ಆಡಳಿತ ಜಡ್ಡುಗಟ್ಟಿದೆ, ಕುಂಟು ನೆಪ ಬೇಡ
ಕ.ಪ್ರ.ವಾರ್ತೆ ಕುಣಿಗಲ್ ಮೇ 18
ಹಲವು ಕಾರಣಗಳಿಂದಾಗಿ ತಾಲೂಕು ಆಡಳಿತ ಜಡ್ಡುಗಟ್ಟಿದ್ದು, ಕಾರಣಗಳಿಗೆ ನೆಪ ಹುಡಕದೆ, ಮುಂದಿನ ದಿನಗಳಲ್ಲಿ ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಬೇಕಾಗಿದೆ. ಈ ಕಾರ್ಯ ತಾಲೂಕು ಕಚೇರಿಯಿಂದಲೇ ಚಾಲನೆ ನೀಡುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಶನಿವಾರ, ತಾಪಂ ಸಭಾಂಗಣದಲ್ಲಿ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳ ಸಬೆ ನಡೆಸಿದ ಅವರು, ಸಭೆಯಲ್ಲಿ ತಾಲೂಕು ಕಚೇರಿ ಅವ್ಯವಸ್ಥೆಯ ಆಗರವಾಗಿದ್ದು, ಮಾಸಾಶನ ವಿತರಿಸುವ ಗುಮಾಸ್ತೆ ಹದ್ದುಮೀರಿ ವರ್ತಿಸುತ್ತಿದ್ದು, ವಿನಾಕಾರಣ ಫಲಾನುಭವಿಗಳ ಮಾಸಾಶನ ರದ್ದುಗೊಳಿಸಿ, ಅವರಿಗೆ ಕಿರುಕುಳ ನೀಡುತ್ತಾ, ಹೊಸದಾಗಿ ಬಂದ ಅರ್ಜಿಗಳಿಗೆ ಸರಿಯಾಗಿ ನಿರ್ವಹಿಸದೆ ವಿನಾಕಾರಣ ಕಡತಗಳನ್ನು ಉಳಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಾ, ಎಷ್ಟು ಅರ್ಜಿಗಳು ಬಾಕಿ ಇವೆ ಎಂದು ತಹಸೀಲ್ದಾರ್ನ್ನು ಪ್ರಶ್ನಿಸಿದರು.
ಪರಿಶೀಲನೆಯಲ್ಲಿದೆ: ತಹಸೀಲ್ದಾರ್ ಜಗದೀಶ್, ತಾಲೂಕಿನಾದ್ಯಂತ ವಿವಿಧ ಫಲಾನುಭವಿಗಳಿಗೆ ಒಟ್ಟಾರೆ 22,072 ಮಾಸಾಶನ ನೀಡಲಾಗುತ್ತಿದ್ದು, ಹೊಸದಾಗಿ 1069 ಅರ್ಜಿಗಳಿದ್ದು ವಿವಿಧ ಹಂತದಲ್ಲಿ ಪರಿಶೀಲನೆಯಲ್ಲಿದೆ, ಮಾಸಾಶನ ನಿರ್ವಹಣೆಯ ಗುಮಾಸ್ತರ ಬಳಿ ಸುಮಾರು 700 ಕಡತಗಳಿವೆ. ಚುನಾವಣೆ ಸತತವಾಗಿ ಬಂದ ಕಾರಣ ನಿರ್ವಹಿಸಿಲ್ಲ ಎಂದರು.
ಅಗತ್ಯ ಕ್ರಮ: ಇದಕ್ಕೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ದಿನಂಪ್ರತಿ ಸಾಕಷ್ಟು ಅರ್ಜಿದಾರರು ವ್ಯಾಪಕವಾಗಿ ದೂರುತ್ತಿದ್ದು, ಸದರಿ ಗುಮಾಸ್ತರನ್ನು ಕೂಡಲೆ ಬದಲಾವಣೆ ಮಾಡುವ ಜೊತೆಯಲ್ಲಿ ತಾಲೂಕು ಕಚೇರಿಯಲ್ಲಿನ ಆಯಕಟ್ಟಿನ ವಿವಿಧ ಗುಮಾಸ್ತರನ್ನು ಬದಲಾಯಿಸಿ ಆಡಳಿತ ಚುರುಕುಗೊಳಿಸುವಂತೆ ಸೂಚಿಸಿದ ಮೇರೆಗೆ, ತಹಸೀಲ್ದಾರ್ ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕೆಂಪನಹಳ್ಳಿ ಗ್ರಾಮದಲ್ಲಿ ಆರು ಕೊಳವೆಬಾವಿ ಕೊರೆದರೂ ನೀರು ಲಭ್ಯವಾಗದ ಬಗ್ಗೆ ಜಿಪಂ ಎಂಜನಿಯರಿಂಗ್ ವಿಭಾಗದ ಜೆಇ ಕ್ಷೇತ್ರಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೊಳವೆಬಾವಿ ಕೊರೆಸಲು ಜಾಗ ಗುರುತಿಸಿದ್ದು ಯಾರೆಂದರು. ಇದಕ್ಕೆ ಜಿಯಾಲಜಿಸ್ಚ್ ದಾಸಪ್ಪ ತಾವು ಕೇವಲ ಎರಡನ್ನು ಮಾತ್ರ ಗುರುತಿಸಿದ್ದಾಗಿ ತಿಳಿಸಿದಾಗ, ಉಳಿಕೆ ಪಾಯಿಂಟ್ ಮಾಡಲು ಅವೈಜ್ಞಾನಿಕ ಕ್ರಮ ಕೈಗೊಂಡಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೂಡಲೆ ಸದರಿ ಪ್ರದೇಶದಲ್ಲಿ ಸೋಮವಾರದಿಂದಲೆ ಪಾಯಿಂಟ್ ಗುರುತಿಸಿ ಕೊಳವೆಬಾವಿ ಕೊರೆಸುವಂತೆ ಸೂಚಿಸಿದರು.
ಹಿಗ್ಗಾ ಮುಗ್ಗಾ ತರಾಟೆ: ಬರಪರಿಹಾರ ಯೋಜನೆಯಡಿಯಲ್ಲಿ ಕೊಳವೆಬಾವಿ ಕೊರೆಸಿದ ಕಂಪನಿಯವರಿಗೆ ಹಣ ನೀಡದಿರುವ ಬಗ್ಗೆ, 2012-13ನೇ ಆರ್ಥಿಕ ಸಾಲು ಪೂರ್ಣಗೊಂಡರೂ ಜಿಪಂ ಎಂಜಿನಿಯರಿಂಗ್ ವಿಭಾಗದ 13 ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಜಿಪಂ ಎಂಜಿನಿಯರಿಂಗ್ ವಿಭಾಗದ ಜೆಇಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕರು, ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವೆರೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಕೇಂದ್ರ ಸ್ಥಾನದಲ್ಲಿದ್ದು, ಗ್ರಾಮಾಂತರ ಪ್ರದೇಶದ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ಕೆಲಸ ಮಾಡುವಂತೆ ಸೂಚಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ಈಗಾಗಲೆ ಮುಂಗಾರು ಮಳೆ ಪ್ರಾರಂಭವಾಗಿದ್ದು 110 ಕ್ವಿಂಟಾಲ್ ಹೆಸರು, 50 ಕ್ವಿಂಟಾಲ್ ತೊಗರಿ,15 ಕ್ವಿಂಟಾಲ್ ಉದ್ದು, 25 ಕ್ವಿಂಟಾಲ್ ಅಲಸಂದೆ ಪೈಕಿ ಬಹುತೇಕ ದ್ವಿದಳ ಬಿತ್ತನೆ ಕಾಳುಗಳನ್ನು ರೈತರಿಗೆ ವಿತರಿಸಲಾಗಿದ್ದು, 5000 ಟನ್ ರಸಗೊಬ್ಬರ ಸಂಗ್ರಹಿಸಿ, ಮುಂದೆ ಬೇಕಾಗುವಷ್ಟು ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 4000 ಕ್ವಿಂಟಾಲ್ ಬಿತ್ತನೆ ಬತ್ತ ಸಂಗ್ರಹಿಸಲಾಗಿದೆ ಎಂದರು.
ಎಚ್ಚರಿಕೆ: ಶಾಸಕರು, ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಸೇರಿದಂತೆ ತಾಲೂಕಿನಲ್ಲಿ ರಸಗೊಬ್ಬರ ಅಭಾವವಾಗದಂತೆ ಕ್ರಮ ಕೈಗೊಳ್ಳಬೇಕು. ಯಾವುದೇ ಲೋಪದೋಷವಾದರೂ ನಿಮ್ಮನ್ನೆ ನೇರಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬೆಸ್ಕಾಂ ಇಇ ನಟರಾಜ್, ಕುಡಿಯುವ ನೀರು ಪೂರೈಕೆಗೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಟಿಸಿ ದುರಸ್ತಿ ವಿಷಯದಲ್ಲೂ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸುತ್ತಿದ್ದೇವೆ. ಪಟ್ಟಣದಲ್ಲಿ ನಿರ್ಮಿಸಲಾಗಿರುವ ಮಿನಿವಿಧಾನಸೌಧ ಕಾಮಗಾರಿಗೆ ಕಂಬಗಳು ಅಡ್ಡಿಯಾಗಿ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಶಾಸಕರು, ಗಮನ ಸೆಳೆದಾಗ ತಮ್ಮದೂ ಸರ್ಕಾರದ ಒಂದು ಅಂಗವೇ ಆಗಿರುವುದರಿಂದ ಕೂಡಲೆ ಕಂಬಗಳ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಹಸೀಲ್ದಾರ್ ಜಗದೀಶ್, ಹೇಮಾವತಿ ನಾಲೆಯ ವಿವಿಧ ವಲಯದ ಇಇಗಳಾದ ನಾಗರಾಜ್, ಚಂದ್ರಶೇಖರ್, ಭಾಸ್ಕರ್ರಾವ್ ಇದ್ದರು.
ಚತುಷ್ಪಥ ರಸ್ತೆ ಅವ್ಯವಸ್ಥೆ ಆಗರ; ಕೂಡಲೇ ಕ್ರಮ ಕೈಗೊಳ್ಳಿ
ಕುಣಿಗಲ್: ಪಟ್ಟಣ ಹೊರವಲಯ ಸೇರಿದಂತೆ, ತಾಲೂಕಿನ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ 48ರ ಚತುಷ್ಪಥ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರರ ಕಂಪನಿಯೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗೆ, ಶಾಸಕ ಡಿ.ನಾಗರಾಜಯ್ಯ ಸೂಚನೆ ನೀಡಿದರು.
ಶನಿವಾರ, ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಚಾಕೇನಹಳ್ಳಿ ಗ್ರಾಮದ ಬಳಿ ಸೇರಿದಂತೆ ಹಲವಾರು ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಯಡೆಯೂರು ಫ್ಲೈ ಓವರ್ ಮೇಲೆ ದೀಪಗಳು ಬೆಳಗದೆ ರಾತ್ರಿವೇಳೆ ತೀವ್ರ ಅನಾನುಕೂಲವಾಗುತ್ತಿದ್ದರೆ, ವಿವಿಧ ಫ್ಲೈಓವರ್ಗಳ ಇಕ್ಕೆಲಗಳಲ್ಲಿ ನಿರ್ಮಿಸಲಾಗಿರುವ ಚರಂಡಿಗಳಲ್ಲಿ ನೀರು ಹರಿಯುತ್ತಿಲ್ಲ. ಇನ್ನು ಮಳೆ ಬಂದರೆ ಫ್ಲೈಓವರ್, ಸಬ್ ವೇಗಳಲ್ಲಿ ನೀರು
ತುಂಬಿಕೊಂಡು ಪರದಾಡುವಂತಾಗಿದೆ ಎಂದರು.
ಅಪಘಾತಕ್ಕೆ ರಹದಾರಿ: ರಸ್ತೆಗಳಲ್ಲಿ ಏರು, ಪೇರಾಗಿ ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ರಸ್ತೆ ನಿರ್ಮಾಣ ಸಮಯದಲ್ಲಿ ಉಪಗುತ್ತಿಗೆ ನೀಡಿ ಕಳಪೆ ಕಾಮಗಾರಿ ಮಾಡಿರುವುದು ಹಲವು ಸಮಸ್ಯೆಗೆ ಕಾರಣವಾಗುತ್ತಿದ್ದು, ಇಲಾಖೆಯವರು ಎನು ಮಾಡುತ್ತಿದ್ದೀರೆಂದು, ರಾಹೆಅಪ್ರಾ (ಎನ್ಎಚ್ಎಐ) ಅಧಿಕಾರಿಯನ್ನು ಪ್ರಶ್ನಿಸಿದರು. ಶಾಸಕರ ಮಾತಿಗೆ ಧ್ವನಿಗೂಡಿಸಿ ಇಒ ಡಾ.ರಾಮಚಂದ್ರಪ್ಪ, ರಾಹೆ ಚತುಷ್ಪಥ ರಸ್ತೆ ಕಾಮಗಾರಿ ಮಾಡಲಾಗಿದೆ. ಆದರೆ ಬಹುತೇಕ ಕಡೆ ಸರ್ವಿಸ್ ರಸ್ತೆ ಮಾಡಿಲ್ಲ. ಇನ್ನು ಗ್ರಾಮದ ಜನತೆಗೆ ಒಂದೆಡೆಯಿಂದ ಮತ್ತೊಂದಡೆ
ತೆರಳಲು ಸೂಕ್ತ ವ್ಯವಸ್ತೆ ಮಾಡಿಲ್ಲ, ಯಾವುದೇ ವ್ಯವಸ್ಥೆ ಮಾಡದೆ ಟೋಲ್ ಸಂಗ್ರಹಣೆ ಮಾಡುವುದು ನಿಯಮಬಾಹಿರ. ಕೂಡಲೆ ಸರ್ವಿಸ್ ರಸ್ತೆ ನಿರ್ಮಾಣ ಸೇರಿದಂತೆ ನಿಯಮಾನುಸಾರ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದರು.
ಹಲವು ಅಪಘಾತ: ತಹಸೀಲ್ದಾರ್ ಜಗದೀಶ್, ರಸ್ತೆಯಲ್ಲಿ ಸಾಕಷ್ಟು ಏರುಪೇರಾಗಿರುವುದರಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ ಎಂದಾಗ, ಸಿಪಿಐ ಧರ್ಮೇಂದ್ರ, ರಾಹೆ48ರಲ್ಲಿ ತಾಲೂಕಿನ ವ್ಯಾಪ್ತಿಯಲ್ಲೆ ಕಳೆದ ವರ್ಷ 150 ಅಪಘಾತ ಪ್ರಕರಣಗಳಲ್ಲಿ 400 ಮಂದಿ ಮೃತಪಟ್ಟು, ಬಹುತೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಶೇ.50ರಷ್ಟು, ಪಟ್ಟಣದ ಬೈಪಾಸ್ನಲ್ಲಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮ್ಯಾನೇಜರ್ (ತಾಂತ್ರಿಕ) ಶಿರೀಶ್ ಗಂಗಾಧರ್ ಮಾತನಾಡಿ, ವಿವಿಧೆಡೆ ಈಗಾಗಲೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಪೂರೈಕೆಯ ತೊಂದರೆಯಿಂದ ಬೀದಿ ದೀಪಗಳು ಬೆಳಗುತ್ತಿಲ್ಲ. ಇನ್ನು ಕೆಲವೆಡೆ ತಾಂತ್ರಿಕ ದೋಷಗಳಿದ್ದು ಕೂಡಲೆ ದುರಸ್ತಿಗೊಳಿಸಲಾಗುವುದು. ರಸ್ತೆಯ ಏರುಪೇರು ಸೇರಿದಂತೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ, ಬಹುತೇಕ ಕಡೆ ಅವೈಜ್ಞಾನಿಕ ರಸ್ತೆ ಡಿವೈಡರ್ ಮಾಡಿಕೊಳ್ಳುವ ಕಾರಣ ಅಪಘಾತ ಹೆಚ್ಚಾಗುತ್ತಿವೆ. ನಾವು ಮುಚ್ಚಲು ಹೋದರೆ, ಜನ ಗಲಾಟೆ ಮಾಡುತ್ತಾರೆಂದು ಅಳಲು ತೋಡಿಕೊಂಡರು.