ಕೊಬ್ಬರಿ ಖರೀದಿಗೆ ನಫೆಡ್ ಕೇಂದ್ರ ತೆರೆಯಲು ಸಿದ್ಧಲಿಂಗಮೂರ್ತಿ ಒತ್ತಾಯ
ಕ.ಪ್ರ. ವಾರ್ತೆ ತಿಪಟೂರು ಮಾ.28
ತಾಲೂಕಿನಲ್ಲಿ ರೈತರ ಜೀವನಾಡಿ ಬೆಳೆಯಾದ ಕೊಬ್ಬರಿ ಬೆಲೆ ಕೇವಲ ರು. 4500ಕ್ಕೆ ಕುಸಿಯುವ ಮೂಲಕ ಕೊಬ್ಬರಿ ಬೆಲೆ ಪಾತಾಳ ಸೇರಿದ್ದು ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಬೆಂಬಲ ಬೆಲೆಗಿಂತ ಕೊಬ್ಬರಿ ಬೆಲೆ ಕಡಿಮೆಯಾಗಿದ್ದು, ರೈತರು ಕೊಬ್ಬರಿ ಮಾರಲು ಸಾಧ್ಯವಿಲ್ಲದಂತಾಗಿದೆ. ಈ ಬಗ್ಗೆ ರೈತರು ಹಲವಾರು ಹೋರಾಟ ಮಾಡಿ ನಫೆಡ್ ಮೂಲಕ ಬೆಂಬಲ ಬೆಲೆಗೆ ಕೊಬ್ಬರಿ ಕೊಳ್ಳುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದರೂ ಸರ್ಕಾರ ಪದೇ ಪದೇ ನಫೆಡ್ ತೆರೆಯುವುದಾಗಿ ಹೇಳುತ್ತಿರುವುದು ಬಿಟ್ಟರೆ ಈವೆರಗೂ ತೆರೆದಿಲ್ಲ. ಆದ್ದರಿಂದ ಕೂಡಲೆ ಸರ್ಕಾರ ನಫೆಡ್ ಕೇಂದ್ರವನ್ನು ತೆರೆಯಬೇಕೆಂದು ಎಪಿಎಂಸಿ ಸದಸ್ಯ ಬಿ.ಬಿ. ಸಿದ್ಧಲಿಂಗಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊಬ್ಬರಿ ಬೆಲೆ ಬಿದ್ದುಹೋಗಿದ್ದು ರೈತರ ಬೇಡಿಕೆಗೆ ಸ್ಪಂದಿಸದೆ ಬೆಳೆಗಾರರನ್ನು ಸರ್ಕಾರವೇ ತುಳಿಯುವಂತಾಗಿದೆ. ಇದರಿಂದ ಬೇಸತ್ತಿರುವ ಬೆಳೆಗಾರರು ತೆಂಗು ಬೆಳೆಯುವುದನ್ನು ಕೈಬಿಡುತ್ತಿದ್ದಾರೆ. ತೆಂಗಿಗೆ ಕಳೆದ ಹತ್ತಾರು ವರ್ಷಗಳಿಂದ ನುಸಿಪೀಡೆ, ಬೆಂಕಿರೋಗ, ರಸಸೋರುವ ರೋಗ ಸೇರಿದಂತೆ ಒಂದಲ್ಲ ಒಂದು ರೋಗಗಳು ಬಿಟ್ಟೂ ಬಿಡದೆ ಪೀಡಿಸುತ್ತಿವೆ. ಜೊತೆಗೆ ಕಾಲಕಾಲಕ್ಕೆ ಮಳೆಯೂ ಇಲ್ಲದ್ದರಿಂದ, ಅಂತರ್ಜಲದ ಮಟ್ಟ ಸಾವಿರ ಅಡಿಗೆ ಕುಸಿದು ಹೋಗಿದ್ದು, ವಿದ್ಯುತ್ ಸಮಸ್ಯೆ ವಿಪರೀತವಾಗಿದ್ದು, ನೀರುಣಿಸಲು ಕಷ್ಟವಾಗಿರುವುದರಿಂದ ತೆಂಗು ಅಳಿವಿನಂಚಿಗೆ ತಲುಪಿ ಬೆಳೆಗಾರರು ನಿರಂತರ ನಷ್ಟಕ್ಕೊಳಗಾಗುತ್ತಿದ್ದಾರೆ.
ಆದ್ದರಿಂದ ಕೇಂದ್ರ ಸರ್ಕಾರ ಕೂಡಲೆ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹಾಲಿ ಇರುವ ರು.5500 ರಿಂದ ರು.8ಸಾವಿರ ರು.ಗೆ ಹೆಚ್ಚಿಸಬೇಕು. ಜೊತೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನವಾಗಿ ಕ್ವಿಂಟಾಲ್ ಕೊಬ್ಬರಿಗೆ 1ಸಾವಿರವನ್ನಾದರೂ ನೀಡಿ, ಕೂಡಲೆ ಬೆಂಬಲ ಬೆಲೆಗೆ ನಫೆಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರ ತೆರೆಯದಿದ್ದರೆ ನಗರದ ಎಪಿಎಂಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಬಿ.ಬಿ.ಸಿದ್ಧಲಿಂಗಮೂರ್ತಿ ಎಚ್ಚರಿಕೆ ನೀಡಿದ್ದಾರೆ.