ಜೆಡಿಎಸ್ ಅಭ್ಯರ್ಥಿ ನಾನೇ, ಗೆಲವೂ ನನ್ನದೇ: ಎಂ.ಟಿ.ಕೃಷ್ಣಪ್ಪ
ಕ.ಪ್ರ.ವಾರ್ತೆ ತುರುವೇಕೆರೆ ಮಾ 31
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನ ಅಧಿಕೃತ ಅಭ್ಯರ್ಥಿ ನಾನೇ. ಹಾಲಿ ಶಾಸಕನಾಗಿರುವುದರಿಂದ ನನಗಲ್ಲದೇ ಬೇರ್ಯಾರಿಗೆ ಟಿಕೇಟ್ ನೀಡಲು ಸಾಧ್ಯ. ತಾವು ತಾಲೂಕಿನ ಸರ್ವಾಂಗೀಣ ಅಭಿವೃಧ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಪಕ್ಷ ಸಂಘಟನೆಯಲ್ಲೂ ಸಹ ಮಂಚೂಣಿಯಲ್ಲಿದ್ದೇನೆ. ಮುಂಬರುವ ಚುನಾವಣೆಯ್ಲಲಿ ಜೆಡಿಎಸ್ ಸ್ಪಷ್ಟ ಗೆಲವು ಪಡೆಯುವುದರೊಂದಿಗೆ ತಾವು ಶಾಸಕರಾಗಿ ಪುನರಾಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ತಾಲೂಕಿನಲ್ಲಿ ಕೆಲವು ಮಂದಿ ತಮ್ಮ ವಿರುದ್ಧ ರಾಜ್ಯ ಮುಖಂಡರನ್ನು ಭೇಟಿ ಮಾಡಿ ತಮಗೆ ಟಿಕೆಟ್ ನೀಡಬಾರದೆಂದು ಒತ್ತಾಯಿಸಲು ಹೋಗಿರುವುದು ದುರದೃಷ್ಟಕರ. ತಮಗೆ ಟಿಕೆಟ್ ಕೊಡಬೇಡಿ ಎನ್ನಲು ಅವರಿಗೇನು ಹಕ್ಕಿದೆ. ಬೇಕಾದರೆ ಅವರಿಗೆ ಟಿಕೇಟ್ ಕೇಳಿಕೊಳ್ಳಲಿ. ಕೇವಲ ಗೊಂದಲ ಸೃಷ್ಟಿ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಅವರಿಂದ ಪಕ್ಷಕ್ಕೆ ಹಾನಿಯೇ ವಿನಃ ಯಾವುದೇ ಪ್ರಯೋಜನವಿಲ್ಲ. ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ತಾಲೂಕಿನ ಹಲವಾರು ಸಭೆಗಳಲ್ಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರೇ ಮುಂದಿನ ಅಭ್ಯರ್ಥಿ ಎಂದು ಸಾರಿ ಸಾರಿ ಹೇಳಿದ್ದಾರೆ. ಆದರೂ ಸಹ ಸುಮ್ಮನಾಗದೇ ತಾಲೂಕಿನ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಕೃಷ್ಣಪ್ಪ ಆರೋಪಿಸಿದರು.
ಎಷ್ಟು ಸರಿ: ಟಿಕೆಟ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಪ್ರತಿಯೊಬ್ಬರ ಹಕ್ಕು ಸಹ. ಎಲ್ಲರಿಗೂ ಅವಕಾಶವಿದೆ. ಆದರೆ ತಮ್ಮದು ಯಾವುದೇ ತಪ್ಪಿಲ್ಲದಿದ್ದರೂ ಪಕ್ಷದ ಕೆಲವೇ ಮಂದಿಯನ್ನು ಮುಂದಿಟ್ಟುಕೊಂಡು ಕೆಜೆಪಿ ಹಾಗೂ ಕಾಂಗ್ರೆಸ್ನ ಕಾರ್ಯಕರ್ತರನ್ನು ಬಳಸಿಕೊಂಡು ರಾಜ್ಯಾಧ್ಯಕ್ಷರ ಮುಂದೆ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಜಿಲ್ಲೆಯ ಕೆಲವು ಜೆಡಿಎಸ್ ಮುಖಂಡರುಗಳೇ ತಮ್ಮ ವಿರೋಧಿ ಗುಂಪಿನವರಿಗೆ ಉತ್ತೇಜನ ನೀಡುತ್ತಿದ್ದಾರೆ. ಅವರೇ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಕೆಜೆಪಿಯ ಅಭ್ಯರ್ಥಿ ಕ್ಷೇತ್ರದ ಮತದಾರರಿಗೆ ಇಲ್ಲದ ಆಮಿಷ ಒಡ್ಡುತ್ತಿದ್ದಾರೆ. ಆದರೆ ತಾವು ಕ್ಷೇತ್ರದಾದ್ಯಂತ ಮಾಡಿರುವ ಸೇವೆಯನ್ನು ಗಮನಿಸಿರುವ ಮತದಾರರು ತಮ್ಮನ್ನು ಬೆಂಬಲಿಸುತ್ತಾರೆ ಎಂದರು.
ಕಾನೂನು ಶಿಕ್ಷೆ ವಿಧಿಸಿದೆ: ತಮ್ಮ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಬಿ.ಕೆ.ಸೋಮಣ್ಣನವರು ತಮ್ಮ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ತಮ್ಮ ಮೇಲೆ ಹಲ್ಲೆ ಮಾಡಿದ್ದರಿಂದಲೇ ತಾವು ಪೊಲೀಸರಿಗೆ ದೂರು ನೀಡಿದ್ದು, ಕಾನೂನಿನ ಪ್ರಕಾರ ನ್ಯಾಯಾಲಯ ಯಾವ ಶಿಕ್ಷೆ ವಿಧಿಸಬೇಕೋ ಅದನ್ನು ವಿಧಿಸಿದೆ. ಅದರಲ್ಲಿ ತಮ್ಮದೇನೂ ಪಾತ್ರವಿಲ್ಲ. ಕಾನೂನು ಎಲ್ಲರಿಗೂ ಒಂದೆ. ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು.
ಕಾಡಾನೆಗಳ ಪ್ರತ್ಯಕ್ಷ: ಭೀತಿಯಲ್ಲಿ ಗ್ರಾಮಸ್ಥರು
ಕ.ಪ್ರ.ವಾರ್ತೆ ಅರಸೀಕೆರೆ ಮಾ 31
ಬನ್ನೇರುಘಟ್ಟ ಕಾಡಿನಿಂದ ಆಹಾರ ಹುಡುಕುತ್ತಾ ನಾಡಿಗೆ ಬಂದ 3 ಕಾಡಾನೆಗಳು ತಾಲೂಕಿನ ಕೋಡಿಹಳ್ಳಿ, ಬೆಳಗುಂಬ, ಜ್ಯೋತಿಮಲ್ಲಾಪುರ ಹಾಗೂ ತಳಲೂರು ಸುತ್ತಮುತ್ತ ಕಾಣಿಸಿಕೊಂಡು ಈ ಭಾಗದ ಜನರನ್ನು ಭಯಭೀತರಾಗುವಂತೆ ಮಾಡಿದೆ.
ಬನ್ನೇರುಘಟ್ಟ ಕಾಡಿನಿಂದ ತುಮಕೂರು ಮಾರ್ಗವಾಗಿ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಮಾರ್ಗವಾಗಿ ಬಂದಿರುವ ಈ ಆನೆಗಳು ಶನಿವಾರ ಸಂಜೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದ ಲಚ್ಚಾನಾಯ್ಕ ಎಂಬಾತನನ್ನು ಕೊಂದಿದ್ದು ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿವೆ. ಈ ಪುಂಡಾನೆಗಳು ನಂತರ ಅರಸೀಕೆರೆ ತಾಲೂಕಿನ ಗ್ರಾಮಾಂತರ ಪ್ರದೇಶದ ಸುತ್ತಮುತ್ತ ಲಗ್ಗೆ ಇಟ್ಟಿವೆ.
ಭಾನುವಾರ ಮುಂಜಾನೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡಾನೆಗಳನ್ನು ಕಂಡ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆಯವರು ಅಪಾಯದ ಮುನ್ಸೂಚನೆ ಅರಿತು ಜನರನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಂತರ ತಳಲೂರು ಮಾರ್ಗವಾಗಿ ಕೋಡಿಹಳ್ಳಿಗೆ ಆಗಮಿಸಿದ ಆನೆಗಳ ಹಿಂಡು ಮಧ್ಯ ಮಧ್ಯ ಸಿಕ್ಕ ಬಾಳೆ ತೋಟ, ಮುಳ್ಳು ತಂತಿ ಕಂಬಗಳನ್ನು ಮುರಿದು ಜ್ಯೋತಿಮಲ್ಲಾಪುರ ಗ್ರಾಮಕ್ಕೆ ಲಗ್ಗೆ ಇಟ್ಟು ನೆರಳಿನ ಆಶ್ರಯದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಕುತೂಹಲಗೊಂಡ ಗ್ರಾಮಸ್ಥರು ಆನೆಗಳನ್ನು ಅಲ್ಲಿಂದ ಓಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಒಂಟಿಸಲಗದ ದಾಳಿಯಿಂದ ತಾಲೂಕಿನಲ್ಲಿ ಮೂರು ಮಂದಿ ಮೃತ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಿಪಟೂರು ವಲಯ ಅರಣ್ಯಾಧಿಕಾರಿ ಸತ್ಯನಾರಾಯಣ್ ಇದು ಆನೆ ಕಾರಿಡಾರ್ ಆಗಿದ್ದು ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾದಾಗ ವರ್ಷದಲ್ಲಿ ಒಮ್ಮೊಮ್ಮೆ ಈ ಆನೆಗಳು ಈ ದಾರಿಯಲ್ಲಿ ಆಗಮಿಸುತ್ತಿವೆ. ಮನುಷ್ಯನ ಅತಿಯಾದ ದುರಾಸೆ ಹಾಗೂ ಅರಣ್ಯ ನಾಶವೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು. ಸಂಭವನೀಯ ಅಪಾಯ ತಡೆಗಟ್ಟುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೆರವು ಪಡೆಯಲಾಗುತ್ತಿದೆ. ಗ್ರಾಮಸ್ಥರು ಸಂಯಮದಿಂದ ವರ್ತಿಸಬೇಕು. ಆನೆಗಳು ಸಂಜೆಯ ವೇಳೆಗೆ ಇಲ್ಲಿಂದ ಹೊರಡುವ ನಿರೀಕ್ಷೆ ಇದೆ.
ಇದು ಆನೆ ಕಾರಿಡಾರ್ ಆಗಿದ್ದು ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾದಾಗ ವರ್ಷದಲ್ಲಿ ಒಮ್ಮೊಮ್ಮೆ ಈ ಆನೆಗಳು ಈ ದಾರಿಯಲ್ಲಿ ಆಗಮಿಸುತ್ತಿವೆ.
-ಸತ್ಯನಾರಾಯಣ್, ತಿಪಟೂರು ವಲಯ ಅರಣ್ಯಾಧಿಕಾರಿ