ಭಕ್ತ ಸಮೂಹದ ನಡುವೆ ಮಹಾ ರಥೋತ್ಸವ
ಶಿರಾ: ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಶ್ರೀ ಕ್ಷೇತ್ರ ಸಾಕ್ಷಿಹಳ್ಳಿಯಲ್ಲಿ ಶ್ರೀ ಮಣ್ಣಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆರಂಭಗೊಂಡಿದ್ದು ಗುರುವಾರ ಸಾವಿರಾರು ಭಕ್ತ ಸಮೂಹದ ನಡುವೆ ಮಹಾ ರಥೋತ್ಸವ ಜರುಗಿತು.
ಇಲ್ಲಿನ ಜಾತ್ರೆಯು ಸಾಲಳ್ಳಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಕಾರಣ ಸುತ್ತಲಿನ 11 ಸಾಲು ಹಳ್ಳಿಗಳಾದ ಸಾಕ್ಷಿಹಳ್ಳಿ, ಕುಂಬಾಹಳ್ಳಿ, ಕಿಲಾರದಹಳ್ಳಿ, ತುಪ್ಪದಕೋಣ, ಮಾರಗೊಂಡನಹಳ್ಳಿ, ಚಿನ್ನಯ್ಯನ ಪಾಳ್ಯ, ಕರೆಮಾದೇನಹಳ್ಳಿ, ರಾಮಲಿಂಗಾಪುರ ಹೊಸ ಕುರೆಹಳ್ಳಿ, ಮತ್ತು ಕಾಳಿಂಗನಹಳ್ಳಿ ಈ ಹಳ್ಳಿಗಳಿಗೆ ಶ್ರೀ ಮಣ್ಣಮ್ಮ ತಾಯಿಯು ಗ್ರಾಮದೇವತೆ. ಆದ್ದರಿಂದ ಈ ಊರುಗಳಲ್ಲಿ ಜಾತ್ರೆ ಬಹಳ ಅದ್ಧೂರಿಯಾಗಿ ನಡೆಯುತ್ತಿದೆ.
ಈ ಜಾತ್ರೆಯು ತುಮಕೂರು ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು. ಮತ್ತು ಇಲ್ಲಿನ ವಿಶೇಷ ಅಗ್ನಿಕೊಂಡೋತ್ಸವ ಹಾಗೂ ಮಹಾ ರಥೋತ್ಸವ. ಜನರು ತಮ್ಮ ಕಷ್ಟಗಳ ನಿವಾರಣೆಗೆ ಕೆಂಡದ ಮೇಲೆ ನಡೆಯುವುದು ಶತಮಾನಗಳಿಂದ ನಡೆದುಕೊಂಡು ಬಂದ ಈ ಭಾಗದ ಒಂದು ಆಚರಣೆಯಾಗಿದೆ.
ರಾಜ್ಯದ ವಿವಿಧೆಡೆಯಿಂದ ಹಾಗೂ ನೆರೆ ರಾಜ್ಯ ಆಂಧ್ರಪ್ರದೇಶದಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಮತ್ತು ನೆಂಟರ ದಂಡೆ ಇಲ್ಲಿನ ಹಳ್ಳಿಗಳಿಗೆ ಬರುತ್ತದೆ. ಇಲ್ಲಿಯವರ ಪಾಲಿಗೆ ಮಣ್ಣಮ್ಮ ದೇವಿಯು ಅಜ್ಜಿಯ ಸ್ಥಾನ
ತುಂಬಿದ್ದಾರೆ. ಆದ್ದರಿಂದ ಭಕ್ತರು ಪ್ರೀತಿಯಿಂದ ಮಣ್ಣಜ್ಜಿ ಎಂದು ಕರೆಯುವುದು ವಿಶೇಷ.
17 ರಂದು ಶುಕ್ರವಾರ ಸಪ್ತಮಿಯ ಆಶ್ಲೇಷ ನಕ್ಷತ್ರದಲ್ಲಿ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಸೋಮನ ಕುಣಿತ ನಡೆಯಲಿದೆ. ಮೇ 18 ಭಾನುವಾರ ಎಲ್ಲಾ ಊರುಗಳಲ್ಲಿ ಮಡ್ಲಕ್ಕಿ ಸೇವೆ ಮೆರವಣಿಗೆಗಳೊಂದಿಗೆ ನಡೆಯಲಿದೆ.
ಆಕಸ್ಮಿಕ ಬೆಂಕಿ: ಮಹಿಳೆ ಸಾವು, 2 ಮನೆ ಭಸ್ಮ
ಹುಳಿಯಾರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎರಡು ಹಂಚಿನ ಮನೆಗಳು ಭಸ್ಮಗೊಂಡು ಒಬ್ಬ ಮಹಿಳೆ ಬೆಂಕಿಗೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ಹುಳಿಯಾರು ಸಮೀಪ ದೊಡ್ಡಎಣ್ಣೆಗೆರೆ ಗ್ರಾಮದಲ್ಲಿ ಗುರುವಾರ ಘಟಿಸಿದೆ.
ನರುಗಲ್ ಗ್ರಾಮದ ನಾಗರತ್ನ (21) ಎಂಬಾಕೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದು, ದೊಡ್ಡಎಣ್ಣೆಗೆರೆಯ ಯತೀಶ್ ಎಂಬುವರೊಂದಿಗೆ ವಿವಾಹವಾಗಿ ಸಂಸಾರ ನಡೆಸುತ್ತಿದ್ದರು. ಅಡುಗೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು ಬೆಂಕಿ ತಗುಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ ಸಹ ಯಾವುದೇ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಹಂದನಕೆರೆ ಎಎಸ್ಐ ಖದರಪ್ಪ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.