ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ವಕೀಲರ ಸಂಘದ ಆಕ್ರೋಶ, ಕಲಾಪ ಬಹಿಷ್ಕಾರ

Srinivasa Murthy VN
Updated On : 27 Mar 2013, 11:54 am

ಗುಬ್ಬಿ: ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರು ನ್ಯಾಯಾಂಗವನ್ನು ಕಣ್ಣುಕಾಣದ ಕೋತಿಗೆ ಹೋಲಿಸಿ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಗುಬ್ಬಿ ತಾಲೂಕು ವಕೀಲರ ಸಂಘದವತಿಯಿಂದ ನ್ಯಾಯಾಲಯದ ಕಾರ್ಯಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ  ವಕೀಲರ ಸಂಘದ ಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಿದ ನಂತರ ವಕೀಲರ ಸಂಘದ ಅಧ್ಯಕ್ಷ ಎನ್. ಸದಾಶಿವಯ್ಯ ಮಾತನಾಡಿ ಭಾರತದಲ್ಲಿ ನ್ಯಾಯಾಂಗಕ್ಕೆ ಮಹತ್ವದ ಸ್ಥಾನವಿದ್ದು ನ್ಯಾಯಾಂಗದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು. ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಸಾರ್ವಜನಿಕವಾಗಿ ರಾಜ್ಯ ಬಿಜೆಪಿ ಅಧ್ಯಕ್ಷರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಭಾರತ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಪವಿತ್ರವಾದ ಸ್ಥಾನವಿದ್ದು ದಾರಿತಪ್ಪುತ್ತಿರುವ ಸಾಮಾಜಿಕ ಮೌಲ್ಯಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ನ್ಯಾಯಾಂಗದ ಮೇಲೆ ರಾಜಕಾರಣಿಗಳು ಸವಾರಿ ಮಾಡಬಾರದು ಎಂದ ಅವರು   ಜೋಶಿಯವರ ಹೇಳಿಕೆ ಇಡೀ ಭಾರತದ ನ್ಯಾಯಾಂಗಕ್ಕೆ ಮಾಡಿದ ಅಪಚಾರವಾಗಿದೆ ಎಂದು ತಿಳಿಸಿದರು.
ಈ ಪ್ರತಿಭಟನಾ ಸಭೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ಜಿ. ನಾರಾಯಣ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಬಿ.ಎನ್. ಮಂಗಳ, ಮಾಜಿ ಅಧ್ಯಕ್ಷ ಬಿ.ಎಸ್. ಮಧುಸೂದನ್, ಕೆ.ಎಸ್.ಆರ್.ಅರಸ್,ಬಿ.ವಿ.ರಾಜೀವ್, ಪ್ರಮೀಳ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರುಗಳು ಭಾಗವಹಿಸಿದ್ದರು.

'ಹರಿದಾಸರ ಭಜನೆ ಮಾಡುವುದರಿಂದ ಜೀವನದಲ್ಲಿ ಸಾರ್ಥಕತೆ ಸಾಧ್ಯ'
ಹುಳಿಯಾರು:
ಸಾಹಿತ್ಯ ಪರಂಪರೆಯಲ್ಲಿ ಹತ್ತು  ಹಲವು ಬಗೆಗಳನ್ನು ಕಾಣಬಹುದಾಗಿದ್ದು, ಅದರಲ್ಲಿ ಹರಿದಾಸ ಸಾಹಿತ್ಯವು  ಒಂದಾಗಿದ್ದು, ಹರಿದಾಸರ ಸಾಹಿತ್ಯವನ್ನು ಭಜನೆ ಮೂಲಕ ಪಠಿಸುವುದು ನಮಗೆ ದೊರೆತಿರುವ ಸುಯೋಗ. ಜೀವನದಲ್ಲಿ ಶಾಂತಿ, ನೆಮ್ಮದಿ, ಸಾರ್ಥಕತೆಯನ್ನು ಸಾಧಿಸಲು ಸಾಧ್ಯ ಎಂದು ತಿರುಪತಿ ತಿರುಮಲ ದೇವಾಲಯದ ದಾಸಸಾಹಿತ್ಯದ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ತಿಳಿಸಿದರು.
ಭಜನಾ ಮಂಡಳಿಗಳ ಮರುನೋಂದಾವಣಿಗಾಗಿ ಹುಳಿಯಾರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಸೀತಾರಾಮ ಕಲ್ಯಾಣ ಮಂದಿರಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಇಂದು ಅನೇಕರು ಪ್ರತಿ ನಿತ್ಯ ತಾವು ಮಾಡುವಂತಹ ಕಾರ್ಯಗಳನ್ನು ದಿನನಿತ್ಯದ ಪುಸ್ತಕದಲ್ಲಿ (ಡೈರಿ) ಬರೆದಿಡುತ್ತಾರೆ. ಅಂತೆಯೆ ನಮ್ಮ ಹೃದಯಗಳಲ್ಲಿಯೂ ನಾವು ಯಾವ ಕಾರ್ಯವನ್ನು ಮಾಡುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ಕಾಣಬಹುದೆಂಬುದನ್ನು ಬರೆದಿಡುವ ಕಾರ್ಯವಾಗಬೇಕಿದೆ ಎಂದರು. ನಾವು ಮಾಡುವಂತಹ ಹಲವು ಪಾಪ ಕಾರ್ಯಗಳನ್ನು ಹರಿದಾಸರ ಕೀರ್ತನೆಗಳನ್ನು ಪಠಿಸುವ ಮೂಲಕ ತೊಡೆದು ಹಾಕಬಹುದಾಗಿದೆ ಎಂದರು. ಭಜನೆ ಮಾಡುವುದು ಎಂದರೆ ಸಾಕ್ಷಾತ್ ದೇವರನ್ನು ಆರಾಧಿಸಿದಂತೆ, ಇದರಿಂದ ನಮ್ಮ ಇಷ್ಟಾರ್ಥಸಿದ್ಧಿ ಸಾಧ್ಯ ಎಂದು ತಿಳಿಸಿದರು.
ಹುಳಿಯಾರಿನ ಮುಖ್ಯಪ್ರಾಣ ಭಜನಾ ಮಂಡಳಿಯ ಗೋಪಾಲ್ ರಾವ್, ಸತೀಶ್, ರುದ್ರೇಶ್, ಬಾಲಾಜಿ,ಶ್ರೀನಿವಾಸ್, ಸುಗಂಧರಾಜ್, ರಘುನಾಥ್, ಗಣೇಶ್, ಮಂಜು, ವೃಷಭಾದ್ರಿ, ಆನಂದಾದ್ರಿ, ವೆಂಕಟಾದ್ರಿ, ಶೇಷಾದ್ರಿ, ರಾಮಾಂಜನೇಯ,ಚಿ.ನಾ.ಹಳ್ಳಿಯ ಬನಶಂಕರಿ, ಮಾರುತಿ ಭಜನಾ ಮಂಡಳಿಯವರು, ಲಕ್ಷ್ಮಿ, ಜಯಲಕ್ಷ್ಮಿ, ಪ್ರೇಮ, ಪದ್ಮ, ಪೂರ್ಣಿಮ, ಶಾಂತ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement