ಪ್ರಾಮಾಣಿಕ ದುಡಿದ ನಮಗೆ ಶಾಸಕರು ಕೊಟ್ಟಿದ್ದು ಜೈಲುವಾಸ
ಕ.ಪ್ರ. ವಾರ್ತೆ ತುರುವೇಕೆರೆ ಮಾ.28
ತಾವು ಹಾಗೂ ತಮ್ಮ ಬೆಂಬಲಿಗರು ಕೃಷ್ಣಪ್ಪ ಬೆಂಬಲಕ್ಕೆ ನಿಂತು ಹೋರಾಡಿ ಎರಡು ಬಾರಿಯೂ ಶಾಸಕರನ್ನಾಗಿ ಮಾಡಿದ್ದಕ್ಕೆ ಶಾಸಕರು ಕೊಟ್ಟ ಬಳುವಳಿ ಜೈಲು ವಾಸ. ಹಗಲಿರುಳೂ ಪಕ್ಷಕ್ಕಾಗಿ ಹಾಗೂ ಶಾಸಕರ ರಾಜಕೀಯ ಶ್ರೇಯಸ್ಸಿಗೆ ದುಡಿದ ಕಾರ್ಯಕರ್ತರಿಗೆ ಶಾಸಕರು ಕೊಟ್ಟ ಬಿರುದು ದರೋಡೆಕೋರರು. ಇವತ್ತು ಅಧಿಕಾರ ಇದೆ ಅನ್ನೋ ಕಾರಣಕ್ಕೆ ಅವರಿಗಾಗಿ ದುಡಿದವರು ಕಾಣಲೇ ಇಲ್ಲ...
ಹೀಗೆಂದು ಶಾಸಕರ ಬಗ್ಗೆ ಸಿಡಿ ಮಾತುಗಳನ್ನಾಡಿದವರು ಕಳೆದ 20 ದಿನಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿರುವ ಜೆಡಿಎಸ್ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಸೋಮಣ್ಣ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಾವು ಟಿಕೆಟ್ನ ಪ್ರಬಲ ಆಕಾಂಕ್ಷಿ ಎಂಬುದು ಗೊತ್ತಿದ್ದೇ ಈ ರೀತಿ ತಮ್ಮ ಹಾಗೂ ತಮ್ಮ ಬೆಂಬಲಿಗರ ಮೇಲೆ ದೂರು ನೀಡಿದರು. ಜೈಲಿನಿಂದ ಹೊರ ಬರುವುದು ಕಷ್ಟ ಎಂಬ ಭಾವನೆ ಅವರಲ್ಲಿತ್ತು. ಆದರೆ ತಮಗೆ ಹಾಗೂ ತಮ್ಮ ಬೆಂಬಲಿಗರಿಗೆ ದೇವರ ದಯದಿಂದ ಜಾಮೀನು ಬೇಗನೆ ದೊರೆಯಿತು. ದುರಂತವೆಂದರೆ ಇವರ ನಾಯಕತ್ವದಡಿ ನಡೆದ ಕೆಲ ಹೋರಾಟಗಳಲ್ಲಿಯೂ ತಾವು ಪೊಲೀಸ್ ಪ್ರಕರಣಗಳಲ್ಲಿ ದಾಖಲಾಗಿದ್ದೆ. ಅದರ ಪರಿಣಾಮದಿಂದಲೂ ಅವರಿಗಾಗೇ ಪುನಃ ಜೈಲು ಸೇರುವಂತಾಯಿತು ಎಂದು ವಿಷಾದಸಿದರು. ತಾಲೂಕಿನಲ್ಲಿ ಶಾಸಕರ ದುರಾಡಳಿತದಿಂದಾಗಿ ಜನಸಾಮಾನ್ಯರ ನೋವು ನಲಿವು ಕೇಳುವವರೇ ಇಲ್ಲವಾಗಿದೆ. ಕಳಪೆ ಕಾಮಗಾರಿಗಳಿಂದಾಗಿ ಅಭಿವೃಧ್ಧಿ ಕಾರ್ಯ ಕುಂಠಿತಗೊಂಡಿದೆ. ಅವರ ಹಿಂಬಾಲಕ ಗುತ್ತಿಗೆದಾರರು ಮಾಡಿರುವ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ. ಆ ಕಾಮಗಾರಿಗಳ ಬಗ್ಗೆ ಶಾಸಕರು ಚಕಾರವೇ ಎತ್ತದಿರುವುದು ಅನುಮಾನಗಳಿಗೆ ಆಸ್ಪದವಾಗಿದೆ. ಇಂತಹ ಕಾಮಗಾರಿಗಳಿಂದ ಜನರು ಬೇಸತ್ತಿದ್ದಾರೆ. ಇದರ ಬಗ್ಗೆ ಪ್ರಸ್ತಾಪಿಸಿದರೆ ನಾವು ವಿರೋಧಿಗಳಾಗುತ್ತೇವೆ. ಮುಂದಿನ ದಿನಗಳಲ್ಲಿ ಶಾಸಕರು ತಮ್ಮ ವರ್ತನೆಯನ್ನು ತಿದ್ದುಕೊಂಡು ನಡೆಯದಿದ್ದಲ್ಲಿ ಪಕ್ಷಕ್ಕೆ ತುಂಬಾ ಹಾನಿಯಾಗಲಿದೆ ಎಂದು ಬಿ.ಕೆ. ಸೋಮಣ್ಣ ಎಚ್ಚರಿಕೆ ನೀಡಿದರು.
ತಾವು ಟಿಕೆಟ್ ಆಕಾಂಕ್ಷಿ: ತಾವು ಮೊದಲಿನಿಂದಲೂ ಟಿಕೆಟ್ ಆಕಾಂಕ್ಷಿ. ದೇವೇಗೌಡ ಹಾಗೂ ಕುಮಾರಸ್ವಾಮಿಯವರಿಗೆ ತಮ್ಮ ಬಗ್ಗೆ ಉತ್ತಮ ಭಾವನೆ ಇದೆ. ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಖಂಡಿತವಾಗಿಯೂ ತಾವು ಸ್ಪರ್ಧೆ ಮಾಡುವುದಾಗಿ ಸೋಮಣ್ಣ ಹೇಳಿದರು. ಆಕಸ್ಮಿಕವಾಗಿ ಹೈಕಮಾಂಡ್ ಹಾಲಿ ಶಾಸಕರಿಗೇ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ದುಡಿಯುವುದಾಗಿ ಹೇಳಿದರು.
ಬೇಡ ಜೈಲು ಹಿಂಸೆ: ನಮ್ಮ ಪರಮ ಶತ್ರಗಳಿಗೂ ಬೇಡ ಈ ಜೈಲು ವಾಸ. ಅಲ್ಲಿನ ಹಿಂಸೆ ಅಸಹನೀಯ. ಒಂದೆಡೆ ಸೊಳ್ಳೆಕಾಟ, ತಿಗಣೆ, ಕೂರೆಗಳದ್ದೇ ಕಾರು ಬಾರು. ನೆಮ್ಮದಿಯಿಂದ ಮಲಗಲೂ ಸಹ ಸಾಧ್ಯವಿಲ್ಲ. ತಮ್ಮನ್ನು ಇಂತಹ ಸ್ಥಿತಿಗೆ ತಳ್ಳಿದ ಶಾಸಕರಿಗೆ ದೇವರು ಒಳ್ಳೆಯ ಬುದ್ಧಿಕೊಡಲಿ ಎಂದು ವ್ಯಂಗ್ಯವಾಡಿದರು.
ನಿಯೋಗ: ಬಿ.ಕೆ.ಸೋಮಣ್ಣನವರಿಗೇ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಲು ಸುಮಾರು 2 ಸಾವಿರ ಮಂದಿ ಶುಕ್ರವಾರ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ನಿಯೋಗ ತೆರಳಲಿದೆ ಎಂದು ತಾಲೂಕು ಪಂಚಾಯ್ತಿಯ ಮಾಜಿ ಉಪಾಧ್ಯಕ್ಷ ಆನಂದಕುಮಾರ್ ಹಾಗೂ ಕೋಳಾಲ ಮಂಜೇಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೈಲುವಾಸ ಅನುಭವಿಸಿದ್ದ ಕುಬೇರ, ಶಂಕರ್ ಉಪಸ್ಥಿತರಿದ್ದರು.