ಐತಿಹಾಸಿಕ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ
ಕ.ಪ್ರ.ವಾರ್ತೆ ಹಾಸನ ಮೇ 16
ಮನುಷ್ಯನ ಉಸಿರು ಯಾವಾಗಲು ಪರಮಾತ್ಮನ ಸ್ಮರಣೆ ಮಾಡುತ್ತದೆ. ಅದೇ ಅವನಿಗೆ ಮುಕ್ತಿ ಎಂದು ಅರಕಲಗೂಡು ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಬಸವ ಜಯಂತಿ ಅಂಗವಾಗಿ ತಾಲೂಕು ವೀರಶೈವ ಘಟಕಗಳ ಸಂಯುಕ್ತಾಶ್ರಯದಲ್ಲಿ ತುಮಕೂರು ಸಿದ್ಧಗಂಗಾಮಠದ ಪ್ರಖ್ಯಾತ ಕಲಾವಿದರಿಂದ ಏರ್ಪಡಿಸಲಾಗಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಐತಿಹಾಸಿಕ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಕ್ತಿಯಲ್ಲಿ ಸಿಗುವ ಆನಂದ ಮತ್ತೆ ಯಾವುದರಲ್ಲೂ ಸಿಗುವುದಿಲ್ಲ. ಪ್ರಾಪಂಚಿಕ ಆನಂದ ಪಡೆಯುವಲ್ಲಿ ಕೆಲ ನಿಯಮ ಅನುಸರಿಸಬೇಕಾಗುತ್ತದೆ. ಮೊದಲು ನಮ್ಮ ಅಂತ:ಕರಣ ಪರಿಶುದ್ಧ ಮಾಡಿಕೊಂಡರೆ ಜೀವನದಲ್ಲಿ ಆನಂದ ಹಾಗೂ ಮುಕ್ತಿ ಲಭಿಸುತ್ತದೆ ಎಂದು ಹೇಳಿದರು. ನಂತರ ಶ್ರೀ ಬಸವೇಶ್ವರರ ಜೀವನ ಚರಿತ್ರೆಯ ಐತಿಹಾಸಿಕ ನಾಟಕ ಪ್ರದರ್ಶಿಸಲಾಯಿತು. ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ, ವೀರಶೈವ ಸಂಘದ ಯತೀಶ್, ಕಟ್ಟಾಯ ಶಿವಕುಮಾರ್ ಇತರರು ಇದ್ದರು.
ನೇಣು ಬಿಗಿದುಕೊಂಡು ಶಿಕ್ಷಕಿ ಆತ್ಮಹತ್ಯೆ
ಕ.ಪ್ರ.ವಾರ್ತೆ ಗುಲ್ಬರ್ಗ ಮೇ 16
ಚಿಂಚೋಳಿ ತಾಲೂಕಿನ ರಟಕಲ್ ತಾಂಡಾದಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ನಿವಾಸಿ ಭುವನೇಶ್ವರಿ ಕೊರಮಯ್ಯ(25) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಭುವನೇಶ್ವರಿ ತನ್ನ ತಂದೆ ಕೊರಮಯ್ಯ ಹಾಗೂ 2 ವರ್ಷದ ಮಗುವಿನೊಂದಿಗೆ ರಟಕಲ್ ತಾಂಡಾದ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 4.30ಕ್ಕೆ ಮಗಳು ನೇಣು ಹಾಕಿಕೊಂಡಿರುವುದನ್ನು ನೋಡಿದ್ದಾಗಿ ಕೊರಮಯ್ಯ ಪೊಲೀಸರಿಗೆ ತಿಳಿಸಿದ್ದಾರೆ. ಭುವನೇಶ್ವರಿ ಅವರನ್ನು ಎರಡೂವರೆ ವರ್ಷದ ಹಿಂದೆ ಕೊರಮಯ್ಯನವರ ಹತ್ತಿರದ ಸಂಬಂಧ ನಟರಾಜ ಜತೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ನಟರಾಜ ಜತೆಗೆ ಒಂದು ತಿಂಗಳು ಮಾತ್ರ ಸಂಸಾರ ನಡೆಸಿದ್ದರು ಎನ್ನಲಾಗಿದೆ. ನಂತರ ಭುವನೇಶ್ವರಿ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಹದಿರಾಳು ನಿವಾಸಿ ಹೇಮಂತರಾಜ ಜತೆ ಮದುವೆಯಾಗಿದ್ದರು ಎನ್ನಲಾಗಿದ್ದು, ಇವರ ಕಿರುಕುಳವೇ ಸಾವಿಗೆ ಕಾರಣ ಎಂದು ದೂರಲಾಗಿದೆ.