ರಾಜ್ಯಕ್ಕೆ ಶೆಟ್ಟರ್, ದೇಶಕ್ಕೆ ಮೋದಿ ಮಾಡೆಲ್
ಕ.ಪ್ರ. ವಾರ್ತೆ ತುಮಕೂರು ಮಾ.27
ಕರ್ನಾಟಕಕ್ಕೆ ಶೆಟ್ಟರ್ ಮಾಡೆಲ್ ಬೇಕು ಅನ್ನೋ ಕೂಗಿದೆ. ಭಾರತ ಮೋದಿ ಮಾಡೆಲ್ ಕೇಳುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ಕುಮಾರ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಾಟಾಗಿದ್ದ ವಿಜಯಸಂಕಲ್ಪ ಯಾತ್ರೆ ಅಂಗವಾಗಿ ಏರ್ಪಾಟಾಗಿದ್ದ ಬೂತ್ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
10 ವರ್ಷಗಳ ಹಿಂದೆ ವಾಜಪೇಯಿ ಮಾಡೆಲ್ ಇತ್ತು. ಇಂದು ದೇಶ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾಡೆಲ್ ಕೇಳುತ್ತಿದೆ. ಕಾರಣ ಅಭಿವೃದ್ಧಿಯಲ್ಲಿ ಗುಜರಾತ್ ರಾಜ್ಯ ದೇಶಕ್ಕೆ ಮಾದರಿಯಾಗಿರುವುದು. ಅದೇ ರೀತಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ರಾಜ್ಯಕ್ಕೆ ಶೆಟ್ಟರ್ ಮಾಡೆಲ್ ಬೇಕಿದೆ. ಶೆಟ್ಟರ್ ಮಾಡೆಲ್ ಬೇಕು ಅನ್ನೋ ಕೂಗಿದೆ. ಜನತೆ ಈ ಬಾರಿಯ ಚುನಾವಣೆಯಲ್ಲಿ ಶೆಟ್ಟರ್ ನೇತೃತ್ವದ ಬಿಜೆಪಿ ಪಕ್ಷಕ್ಕೆ ಆಶೀರ್ವದಿಸುವಂತೆ ಕೋರಿದರು.
ಸೋನಿಯಾ, ರಾಹುಲ್, ಸಿಂಗ್ ಬೇಡ: ಬೆಲೆಯೇರಿಕೆ, ಭ್ರಷ್ಟಾಚಾರಗಳಿಗೆ ಅಪಾರ ಕೊಡುಗೆ ನೀಡಿರುವ ಕಾಂಗ್ರೆಸ್ನ ಸೋನಿಯಾ, ರಾಹುಲ್, ಪ್ರಧಾನಿ ಮನಮೋಹನ್ಸಿಂಗ್ ಅವರ ಮಾಡೆಲ್ ಬೇಕೆ ಎಂದು ಪ್ರಶ್ನಿಸಿದ ಅನಂತ್ಕುಮಾರ್, ದೇಶಕ್ಕೆ, ರಾಜ್ಯಕ್ಕೆ ಇವರ ಮಾಡೆಲ್ ಬೇಡವೇ ಬೇಡ ಎಂದರು. 10 ವರ್ಷಗಳ ಹಿಂದೆ ಅಕ್ಕಿ, ಬೇಳೆ, ಅಡುಗೆ ಎಣ್ಣೆಯ ಬೆಲೆಯನ್ನು ಇಂದಿಗೆ ಹೋಲಿಸಿ, ಕಾಂಗ್ರೆಸ್ ಬೆಲೆಯೇರಿಕೆಗೆ ಹೇಗೆ ಕಾರಣವಾಗಿದೆ ಎಂದು ವಿವರಿಸಿದರು.
ದುರಂತ ನಾಯಕ: ಕಾಂಗ್ರೆಸ್ ಯುವ ನಾಯಕ ರಾಹುಲ್ಗಾಂಧಿ ದುರಂತ ನಾಯಕ ಎಂದು ಲೇವಡಿ ಮಾಡಿದ ಅನಂತ್ಕುಮಾರ್, ಉತ್ತರಭಾರತ ರಾಜ್ಯದ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಲು-ಸಾಲು ಸೋಲನ್ನು ಅನುಭವಿಸಿದೆ. ವಿಶೇಷವಾಗಿ ರಾಹುಲ್ಗಾಂಧಿ, ಛತ್ತೀಸ್ಗಡ, ಗುಜರಾತ್ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಖುದ್ದು ಜವಾಬ್ದಾರಿ ಹೊತ್ತಿದ್ದರು. ಬಿರುಗಾಳಿಯಂತೆ ತಿರುಗಿ ಪ್ರಚಾರ ಕಾರ್ಯ ನಡೆಸಿದ್ದರು. ಆದರೆ ಬಿರುಗಾಳಿ ಬೀಸಿದ್ದು ನರೇಂದ್ರ ಮೋದಿ ಪರ. ನರೇಂದ್ರ ಮೋದಿ ಎಂಬ ಬಿರುಗಾಳಿಗೆ ಕಾಂಗ್ರೆಸ್ ತರಗೆಲೆಯಂತೆ ಬಿದ್ದು ಹೋಯಿತು. ರಾಹುಲ್ಗಾಂಧಿ ದುರಂತನಾಯಕನಾಗಿ ಹೊರಹೊಮ್ಮಿದರು ಎಂದು ಅನಂತ್ಕುಮಾರ್ ನುಡಿದರು. ಬಿಜೆಪಿ ಮಧ್ಯಪ್ರದೇಶದಲ್ಲಿ 3 ನೇ ಬಾರಿಗೆ ಗೆಲ್ಲಲಿದೆ ಎಂದು ಅನಂತ್ಕುಮಾರ್ ಭವಿಷ್ಯ ನುಡಿದರು. ರಾಜ್ಯದ ಪ್ಲೋರೈಡ್ ಸಮಸ್ಯೆ ನೀಗಿಸಲು 3500 ಕೋಟಿ ರು. ನೀಡುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಕಾರ್ಯಕರ್ತರೇ ಇಂಜಿನ್: ಬಿಜೆಪಿ ಕಾರ್ಯಕರ್ತರನ್ನು ನಂಬಿದ ಪಕ್ಷ. ಬಿಜೆಪಿಗೆ ಕಾರ್ಯಕರ್ತರೇ ಇಂಜಿನ್. ಬಿಜೆಪಿ ನಾಯಕರು ಬೋಗಿಗಳಿದ್ದಂತೆ. ಪ್ರಬಲವಾಗಿರುವ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿಗೆ ಬೋಗಿಗಳನ್ನು ಎಳೆದೊಯ್ಯುವುದು ಕಷ್ಟವಲ್ಲ ಎಂದ ಅನಂತ್ಕುಮಾರ್, ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯ ನಡೆಸುವಂತೆ ಕರೆ ನೀಡಿದರು.
2500 ಕೋಟಿ ರು. ಜಿಲ್ಲೆಗೆ: ತುಮಕೂರು ಜಿಲ್ಲೆ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರ್ಕಾರ 2500 ಕೋಟಿ ರು. ಬಿಡುಗಡೆ ಮಾಡಿದ್ದು, ವಿಶೇಷವಾಗಿ ಬಿಜೆಪಿ ಶಾಸಕರಿರುವ ತುಮಕೂರು, ತಿಪಟೂರು ಹಾಗೂ ತುಮಕೂರು ಗ್ರಾಮಾಂತರದಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ನಟ ಜಗ್ಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಶಾಸಕರಾದ ಬಿ.ಸಿ. ನಾಗೇಶ್, ಸುರೇಶ್ಗೌಡ, ಸಿ.ವಿ. ಮಹದೇವಯ್ಯ, ಡಾ. ಎ.ಎಚ್. ಶಿವಯೋಗಿಸ್ವಾವು, ಅಶ್ವತ್ಥ್ನಾರಾಯಣ್, ಸಿ.ವಿ. ಮಹದೇವಯ್ಯ ಇತರರು ಇದ್ದರು.