ಕಾಡಾನೆ ದಾಳಿ: ಇಬ್ಬರು ರೈತರಿಗೆ ಗಾಯ
ಕನ್ನಡಪ್ರಬ ವಾರ್ತ ಹುಣಸೂರ ಮೇ 16
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನಲ್ಲಿ ಬುಧವಾರ ಸಂಜೆ ಕಾಡಾನೆಗಳ ದಾಳಿಗೆ ಇಬ್ಬರು ರೈತರು ಸಿಲುಕಿ ತೀವ್ರವಾಗಿ ಗಾಯಗೊಂಡು ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಹನಗೋಡು ಹೋಬಳಿಯ ಕಚುವಿನಹಳ್ಳಿ ಗ್ರಾಮದ ಚಿಕ್ಕೇಗೌಡ ಮತ್ತು ವಾಸು ಎಂಬವರೆ ಕಾಡಾನೆ ದಾಳಿಗೆ ತುತ್ತಾಗಿ ತೀವ್ರ ಗಾಯ ಗೊಂಡಿರುವವರು.
ಕಾಡಿನಿಂದ ಮೇವನರಿಸಿ ಮರಿಯಾನೆ ಸೇರಿ ಏಳು ಆನೆಗಳ ಹಿಂಡು ಕೆ.ಜಿ ಹಬ್ಬನಕುಪ್ಪೆ ಬಳಿಯ ಅಗಸನಕೆರೆಯಲ್ಲಿ ನೀರು ಕುಡಿಯುತ್ತಿದ್ದವು, ಇದೇ ವೇಳೆ ಜಾನುವಾರುಗಳಿಗೆ ನೀರು ಕುಡಿಸಲೆಂದು ಬಂದ ಚಿಕ್ಕೇಗೌಡ ಮತ್ತು ವಾಸುಗೆ ಕೆರೆಯ ಬಳಿ ಹೋದಾಗ ಆನೆ ಬೆನ್ನಟ್ಟಿ ಇಬ್ಬರನ್ನು ಸೊಂಡಲಿನಿಂದ ಬಡಿದು ಗಾಯಗೊಳಿಸಿದೆ. ಗ್ರಾಮಸ್ಥರು ಗಾಯಾಳುಗಳ ಕೂಗಾಟದ ಶಬ್ದ ಕೇಳಿ, ಆನೆಗಳನ್ನು ಓಡಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸಂಜೆಯಿಂದ ಕಾಡಾನೆಗಳನ್ನು ಓಡಿಸಲು ಹರಸಾಹಸಪಟ್ಟು ಗುರುವಾರ ಸಂಜೆಯ ವೇಳೆಗೆ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಾಡಾನೆ ದಾಳಿಗೆ ಬೆಳೆ ಹಾನಿ
ಹುಣಸೂರು: ವಾರದ ಹಿಂದೆ ಕಾಡಿನಿಂದ ನಾಡಿಗೆ ಬಂದ ಕಾಡಾನೆ ಹಿಂಡು ಶೆಟ್ಟಹಳ್ಳಿ-ಲಕ್ಕಪಟ್ಟಣ ಪುನರ್ವಸತಿ ಕೇಂದ್ರದ ಬಳಿ ಬೀಡುಬಿಟ್ಟಿದ್ದು, ಅಕ್ಕ- ಪಕ್ಕದ ತೋಟಗಳಿಗೆ ಲಗ್ಗೆಯಿಟ್ಟು ಲಕ್ಷಾಂತರ ರು. ನಷ್ಟ ಸಂಭವಿಸಿರುವ ಘಟನೆ ವರದಿಯಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರ- ನೀರಿಗಾಗಿ ಬಂದ ಕಾಡಾನೆಗಳ ಹಿಂಡು, ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂನ ಬಿಲ್ಲೇನಹೊಸಹಳ್ಳಿ ಗ್ರಾಮದ ಥಾಮಸ್ ಜಾನ್, ಅಣ್ಣಯ್ಯ, ರಮೇಶ್, ಜಾನ್ಸನ್ ಎಂಬವರಿಗೆ ಸೇರಿದ ಮರಗೆಣಸು, ಕಾಫಿ, ಶುಂಠಿ, ಬಾಳೆ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ಸ್ಥಳಕ್ಕೆ ವನಪಾಲಕ ರಶೀದ್ ಮತ್ತು ತಂಡ ಭೇಟಿ ನೀಡಿ ಕಚುವಿನಹಳ್ಳಿ ತೋಟದಿಂದ ಆನೆ ಹಿಂಡನ್ನು ಹೊರಗಟ್ಟಿದರೂ ಶೆಟ್ಟಹಳ್ಳಿ-ಲಕ್ಕಪಟ್ಟಣ ಪುನರ್ವಸತಿ ಕೇಂದ್ರದ ಕುರುಚಲು ಕಾಡಿನೊಳಗೆ ಆನೆಗಳು ಬೀಡುಬಿಟ್ಟು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಳೆದ ತಿಂಗಳು ಚುನಾವಣೆ ಸಂದರ್ಭದಲ್ಲಿ ರೈತರು ತಮ್ಮ ಬಂದೂಕನ್ನು ಪೊಲೀಸರಿಗೊಪ್ಪಿಸಿದ್ದರಿಂದ ಬೆದರುಗುಂಡು ಹಾರಿಸಲು ಸಹ ಆಗದೆ ರೈತರು ಕಂಗಾಲಾಗಿದ್ದು, ಇತ್ತ ಅರಣ್ಯ ಇಲಾಖೆ ಸಹ ಕಾಡು ಪ್ರಾಣಿಗಳ ಹಾವಳಿ ತಡೆಯುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೂಡಲೇ ಬಂದೂಕನ್ನು ಕಾಡಂಚಿನ ರೈತರಿಗೆ ವಾಪಸ್ಸು ಕೊಡಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.