ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ: ಶಾಸಕ ನಾಗರಾಜಯ್ಯ

Srinivasa Murthy VN
Updated On : 17 May 2013, 12:46 pm

ಕ.ಪ್ರ. ವಾರ್ತೆ ಕುಣಿಗಲ್ ಮೇ 16
ಸರ್ಕಾರದ ಸವಲತ್ತುಗಳನ್ನು ಗ್ರಾಮಾಂತರ ಪ್ರದೇಶದ ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ದಿಸೆಯಲ್ಲಿ, ವಿವಿಧ ಇಲಾಖೆ ಸಿಬ್ಬಂದಿ ಒಬ್ಬರ ಮೇಲೊಬ್ಬರು ಆರೋಪಿಸಿಕೊಂಡು, ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದು ಶಾಸಕ ಡಿ.ನಾಗರಾಜಯ್ಯ ಎಚ್ಚರಿಸಿದರು.
ಗುರುವಾರ. ತಾಪಂ ಸಭಾಂಗಣದಲ್ಲಿ, ತಾಲೂಕಿನಾದ್ಯಂತ ಕುಡಿಯುವ ನೀರು ಪೂರೈಕೆ ಸೇರಿದಂತೆ ಪಡಿತರ ಕಾರ್ಡ್ ವಿತರಣೆ ವಿಷಯದ ಬಗ್ಗೆ ಗ್ರಾಪಂ ಕಾರ್ಯದರ್ಶಿ, ಪಿಡಿಒ, ಕಂದಾಯ ಇಲಾಖೆ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷಕ, ಶಿರಸ್ತೆದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ  ಕೊಳವೆಬಾವಿ ಕೊರೆದರೂ ನೀರು ಸಿಗದೆ, ಬೋರ್ ವಿಫಲವಾಗಿದೆ. ಇಂತಹ ಕಡೆಗಳಲ್ಲಿ ಹಳೇಯ ಬೋರ್‌ವೆಲ್‌ಗಳಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದ್ದರೂ ಆ ಬಗ್ಗೆ ಗಮನಹರಿಸದೆ, ಏಕಾಏಕಿ ಹೊಸ ಬೋರ್ ಕೊರೆಸಲು ಮುಂದಾಗುವುದು ಸರಿಯಲ್ಲ ಎಂದರು.
ಘಟನೆ ನಡೆದಿಲ ಕೆಲ ಗ್ರಾಪಂಗಳಲ್ಲಿ ಪ್ರಭಾವಿಗಳು ನೀರು ಪಡೆದುಕೊಳ್ಳುತ್ತಿದ್ದು ಇತರರಿಗೆ ಅನಾನುಕೂಲವಾಗುತ್ತಿದೆ. ಇನ್ನು ಕೃತಕವಾಗಿ ನೀರಿನ ಅಭಾವ ಸೃಷ್ಟಿ ವಾತಾವರಣ ನಿಜಕ್ಕೂ ಖೇದಕರ. ಕೆಲ ಗ್ರಾಪಂಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸದೆ, ಬಿಲ್ ಪಡೆಯುವ ಕುಕೃತ್ಯಗಳು ನಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಹಂತದಲ್ಲಿ ತಾಪಂ ಇಒ ಡಾ.ರಾಮಚಂದ್ರ, ಈ ತರಹ ಯಾವುದೇ ಘಟನೆ ಇಲ್ಲವೆಂದು ಸಮರ್ಥಿಸಿಕೊಂಡರೆ,  ತಹಸೀಲ್ದಾರ್ ಜಗದೀಶ್ ಈ ಘಟನೆ ನಡೆದಿದೆ ಎಂದರು.
ವಾಗ್ವಾದ: ಈ ಘಟನೆ ಕೆಲಕಾಲ ಇಬ್ಬರೂ ಅಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ, ವೇದಿಕೆಯ ಮೇಲೆಯೆ ಇಒ, ತಹಸೀಲ್ದಾರ್ ಹೇಳಿಕೆಗೆ ವಿರೋಧಿಸಿ, ತಾವು ಜಿಲ್ಲಾಧಿಕಾರಿಗಳ ಸಭೆಯಲ್ಲೂ ಇದೆ ತರಹದ ಪ್ರಸ್ತಾಪ ಮಾಡಿದ್ದೀರಿ, ಇದರಿಂದ ನನಗೆ ಬೇಸರವಾಗಿದೆ ಎಂದರು. ಮಧ್ಯಪ್ರವೇಶಿಸಿದ ಶಾಸಕರು, ಹಿಂದಾಗಿದೆಯೊ, ಮುಂದಾಗಿದೆಯೋ, ಅಕ್ರಮ ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮಕ್ಕೆ ಬರೆಯುವುದಾಗಿ ಎಚ್ಚರಿಸಿದರು.
ಕೆಲಕಾಲ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆದು, ಅಂತಿಮವಾಗಿ ಶಾಸಕರು, ಪಿಡಿಒಗಳು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಲಿಖಿತವಾಗಿ, ಕಾರ್ಯಪಡೆ ಸಮಿತಿಗೆ ನೀಡಬೇಕೆ ಹೊರತು ತಾಪಂ ಇಒ ಅಥವಾ ಜಿಪಂ ಎಇಇಗಲ್ಲ, ಲಿಖಿತವಾಗಿ ಮನವಿ ಸಲ್ಲಿಸುವಂತೆ ಸೂಚಿಸಿದರು.
ಅನರ್ಹರಿಗೇ ಹೆಚ್ಚು: ಪಡಿತರ ಕಾರ್ಡ್ ವಿತರಣೆಯ ಗೊಂದಲಗಳ ಬಗ್ಗೆ ಚರ್ಚೆ ಕೈಗೆತ್ತಿಕೊಂಡ ಶಾಸಕರು, ತಾಲೂಕಿನಲ್ಲಿ ಬಿಪಿಎಲ್ ಕಾರ್ಡ್ ಅರ್ಹರಿಗಿಂತ ಅನರ್ಹರಿಗೆ ಹೆಚ್ಚು ಸಿಕ್ಕಿದೆ. ಮಾನದಂಡ ಸರಿಯಾಗಿ ಪಾಲಿಸದೆ ಮನಬಂದಂತೆ ವಿತರಿಸಿರುವ ಕೆಲ ಪ್ರಕರಣಗಳನ್ನು ಎಳೆ, ಎಳೆಯಾಗಿ ಬಿಡಿಸಿಟ್ಟು, ಅರ್ಹ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದು ಅವರಿಗೆ ಪಡಿತರ ಕಾರ್ಡ್ ವಿತರಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕೆಂದರು.
ತಹಸೀಲ್ದಾರ್ ಜಗದೀಶ್ 1675 ಅರ್ಜಿಗಳು ಹೊಸದಾಗಿ ಆನ್‌ಲೈನ್ ನೋಂದಣಿಯಾಗಿದ್ದು ಈ ಪೈಕಿ ಬಹುತೇಕ ಅನರ್ಹಗೊಂಡಿವೆ. ಸಮರ್ಪಕ ವಾಗಿ ಆನ್‌ಲೈನ್ ಭರ್ತಿ ಮಾಡುವಲ್ಲಿ ವಿಳಂಬವಾಗಿರುವುದೇ ಸಮಸ್ಯೆಗೆ ಕಾರಣ. ಈಗ ಗ್ರಾಮಾಂತರ ಪ್ರದೇಶದಲ್ಲಿ ಬಿಪಿಎಲ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದು, ಜನತೆ ಸದುಪಯೋಗ ಪಡೆದುಕೊಳ್ಳ ಬಹುದೆಂದರು.
ಅರಿವು ಮೂಡಿಸಿ:  ಈ ಬಗ್ಗೆ ಕೆಲಕಾಲ ಚರ್ಚೆ ನಡೆದು ಅಂತಿಮವಾಗಿ ಶಾಸಕ ಡಿ.ನಾಗರಾಜಯ್ಯ, ಬಿಪಿಎಲ್ ಕಾರ್ಡ್‌ಗೆ ಆನ್‌ಲೈನ್ ಅರ್ಜಿ ಸಲ್ಲಿಸಲು, ಗ್ರಾಮಾಂತರ ಪ್ರದೇಶದ ಬಹುತೇಕ ಮಂದಿಗೆ ಗೊತ್ತಿಲ್ಲ. ಆದ್ದರಿಂದ ಕಂದಾಯ, ಜಿಪಂ ಇಲಾಖೆ ಸಹಯೋಗದಲ್ಲಿ ಗ್ರಾಮಾಂತರ ಪ್ರದೇಶದ ಅರ್ಹ ಫಲಾನುಭವಿಗಳಲ್ಲಿ ಅರಿವು ಮೂಡಿಸಿ, ಅವರಿಗೆ ಕಾರ್ಡ್ ದೊರಕುವಂತೆ ಬದ್ಧತೆಯಿಂದ ಶ್ರಮಿಸುವಂತೆ ತಿಳಿಸಿದರು.
ನೂತನ ಶಾಸಕರಾಗಿ ಆಯ್ಕೆಯಾಗಿ ಮೊದಲ ಸಭೆ ನಡೆಸಿದ ಶಾಸಕರಿಗೆ ತಾಪಂ ಇಒ ಸ್ವಾಗತ ಕೋರಿದರು. ಸಭೆಯಲ್ಲಿ ಜಿಪಂ ಎಇಇ ಸಣ್ಣಮರಿಗೌಡ, ತಾಪಂ ಸ್ಥಾಯಿ ಸಮಿತಿ ಅದ್ಯಕ್ಷ ಜಗದೀಶ್, ಆಹಾರ ಶಿರಸ್ತೆದಾರ್ ರಂಗಧಾಮಯ್ಯ, ಸೇರಿದಂತೆ, ವಿವಿಧ ಗ್ರಾಪಂ ಕಾರ್ಯದರ್ಶಿ, ಪಿಡಿಒ ಹಾಗೂ ಕಂದಾಯ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರೈತರ ಶೋಷಣೆ ಮಾಡಬೇಡಿ...
ಕುಣಿಗಲ್: ರೀ.. ಎಇಇ ಸಾಹೇಬರೇ... ರೈತರನ್ನು  ಶೋಷಣೆ ಮಾಡಬೇಡಿ... ತಾಳ್ಮೆಗೂ ಮಿತಿ ಇರುತ್ತೆ, ತಾಳ್ಮೆ ಕಳೆದುಕೊಂಡರೆ, ಜನ ಇಲಾಖೆ ಕಚೇರಿಯೊಳಗೆ ನುಗ್ಗಿ ತಪ್ಪಿತಸ್ಥ ಅಧಿಕಾರಿಗಳ ಕೈ, ಕಾಲು ಮುರಿದು ತಕ್ಕ ಶಾಸ್ತಿ ಮಾಡುತ್ತಾರೆ, ಎಚ್ಚರವಿರಲಿ ಎಂದು ಶಾಸಕ ಡಿ.ನಾಗರಾಜಯ್ಯ, ಬೆಸ್ಕಾಂ ಎಇಇಗೆ ಎಚ್ಚರಿಸಿದ ಘಟನೆ ನಡೆಯಿತು.
ಗುರುವಾರ, ತಾಪಂ ಸಭಾಂಗಣದಲ್ಲಿ ಜಿಪಂ ಹಾಗೂ ಕಂದಾಯ ಇಲಾಖಾ ಸಿಬ್ಬಂದಿಗಳ ಸಭೆಯಲ್ಲಿ, ಕುಡಿಯುವ ನೀರು ಪೂರೈಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಇಲಾಖೆಯಿಂದ ತುಂಬಾ ಕಿರುಕುಳ ವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳ ಬಂದ ಮೇರೆಗೆ, ಬೆಸ್ಕಾಂ ಎಇಇಯವರನ್ನು ಕುರಿತು, ಶಾಸಕರು,  ದಿನಂಪ್ರತಿ ಲೋಡ್‌ಗಟ್ಟಲೆ ನೀರನ್ನು ಕಾರ್ಖಾನೆಗೆ ಸಾಗಿಸುತ್ತಾರೆ. ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ್ಲ, ಗೊತ್ತಿದ್ದೂ ಗೊತ್ತಿಲ್ಲದೆ ಸುಮ್ಮನಿರುತ್ತೀರಾ. ಇನ್ನು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಹೋದರೆ ಹಿಡಿದು ವಾಣಿಜ್ಯ ಬಳಕೆ ಎಂದು ದಂಡ ಹಾಕುತ್ತೀರಾ.
ಖಂಡನೀಯ: ಗ್ರಾಮಾಂತರ ಪ್ರದೇಶದಲ್ಲಿ, ಮೊದಲೆ ಮಳೆ ಇಲ್ಲದೆ, ಇರುವ ಅಲ್ಪಸ್ವಲ್ಪ ಸವಲತ್ತಿನಲ್ಲಿ ಬೋರ್ ಮೂಲಕ ನೀರೆತ್ತಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದು, ಇಂತಹ ಸಮಯದಲ್ಲಿ ಟಿಸಿ ಸುಟ್ಟು ಹೋದರೆ, ಟಿಸಿ ದುರಸ್ತಿಗೆ ರೈತರ ಶೋಷಣೆ ಮಾಡುತ್ತೀರಾ. ನಿಜ್ಕಕೂ ಒಳ್ಳೆಯದಾಗುತ್ತಾ. ನನಗೆ ತಿಳಿದಿರುವ ಪ್ರಕರಣ ಒಂದರಲ್ಲಿ ರೈತನಿಗೆ ಟಿಸಿ ಬೇಗ ಕೊಡಲು, ಹತ್ತರಿಂದ ಹದಿನೈದು ಸಾವಿರ ವಸೂಲು ಮಾಡಿದ್ದು, ನಿಜಕ್ಕೂ ಖಂಡನೀಯ. ಇಲಾಖೆ ಮೇಲಾಧಿಕಾರಿಯಾಗಿ ನಿಮ್ಮ ಗಮನಕ್ಕೆ ಇದು ಬಂದಿಲ್ಲವೆ, ಬಂದರೂ ಏನು ಮಾಡುತ್ತಿದ್ದೀರಿ ಎಂದು ಕಟುವಾಗಿ ಪ್ರಶ್ನಿಸಿದರು.
ಮನಬಂದಂತೆ ವಸೂಲಿ: ಗ್ರಾಮಾಂತರ ಪ್ರದೇಶದ ರೈತರು ಟಿಸಿ ದುರಸ್ತಿ ಮಾಡಿಕೊಂಡು ಬಂದ ನಂತರ, ಅದನ್ನು ಅಳವಡಿಸಲು ಬೆಸ್ಕಾಂ ಸಿಬ್ಬಂದಿ  ಬಾಡಿಗೆ ಅದೂ ಇದೂ ಎಂದು ಮನಬಂದಂತೆ ವಸೂಲು ಮಾಡಿ ಶೋಷಣೆ ಮಾಡುತ್ತಿದ್ದೀರಿ. ರೈತರು ಕಚೇರಿಗೆ ಬಂದು ದೂರು ಹೇಳಿದರೆ ಪೊಲೀಸರನ್ನು ಕರೆಸುವ ಬೆದರಿಕೆ ಹಾಕುತ್ತೀರಾ. ಎಲ್ಲಾ ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಗಳಾಗಿ ರೈತರ, ಜನತೆಯ ಶೋಷಣೆ ಮಾಡುತ್ತಿದ್ದೀರಾ, ರೈತರ,ಜನತೆಯ ತಾಳ್ಮೆಗೆ ಮಿತಿ ಇರುತ್ತೆ. ನಿಮ್ಮ ದಬ್ಬಾಳಿಕೆ ಮುಂದುವರೆದರೆ, ತಾಳ್ಮೆ ಕಳೆದುಕೊಂಡು, ಭ್ರಷ್ಟ ಅಧಿಕಾರಿಗಳ ಕೈಕಾಲು ಮುರಿದು ತಕ್ಕಪಾಠ ಕಲಿಸುತ್ತಾರೆಂದು ಎಚ್ಚರಿಸಿದರು.
ಲೋಪದೋಷ ಇದೆ: ಬೆಸ್ಕಾಂ ಎಇಇ ಹನುಮಂತಪ್ಪ, ಸಾರ್ ಇಲಾಖೆಯಲ್ಲಿ ಕೆಲ ಲೋಪದೋಷ ಇದೆ. ನಾನಂತೂ ರೈತರಿಂದ ಯಾವುದೇ ಹಣ ಪಡೆಯದೆ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಟ್ಟಿದ್ದೇನೆ. ಆದರೂ ಕೆಲ ಸಿಬ್ಬಂದಿಗಳ ಮಿತಿ ಮೀರಿದ ವರ್ತನೆ ಬೇಸರ ತರಿಸಿದೆ. ನಿಜಕ್ಕೂ ನಾನು ಅಸಹಾಯಕ ಸಾರ್ ಎಂದು ಅಳಲು ತೋಡಿಕೊಂಡರು. ಈ ಹಂತದಲ್ಲಿ ತಾಪಂ ಇಒ ಡಾ.ರಾಮಚಂದ್ರ, ಮೊದಲು ನಿಮ್ಮ ಸೆಕ್ಷನ್ ಆಫೀಸರ್‌ಗಳಿಗೆ ತಮ್ಮ ಮೊಬೈಲ್ ಸ್ವಿಚ್ ಆನ್ ಮಾಡಲು ಹೇಳಿ, ಯಾವಾಗಲೂ ಸ್ವಿಚ್ ಆಫ್ ಆಗಿರುತ್ತೆ. ಎಲ್ಲದಕ್ಕೂ ನಾನೆ ಉತ್ತರಿಬೇಕೆಂದಾಗ, ಸಾರ್ ನಾನು ಹಲವು ಸಾರಿ ಹೇಳಿದ್ದೇನೆ. ನನ್ನ ಮಾತು ಯಾವುದೇ ಸೆಕ್ಷನ್ ಆಫೀಸರ್ ಕೇಳೊಲ್ಲಾ, ಮೇಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈ ಗೊಳ್ಳುತ್ತೇನೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement