ಜಿ.ಎಸ್. ವೈಭವಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ
ಮಧುಗಿರಿ: ತಾಲೂಕಿನ ಗಂಜಲಗುಂಟೆ ಗ್ರಾಮದ ಜಿ.ಎಸ್. ವೈಭವಿ ಈಚೆಗೆ ಹೊರ ಬಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ, ಊರಿಗೆ, ಹೆತ್ತವರಿಗೆ ಕೀರ್ತಿ ತಂದಿದ್ದಾಳೆ.
ಈಕೆ ಮಧುಗಿರಿ ಪಟ್ಟಣದ ಕಾರ್ಡಿಯಲ್ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿ ಓದಿ ಪ್ರಸ್ತುತ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆಯುವ ಮೂಲಕ ಶೇ.98.24 ಅಂಕ ಗಳಿಸಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಹೊರ ಹೊಮ್ಮಿದ್ದಾಳೆ.
ಈಕೆ ಓದುವ ಜೊತೆಗೆ ಸಂಗೀತ, ಸಾಹಿತ್ಯ, ನಾಟ್ಯ ಪಠ್ಯೇತರ ಚಟುವಟಿಕೆ ಮೈಗೂಡಿಸಿಕೊಂಡಿರುವ ಬಹುಮುಖ ಪ್ರತಿಭೆ ಜಿ.ಸಿ.ವೈಭವಿ, ಮುಂದೆ ತಮ್ಮ ಹಿರಿಯರಂತೆಯೇ ಸಮಾಜ ಸೇವೆ ಮಾಡಬೇಕು ಎಂಬ ಹಂಬಲ ಹೊತ್ತು ಉನ್ನತ ವಿದ್ಯೆ ಕಲಿತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ತಮ್ಮ ಮಗಳು ಕೂಡ ಸಮಾಜಮುಖಿ ಕೆಲಸ ಮಾಡಲಿ, ಉನ್ನತ ಹುದ್ದೆ ಅಲಂಕರಿಸಲಿ ಎಂದು ಅವರ ತಂದೆ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
4 ಸರ್ಕಾರಿ, 4 ಖಾಸಗಿ ಶಾಲೆ; ಎಸ್ಸೆಸ್ಸೆಲ್ಸಿ ಶೇ.100
ತುರುವೇಕೆರೆ: ತಾಲೂಕಿನ 4 ಸರ್ಕಾರಿ ಪ್ರೌಢಶಾಲೆಗಳು ಹಾಗೂ 4 ಖಾಸಗಿ ಶಾಲೆಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ. ಕುರುಬರ ಹಳ್ಳಿ, ಹುಲಿಕೆರೆ, ತುಬಲಹಳ್ಳಿ, ಅಜ್ಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಗಳು ಹಾಗೂ ಖಾಸಗಿ ಶಾಲೆಗಳಾದ ಬ್ಯಾಲಹಳ್ಳಿ ಗೇಟ್ನ ನೆಹರು ಪ್ರೌಢಶಾಲೆ, ಬೈತರಹೊಸಳ್ಳಿಯ ವೀರಭದ್ರೇಶ್ವರ ಪ್ರೌಢಶಾಲೆ, ತುರುವೇಕೆರೆಯ ಜೆ ಪಿ ಕಾನ್ವೆಂಟ್ ಹಾಗೂ ಪ್ರಿಯಾ ಕಾನ್ವೆಂಟ್ ಶೇ.100 ಫಲಿತಾಂಶ ಪಡೆದ ಶಾಲೆಗಳಾಗಿವೆ. ಅಂಚಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಶಾಂತ್ ಕುಮಾರ್ ಶೇ 96.64 ಅಂಕ ಗಳಿಸುವ ಮೂಲಕ ತಾಲೂಕಿಗೇ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಈತ ಗಾರೆ ಕೆಲಸ ಮಾಡುವ ಪೋಷಕರ ಮಗನಾಗಿದ್ದಾನೆ. ಜೆ ಪಿ ಕಾನ್ವೆಂಟ್ನ ವಿದ್ಯಾರ್ಥಿಗಳಾದ ಎಲ್.ತೇಜಸ್ವಿನಿ ಶೇ 96.16 ಅಂಕ ಗಳಿಸಿ ತಾಲೂಕಿಗೆ ಎರಡನೇ ಸ್ಥಾನ ಗಳಿಸಿದರೆ, ಅದೇ ಶಾಲೆಯ ವಿದ್ಯಾರ್ಥಿನಿ ಟಿ.ಎಂ.ತೇಜಸ್ವಿನಿ ಶೇ 96 ಅಂಕ ಪಡೆದು ತಾಲ್ಲೂಕಿಗೆ 3 ನೇ ಸ್ಥಾನ ಗಳಿಸಿದ್ದಾರೆ. ತಾಲೂಕಿನಲ್ಲಿ 2393 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 2086 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.87 ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ ಹೇಳಿದ್ದಾರೆ. 68 ಡಿಸ್ಟಿಂಕ್ಷನ್, 779 ಪ್ರಥಮ ದರ್ಜೆ, 549 ದ್ವಿತೀಯ ದರ್ಜೆ ಗಳಿಸಿದ್ದರೆ 690 ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸೋತರೂ ಭರವಸೆ ಈಡೇರಿಸುವೆ: ಶಿವಕುಮಾರ್
ತುರುವೇಕೆರೆ: ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ವೇಳೆ ನೀಡಿದ್ದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಇಡಗೂರು ಶಿವಕುಮಾರ್ ಹೇಳಿದ್ದಾರೆ. ಫಲಿತಾಂಶ ಬಂದ ತರುವಾಯ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲಾ ಪಕ್ಷೇತರರ ಪೈಕಿ ತಾವೇ ಅತಿ ಹೆಚ್ಚು ಮತ ಗಳಿಸಿರುವುದು. ಸುಮಾರು 1126 ಮತಗಳನ್ನು ಕ್ಷೇತ್ರದ ಜನತೆ ನೀಡಿದ್ದಾರೆ. ತಾವು ಗೆದ್ದರೂ, ಗೆಲ್ಲದಿದ್ದರೂ ಬಡ ಕ್ಷೌರಿಕರಿಗೆ ಉಚಿತವಾಗಿ ಕ್ಷೌರ ಪೆಟ್ಟಿಗೆಯನ್ನು, ಬಡ ಮಡಿವಾಳರಿಗೆ ಉಚಿತವಾಗಿ ಇಸ್ತ್ರಿ ಪೆಟ್ಟಿಗೆ ನೀಡುವ ಯೋಜನೆಯನ್ನು ಜಾರಿಗೆ ತರುತ್ತೇನೆ ಎಂದು ಹೇಳಿದ್ದೆ. ಅದರಂತೆ ಈಗಿನಿಂದಲೇ ಜಾರಿಗೊಳಿಸುವುದಾಗಿ ಹೇಳಿದರು. ತಾವು ಇತರೆ ಅಭ್ಯರ್ಥಿಗಳಂತೆ ಅಬ್ಬರದ ಪ್ರಚಾರವನ್ನೂ ಮಾಡಲಿಲ್ಲ. ಹೆಚ್ಚಿಗೆ ಹಣವನ್ನೂ ಖರ್ಚು ಮಾಡಲಿಲ್ಲ. ಆದಾಗ್ಯೂ ಜನರು ತಮ್ಮನ್ನು ಗುರುತಿಸಿ ಬೇರೆ ಪಕ್ಷೇತರರಿಗಿಂತ ಹೆಚ್ಚು ಮತ ನೀಡಿ ಗೌರವ ನೀಡಿದ್ದಾರೆ ಎಂದರು.
ಇಂದು ಕ್ಯಾಂಪಸ್ ಸಂದರ್ಶನ
ತುಮಕೂರು: ಹೇಮಾದ್ರಿ ಇನ್ಸಿಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಸ್ನಾತಕೋತ್ತರ ವಿಭಾಗದ ವತಿಯಿಂದ ಅಂತಿಮ ವರ್ಷದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮೇ 17 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಆವರಣದಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಧಾನ್ ಪೌಂಡೇಶನ್ ಸಂಸ್ಥೆಯ ವತಿಯಿಂದ ಈ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ ಎಂದು ವಿ.ಟಿ. ಮೋಹನ್ ತಿಳಿಸಿದ್ದಾರೆ.
ಇಂದು ಎಸ್ಐಟಿಯಲ್ಲಿ ಅಶ್ವಮೇಧ 2013
ತುಮಕೂರಿನ ಎಸ್ಐಟಿಯಲ್ಲಿ ರಾಜ್ಯಮಟ್ಟದ ಮ್ಯಾನೇಜ್ಮೆಂಟ್ ಹಬ್ಬ ಅಶ್ವಮೇಧ 2013 ನ್ನು ಮೇ 17 ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಡಾ. ಶಾಲಿನಿ ರಜನೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ. ಅತಿಥಿಗಳಾಗಿ ಎಸ್ಐಟಿ ಪ್ರಿನ್ಸಿಪಾಲ್ ಡಾ. ಶಿವಕುಮಾರಯ್ಯ, ಡೀನ್ ಪ್ರೊ. ಬಸವರಾಜಯ್ಯ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ ವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಏರ್ಪಾಟಾಗಿದೆ. ಎಸ್ಐಟಿ ಪ್ರಿನ್ಸಿಪಾಲ್ ಡಾ. ಶಿವಕುಮಾರಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಡೀನ್ ಪ್ರೊ. ಬಸರಾಜಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ ವಹಿಸಲಿದ್ದಾರೆ.
20 ರಂದು ಕಾಂತಿದೀವಿಗೆ ಕೃತಿ ಬಿಡುಗಡೆ
ಇದೇ ತಿಂಗಳ 20 ರಂದು ಬೆಳಗ್ಗೆ 10-30 ಗಂಟೆಗೆ ಕೆ.ಎನ್. ನವೀನ್ಕುಮಾರ್ ಅವರ ಕಾಂತಿದೀವಿಗೆ ಕೃತಿ ಲೋಕಾರ್ಪಣಾ ಸಮಾರಂಭವನ್ನು ಸಿದ್ಧಗಂಗಾ ಬಿಇಡಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕಸಾಪ, ಸಂಗೇನಹಳ್ಳಿಯ ಬಸವಶ್ರೀ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಡಿಡಿಪಿಐ ಬಿ. ಮೋಹನ್ಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ. ಮು. ಭಾಸ್ಕರಾಚಾರ್ ವಹಿಸಲಿದ್ದಾರೆ. ಗುಬ್ಬಿ ಸಿಐಟಿಯ ಕಾರ್ಯದರ್ಶಿ ಜ್ಯೋತಿಗಣೇಶ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ತುಮಕೂರು ವಿವಿಯ ಕನ್ನಡ ವಿಭಾಗದ ಅಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಕೃತಿ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಣಿಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಜಿ. ಲೋಕೇಶ್, ವಿಶೇಷ ಆಹ್ವಾನಿತರಾಗಿ ತುಮಕೂರು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹಾಗೂ ವಕೀಲ ರವೀಂದ್ರನಾಥ ಠಾಗೂರ್, ಕೆಸ್ತೂರು ಸಿದ್ದೇಶ್ವರ ಕಾಲೇಜಿನ ಪ್ರಿನ್ಸಿಪಾಲ್ ಲಿಂಗದೇವರು, ಚಿಕ್ಕೋನಹಳ್ಳಿಯ ಶಿವಣ್ಣ, ಕಂಚೇನಹಳ್ಳಿಯ ಕೆ.ವಿ. ಸಿದ್ದಪ್ಪ, ಹೆಸರಳ್ಳಿಯ ಸಿದ್ದಲಿಂಗಪ್ಪ ಪಾಲ್ಗೊಳ್ಳಲ್ಲಿದ್ದಾರೆ.