ಜಯಚಂದ್ರ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ; ದೂರು
ಕ.ಪ್ರ. ವಾರ್ತೆ ಬೆಂಗಳೂರು ಮಾ.28
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಟಿ.ಬಿ. ಜಯಚಂದ್ರ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ದೇವರಾಜ ಅರಸು ಟ್ರಕ್ ಟರ್ಮಿನಲ್ನಲ್ಲಿ ಜಾಗ ಪಡೆದಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಗುರುವಾರ ಖಾಸಗಿ ದೂರು ದಾಖಲಾಗಿದೆ.
ಶಿರಾ ಮೂಲದ ಟಿ.ರಘು ಎಂಬುವವರು ದೂರು ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಲಾರಿಗಳು ಸೇರಿ ಭಾರಿ ವಾಹನಗಳ ಓಡಾಟದಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ 1992ರಲ್ಲಿ ಯಶವಂತಪುರದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಿಸಲಾಯಿತು. ಅದರಲ್ಲಿ 4 ವಿಭಾಗಗಳಾಗಿ ವಿಂಗಡಿಸಲಾಗಿದ್ದು 504 ಪ್ಲಾಟ್ಗಳನ್ನು ಮಾಡಲಾಗಿದೆ. ಅಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಜಾಗ ಹಂಚಲಾಗಿದ್ದು ಇದರಲ್ಲಿ ಒಂದು ಜಾಗವನ್ನು ಜಯಚಂದ್ರ ಅವರ ಪತ್ನಿ ಜಿ.ಎಚ್. ನಿರ್ಮಲ ಅವರು ಪಡೆದುಕೊಂಡಿದ್ದಾರೆ.
ಮೋಟಾರು ವಾಹನ ಕಾಯ್ದೆ 1988ರ ರೂಲ್ 117ರ ಪ್ರಕಾರ ಟ್ರಕ್ಗಳ ಮಾಲೀಕತ್ವ ಹೊಂದಿರುವವರಿಗೆ ಮಾತ್ರ ಟ್ರಕ್ ಟರ್ಮಿನಲ್ಗಳಲ್ಲಿ ಜಾಗ ನೀಡಬೇಕು. ಆದರೆ ಜಿ.ಎಚ್. ನಿರ್ಮಲ ಅವರು ಯಾವುದೇ ಟ್ರಕ್ಗಳ ಮಾಲೀಕತ್ವ ಹೊಂದಿರದಿದ್ದರೂ ಅವರ ಪತಿ ಟಿ.ಬಿ. ಜಯಚಂದ್ರ ಅವರ ಪ್ರಭಾವ ಬಳಸಿ ಅಲ್ಲಿ ಜಾಗ ಪಡೆದುಕೊಂಡು ಇಂದಿಗೂ ಬಾಡಿಗೆ ಸಂಪಾದಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೇ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಹಾಗೂ ಲೋಕಾಯುಕ್ತ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಾಗ ಈ ಸಂಬಂಧ ಟ್ರಕ್ ಟರ್ಮಿನಲ್ನಿಂದ ಬಾಡಿಗೆ ಪಡೆಯುತ್ತಿರುವ ವಿಚಾರವನ್ನು ಟಿ.ಬಿ. ಜಯಚಂದ್ರ ಅವರು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದೆ.
ಕೆಜೆಪಿ ಯುವ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆ
ತಿಪಟೂರು: ತಾಲೂಕು ಕೆಜಿಪಿ ಯುವ ಘಟಕಕ್ಕೆ ಹಾಲ್ಕುರಿಕೆಯ ಎಚ್.ವಿ. ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ಕೆಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖಂಡರಾದ ಲೋಕೇಶ್ವರ ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜು ಕೆಜೆಪಿ ಗೆಲ್ಲಿಸಲು ಯುವ ಶಕ್ತಿಯ ಅವಶ್ಯಕತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ. ಪಕ್ಷದ ಎಲ್ಲಾ ಯುವಶಕ್ತಿಯನ್ನು ಒಗ್ಗೂಡಿಸಿ ಲೋಕೇಶ್ವರ ಗೆಲವಿನ ಮೂಲಕ ಯಡಿಯೂರಪ್ಪನವರ ಕೈಬಲಪಡಿಸುತ್ತೇನೆಂದು ತಿಳಿಸಿದರು.