ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಸಿಲಿನ ಝಳ: ನೆಲದಲ್ಲಿ ಹುಲ್ಲಿಲ್ಲ, ಜಾನುವಾರುಗಳಿಗೆ ಸೊಪ್ಪೇ ಜೀವಾಳ

Srinivasa Murthy VN
Updated On : 1 Apr 2013, 12:03 pm

-ಎಸ್.ನಾಗಭೂಷಣ
ತುರುವೇಕೆರೆ:  ಮುನಿಸಿಕೊಂಡಿರುವ ವರುಣನಿಂದಾಗಿ ಜೀವರಾಶಿಗಳು ತಮ್ಮ ಜೀವವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ಬಂದಿದೆ. ಬಿಸಿಲಿನ ಝಳ ಮಿತಿ ಮೀರಿದೆ. ಮಳೆ ಇಲ್ಲದೆ ನೆಲದ ಮೇಲಿನ ಹಸಿರುಗಳು ಕಣ್ಮರೆಯಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರವಾಗಿದ್ದರೆ ತಿನ್ನಲು ಹುಲ್ಲೂ ಇಲ್ಲದಾಗಿದೆ.
ಜಾನುವಾರುಗಳನ್ನು ಹೊಂದಿರುವ ಮಂದಿ ಆರಕ್ಕೆ ಮೂರರಂತೆ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಾಕುವವರು ಕಡಿಮೆಯಾಗಿದ್ದಾರೆ. ಕಾರಣ ನೀರು ಹಾಗೂ ಹುಲ್ಲು ಇಲ್ಲದೇ ಪ್ರಾಣಿಗಳ ಪಾಡು ಹೇಳತೀರದಾಗಿದೆ. ರೈತರಂತೂ ತಮ್ಮ ಜೀವನೋಪಾಯಕ್ಕೆಂದು ಇಟ್ಟುಕೊಂಡಿದ್ದ ಹಸು ಎಮ್ಮೆ ಗಳನ್ನು ಸಾಕಲಾರದೇ ಮಾರಾಟ ಮಾಡುತ್ತಿದ್ದಾರೆ. ಬಹುಪಾಲು ಜಾನುವಾರುಗಳು ಕಟುಕರ ಪಾಲಾಗುತ್ತಿದೆ.
ಮಳೆಯಿಲ್ಲದೆ ನೆಲದ ಮೇಲಿನ ಹುಲ್ಲುಗಳು ಮೇಲೇಳದೇ ಚಿರುಟಿ ಹೋಗುತ್ತಿವೆ. ಪರಿಣಾಮ ಜಾನುವಾರುಗಳಿಗೆ ತಿನ್ನಲೂ ಯಾವುದೇ ಹಸಿರು ಇಲ್ಲದಾಗಿದೆ. ಇದರಿಂದ ಮುಕ್ತಿ ಕಾಣಲು ಜಾನುವಾರುಗಳನ್ನು ಸಾಕಿರುವ ಮಂದಿ ಮರಗಳ ಹಸಿರು ಸೊಪ್ಪನ್ನೇ ಮೇವಾಗಿ ಪರಿವರ್ತಿಸಿಕೊಂಡಿದ್ದಾರೆ. ಪ್ರತಿದಿನ ಮರಗಳಲ್ಲಿರುವ ರೆಂಬೆ ಕೊಂಬೆಗಳನ್ನು ಕತ್ತರಿಸಿಕೊಂಡು ಹೋಗಿ ತಮ್ಮ ಸಾಕು ಪ್ರಾಣಿಗಳಿಗೆ ಕೊಡುವ ಪರಿಪಾಠ ತಾಲೂಕಿನಲ್ಲಿ ನಡೆಯುತ್ತಿದೆ.
ಕೇವಲ ನೂರು ಅಡಿಗಳಿಗೇ ನೀರು ಕಾಣಿಸುತ್ತಿದ್ದ ಕೊಳವೆ ಬಾವಿಗಳಲ್ಲಿ ಈಗ ನೀರು ಇಲ್ಲವಾಗಿದೆ. ಸಾವಿರ ಅಡಿಗಳಷ್ಟು ಕೊರೆದರೂ ಸಹ ನೀರು ಕಾಣದಾಗಿದೆ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ಹಾಗೂ ಅಡಿಕೆ ಮರಗಳು ಬಿಳಿಚಿಕೊಂಡಿವೆ.  ತೋಟಗಳಂತೂ ಒಣಗಿ ಹೋಗಿ ರೈತರ ಹೊಟ್ಟೆ ಕಿವುಚಿದಂತಾಗುತಿದೆ. ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ಸಂಪೂರ್ಣ ಬತ್ತಿಹೋಗಿದೆ. ವರುಣ ದೇವನ ಕೃಪೆಗಾಗಿ ಜನರು ದೇವರ ಮೊರೆಹೋಗುತ್ತಿದ್ದಾರೆ. ದಬ್ಬೇಘಟ್ಟ ಹೋಬಳಿಯಲ್ಲಿ ಕುಡಿಯಲೂ ನೀರಿಲ್ಲದಿರುವ ಕಾರಣ ಗ್ರಾಮ ಪಂಚಾಯ್ತಿ ವತಿಯಿಂದ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡಲಾಗುತ್ತಿದೆ.   ನೀರಿಲ್ಲ ಎಂದು ಜನರು ಹಪಹಪಿಸುತ್ತಿದ್ದಾರೆ. ಎಷ್ಟು ಆಳ ಕೊರೆದರೂ ನೀರಿಲ್ಲದಿರುವಾಗ ಜನಪ್ರತಿನಿಧಿಗಳು, ಅಧಿಕಾರಿಗಳಾದರೂ ಏನು ಮಾಡಲು ಸಾಧ್ಯ. ಇವಕ್ಕೆಲ್ಲಾ ಪರಿಹಾರವೆಂದರೆ ವರುಣ ದೇವ ಮುನಿಸು ಮುರಿದು ಧರೆಯ  ಒಡಲನ್ನು ತಣಿಸುವುದೊಂದೇ ಉಳಿದಿರುವ ಮಾರ್ಗ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement