ದಂಡನಾಯಕರ ತೀರ್ಮಾನವಾಗದೇ ಕಾರ್ಯಕರ್ತರಲ್ಲಿ ಗೊಂದಲ
ಕ.ಪ್ರ. ವಾರ್ತೆ ಕುಣಿಗಲ್ ಮಾ.28
ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿ, ತಾಲೂಕಿನ ಮತಸಮರಕ್ಕೆ ಸೇನಾನಿಗಳಾದ ಕಾರ್ಯಕರ್ತರು ಸಿದ್ಧರಾಗಿದ್ದರೂ, ಪ್ರಮುಖ ಪಕ್ಷಗಳಲ್ಲಿ ದಂಡನಾಯಕರ ತೀರ್ಮಾನವಾಗಿಲ್ಲ. ಪಕ್ಷಗಳ ಹೈಕಮಾಂಡ್ ಧೋರಣೆಯಿಂದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದಾರೆ. ಆ ಮಟ್ಟಿಗೆ ವಿಧಾನಸಭಾ ಮತಸಮರ ಸ್ವಲ್ಪ ಮಟ್ಟಿಗೆ ಹಿನ್ನೆಡೆ ಸಾಧಿಸಿದ್ದಲ್ಲದೆ ರಂಗೇರದೆ ಕಳೆಗುಂದಿದೆ.
ವಿಧಾನಸಭಾ ಚುನಾವಣೆ ಘೋಷಣೆಯಾದಾಗಿನಿಂದಲೂ, ಮತಸಮರಕ್ಕೆ ಪಕ್ಷಗಳ ಸೇನಾನಿಗಳಾದ ಕಾರ್ಯಕರ್ತರು ಹುಮ್ಮಸ್ಸಿನಿಂದ ಸಜ್ಜಾದರೂ, ಯಾವ ದಂಡನಾಯಕರ ನೇತೃತ್ವದಲ್ಲಿ ಮುನ್ನಡೆಯಬೇಕೆಂಬ ಗೊಂದಲ ಜೆಡಿಎಸ್ ಪಾಳಯದಲ್ಲಿದ್ದರೆ, ಕೈ ಪಾಳೆಯದಲ್ಲಿ ದಂಡನಾಯಕನ ಗೊಂದಲ ಮೇಲ್ನೋಟಕ್ಕೆ ಇಲ್ಲದಿದ್ದರೂ, ಒಳಗೊಳಗೆ ಹಲವು ವದಂತಿ, ಗೊಂದಲಗಳು ಸೃಷ್ಟಿಯಾಗಿ ಕಾರ್ಯಕರ್ತರು ಸದ್ಯಕ್ಕೆ ಕದನವಿರಾಮ ಸ್ಥಿತಿಯಲ್ಲಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ನಂತರ ಜೆಡಿಎಸ್ ಪಾಳೆಯವು ಮಾಜಿ ಸಚಿವ ಡಿ.ನಾಗರಾಜಯ್ಯ ಸಾರಥ್ಯದಲ್ಲಿ ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾಪಂಚಾಯಿತಿ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಪಕ್ಷದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಪುರಸಭೆ ಚುನಾವಣೆಯಲ್ಲಿ ತಾಲೂಕು ಜೆಡಿಎಸ್ ಸಾರಥ್ಯಕ್ಕೆ ಮತ್ತೋರ್ವ ನಾಯಕ ಎಸ್.ಪಿ. ಮುದ್ದಹನುಮೇಗೌಡ ಸಾರಥಿಯಾಗಿದ್ದು 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕಾರ್ಯಕರ್ತರಲ್ಲಿ ಗೊಂದಲ: ಪುರಸಭೆ ಚುನಾವಣೆ ಮುಗಿದ ಹಿಂದೆಯೆ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಇಬ್ಬರು ಸಾರಥಿಗಳಿದ್ದು, ಯಾರ ಸಾರಥ್ಯದಲ್ಲಿ ಚುನಾವಣೆಗೆ ತೆರಳಬೇಕೆಂಬ ಗೊಂದಲದಲ್ಲಿ ಕಾರ್ಯಕರ್ತರು ಮುಳುಗಿದ್ದಾರೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಜೆಡಿಎಸ್ನಲ್ಲಿ ಮತ್ತೋರ್ವ ಮುಖಂಡ, ಗುತ್ತಿಗೆದಾರ ಕುಲುಮೇಪಾಳ್ಯ ಶಿವಣ್ಣ ತಮಗೆ ಟಿಕೆಟ್ ನೀಡಿದಲ್ಲಿ ಚುನಾವಣೆಗೆ ಸಿದ್ಧ ಎಂದು ಘೋಷಿಸುವ ಮೂಲಕ, ಮೂರನೆ ಸಾರಥಿ ಸಹ ಸಜ್ಜುಗೊಂಡಿದ್ದು ಕಾರ್ಯಕರ್ತರ ಗೊಂದಲ ಮತ್ತಷ್ಟು ಹೆಚ್ಚಿದೆ.
ಕೈ ಪಾಳಯದಲ್ಲಿ ನವಚೈತನ್ಯ: ಇನ್ನು ಕೈ ಪಾಳಯದಲ್ಲಿ ಹಾಲಿ ಶಾಸಕ ಬಿ.ಬಿ.ರಾಮಸ್ವಾಮಿಗೌಡರ ಸಾರಥ್ಯದಲ್ಲೆ ಮತಸಮರಕ್ಕೆ ಕಾರ್ಯಕರ್ತರು ಸಜ್ಜಾಗಿದ್ದರೆ, ಕಳೆದ ವಿಧಾನಸಭೆಯ ಚುನಾವಣೆ ನಂತರ ನಡೆದ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಪಕ್ಷದ ಸಾಧನೆ ತೃಪ್ತಿಕರವಾಗಿರಲಿಲ್ಲ. ಆದರೆ ಪುರಸಭೆ ಚುನಾವಣೆಯ ಫಲಿತಾಂಶ ಕಾರ್ಯಕರ್ತರಲ್ಲಿ ನವಚೈತನ್ಯ ತುಂಬಿದೆ. ಆದರೆ, ಮತ್ತೋರ್ವ ಮುಖಂಡ ರವಿಕಿರಣ್ ಟಿಕೆಟ್ಗೆ ತೀವ್ರ ಲಾಬಿ ನಡೆಸಿರುವ ಕಾರಣ, ಅವರೂ ಸಾರಥ್ಯದ ಮುಂಚೂಣಿಯಲ್ಲಿದ್ದಾರೆ. ಈ ಸಾಲಿಗೆ ಡಾ.ರುದ್ರಯ್ಯ ಸೇರ್ಪಡೆಗೊಳ್ಳಲು ಶತಾಯ ಗತಾಯ ಪ್ರಯತ್ನದಲ್ಲಿ ತೊಡಗಿದ್ದು, ಕಾರ್ಯಕರ್ತರು ನಾಯಕರಾರಗಬಹುದೆಂಬ ಗೊಂದಲದಲ್ಲಿದ್ದಾರೆ.
ಬಿಜೆಪಿ ಹಿನ್ನಡೆ: ಬಿಜೆಪಿಯಲ್ಲಿ ಸಾರತ್ಯದ ಗೊಂದಲ ಇಲ್ಲದಿದ್ದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ವಂಚಿತರಾಗಿ ಬಿಜೆಪಿಗೆ ಸೇರ್ಪಡೆಗೊಂಡು ಅಭ್ಯರ್ಥಿಯಾಗಿರುವ ಡಿ.ಕೃಷ್ಣಕುಮಾರ್, ಮತಸಮರದಲ್ಲಿ ಜೋರಾಗಿ ತೊಡಗಿದ್ದರೂ, ಮೂಲ ಬಿಜೆಪಿ ಕಾರ್ಯಕರ್ತರ ಓಲೈಕೆಯಲ್ಲಿ ಪರಿಣಾಮಕಾರಿ ಶ್ರಮಪಡದ ಕಾರಣ, ಪ್ರಾರಂಭಿಕ ಹಂತದ ಬಹುತೇಕ ಕಡೆಗಳಲ್ಲಿ ಹಿನ್ನೆಡೆ ಕಾಡುತ್ತಿದೆ. ಕೆಜೆಪಿ ಪುರಸಭಾ ಚುನಾವಣೆ ವೇಳೆ ಕಚೇರಿ ಪ್ರಾರಂಭಿಸಿ, ನೆಪಮಾತ್ರಕ್ಕೆ ಪ್ರಚಾರ ನಡೆಸಿ, ಕಚೇರಿ ಮುಚ್ಚಿಹೋದವರು, ವಿಧಾನಸಭಾ ಮತ ಸಮರಕ್ಕೆ ಸೂಕ್ತ ವ್ಯಕ್ತಿ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿದ್ದಾರೆ.