ಡಾ. ಎಂ. ಜಯರಾಮುಗೆ ರಾಷ್ಟ್ರಪ್ರಶಸ್ತಿ ಪ್ರದಾನ
ಕ.ಪ್ರ.ವಾರ್ತೆ ತುಮಕೂರು ಮಾ 24
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು ಅವರು ದೆಹಲಿಯ ಆಲ್ ಇಂಡಿಯಾ ಅಚೀವರ್ಸ್ ಫೌಂಡೇಶನ್ ನೀಡುವ ಪ್ರತಿಷ್ಠಿತ ಇಂಡಿಯನ್ ಲೀಡರ್ ಶಿಪ್ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ರಾಷ್ಟ್ರಪ್ರಶಸ್ತಿಯನ್ನು ಇತ್ತೀಚೆಗೆ ಸ್ವೀಕರಿಸಿದರು.
ಶಿಕ್ಷಣ, ಸಂಶೋಧನೆ ಹಾಗೂ ಆಡಳಿತ ಕ್ಷೇತ್ರದಲ್ಲಿ ಡಾ. ಜಯರಾಮು ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ನವದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಗಳು ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಡಾ. ಜಯರಾಮು ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಇಂಡಿಯನ್ ಇಕನಾಮಿಕ್ ಡೆವಲಪ್ಮೆಂಟ್ ಅಂಡ್ ರಿಸರ್ಚ್ ಅಸೋಸಿಯೇಶನ್ ಹಾಗೂ ಆಲ್ ಇಂಡಿಯಾ ಅಚೀವರ್ಸ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಮೀಬಿಯಾದ ಹೈ ಕಮೀಷನರ್ ಡಾ. ಸ್ಯಾಮುವೆಲ್ ಕೆ. ಎಂಬಾಂಬೊ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿ ವೇದ್ ಪ್ರಕಾಶ್, ದೆಹಲಿ ಹಾಗೂ ಜಮ್ಮು-ಕಾಶ್ಮೀರದ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ. ಬಿ. ಎ. ಖಾನ್, ಮಾಜಿ ರಾಜ್ಯಪಾಲ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಭೀಷ್ಮ ನಾರಾಯಣ ಸಿಂಗ್, ಮಾಜಿ ರಾಜ್ಯಪಾಲ ಹಾಗೂ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾಣ ಒ. ಪಿ. ವರ್ಮಾ, ಯುನೆಸ್ಕೋ ಅಂಡ್ ಯುಎನ್ ಸ್ಟಡೀಸ್ನ ನಿರ್ದೇಶಕ ಪ್ರೊ. ಎಸ್. ಎಸ್. ಭಾಕ್ರಿ ಹಾಗೂ ಐಇಡಿಆರ್ಎನ ಪ್ರಧಾನ ಕಾರ್ಯದರ್ಶಿ ರಂಜನ್ ಒಬೆರಾಯ್ ಅವರಿಂದ ಡಾ. ಜಯರಾಮು ಅವರು ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದ ಡಾ. ಎಂ. ಜಯರಾಮು ಅವರನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ಸಿ. ಶರ್ಮಾ ಹಾಗೂ ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ ಅಭಿನಂದಿಸಿದ್ದಾರೆ.
ಕುಣಿಗಲ್ನಲ್ಲಿ ಬಿಜೆಪಿ ಗೆಲವು ಖಚಿತ: ಕೃಷ್ಣಕುಮಾರ್
ಕ.ಪ್ರ.ವಾರ್ತೆ ಕುಣಿಗಲ್ ಮಾ 24
ಪುರಸಭೆ ಚುನಾವಣೆಗಳಲ್ಲಿನ ಪರಿಸ್ಥಿತಿಯೇ ಬೇರೆ, ವಿಧಾನಸಭಾ ಚುನಾವಣೆಗಳ ಪರಿಸ್ಥಿತಿಯೆ ಬೇರೆ. ಈ ಬಾರಿಯ ಕುಣಿಗಲ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ತಿಳಿಸಿದರು.
ಭಾನುವಾರ, ತಾಲೂಕಿನ ಆಲಪ್ಪನಗುಡ್ಡೆದರ್ಗಾ, ಯಡೆಯೂರು ಸಿದ್ದಲಿಂಗೇಶ್ವಸ್ವಾಮಿ ದೇವಾಲಯ, ಜಲಧಿಗೆರೆ, ಅಮ್ಮನಹಟ್ಟಿ, ಚಿಕ್ಕಣ್ಣಸ್ವಾಮಿ ಹಟ್ಟಿ, ಗುನ್ನಾಗರೆ ಎಲ್ಲಮ್ಮದೇವಿಯ ದೇವಾಲಯ ಸೇರಿದಂತೆ ವಿವಿಧ ದೇವಾಲಯ, ದರ್ಗಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ, ಪಟ್ಟಣದ ತುಡಿಕೆವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವಾಲಯ ಆವರಣದಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಪುರಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಬಂಡಾಯ ಜೆಡಿಎಸ್ ಆಂತರಿಕ ಒಪ್ಪಂದ ಮಾಡಿಕೊಂಡ ಕಾರಣ ಬಿಜೆಪಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಲಿಲ್ಲ. ಆದರೆ, ಪುರಸಭೆ ಚುನಾವಣೆಗಳ ಫಲಿತಾಂಶ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹಿಂದಿನ ಯಾವುದೇ ಸರ್ಕಾರ ಮಾಡದಷ್ಟು ಸಾಧನೆ ಮಾಡಿದ್ದು, ಸರ್ಕಾರದ ಸಾಧನೆ ಮೇಲೆಯೆ ತಾವು ಪ್ರಚಾರ ಆರಂಭಿಸಿರುವುದಾಗಿ ತಿಳಿಸಿದರು. ವೈ.ಕೆ.ರಾಮಯ್ಯನವರ ನಂತರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕ್ಷೇತ್ರವು ಸಂಪೂರ್ಣ ಹಿಂದುಳಿದಿದೆ. ಹಾಲಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೆ ಕೇವಲ ಅಧಿಕಾರಕ್ಕೆ ಅಂಟಿಕೊಂಡು, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದರು. ತಾಲೂಕು ಬಿಜೆಪಿಯ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿರಿದ್ದರು.