ಜಾತ್ರೆ ಜನರ ಆಶೋತ್ತರಗಳ ಪ್ರತಿಬಿಂಬ
ಕ.ಪ್ರ.ವಾರ್ತೆ ಮಧುಗಿರಿ ಮಾ.27
ಜಾತ್ರೆಗಳು ಹಿಂದಿನಿಂದ ನಡೆದು ಬಂದಿದ್ದು ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತವೆ.10 ದಿನಗಳ ಕಾಲ ನಡೆಯುವ ಜಾತ್ರೆ ಯಶಸ್ವಿಯಾಗಲೂ ಎಲ್ಲರ ಸಹಕಾರ ಅತಿ ಮುಖ್ಯ ಎಂದು ಉಪವಿಭಾಗಾಧಿಕಾರಿ ಸಿ.ಅನಿತಾ ಅಭಿಪ್ರಾಯಪಟ್ಟರು.
ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನಮಾರಮ್ಮ ಜಾತ್ರೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 10 ದಿನಗಳ ಕಾಲ ನಡೆಯುವ ಈ ಶಕ್ತಿ ದೇವತೆ ದಂಡಿನಮಾರಮ್ಮ ಜಾತ್ರೆ ಉತ್ಸವ ಶಾಂತಿಯುತವಾಗಿ ನಡೆಯಲಿ ಎಂದು ಶುಭ ಕೋರಿದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮಸಾಕ್ಷಿಯೇ ದೇವರು, ಅಂತಃಕರಣವೇ ಪೂಜೆ, ಮಾನವೀಯತೆಯೇ ಮಂತ್ರವಾದಾಗ ಸಮಾಜದಲ್ಲಿ ಜನತೆ ಸಾಮರಸ್ಯದಿಂದ ಬಾಳಲು ಸಾಧ್ಯ ಎಂದರು.
ಹಬ್ಬ ಊಟಕ್ಕೆ, ಜಾತ್ರೆ ನೋಟಕ್ಕೆ ಎಂಬುದನ್ನು ಜಾತ್ರೆಗೆ ಬಂದು ನೋಡಬೇಕು. ಜಾತ್ರೆಗಳು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಜೊತೆಗೆ ನವೀಕರಿಸಿ ಮಳೆ, ಬೆಳೆ ಸಂಬಂಧ ಕೊಡು, ಕೊಳ್ಳುವ ವಿಚಾರ ಹತ್ತಾರು ಮಾತುಗಳಿಂದ ಮನಸ್ಸು ಹತ್ತಿರವಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುತ್ತದೆ ಎಂದರು.
ತಹಸೀಲ್ದಾರ್ ರಮೇಶ್, ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ, ಎಸಿ ಕಚೇರಿ ಮ್ಯಾನೇಜರ್ ರಂಗೇಗೌಡ ಮಾತನಾಡಿದರು. ಪ್ರಧಾನ ಅರ್ಚಕ ನಾಗಲಿಂಗಚಾರ್, ಮುರುಳಿ ಮತ್ತಿತರರು ಉಪಸ್ಥಿತರಿದ್ದರು. ಕಂದಾಯ ಅಧಿಕಾರಿ ಜಯರಾಮ್ ಸ್ವಾಗತಿಸಿ ವಂದಿಸಿದರು.