. ರಾಜ್ಯದಲ್ಲಿ 16 ಸರ್ಕಾರಿ ಕಾಲೇಜುಗಳಿಗೆ ಮೊದಲ ಕಂತಿನಲ್ಲಿ ಹಣ ಬಿಡುಗಡೆಯಾಗಿದೆ. ಅವುಗಳಲ್ಲಿ 4 ಕಾಲೇಜುಗಳು ಯೋಜನೆ, ಕ್ರಿಯಾ ಯೋಜನೆ ತಯಾರಿಸಿಲ್ಲ. ವರದಿ ನೀಡಲು ಮುಂದೆ ಬಂದಿಲ್ಲ. ಇನ್ನು 12 ಕಾಲೇಜುಗಳು ಕೂಡ ಇದೇ ಸ್ಥಿತಿಯಲ್ಲೇ ಇವೆ. ಹಾಗಾದರೆ ಉನ್ನತ ಶಿಕ್ಷಣ ನೀಡುವ ಕಾಲೇಜುಗಳಿಗೆ ಜವಾಬ್ದಾರಿಯಿಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಇದರಲ್ಲಿ ಶೇ. 55 ರಷ್ಟು ಮಂದಿ 35 ವರ್ಷದೊಳಗಿನವರೇ ಇದ್ದಾರೆ. ಇಂತಹ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ಮೂಲಕ ಅವರನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ. ಭಾರತ ಒಂದು ರೀತಿ ಮಲಗಿರುವ ದೊಡ್ಡ ಶಕ್ತಿಯಿದ್ದಂತೆ. ಇಂತಹ ಶಕ್ತಿಯನ್ನು ಎಚ್ಚರಿಸುವ, ಸದುಪಯೋಗಪಡಿಸಿಕೊಳ್ಳುವ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ. ದೇಶದಲ್ಲಿ 700 ವಿವಿ, 38 ಸಾವಿರ ಕಾಲೇಜುಗಳಿವೆ. ಉನ್ನತ ಶಿಕ್ಷಣ ವಿಸ್ತರಣೆಯಾದಲ್ಲಿ ಎಲ್ಲರಿಗೂ ಸಿಗಲು ಸಾಧ್ಯ. ಆದರೆ ಅದೇ ಸಂದರ್ಭದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.