ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆಯಲ್ಲಿ ಚೆಕ್ಪೋಸ್ಟ್

Srinivasa Murthy VN
Updated On : 28 Mar 2013, 11:38 am

ತುರುವೇಕೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಲುವಾಗಿ ಸದ್ಯ ಮಾಯಸಂದ್ರ ಟಿಬಿ, ಬಾಣಸಂದ್ರ, ತಂಡಗ ಗೇಟ್ ಹಾಗೂ ದಿಡಗ ಬಳಿಯ ಭೀಮ್ ನಹರೆ ಗ್ರಾಮದ ಬಳಿ ಚೆಕ್ ಪೋಸ್ಟ್ ಅನ್ನು ಪ್ರಾರಂಭ ಮಾಡಲಾಗಿದೆ ಎಂದು ಜೆ.ಪಿ.ಮಂಜೇಗೌಡ ತಿಳಿಸಿದ್ದಾರೆ. ಪ್ರತಿ ಚೆಕ್ ಪೋಸ್ಟ್ಗಳಲ್ಲಿ ಅಬಕಾರಿ, ಕಂದಾಯ, ಪೋಲಿಸ್ ಹಾಗೂ ಗ್ರಾಮ ಪಂಚಾಯ್ತಿಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಪಟ್ಟಣದ ಮಿನಿ ವಿಧಾನಸೌಧದ ಬಳಿ ಪ್ರತಿಷ್ಠಾಪಿಸಲಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಪ್ರತಿಮೆಗೆ ಮುಸುಕು ಹಾಕಲಾಗಿದೆ.

ಗ್ರಾಮಸಭೆಗೆ ಶಕ್ತಿ ತುಂಬುವುದು ಅಗತ್ಯ: ಹಿರೇಮಠ್
ಗುಬ್ಬಿ:
ಭಾರತದ ಪ್ರಜಾಪ್ರಭುತ್ವದ ಭದ್ರ ಬುನಾದಿಯಾದ ಗ್ರಾಮಸಭೆಗಳನ್ನು ಸಶಕ್ತೀಕರಣಗೊಳಿಸುವುದು ಹಾಗೂ ಆರ್ಥಿಕ ಅಭಿವೃದ್ಧಿಯ ವಿನೂತನ ಪರಿಕಲ್ಪನೆಯನ್ನು ಮೂಡಿಸುವುದು ಅಗತ್ಯ ಎಂದು ಪರಿವರ್ತನಾ ಸಮುದಾಯ ಸಂಸ್ಥೆಯ ಸಂಸ್ಥಾಪಕ ಎಸ್.ಆರ್. ಹಿರೇಮಠ್ ತಿಳಿಸಿದರು.  ಅವರು ಜನಸಂಗ್ರಾಮ ಪರಿಷತ್, ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕ್ರಿಯಾ ಸಮಿತಿ, ಗುಬ್ಬಿ ತಾಲೂಕಿನ ಘಟಕದ ಕೊಂಡ್ಲಿ ವಿವಿಧ ಪ್ರಗತಿಪರ ಸಂಘ -ಸಂಸ್ಥೆಯವರ ಆಶ್ರಯದ ಮತದಾರರ ಜಾಗೃತಿ ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  ನಮ್ಮ ರೈತರ ನೈಸರ್ಗಿಕ ಸಂಪನ್ಮೂಲಗಳನ್ನು ರಾಜಕಾರಣಿಗಳು ಲೂಟಿ ಹೊಡೆದು ಅಕ್ರಮವಾಗಿ ಸಂಪಾದಿಸಿದ ಹಣದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕ್ಷೀಣಗೊಳಿಸುತ್ತಿರುವ ಎಲ್ಲ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕು ಎಂದರು.  ದೇಶದಲ್ಲಿಯೇ ಅತಿ ದೊಡ್ಡ ಅಕ್ರಮ ಗಣಿಗಾರಿಕೆಯ ಈ ಹಗರಣದಲ್ಲಿ ಸಿಲುಕಿದ ಜನ ಪ್ರತಿನಿಧಿಗಳು, ಅಧಿಕಾರಿಗಳು, ಗಣಿಮಾಲಿಕರು ಹಾಗೂ ಇತರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಆಯುಧಗಳನ್ನು ಪೊಲೀಸ್ ಠಾಣೆಗೆ  ಒಪ್ಪಿಸಲು ಸೂಚನೆ
ತುಮಕೂರು:
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 11 ರವರೆಗೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯುಧಗಳ ಪರವಾನಗಿಯನ್ನು ಹೊಂದಿರುವ ಪರವಾನಗಿದಾರರು ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಒಪ್ಪಿಸಿ, ಸ್ವೀಕೃತಿ ಪಡೆಯುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಗುಡಿಸಲಿಗೆ ಬೆಂಕಿ: ಇಬ್ಬರಿಗೆ ತೀವ್ರ ಗಾಯ
ತುಮಕೂರು:
ನಗರದ ಅಂತರಸನಹಳ್ಳಿ ಬಳಿ ಸರ್ಕಾರಿ ಜಾಗದಲ್ಲಿರುವ ಗುಡಿಸಲಿಗೆ ಬೆಂಕಿ ಬಿದ್ದು ಒಬ್ಬ ಮಹಿಳೆ ಸೇರಿ ಇಬ್ಬರು ತೀವ್ರವಾಗಿ  ಗಾಯಗೊಂಡಿರುವ ಘಟನೆ ನಡೆದಿದೆ. ರೇಣುಕಮ್ಮ ಮತ್ತು ಸುರೇಶ ಎಂಬುವರೇ ಬೆಂಕಿ ಅವಘಡದಿಂದ ಗಾಯಗೊಂಡಿರುವವರು. ಕೌಟುಂಬಿಕ ಕಲಹದ ಹಿನ್ನೆಲೆಯಿಂದ ಆದ ಜಗಳದಲ್ಲಿ ರೇಣುಕಮ್ಮ ಎನ್ನುವವರು ತಾವೇ ಬೆಂಕಿ ಹಚ್ಚಿಕೊಂಡಿದ್ದಾಗಿ ತಿಳಿಸಿದ್ದಾರೆ. ಅಕ್ಕಪಕ್ಕದವರು ಮತ್ತು ವಾಹನ ಸವಾರರು ಬೆಂಕಿ ನಂದಿಸಿದ್ದಾರೆ. ಇಲ್ಲವಾಗಿದ್ದರೆ ಇಲ್ಲಿನ ಸುಮಾರು 15 ಕ್ಕೂ ಹೆಚ್ಚು ಗುಡಿಸಲುಗಳಿದ್ದು ಸುಮಾರು 40 ಕ್ಕೂ ಹೆಚ್ಚು ಜನರು ಇಲ್ಲಿ ವಾಸವಾಗಿದ್ದಾರೆ. ಬೆಂಕಿ ತಾಕಿ ದೊಡ್ಡಅನಾಹುತವೇ ಸಂಭವಿಸುತ್ತಿತ್ತು. ಆದರೆ ಸಮಯಕ್ಕೆ ಸರಿಯಾಗಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣಾ ಸಹಾಯವಾಣಿ ಸ್ಥಾಪನೆ
ತುಮಕೂರು: 
ವಿಧಾನಸಭಾ ಚುನಾವಣೆ  ಸಂಬಂಧ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ  ಸಾರ್ವಜನಿಕರಿಗೆ ಅವಶ್ಯಕ ಮಾರ್ಗದರ್ಶನ ನೀಡುವ ಸಲುವಾಗಿ ತುಮಕೂರು ಉಪವಿಭಾಗ ವ್ಯಾಪ್ತಿಯ ತುಮಕೂರು ತಾಲೂಕು ಗುಬ್ಬಿ ಹಾಗೂ ಕುಣಿಗಲ್ ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತುಮಕೂರು ಉಪವಿಭಾಗದ ಉಪವಿಭಾಗಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿ ನಕುಲ್ ತಿಳಿಸಿದ್ದಾರೆ.

ಇಂದು ಜೆಡಿಯು ನೂತನ ಕಚೇರಿ ಉದ್ಘಾಟನೆ
ಹುಳಿಯಾರು :
ಪಟ್ಟಣದಲ್ಲಿ ನೂತನವಾಗಿ ಜೆಡಿಯು ಪಕ್ಷದ ಕಚೇರಿ ಉದ್ಘಾಟನೆಯು ಶುಕ್ರವಾರ ಬೆಳಗ್ಗೆ ನಂದಿಹಳ್ಳಿ ರಸ್ತೆಯ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ನಡೆಯಲಿದ್ದು, ನೂತನ ಕಚೇರಿಯ ಉದ್ಘಾಟನೆಯನ್ನು ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡ ನೆರವೇರಿಸುವರು. ಜಿಲ್ಲಾಧ್ಯಕ್ಷ ಕೆ.ಜಿ.ಎಲ್.ರವಿ, ಚಿ.ನಾ.ಹಳ್ಳಿ ಕ್ಷೇತ್ರದ ಪ್ರಕಾಶ್ ಯಾದವ್ ಅತಿಥಿಗಳಾಗಿ ಆಗಮಿಸುವರು. ಇದೇ ದಿನ ಕಾರ್ಯಕರ್ತರ ಮೆರವಣಿಗೆಯು ನಡೆಯಲಿದ್ದು, ಹೋಬಳಿಯ ಎಲ್ಲಾ ಜೆಡಿಯು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಗೊಳ್ಳುವಂತೆ ಕೋರಿದ್ದಾರೆ.

ತಾಲೂಕುವಾರು ಕ್ಯಾಂಪ್ ಸ್ಥಗಿತ
ತುಮಕೂರು:
ರಾಜ್ಯ  ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತುಮಕೂರು ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಪ್ರತಿವಾರ ನಡೆಸಲಾಗುತ್ತಿದ್ದ ತಾಲೂಕುವಾರು ಶಿಬಿರ (ಕ್ಯಾಂಪ್) ಗಳನ್ನು  ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ  ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಹಸುಗೂಸು ಸಾವು
ಶಿರಾ:
ಪಟ್ಟಣಕ್ಕೆ ಹೊಂದಿಕೊಂಡಿರುವ ರಾ.ಹೆ. 4 ರ ಬೈಪಾಸ್ ರಸ್ತೆಯಲ್ಲಿ ಜರುಗಿದ ರಸ್ತೆ ಅಪಘಾತದಲ್ಲಿ 6 ತಿಂಗಳ ಹಸುಗೂಸು ಸಾವನ್ನಪ್ಪಿ ದಂಪತಿ ಗಾಯಗೊಂಡಿದ್ದಾರೆ.
ಮಾಲ್ಡೀವ್ಸ್ನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರು ಮೂಲದ ಡಾ. ಜ್ಞಾನಪ್ರಕಾಶ್ ತನ್ನ ಮಡದಿ ಮತ್ತು ಮಗುವಿನೊಂದಿಗೆ ರಜೆ ಮೇಲೆ ದೇಶಕ್ಕೆ ಮರಳಿ ಬೆಂಗಳೂರಿನಿಂದ ಹೊಸಪೇಟೆಯಲ್ಲಿರುವ ತಮ್ಮ ಮಾವನ ಮನೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ರಾ.ಹೆ. 4 ಬೈಪಾಸ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದಿದೆ. ದಂಪತಿಗೆ ಪೆಟ್ಟು ತಗುಲಿದ್ದು ದುರಾದೃಷ್ಟವಶಾತ್ 6 ತಿಂಗಳ ಕಂದಮ್ಮ ಸ್ಥಳದಲ್ಲೇ ಮೃತಪಟ್ಟಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗವಿಕಲ ಬಸ್ಪಾಸ್ ನವೀಕರಣ
ತುಮಕೂರು:
ಕ.ರಾ.ರ.ಸಾ.ನಿಗಮದ ವತಿಯಿಂದ 2013ನೇ ಸಾಲಿಗೆ ಅಂಗವಿಕಲರಿಗೆ ರಿಯಾಯತಿ ದರದಲ್ಲಿ ವಿತರಿಸಲಾದ ಹಳೆಯ ಪಾಸ್ಗಳನ್ನು ನವೀಕರಣ ಮಾಡುವ ಸಂಬಂಧ ತಾಲೂಕುವಾರು ನವೀಕರಣ ಮಾಡಲು ನಿಗದಿಪಡಿಸಿದ್ದು, ಅದರಂತೆ ಅಂಗವಿಕಲ ರಿಯಾಯತಿ ದರದ ಬಸ್ಪಾಸ್ಗಳನ್ನು ನಿಗಮದ ಘಟಕಗಳಲ್ಲಿ ಏಪ್ರಿಲ್ 30 ರವರೆಗೆ 550 ರು. ನೀಡಿ ನವೀಕರಣ ಮಾಡಿಸಿಕೊಳ್ಳುವಂತೆ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಸಿಐಟಿಯು ಜಿಲ್ಲಾ ಸಮಿತಿ ಸಂತಾಪ
ತುಮಕೂರು:
ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಅಗ್ನಿ ದುರಂತದಲ್ಲಿ 6 ಜನ ಕಾರ್ಮಿಕರ ಸಾವನ್ನಪ್ಪಿದ್ದು ಈ ಘಟನೆಯ ಬಗ್ಗೆ ಸಿಐಟಿಯು ಜಿಲ್ಲಾ ಸಮಿತಿ ಸಂತಾಪ ವ್ಯಕ್ತಿಪಡಿಸಿದೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಸಿಐಟಿಯು ಆಗ್ರಹಿಸಿದೆ. ಈ ಘಟನೆಗೆ ತಪ್ಪಿತಸ್ಥರಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಉಗ್ರ ಶಿಕ್ಷೆ ನೀಡುವಂತೆ  ಎನ್.ಕೆ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.

ಅಬಕಾರಿ ಕಂಟ್ರೋಲ್ ರೂಂ ಸ್ಥಾಪನೆ
ತುಮಕೂರು: 
ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2013 ರ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯಿಂದ  ಯಾವುದೇ ಅಕ್ರಮ ಮದ್ಯಸಂಗ್ರಹಣೆ, ಸಾಗಾಣಿಕೆ, ಮಾರಾಟದಂತಹ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡಬಹುದು. ಅಬಕಾರಿ ನಿರೀಕ್ಷಕರ ಕಚೇರಿ, ತುಮಕೂರು ವಲಯ, ತುಮಕೂರು, ದೂ.ವಾ.0816-2252205, ಅಬಕಾರಿ  ನಿರೀಕ್ಷಕರ ಕಚೇರಿ, ಗುಬ್ಬಿ ವಲಯ, ಗುಬ್ಬಿ, ದೂ.ವಾ.08131-222949, ಅಬಕಾರಿ ನಿರೀಕ್ಷಕರ ಕಚೇರಿ, ಕುಣಿಗಲ್ ವಲಯ, ಕುಣಿಗಲ್, ದೂ.ವಾ.08132-222544, ಅಬಕಾರಿ ನಿರೀಕ್ಷಕರ ಕಚೇರಿ, ತಿಪಟೂರು ವಲಯ, ತಿಪಟೂರು, ದೂ.ವಾ.08134-254574, ಅಬಕಾರಿ ನಿರೀಕ್ಷಕರ ಕಚೇರಿ, ತುರುವೇಕೆರೆ ವಲಯ, ತುರುವೇಕೆರೆ, ದೂ.ವಾ.08139-288483, ಅಬಕಾರಿ ನಿರೀಕ್ಷಕರ ಕಚೇರಿ, ಚಿ.ನಾ.ಹಳ್ಳಿ ವಲಯ, ಚಿ.ನಾ.ಹಳ್ಳಿ, ದೂ.ವಾ.08133-267010, ಅಬಕಾರಿ ನಿರೀಕ್ಷಕರ ಕಚೇರಿ, ಶಿರಾ ವಲಯ, ಶಿರಾ, ದೂ.ವಾ.08135-277198, ಅಬಕಾರಿ ನಿರೀಕ್ಷಕರ ಕಚೇರಿ, ಕೊರಟಗೆರೆ ವಲಯ, ಕೊರಟಗೆರೆ ದೂ.ವಾ.08138-233262, ಅಬಕಾರಿ ನಿರೀಕ್ಷಕರ ಕಚೇರಿ, ಮಧುಗಿರಿ ವಲಯ, ಮಧುಗಿರಿ ದೂ.ವಾ.08137-283655, ಅಬಕಾರಿ ನಿರೀಕ್ಷಕರ ಕಚೇರಿ, ಪಾವಗಡ ದೂ.ವಾ.08136-245572, ಅಬಕಾರಿ ಉಪ ಅಧೀಕ್ಷಕರ ಕಚೇರಿ, ತುಮಕೂರು ಉಪ ವಿಭಾಗ, ತುಮಕೂರು, ದೂ.ವಾ.0816-2251307, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಮಧುಗಿರಿ ಉಪ ವಿಭಾಗ, ಮಧುಗಿರಿ ದೂ.ವಾ.08137-284366, ಅಬಕಾರಿ ಉಪ ಅಧೀಕ್ಷಕರ ಕಚೇರಿ, ತಿಪಟೂರು ಉಪ ವಿಭಾಗ, ತಿಪಟೂರು ದೂ.ವಾ.08134-250504,  ಅಬಕಾರಿ ಉಪ ಆಯುಕ್ತರ ಕಚೇರಿ ತುಮಕೂರು ಜಿಲ್ಲೆ, ತುಮಕೂರು ದೂ.ವಾ.0816-2272927 ಸಂಪರ್ಕಿಸಬಹುದು.

ರಾಜ್ಯದಲ್ಲಿ ಕಾಂಗ್ರೆಸ್ ಅಲೆ: ವೆಂಕಟೇಶ್
ಪಾವಗಡ: 
ಜೆಡಿಎಸ್ ಮುಖಂಡ ಕೋಳಿ ಬಾಲಾಜಿ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್ಗೆ ಹೆಚ್ಚು ಬಲ ಬಂದಂತಾಗಿರುವುದಾಗಿ ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ. ವೆಂಕಟೇಶ್ ತಿಳಿಸಿದರು. ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕ್ರರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಪಕ್ಷದ ರಾಜ್ಯಾಧ್ಯಕ್ಷ ಡಾ.ಪರಮೇಶ್ವರ್, ಸಿದ್ದರಾಮಯ್ಯ ಮುಂತಾದ ರಾಜ್ಯ ಮುಖಂಡರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ವ್ಯಾಪಕವಾಗಿದ್ದು ಚುನಾವಣೆ ನಂತರ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಮಹಾ ರಥೋತ್ಸವಕ್ಕೆ ಚಾಲನೆ
ಪಾವಗಡ:
ಮುಜರಾಯಿ ಇಲಾಖೆಗೆ ಸೇರಿದ ವದನಕಲ್ಲು ಗ್ರಾಮದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ತಪೋ ಭೂಮಿಯಲ್ಲಿ ಗುರುವಾರ ಮಧ್ಯಾಹ್ನ ಚಿತ್ತ ನಕ್ಷತ್ರದಲ್ಲಿ ಮಹಾ ರಥೋತ್ಸವಕ್ಕೆ ತಹಸೀಲ್ದಾರ್ ಮಹಮ್ಮದ್ ಆಲ್ತಾಪ್ ಚಾಲನೆ ನೀಡಿದರು.

4ದಿನಗಳ ಜಾತ್ರೆ ಮುಕ್ತಾಯ
ಪಾವಗಡ:
ನಿಡಗಲ್ ವ್ಯಾಪ್ತಿಯ ಕರೇಕ್ಯಾತನಹಳ್ಳಿಯ ಜಾನಪದ ಐತಿಹಾಸಿಕ ಹಿನ್ನೆಲೆ ಪಡೆದ ತಾಯಿ ಸ್ವಾರಮ್ಮದೇವಿಯ 4ದಿನಗಳ ಜಾತ್ರೆ ಯಶಸ್ವಿಯಾಗಿ ಗುರುವಾರ ಮುಕ್ತಾಯವಾಯಿತು. ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸಿ 4ದಿನಗಳ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ
ಚಿಕ್ಕನಾಯಕನಹಳ್ಳಿ:
ಶಿಕ್ಷಕರಿಗೆ ತಾವು ಕರ್ತವ್ಯ ನಿರ್ವಹಿಸಿದ ಶಾಲೆಯಲ್ಲಿ ಅವರು ವರ್ಗಾವಣೆಗೊಂಡು ಹೋಗುವಾಗ ಗೌರವಿಸಿದರೆ ಅದರಿಂದ ಅವರ ಮನಸ್ಸಿಗಾಗುವ ಆನಂದ  ಅಗಣಿತ ಎಂದು ಶಾಲೆಯ ಮುಖ್ಯಶಿಕ್ಷಕ ಜಿ.ಪುಟ್ಟಸ್ವಾಮಿ ನುಡಿದರು. ಅವರು ತಮ್ಮ ಶಾಲೆಯಲ್ಲಿ ಇದುವರೆಗೆ ಕರ್ತವ್ಯ ನಿರ್ವಹಿಸಿದ ಎಸ್.ಬಿ. ನಿಂಗರಾಜು ಮತ್ತುಎಚ್.ಜಿ. ಗಿರೀಶ್ ಅವರು ಮುಖ್ಯಶಿಕ್ಷಕರುಗಳಾಗಿ ಬಡ್ತಿಹೊಂದಿದ್ದು ನಮ್ಮ ಶಾಲೆಗೆ ಹೆಮ್ಮೆ ತರುವ ವಿಷಯ. ಅವರು ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಕ್ಕಳಿಗೆ ನಿರ್ವಂಚನೆಯಿಂದ ಕಲಿಸಿದ್ದಾರೆ. ನಮ್ಮ ಶಾಲೆ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಪಡೆಯುವ  ಶಾಲೆಗಳ ಸಾಲಿನಲ್ಲಿ ಬರುವುದು ಸಾಧ್ಯವಾಯಿತು.ಇದಲ್ಲದೆ ಸಿ.ಆರ್.ನಾಗರಾಜು ಅವರು ಮಕ್ಕಳಿಗೆ ಶಿಕ್ಷಣ ನೀಡಿದ ಆದರ್ಶ ಶಿಕ್ಷಕರಾಗಿದ್ದರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement