ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯುತ್ ನಿಲುಗಡೆ: ಪ್ರತಿಭಟನೆ

Srinivasa Murthy VN
Updated On : 1 Apr 2013, 12:05 pm

ಕ.ಪ್ರ. ವಾರ್ತೆ ತುಮಕೂರು ಮಾ.31
ಅನಿಯಮಿತ ವಿದ್ಯುತ್ ನಿಲುಗಡೆ ಖಂಡಿಸಿ ರೈತರು ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರೊಂದಿಗೆ ಸೇರಿ ಹೆಬ್ಬೂರಿನ ಬೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಈ ಹಿಂದೆ ಯಾವಾಗಲೂ ಈ ರೀತಿಯ ವಿದ್ಯುತ್ ನಿಲುಗಡೆ ಇರಲಿಲ್ಲ ಎಂದಿರುವ ರೈತರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳು ಸಮರ್ಪಕ ವಿದ್ಯುತ್ ನೀಡದೆ, ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಿಯಮಿತ ವಿದ್ಯುತ್ ನಿಲುಗಡೆಯಿಂದ ರೈತರು ಕಂಗಾಲಾಗಿದ್ದಾರೆ. ರೈತರ ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಓದಿಗೂ ತೊಂದರೆಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೇರೆ  ಆರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ನಿಲುಗಡೆ ಮಾಡುತ್ತಿರುವುದು ಆಘಾತಕಾರಿ ಸಂಗತಿ ಎಂದು ರೈತರು, ರೈತ ಸಂಘಟನೆ, ಹಸಿರು ಸೇನೆ ಕಾರ್ಯಕರ್ತರು ತಿಳಿಸಿದ್ದಾರೆ.
ಸಮಯ ಹೇಳುವ ಯೋಗ್ಯತೆಯೂ ಇಲ್ಲವೇ: ಈ ಹಿಂದೆ ಯಾರ ಅವಧಿಯಲ್ಲೂ ಈ ರೀತಿಯ ಅನಿಯಮಿತ ವಿದ್ಯುತ್ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈ ಬಾರಿ ವಿದ್ಯುತ್ ನಿಲುಗಡೆ ಹೇಳತೀರದಾಗಿದೆ. ಕನಿಷ್ಠ ಮುಂಜಾಗ್ರತೆ ಹಿನ್ನೆಲೆಯಲ್ಲಿ ವಿದ್ಯುತ್ ನಿಲುಗಡೆ ಸಮಯ ಹೇಳುವ ಯೋಗ್ಯತೆಯೂ ರಾಜ್ಯ ಸರ್ಕಾರಕ್ಕಿಲ್ಲವೇ ಎಂದು ರೈತರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಬೇಡಿಕೆಗಳು:
1.  ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರ ವಿದ್ಯುತ್.
2.  ಪಂಪ್‌ಸೆಟ್‌ಗಳಿಗೆ ರಾತ್ರಿಯಿಡೀ ನಿರಂತರ ವಿದ್ಯುತ್.
3.  ಪಂಪ್‌ಸೆಟ್‌ಗಳ ಮೇಲಿನ ಬಾಕಿ ಮನ್ನಾ.
4.  ಸುಟ್ಟ  ಟ್ರಾನ್ಸ್‌ಫಾರ್ಮರ್‌ಗಳನ್ನು 48 ಗಂಟೆಯೊಳಗೆ ಬದಲಾಯಿಸಬೇಕು.
ಮುಖ್ಯ ಎಂಜಿನಿಯರ್ ಭೇಟಿ: ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬೆಸ್ಕಾಂ ಮುಖ್ಯ ಎಂಜಿನಿಯರ್ ಚಂದ್ರಶೇಖರ್ ಭೇಟಿ ನೀಡಿ ಬೆಳಗ್ಗೆ 9-30 ರಿಂದ ಸಂಜೆ 6 ರವರೆಗೆ 3 ಫೇಸ್ ವಿದ್ಯುತ್ ನೀಡುವ ಭರವಸೆಯನ್ನು ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ರೈತಸಂಘದ ಮುಖಂಡರಾದ ಗೋವಿಂದರಾಜ್, ಚಂದ್ರಶೇಖರ್, ಯತೀಶ್‌ಕುಮಾರ್, ಬೋರೇಗೌಡ ವಹಿಸಿದ್ದರು. ಕಣಕುಪ್ಪೆ, ಬಳ್ಳಗೆರೆ, ದಾಸರ ಹಾಳು, ಮರಾಠಿಗಳ ಪಾಳ್ಯ, ಕಂಬಾಳಪುರ ಸುತ್ತ ಮುತ್ತಲಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶಾಲಾ ಕಟ್ಟಡ ಉದ್ಘಾಟನೆ
ಕ.ಪ್ರ. ವಾರ್ತೆ ತುರುವೇಕೆರೆ ಮಾ.31
ತಾಲೂಕಿನ ದಬ್ಬೇಘಟ್ಟ ಹೋಬಳಿಯ ಸೋಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವನ್ನು ಇಸಿಓ ಸಿದ್ದಪ್ಪನವರು ಉದ್ಘಾಟಿಸಿದರು.
ಸರ್ವ ಶಿಕ್ಷಣ ಅಭಿಯಾನದಡಿ ಸುಮಾರು 4.46 ಲಕ್ಷ ರು.ನಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಎಪಿಎಂಸಿ  ಉಪಾಧ್ಯಕ್ಷ ಗೋವಿಂದಯ್ಯ, ತಾಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖ, ಮಾಜಿ ಅಧ್ಯಕ್ಷ ಎನ್.ಎಸ್. ರಾಮಚಂದ್ರಯ್ಯ,  ಸಿಆರ್‌ಪಿ ಮಹಮದ್ ಗೌಸ್, ಬಿ.ಆರ್.ಪಿ. ಗೋವಿಂದಯ್ಯ, ಶಿಕ್ಷಕ ತಾತಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್ ಮತ್ತು ಸದಸ್ಯರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಬಿ.ಎನ್.ರಂಗಪ್ಪ ಸ್ವಾಗತಿಸಿದರು. ಸಹ ಶಿಕ್ಷಕ ಸತೀಶ್ ವಂದಿಸಿದರು.

ಶ್ರೀಶಾಂತಾನಂದ ಸ್ವಾಮಿ ಆರಾಧನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ: ಸದ್ಗುರು ಶ್ರೀಶಾಂತಾನಂದ ಸ್ವಾಮೀಜಯವರ 30ನೇ ಆರಾಧನಾ ಮಹೋತ್ಸವವನ್ನು ಕಸಬಾ ಕುರುಹಳ್ಳಿಯ ಬಳಿಯಿರುವ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಟ್ರಸ್ಟ್  ತಿಳಿಸಿದೆ.
ಏ.1 ಸೋಮುವಾರ ಮತ್ತು 2 ರಂದು ಮಂಗಳವಾರ ನಡೆಯಲಿರುವ  ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮತ್ತು ಕಳಶ ಸ್ಥಾಪನೆ ನೆರವೇರುವುದು. ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿದ್ದರೂ ಇದರ ಜೊತೆಗೆ ಸಾಮಾಜಿಕ ಕಾಳಜಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಇದರ ಜೊತೆಗೆ ಭಜನೆ ಕಾರ್ಯಕ್ರಮ, ತಾತನವರ ಪಾದುಕೆಗಳಿಗೆ ಪೂಜೆ, ಶ್ರೀಶಾಂಭವಿ ದೇವಿಗೆ ಅಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾತನವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಭಿನ್ನವಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement