ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಣಕ್ಕಾಗಿ ಕಿರುಕುಳ: ಪ್ರಿಯತಮೆ ಆತ್ಮಹತ್ಯೆ

ಹಣಕ್ಕಾಗಿ ಪದೇ ಪದೇ ಪ್ರಿಯತಮ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಪ್ರಿಯತಮೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

Srinivasa Murthy VN
Updated On : 29 Mar 2013, 11:47 am

ಕ.ಪ್ರ. ವಾರ್ತೆ ತುಮಕೂರು ಮಾ.28-
ಹಣಕ್ಕಾಗಿ ಪದೇ ಪದೇ ಪ್ರಿಯತಮ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಪ್ರಿಯತಮೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಸ್ವೀಟಿ ಮರ್ಲಿನ್(26) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆಗೆ ಭಾರ್ಗವ ಎಂಬ ಖಾಸಗಿ ವಾಹಿನಿಯೊಂದರ ಕ್ಯಾಮರಾಮನ್ ಪ್ರಿಯತಮನಾಗಿದ್ದು ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದ. ದ್ವಿತೀಯ ಪಿಯುಸಿ ಓದಿರುವ ಈಕೆ ತುಮಕೂರಿನ ಕೆ.ಆರ್. ಬಡಾವಣೆಯಲ್ಲಿ ಕಂಪ್ಯೂಟರ್ ಸೆಂಟರ್ ಇಟ್ಟುಕೊಂಡಿದ್ದಳು. ಪ್ರಿಯತಮ ಭಾರ್ಗವ ಈಕೆಯನ್ನು ಸದಾ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಆಕೆಯ ತಾಯಿ ಜನ್ನಿ ಫ್ರಾಂಕ್‌ಲೀನಾ ದೂರು ನೀಡಿದ್ದಾರೆ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಮೃತಳ ಮಾರ್ಕ್ಸ್ ಕಾರ್ಡ್ ಅನ್ನು ಅಡವಿಟ್ಟು ಸಾಲ ತೆಗೆದುಕೊಂಡು ಅದನ್ನು ಕೂಡ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯಲ್ಲಿದ್ದ 13 ಲಕ್ಷ ರು. ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಸಹ ಭಾರ್ಗವ ಮಾರಿಸಿ ಆ ಹಣವನ್ನು ಸಹ ಆತನೇ ಬಳಸಿಕೊಂಡಿದ್ದಾನೆ ಎಂದು ಆಕೆಯ ತಾಯಿ ದೂರಿದ್ದಾರೆ.  ಇಷ್ಟೆ ಅಲ್ಲದೇ ಮೃತ ಸ್ವೀಟಿ ಮರ್ಲಿನ್‌ಳಿಂದ 20 ಲಕ್ಷ ಸಾಲ ಮಾಡಿಸಿ ಆ ಹಣದಲ್ಲಿ ಐಷರಾಮಿ ಕಾರನ್ನು ಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕೆಯ ತಾಯಿ ಜನ್ನಿ ತಿಳಿಸಿದ್ದಾರೆ.
ಕೊಲೆ ಬೆದರಿಕೆ: ಭಾರ್ಗವನ ಐಷರಾಮಿ ಜೀವನದ ಬಗ್ಗೆ ಮೃತ ಪ್ರಿಯತಮೆ ಸ್ವೀಟಿ ಮರ್ಲಿನ್ ಆಕ್ಷೇಪ ವ್ಯಕ್ತಪಡಿಸಿದಾಗ ಆತ ಕೊಲೆ ಬೆದರಿಕೆ ಹಾಕಿ ನಂತರ ಮರ್ಲಿನ್‌ಗೆ ಚೆನ್ನಾಗಿ ಹೊಡೆದಿದ್ದ  ಎಂದು ದೂರಿದ್ದಾರೆ.
ಅಲ್ಲದೇ ನಾವು ನಮ್ಮ ಕುಟುಂಬ ಹಾಗೂ ನಮ್ಮ ಮನೆಯ ಕೆಳಗಡೆ ಇರುವ ಗಂಗಾಧರಯ್ಯ ಎಂಬುವರು ನ್ಯಾಯ ಪಂಚಾಯಿತಿ ಮಾಡುತ್ತಿರುವಾಗ ನಮಗೆ ಪ್ರಾಣ ಬೆದರಿಕೆ ಹಾಕಿದ. ಇಷ್ಟೆ ಅಲ್ಲದೇ ಮೃತಳಿಗೆ ನೀವು ಮನೆ ಪತ್ರ ತೆಗೆದುಕೊಂಡು ಅದನ್ನು ಅಡವಿಟ್ಟು ಹಣ ಪಡೆಯೋಣವೆಂದು ಪೀಡಿಸುತ್ತಿದ್ದ. ಮನೆಯ ಪತ್ರ ಕೊಡದಿದ್ದಾಗ ಸಾಯಿ ಸಾಯಿ  ಎಂದು  ಪ್ರಚೋದಿಸುತ್ತಿದ್ದ. ಇವೆಲ್ಲದ್ದರಿಂದ ರೋಸಿ ಹೋದ ತಮ್ಮ ಮಗಳು ಸ್ವೀಟಿ ಮರ್ಲಿನ್ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನನ್ನ ಮಗಳ ಸಾವಿಗೆ ಕ್ಯಾಮರಮ್ಯಾನ್ ಭಾರ್ಗವನೇ ಕಾರಣ. ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬ್ರೌಸಿಂಗ್ ಸೆಂಟರ್ ಸೀಜ್: ಈ ಆತ್ಮಹತ್ಯೆ ಪ್ರಕರಣ ವಿಚಿತ್ರ ತಿರುವು ಪಡೆದ ಹಿನ್ನೆಲೆಯಲ್ಲಿ ಜಾಗೃತರಾದ ತುಮಕೂರು ಪೊಲೀಸರು ಕೆ.ಆರ್. ಬಡಾವಣೆಯಲ್ಲಿರುವ ಬ್ರೌಸಿಂಗ್ ಸೆಂಟರ್ ಅನ್ನು ಸೀಜ್ ಮಾಡಿ ತನಿಖೆ ಕೈಗೊಂಡಿದ್ದಾರೆ.

ಯುವತಿ ಅಂತ್ಯಕ್ರಿಯೆ
ತುಮಕೂರು:
ಆತ್ಮಹತ್ಯೆಗೆ ಶರಣಾದ ಸ್ವೀಟಿ ಮರ್ಲಿನ್ ಅವರ ಅಂತ್ಯಕ್ರಿಯೆ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ನೆರವೇರಿತು. ತಾಯಿ ಜನ್ನಿ ಫ್ರಾಂಕ್‌ಲೀನಾ, ಮೃತಳ ಸಹೋದರ ಹಾಗೂ ಕುಟುಂಬ ವರ್ಗ ಮತ್ತು ಕ್ರೈಸ್ಥ ಸಮುದಾಯದವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.  ಇದಕ್ಕೂ ಮುನ್ನ ಸದಾಶಿವನಗರದ ಮನೆಯಿಂದ ತುಮಕೂರಿನ ಹೊರಪೇಟೆಯಲ್ಲಿ ಸಂತ ಲೂರ್ದು ಮಾತೆ ದೇವಾಲಯಕ್ಕೆ ಪಾರ್ಥಿವ ಶರೀರ ತಂದು ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.

ಭಾರ್ಗವ ಪರಾರಿ
ಏತನ್ಮಧ್ಯೆ ಆರೋಪಿ ಭಾರ್ಗವ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಕನ್ನಡಪ್ರಭದೊಂದಿಗೆ ಮಾತನಾಡಿದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಸಿಪಿಐ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement