ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿಯಲ್ಲೂ ಏಳೆಂಟು ಮಂದಿ ಸ್ಪರ್ಧಾಕಾಂಕ್ಷಿಗಳು

Srinivasa Murthy VN
Updated On : 1 Apr 2013, 12:03 pm

ತುರುವೇಕೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಿದರೂ ತಾಲೂಕಿನಲ್ಲಿ ಬಿಜೆಪಿ ಸ್ಥಿತಿ ಮಾತ್ರ ಚೇತರಿಸಿಕೊಂಡಿರಲಿಲ್ಲ. ಕಾರಣ ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸುಮಾರು 53 ಸಾವಿರದಷ್ಟು ಮತ ಪಡೆದಿದ್ದ ಹಾಲಿ ಕೆಜಿಪಿಯ ರಾಜ್ಯ  ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ್ ಕೇವಲ 3 ಸಾವಿರ ಮತಗಳ ಅಂತರದಿಂದ ಮಾತ್ರವೇ ಎಂ.ಟಿ.ಕೃಷ್ಣಪ್ಪನವರಿಂದ ಪರಾಜಿತರಾಗಿದ್ದರು.
ಆದರೆ ಸೋಲುಂಡಿದ್ದ ಎಂ.ಡಿ. ಲಕ್ಷ್ಮೀನಾರಾಯಣ್ ರಾಜ್ಯ ರಾಜಕಾರಣದತ್ತ ಹಾಗೂ ಬಿ.ಎಸ್.ಯಡಿಯೂರಪ್ಪನವರ ಒಡನಾಟ ಹೊಂದಿ ತಾಲೂಕಿನ ಪಕ್ಷ ಸಂಘಟನೆ ಮಾಡುವ ಯತ್ನ ಮಾಡಲೇ ಇಲ್ಲ. ಪರಿಣಾಮ ಬಿಜೆಪಿ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸುಗಳಿಸಲು ಸಾಧ್ಯವಾಗಲೇ ಇಲ್ಲ. ಮೊದಲೇ ತಾವು ಬೇರೊಂದು ಪಕ್ಷ ಕಟ್ಟುತ್ತೇವೆ ಎಂಬ ದೂರದೃಷ್ಟಿ ಹೊಂದಿದವರಂತೆ ಆಗಲೇ ಎಂ.ಡಿ.ಎಲ್ ಪ್ರತ್ಯೇಕ ಕಚೇರಿಯನ್ನು ಪ್ರಾರಂಭಿಸಿದ್ದರು. ತದ ನಂತರದ ಬೆಳೆವಣಿಗೆಯಲ್ಲಿ ತಾಲೂಕಿನಲ್ಲಿ ಅತಿದೊಡ್ಡ ಸ್ಥಾನದಲ್ಲಿರುವ ವೀರಶೈವರು ಸಹಜವಾಗಿ ಬಿಜೆಪಿ  ಬೆನ್ನೆಲುಬಾಗಿದ್ದರು. ಕೆಜೆಪಿ ಜನ್ಮತಳೆದ ನಂತರ ಬಿ.ಎಸ್.ವೈ ಅವರನ್ನು ಬೆಂಬಲಿಸುವ ಸರದಿ ವೀರಶೈವರದ್ದಾಯಿತು. ಎಂ.ಡಿ.ಎಲ್‌ಗೆ ವಿಧಿ ಇಲ್ಲದೇ  ಕೆಜೆಪಿಯನ್ನು ಕಟ್ಟುವ ಅನಿವಾಯಂತೆ ಉಂಟಾಯಿತು.
ಹೋರಾಟ: ಇಂತಹ ಗಂಭೀರ ಸ್ಥಿತಿಯಲ್ಲೂ ಸಹ ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಸ್. ಬೋರೇಗೌಡ ಪಕ್ಷವನ್ನು ಶತಾಯಗತಾಯ ಅಸ್ಥಿತ್ವದಲ್ಲಿರಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಸದ್ಯ ಟಿಕೆಟ್ ಆಕಾಂಕ್ಷಿಗಳಲ್ಲಿ ಟಿ.ಎಸ್.ಬೋರೇಗೌಡರೂ ಸಹ ಪ್ರಮುಖರಾಗಿದ್ದಾರೆ. ಸಂಘ ಪರಿವಾರದಲ್ಲೂ ಬೋರೇಗೌಡರು ತಮ್ಮದೇ ಆದ ವಿಶ್ವಾಸವನ್ನು ಹೊಂದಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರ ಹೆಸರು ಪ್ರಮುಖವಾಗಿ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಎರಡನೆಯದಾಗಿ ಇತ್ತೀಚೆಗೆ ಪಕ್ಷಕ್ಕೆ ಪಾದಾರ್ಪಣೆ ಮಾಡಿರುವ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಳಿಯ ಡಾ.ಚೌದ್ರಿ ನಾಗೇಶ್  ಸ್ಪರ್ಧೆ ಮಾಡಲು ಬಯಸಿದ್ದಾರೆ. ತಾಲೂಕು ವೈದ್ಯಾಧಿಕಾರಿಯಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಇದೇ ಪ್ರಥಮ ಬಾರಿ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ತಾಲೂಕಿನಲ್ಲಿ ಹೆಸರು ಇರುವುದರಿಂದ ಇವರ ಹೆಸರೂ ಸಹ ಹೈಕಮಾಂಡ್‌ನಲ್ಲಿ ಕೇಳಿಬರುತ್ತಿದೆ.
ರಾಜಿನಾಮೆ ನೀಡಲು ಸೈ: ಉಳಿದಂತೆ ಬಹುಪಾಲು ಲಿಂಗಾಯತ ಸಮುದಾಯದವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ವೀರಶೈವ ಸಮುದಾಯದ ಹಲವಾರು ಸಭೆ ಸಮಾರಂಭಗಳಲ್ಲಿ ಮಂಚೂಣಿಯಾಗಿ ಗುರುತಿಸಿಕೊಳ್ಳುವ ಡ್ರೈವಿಂಗ್ ಶಾಲೆ ನಡೆಸುತ್ತಿರುವ ಬಸವರಾಜು, ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಲ್ಲಿಂದಲೇ ಸ್ಪರ್ಧೆ ಮಾಡಿಸಲು ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ರಾಜಿನಾಮೆ ನೀಡಲು ಸೈ ಎಂದು ಅಖಾಡಕ್ಕೆ ಧುಮುಕಲು ಸಿದ್ಧರಾಗಿರುವ ಪರಿಸರ ಖಾತೆ ಸಚಿವ ಶಿವಣ್ಣನವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮಡಿಹಳ್ಳಿಯ ಪಂಚಾಕ್ಷರಿ, ಬಹಳ ಕಾಲದಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಪ್ರತಿಷ್ಠೆಯ ಕಣವಾಗಿದ್ದ ಮಾದಿಹಳ್ಳಿಯ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಹಲವಾರು ಹೋರಾಟಗಳಲ್ಲಿ ಮಂಚೂಣಿಯಲ್ಲಿರುವ ಅರಳೀಕೆರೆ ರವಿಕುಮಾರ್, ಹಿರಿಯ ರಾಜಕೀಯ ಮುತ್ಸದ್ದಿ ತಳವಾರನಹಳ್ಳಿ ಶಿವಣ್ಣ ನವರ ಪುತ್ರ ಮಂಡಿ ವ್ಯಾಪಾರಿ ಜಯಪ್ರಕಾಶ್ ವೀರಶೈವ ಸಮುದಾಯದವರ ಕೋಟಾದಲ್ಲಿ ಆಕಾಂಕ್ಷಿಗಳಾಗಿದ್ದಾರೆ.
ಎಂ.ಆರ್.ರಾಜಶೇಖರ್ ತೀವ್ರ ಲಾಭಿ: ಇನ್ನುಳಿದಂತೆ ಹಿಂದುಳಿದ ಜನಾಂಗಕ್ಕೆ ಅವಕಾಶ ನೀಡಿ ಎಂದು ಕೆಜೆಪಿಯಿಂದ ಬಿಜೆಪಿಗೆ ಬಂದಿರುವ ರಾಜ್ಯ ಗಾಣಿಗ ಸಮುದಾಯದ ಮಾಜಿ ಅಧ್ಯಕ್ಷ ಎಂ.ಆರ್.ರಾಜಶೇಖ್ ( ಹೆಲಿಕ್ಯಾಫ್ಟರ್) ತೀವ್ರ ಲಾಭಿ ನಡೆಸುತ್ತಿದ್ದಾರೆ. ಇವರುಗಳ ಮಧ್ಯೆ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾರ್ತಮ್ಮನಹಳ್ಳಿಯ ರುಕ್ಮಿಣಮ್ಮ ಮಹಿಳೆಯರಿಗೂ ಅವಕಾಶ ನೀಡಿ, ಕಾಂಗ್ರೆಸ್‌ನಲ್ಲಿ ಮಹಿಳೆಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ತಾವು ಹಲವಾರು ಮಹಿಳಾ ಪರವಾದ ಸಂಘಟನೆ ಮಾಡಿ ಹೋರಾಟ ಮಾಡಿರುವ ಅನುಭವವಿದೆ. ಹಿಂದುಳಿದ ಜಾತಿಗೂ ಪಕ್ಷದಿಂದ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂದು ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆ.
 ಬಿಜೆಪಿಯಲ್ಲೂ ಏಳೆಂಟು ಮಂದಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿ ಹೊರಹೊಮ್ಮಿರುವುದು ನಿಜವಾಗಲೂ
ಬಿಜೆಪಿಯ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ತಾಲೂಕಿನಲ್ಲಿ ಬಿಜೆಪಿಯ  ಸಾಂಪ್ರದಾಯಿಕ ಮತಗಳು ಕನಿಷ್ಠವೆಂದರೂ ಹತ್ತು ಸಾವಿರದಷ್ಟಿದೆ. ಇನ್ನು ತಮ್ಮ ವರ್ಚಸ್ಸನ್ನು ಪಣಕ್ಕಿಟ್ಟು ಹೋರಾಟ ಮಾಡಿದರೆ ಯಶಸ್ಸು ಸಾಧ್ಯ ಎಂಬ ನಿಟ್ಟಿನಲ್ಲಿ ಈ ಏಳೆಂಟು ಮಂದಿ ನಿರೀಕ್ಷೆಯಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement