ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಗರಕ್ಕೆ 2636 ಕೋಟಿ ಯೋಜನೆ

Srinivasa Murthy VN
Updated On : 28 Mar 2013, 11:34 am

ಕ.ಪ್ರ. ವಾರ್ತೆ ತುಮಕೂರು ಮಾ.28
2013-14ನೇ  ಸಾಲಿಗೆ ತುಮಕೂರು ಜಿಲ್ಲೆಗೆ ಒಟ್ಟು ಸಾಲ ಯೋಜನೆ 2636 ಕೋಟಿ ರು. ರೂಪಿಸಲಾಗಿದ್ದು, ಆದ್ಯತಾ  ವಲಯದ ಸಾಲಗಳಿಗೆ 2291 ಕೋಟಿ ರು. ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಎಸ್ಬಿ ಎಂ. ಪ್ರಧಾನ ವ್ಯವಸ್ಥಾಪಕ ಡಾ. ಕೆ.ಲಕ್ಷ್ಮೀಶ ತಿಳಿಸಿದರು.
ಅವರು ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2013-14ನೇ  ಜಿಲ್ಲಾ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬೆಳೆ ಸಾಲ 870 ಕೋಟಿ, ಸಣ್ಣ ನೀರಾವರಿ 66 ಕೋಟಿ, ಭೂಅಭಿವೃದ್ಧಿ 76 ಕೋಟಿ, ಕೃಷಿ ಯಾಂತ್ರೀಕರಣ 69 ಕೋಟಿ, ತೋಟಗಾರಿಕೆ 57 ಕೋಟಿ, ಇತರೆ 19 ಕೋಟಿ, ಹೈನುಗಾರಿಕೆ 55 ಕೋಟಿ, ಕೋಳಿ ಸಾಕಾಣಿಕೆ 2ಕೋಟಿ, ಕುರಿ, ಮೇಕೆ, ಹಂದಿ ಸಾಕಾಣಿಕೆ 7ಕೋಟಿ, ಮೀನುಗಾರಿಕೆ 1.19ಕೋಟಿ, ಅರಣ್ಯಾಭಿವೃದ್ಧಿ ಮತ್ತು ಇತರೆ 1.2 ಕೋಟಿ, ಗುಡಿ ಮತ್ತು ಸಣ್ಣ ಕೈಗಾರಿಕೆ 443 ಕೋಟಿ, ವ್ಯಾಪಾರ ಮತ್ತು ಇತರೆ ಸೇವೆ 626 ಕೋಟಿ ಸೇರಿದಂತೆ ಒಟ್ಟು ಆದ್ಯತಾ ವಲಯ 2291ಕೋಟಿ, ಇತರೆ 345 ಕೋಟಿ ಸೇರಿದಂತೆ ಒಟ್ಟು ಜಿಲ್ಲಾ ಸಾಲ ಯೋಜನೆ 2636 ಕೋಟಿ ರು. ಆಗಿದೆ ಎಂದು ವಿವರಿಸಿದರು.
10 ತಾಲೂಕುಗಳಿಗೆ: ಒಟ್ಟು 10 ತಾಲೂಕುಗಳಿಗೆ ಬೆಳೆ ಸಾಲ 870ಕೋಟಿ, ಅವಧಿಸಾಲ 352ಕೋಟಿ, ಕೈಗಾರಿಕೆ 444 ಕೋಟಿ, ವ್ಯಾಪಾರ ಮತ್ತು ಸೇವೆ 625 ಕೋಟಿ ಸೇರಿದಂತೆ ಆದ್ಯತಾ ವಲಯಕ್ಕೆ 2291 ಕೋಟಿ ರು. ಸಾಲ ಬಿಡುಗಡೆ ಮಾಡಲಿದ್ದು, ಪ್ರಸಕ್ತ ಸಾಲ ಯೋಜನೆಯಲ್ಲಿ ಕೃಷಿ ಸಾಲ, ಟ್ರ್ಯಾಕ್ಟರ್ ಸಾಲ, ವ್ಯಾಪಾರ ಮತ್ತು ಇತರೆ ಸೇವೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.  ಈ ಸಾಲ ಯೋಜನೆಯ ಶೇ. 38 ಭಾಗ ಕೃಷಿ, ಶೇ.19 ಕೈಗಾರಿಕಾ ಹಾಗೂ ಶೇ. 27 ಭಾಗ ವ್ಯಾಪಾರೋದ್ಯಮಿಗಳಿಗೆ ಸಲ್ಲುತ್ತದೆ ಎಂದು ವಿವರಿಸಿದರು.
ಸ್ಮರಣೀಯ ಸಾಧನೆ: 2012-13ನೇ ಸಾಲಿಗೆ ಡಿಸೆಂಬರ್  ಮಾಹೆಯವರೆಗೆ ಲೀಡ್ ಬ್ಯಾಂಕ್ ಹೊಣೆಗಾರಿಕೆಯಡಿ 1388 ಕೋಟಿ ರು. ಸಾಲ ವಿತರಿಸುವ ಕಾರ್ಯಕ್ರಮ ಗುರಿಯಡಿ ನಿರೀಕ್ಷೆಗೂ ಮೀರಿ 1626 ಕೋಟಿ ವಿತರಿಸಿ, ಶೇ. 118 ಗುರಿಯನ್ನು ತಲುಪಲಾಗಿದ್ದು, ಇದೊಂದು ಸ್ಮರಣೀಯ ಸಾಧನೆಯಾಗಿದೆ.  ಅಲ್ಲದೆ ಕೃಷಿ ವಲಯಕ್ಕೆ ಸಾಲ ಯೋಜನೆ 753 ಕೋಟಿ ರು. ಡಿಸೆಂಬರ್ 2012 ಕ್ಕೆ ಗುರಿ ಹೊಂದಲಾಗಿದ್ದು, ಈ ಕ್ಷೇತ್ರದಲ್ಲೂ 1037 ಕೋಟಿಯನ್ನು ಮುಟ್ಟುವ ಮೂಲಕ ಶೇ.138 ಗುರಿ ತಲುಪಲಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ 44 ಸಾವಿರಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿದ್ದು, ಈ ಪೈಕಿ 40 ಸಾವಿರಕ್ಕೂ ಹೆಚ್ಚಿನ ಸ್ವಸಹಾಯ ಗುಂಪುಗಳಿಗೆ 556 ಕೋಟಿ ರು. ಸಾಲ ಸೌಲಭ್ಯ ವಿತರಿಸಲಾಗಿದ್ದು, ಶೇ. 100 ರಷ್ಟು ಸಕಾಲದಲ್ಲಿ ಸಾಲ ಮರುಪಾವತಿಯಾಗಿದ್ದು, ಇದೊಂದು ತೃಪ್ತಿಕರ ಬೆಳವಣಿಗೆ ಎಂದರು.
ಕಳೆದುಕೊಂಡಿದ್ದೇ ಹೆಚ್ಚು: ಜಿ.ಪಂ. ಸಿ.ಇ.ಓ. ಗೋವಿಂದರಾಜು ಮಾತನಾಡಿ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ತೀವ್ರ ಬರ ಹಾಗೂ ಅಕಾಲಿಕ ಮಳೆಯಿಂದ ರೈತರು ಅಪಾರ ಪ್ರಮಾಣದಲ್ಲಿ ಬೆಳೆನಷ್ಟ  ಅನುಭವಿಸಿದ್ದು, ಕೃಷಿ ಕ್ಷೇತ್ರದಲ್ಲಿ ಜಿಲ್ಲೆಯ ರೈತರು ಲಾಭ ಪಡೆದಕ್ಕಿಂತ ಕಳೆದುಕೊಂಡದ್ದೇ  ಹೆಚ್ಚು.
ಜಿಲ್ಲೆಯ ರೈತರಿಗೆ ತುಸು ನೆಮ್ಮದಿ ತಂದಿರುವ ಕ್ಷೇತ್ರವೆಂದರೆ ಹೈನುಗಾರಿಕೆ.  ಹೈನುಗಾರಿಕೆ ಕ್ಷೇತ್ರದಲ್ಲಿ ಸ್ತ್ರೀಶಕ್ತಿ ಸಂಘಗಳೂ ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದು, ಈ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸುವ ಮೂಲಕ ಸಾಲ ಸೌಲಭ್ಯವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಅಂತರ್ಜಲವೃದ್ಧಿ ಮಾಡಬಹುದಾಗಿದೆ ಮತ್ತು ಕೃಷಿ ಕ್ಷೇತ್ರಕ್ಕೆ ನೀರಿನ ಲಭ್ಯತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಜಲಾನಯನ ಯೋಜನೆಗಳಿಗೆ ಹೆಚ್ಚಿನ ಸಾಲಸೌಲಭ್ಯ ಕಲ್ಪಿಸುವಂತೆ ಅವರು ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸ್ತ್ರೀಶಕ್ತಿ ಸಂಘಗಳು ಬ್ಯಾಂಕ್ಗಳಿಂದ ವಿವಿಧ ರೀತಿಯ ಸಾಲಸೌಲಭ್ಯಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವಂತೆ  ಗೋವಿಂದರಾಜು ಮನವಿ ಮಾಡಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಜಯರಾಮಯ್ಯ, ಎಸ್.ಬಿ.ಎಂ. ಉಪಪ್ರಧಾನ ವ್ಯವಸ್ಥಾಪಕ  ವಿ.ಎಸ್. ಪ್ರದೀಪ್ ಕುಮಾರ್, ನಬಾರ್ಡ್ ಡಿ.ಜಿ.ಎಂ. ಜಿ.ಎಸ್. ವೀರಭದ್ರನ್, ಆರ್.ಬಿ.ಐ. ಎ.ಜಿ.ಎಂ. ಆರ್. ಬಾಲಕೃಷ್ಣನ್, ಎಸ್.ಬಿ.ಎಂ. ಡಿ.ಜಿ.ಎಂ.(ಕೃಷಿ) ರಥನ್ ಮತ್ತು ಸದಾಶಿವನಗರ ಶಾಖೆಯ ಎಸ್.ಬಿ.ಎಂ. ವ್ಯವಸ್ಥಾಪಕ ಜಗದೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement