ಕೊಳವೆಬಾವಿಯಲ್ಲಿ ಉಕ್ಕಿ ಹರಿಯುತ್ತಿರುವ ಜಲಧಾರೆ
ಹುಳಿಯಾರು : ಸಮೀಪದ ಕಂದಿಕೆರೆ ಹೋಬಳಿ ತಿಮ್ಮನಹಳ್ಳಿ ಬಳಿಯ ಬೆಂಕಿಪುರ ಗ್ರಾಮದಲ್ಲಿ ರೈತನೋರ್ವ ಕೊರೆಸಿದ ಕೊಳವೆ ಬಾವಿಯಲ್ಲಿ ನೂರೈವತ್ತು ಅಡಿಗೆ ಇನ್ನು ಕೊರೆಯಲು ಅಸಾಧ್ಯ ಎನ್ನುವ ಮಟ್ಟಿಗೆ ಹೆಚ್ಚಿನ ನೀರು ದೊರೆತಿದ್ದಲ್ಲದೆ, ಪಂಪು, ಮೋಟಾರ್ ಇಲ್ಲದೆ ಕೇವಲ ಕೊಳವೆ ಬಾವಿಗೆ ಹಾಕಿಸಿದ್ದ ಕೇಸಿಂಗ್ ಪೈಪ್ ಮೂಲಕವೇ ಜಲಧಾರೆ ಉಕ್ಕಿ ಹರಿಯುತ್ತಿದ್ದು ಈ ಭಾಗದ ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
ಈ ರೀತಿ ಉಕ್ಕಿ ಹರಿಯುತ್ತಿರುವ ಜಲಧಾರೆ ಕಂಡುಬಂದಿರುವುದು ಇದೇ ಗ್ರಾಮದ ಉಗ್ರಪ್ಪ ಎಂಬಾತನ ಕೊಳವೆಬಾವಿಯಲ್ಲಿ. ಈ ಮುಂಚೆ ಹಾಕಿಸಿದ್ದ ಬೋರ್‌ನಲ್ಲಿ ನೀರಿಲ್ಲದೆ ವಿಫಲವಾಗಿದ್ದು ಸೊರಗಿದ್ದ ತನ್ನ ತೆಂಗಿನ ತೋಟವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಸಾಲಸೋಲ ಮಾಡಿ ದ್ವಿತೀಯ ಪ್ರಯತ್ನಕ್ಕೆ ಈತ ಮುಂದಾಗಿದ್ದ. ಸುತ್ತಲಿನ ಎಲ್ಲಾ ಬೋರುಗಳು ವಿಫಲವಾಗಿದ್ದು ಇಲ್ಲಿ ನೀರು ಸಿಗುವುದು ಅನುಮಾನವಿದ್ದರೂ ಕೊಳವೆಬಾವಿ ಕೊರೆಸಿದ್ದಾರೆ. ಮೊದಲು 80 ಅಡಿಯವರೆಗೆ ಧೂಳು ಬರುವುದನ್ನು ಕಂಡು ಕಂಗಾಲಾಗಿದ್ದ ಉಗ್ರಪ್ಪನಿಗೆ ಅದೃಷ್ಟವೆಂಬಂತೆ 120 ಅಡಿಗೆ ಸ್ವಲ್ಪ ನೀರು ಸಿಕ್ಕಿತು ಎಂಬುದನ್ನು ಕೇಳಿ ಸಂತೋಷಪಟ್ಟು, ನಂತರ 150ಅಡಿ ಕೊರೆಯುವಷ್ಟರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ದೊರೆತಿದ್ದು ಲಾರಿಯವರು ಕೊರೆಯಲು ಸಾಧ್ಯವಿಲ್ಲವೆಂದು ಅಷ್ಟಕ್ಕೆ ನಿಲ್ಲಿಸಿ, ಕೇಸಿಂಗ್ ಪೈಪ್ ಹಾಕಿದ್ದಾರೆ. ಕೆಲವೇ ಸಮಯದಲ್ಲಿ ಈ ಕೇಸಿಂಗ್ ಪೈಪ್ ಮೂಲಕವೇ ನೀರು ಉಕ್ಕಿ ಹರಿಯಲು ಪ್ರಾರಂಭಿಸಿತ್ತು, ಸ್ವಲ್ಪ ಹೊತ್ತು ಹರಿದು ನಂತರ ನಿಲ್ಲುತ್ತದೆಂದು ಭಾವಿಸಿ ಮನೆಗೆ ತೆರಳಿ, ಮರು ದಿನ ಮುಂಜಾನೆಯೂ ಕೂಡ ಬೋರ್‌ನಲ್ಲಿ ಮೋಟಾರ್ ಅಳವಡಿಸದೇ ಸ್ವಯಂಪ್ರೇರಿತವಾಗಿ ನೀರು ಹರಿಯುತ್ತಿರುವುದು ಅಚ್ಚರಿಯನ್ನುಂಟು ಮಾಡಿತು.
ಶಾಲೆ ಏನೋ ಓಕೆ... ಶೌಚಾಲಯ ಮಾತ್ರ ಹೀಗ್ಯಾಕೆ?
ತುರುವೇಕೆರೆ: ಶಾಲೆಯೋನೋ ಓಕೆ. ಆದ್ರೆ ಶೌಚಾಲಯ ಮಾತ್ರ ಹೀಗ್ಯಾಕೆ ಎಂದು ತಾಲೂಕಿನ ಗೋಣಿತುಮಕೂರಿನ ಶಾಲೆಯ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಇಲ್ಲಿಯ ಶ್ರೀ ರಾಮಾಂಜನೇಯ ಗ್ರಾಮಾಂತರ ಪ್ರೌಢಶಾಲೆ ಬಿಸಿ ಊಟ, ಶಾಲಾಕೊಠಡಿ ನಿರ್ಮಾಣ, ಶೌಚಾಲಯ, ಶಾಲಾ ಪರಿಸರಗಳ ಅಭಿವೃಧ್ಧಿಗಾಗಿ ಸರ್ಕಾರದಿಂದ ಲಕ್ಷಾಂತರ ರು.ಗಳ ಅನುದಾನ ಪಡೆಯುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಅಗತ್ಯವಿರುವ ಶೌಚಾಲಯ ನಿರ್ಮಾಣ ಮಾಡದೇ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪರಿತಪಿಸುವಂತೆ ಮಾಡಲಾಗಿದೆ ಎಂದು ಗ್ರಾಮದ ಹಲವಾರು ಮಂದಿ ಶಿಕ್ಷಣ ಇಲಾಖಾ ಮುಖ್ಯಸ್ಥರಿಗೆ ದೂರಿದ್ದಾರೆ. ಶಾಲೆಯ ಮಾನ್ಯತೆ ನವೀಕರಣ ಸಮಯದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿ ಶಿಕ್ಷಣ ಇಲಾಖೆಯನ್ನೂ ಸಹ ಶಾಲಾ ಆಡಳಿತ ಮಂಡಲಿ ವಂಚನೆ ಮಾಡಿದೆ ಎಂದು ದೂರಲಾಗಿದೆ. ಶಾಲೆಯಲ್ಲಿ ಸುಮಾರು 200 ಕ್ಕೂ ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದು ಸೂಕ್ತ ಶೌಚಾಲಯವಿಲ್ಲದೇ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಉತ್ತಮ ಶಾಲಾ ಕಟ್ಟಡ ನಿರ್ಮಾಣ ಮಾಡಿರುವ ಶಾಲಾ ಆಡಳಿತ ಮಂಡಳಿಯವರು ಶೌಚಾಲಯ ನಿರ್ಮಿಸದೇ ಇರುವುದು ವಿಷಾದನೀಯ.