ಬೈಕ್ ರ್ಯಾಲಿ ಮೂಲಕ ಚುನಾವಣಾ ಪ್ರಚಾರ ಶುರು
ಕ.ಪ್ರ.ವಾರ್ತೆ ಕುಣಿಗಲ್ ಮಾ 31
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಬಿ ಫಾರಂ ಯಾರ ಪಾಲಾಗುವುದೋ ಎಂಬ ಗೊಂದಲ ಇನ್ನು ಮುಂದುವರೆದಿದೆ.
ದಿನಂಪ್ರತಿ ತಾಲೂಕು ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಿ.ಬಿ. ರಾಮಸ್ವಾಮಿಗೌಡರ ಟಿಕೆಟ್‌ಗೆ ಸಂಬಂಧಿಸಿದಂತೆ ರೋಚಕ ವರದಿಗಳು ಪ್ರಕಟವಾಗುತ್ತಿದ್ದರೂ, ರಾಮಸ್ವಾಮಿಗೌಡ ಭಾನುವಾರ ಪಟ್ಟಣದಿಂದ ಯಡೆಯೂರಿನವರೆಗೂ ಬೈಕ್ ರ್ಯಾಲಿ ಕೈಗೊಂಡು, ಕೈ ಪರ ಚುನಾವಣೆ ಪ್ರಚಾರ ನಡೆಸಿದರು. ಈ ಹಿನ್ನೆಲೆಯಲ್ಲಿ ಗೊಂದಲದ ಗೂಡಾಗಿದ್ದ ಕೈ ಪಾಳೆಯದಲ್ಲಿ ಕುತೂಹಲ ಕೆರಳಿಸಿತು.
ಯಡೆಯೂರಿನಿಂದ ಮೂವತ್ತಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್‌ಗಳಲ್ಲಿ ಆಗಮಿಸಿ, ಕಾಂಗ್ರೆಸ್ ಕಾರ್ಯಾಲಯದ ನಮ್ಮಮನೆ ಬಳಿ ಜಮಾವಣೆಗೊಂಡು, ನಂತರ ಬೃಹತ್ ಕಾಂಗ್ರೆಸ್ ಬಾವುಟಗಳನ್ನು ಹಿಡಿದು ತಮ್ಮ ಮುಖಂಡ ಬಿ.ಬಿ.ರಾಮಸ್ವಾಮಿಗೌಡರ ಪರ ಘೋಷಣೆಗಳನ್ನು ಕೂಗುತ್ತಾ, ಯಡೆಯೂರಿನವರೆಗೂ ಬೈಕ್ ರ್ಯಾಲಿಯಲ್ಲಿ ತೆರಳಿದರು.
ಬೈಕ್‌ನ ಹಿಂಬದಿ ಸವಾರ: ಸದಾ ಸ್ಕಾರ್ಪಿಯೋ ವಾಹನದಲ್ಲಿ ಸಂಚರಿಸುತ್ತಿದ್ದ ಶಾಸಕರು, ಇಂದು ಕಾಂಗ್ರೆಸ್ ಬಾವುಟ ಹಿಡಿದು ಬೈಕ್‌ನ ಹಿಂಬದಿ ಸವಾರರಾಗಿ ತೆರಳಿದ್ದು ತಾಲೂಕಿನ ಕೈ ಪಾಳೆಯದ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದರೆ ಮತ್ತೊಂದು ಬಣದವರಿಗೆ ಕುತೂಹಲ ಮೂಡಿಸಿತು.
ಈ ಮಧ್ಯೆ ಯಡೆಯೂರು ಸಮೀಪ ಚಾಕೇನಹಳ್ಳಿ ಗ್ರಾಮದ ಅಪಘಾತ ಸಂಭವಿಸಿದ್ದು, ರಸ್ತೆ ವಿಭಜಕ್ಕೆ ಆಗ್ರಹಿಸಿ ಗ್ರಾಮಸ್ಥರು ಈ ಹಿಂದೆಯೇ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಶಾಸಕರು ಬೈಕ್ ರ್ಯಾಲಿಯಲ್ಲಿ ಆಗಮಿಸುತ್ತಿರುವ ವಿಷಯ ತಿಳಿದು ಶಾಸಕರಿಗೆ ಕಾಯುತ್ತಾ ಕುಳಿತರು. ಆದರೆ, ಕಾಂಗ್ರೆಸ್ ಬೈಕ್ ರ್ಯಾಲಿ ನಾಗಸಂದ್ರ ಮೂಲಕ ಯಡೆಯೂರಿಗೆ ತೆರಳಿದ್ದು ಹೆದ್ದಾರಿಯಲ್ಲಿ ಕಾಯುತ್ತ ಕುಳಿತ ಗ್ರಾಮಸ್ಥರಿಗೆ ನಿರಾಸೆಯಾಯಿತು. ಈ ಮಾರ್ಗದಲ್ಲಿ ಆಗಮಿಸಿದ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಬಳಿ ತಮ್ಮ ಅಹವಾಲು ಸಲ್ಲಿಸಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಬಿಜೆಪಿ ಮುಖಂಡರು, ಸಂಬಂಧಪಟ್ಟವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ ಮಧ್ಯೆ ಭಾನುವಾರಂದು, ಶಾಸಕ ಬಿ.ಬಿ.ರಾಮಸ್ವಾಮಿಗೌಡರು, ಯಡೆಯೂರಿನಲ್ಲಿ ಕಾಂಗ್ರೆಸ್ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ, ಪ್ರಸಕ್ತ ಚುನಾವಣೆಯಲ್ಲಿ ತಾವೇ ಟಿಕೆಟ್ ಪಡೆಯುವ ವಿಶ್ವಾಸ ವ್ಯಕ್ತಪಡಿಸಿ, ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಒಳಗಾಗದಂತೆ, ಪಕ್ಷವನ್ನು ಪುನ: ಅಧಿಕಾರಕ್ಕೆ ತರಲು ಶ್ರಮಿಸುವಂತೆ ಮನವಿ ಮಾಡಿದರು.