ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆ.ಎನ್. ರಾಜಣ್ಣಗೆ ಸಚಿವ ಸ್ಥಾನ ನೀಡಲು ಆಗ್ರಹ

Srinivasa Murthy VN
Updated On : 19 May 2013, 12:31 pm

ಪಾವಗಡ: ಜನಪ್ರಿಯ ನಾಯಕ ಹಾಗೂ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್. ರಾಜಣ್ಣ ಅವರನ್ನು ವಿಶೇಷವಾಗಿ ಗುರುತಿಸಿ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕೆಂದು ತಾಲೂಕಿನ ನಾಯಕ ಜನಾಂಗದ ಮುಖಂಡರು ಒತ್ತಾಯ ಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಜನಾಂಗದ ತಾಲೂಕು ಅಧ್ಯಕ್ಷ ಡಾ. ಓಂಕಾರನಾಯಕ ಮಾತನಾಡಿ, ಎಲ್ಲಾ ವರ್ಗದ ಜನಾನುರಾಗಿ ಹಾಗೂ ಅನೇಕ ಬಾರಿ ಶಾಸಕರಾಗಿ ಆಯ್ಕೆಗೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡ ಕೆ.ಎನ್.ರಾಜಣ್ಣ ನಾಯಕ ಜನಾಂಗಕ್ಕೆ ಸೇರಿದ್ದು ಮಧುಗಿರಿ ಕ್ಷೇತ್ರದಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ವರ್ಧಿಸಿ ಅತ್ಯಧಿಕ ಮತಗಳಿಂದ ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿಯೆ ನಾಯಕ ಜನಾಂಗದ ಏಕೈಕ ಶಾಸಕರಾಗಿದ್ದಾರೆ. ಎಲ್ಲಾ ವರ್ಗದ ಏಳಿಗೆಗೆ ಶ್ರಮಿಸಿದ ಹಾಗೂ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುವ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ನೀಡಿದರೆ ದಕ್ಷಿಣ ಕರ್ನಾಟಕದ ಹಿಂದುಳಿದ ನಾಯಕ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ ಎಂದು ಕೆಪಿಸಿಸಿಯಲ್ಲಿ ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ನಾಯಕ ಜನಾಂಗದ ಹಿರಿಯ ಮುಖಂಡರಾದ ಬಿ.ಎನ್.ನಾಗರಾಜು, ಕೊಂಡರಾಳ್ಳಪಲ್ಲಿ ಶ್ರೀನಿವಾಸ್, ಎತ್ತಿನಹಳ್ಳಿ ಈರಪ್ಪ, ಬೂದಿಬೆಟ್ಟ ಗಂಗಣ್ಣ, ಪೊನ್ನಸಮುದ್ರ ವಕೀಲ ರಾಜಣ್ಣ, ಬಿ.ಅಂಜನನಾಯಕ, ರಾಚಮಾರನಹಳ್ಳಿ ಆನಂದ್, ಮದಕರಿ ನಾಯಕ ಸಂಘದ ಅಧ್ಯಕ್ಷ ನಾಗರಾಜು, ತಾಪಂ ಸದಸ್ಯ ದಿವಾಕರ್ ಮುಂತಾದವರಿದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ
ತುಮಕೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ವಿಜ್ಞಾನ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2013-14ನೇ ಸಾಲಿನಲ್ಲಿ ಪ್ರಥಮ  ಪಿಯುಸಿ ತರಗತಿಯ ಪಿ.ಸಿ.ಎಂ.ಬಿ. ಮತ್ತು  ಪಿ.ಸಿ.ಎಂ.ಸಿ. ಸಂಯೋಗಗಳಿಗೆ ತಲಾ 40 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು.  ಉಚಿತ ಅರ್ಜಿಗಳು ಎಸ್.ಎಸ್.ಎಲ್.ಸಿ. ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ, ಮೊರಾರ್ಜಿ ದೇಸಾಯಿ  ಪದವಿಪೂರ್ವ ವಿಜ್ಞಾನ ಕಾಲೇಜು, ಗೊಲ್ಲಹಳ್ಳಿ, ಸಿದ್ದಾರ್ಥನಗರ, ತುಮಕೂರು ತಾಲೂಕು ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ದೊರೆಯಲಿದ್ದು, ಅರ್ಜಿಯನ್ನು ಭರ್ತಿ ಮಾಡಿ, ಮೇ 25 ರೊಳಗಾಗಿ ಸಲ್ಲಿಸಬೇಕು.

'ಹೆಣ್ಣು ಸ್ವಾವಲಂಬಿಯಾಗಿ ದುಡಿದರೆ ಉತ್ತಮ ಜೀವನ ನಡೆಸಲು ಸಾಧ್ಯ'
ಶಿರಾ: ಹೆಣ್ಣು ಸ್ವಾವಲಂಬಿಯಾಗಿ ದುಡಿದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಈ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂತಹ ಮಹಿಳೆಯರಿಗೆ ಉಪಯುಕ್ತ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಗ್ರಾ.ಪಂ. ಸದಸ್ಯೆ ಯಶೋಧರ ಅವರು ತಿಳಿಸಿದರು.  ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಿನೇಶ್.ಡಿ. ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ಸಬಲೀಕರಣ ಮಾಡುವಂತೆ ಕೆಲಸವನ್ನು ಜ್ಞಾನವಿಕಾಸ ಮಾಡುತ್ತದೆ ಎಂದರು.  ಶಿರಾ ತಾಲೂಕಿನಲ್ಲಿ ಸುಮಾರು 1.75 ಲಕ್ಷದಷ್ಟು ಉಳಿತಾಯವನ್ನು ಸದಸ್ಯರು ಮಾಡಿದ್ದಾರೆ. ಸಂಘದ ಸದಸ್ಯರಿಗೆ ಮೂಲ ಸೌಕರ್ಯ, ಹೈನುಗಾರಿಕೆ ಸ್ವ ಉದ್ಯೋಗ ಮಾಡಲು ಹಾಗೂ ಇತರೆ ಕಾರ್ಯಗಳಿಗೆ 45 ಕೋಟಿ ಹಣವನ್ನು ಆರ್ಥಿಕ ಸಹಾಯವಾಗಿ ನೀಡಿದೆ. ಈ ಉದ್ದೇಶದಿಂದ ಸದಸ್ಯರಿಗೆ ಇಂತಹ ತರಬೇತಿಯನ್ನು ನೀಡಿ ಸ್ವ ಉದ್ಯೋಗ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಇಂತಹ ತರಬೇತಿಯನ್ನು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ನೀಡಲಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳಾದ ಹೆಂಜಾರಪ್ಪ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಮಿತಾ, ವಲಯ ಮೇಲ್ವಿಚಾರಕ ಸುಬ್ರಹ್ಮಣ್ಯ, ಸಂಯೋಜಕಿ ಶೃತಿ, ಶೋಭಾ, ಹೊಲಿಗೆ ಶಿಕ್ಷಕಿ ವಿಜಯ ಮತ್ತಿತರರು ಹಾಜರಿದ್ದರು.

ಇಂದು ಕೆಂಪಮ್ಮದೇವಿ ರಥೋತ್ಸವ
ತಿಪಟೂರು: ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ರಥೋತ್ಸವವು ಭಾನುವಾರ ಮಧ್ಯಾಹ್ನ 1 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ  ನಡೆಯಲಿದ್ದು, ಸಂಜೆ 6.30ಕ್ಕೆ ಸಿಡಿ ಉತ್ಸವ, ಉಯ್ಯಾಲೋತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ.  ಮೇ 20ರಂದು ಹಾಲು ಪಲ್ಲಕ್ಕಿ ಉತ್ಸವ, ರಾತ್ರಿ 9.30ಕ್ಕೆ ಐರಾವತ ದರ್ಬಾರ್ ಹೂವಿನ ಅಲಂಕಾರದೊಂದಿಗೆ ನಗರದ ರಾಜಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಉತ್ಸವ ನಡೆಯಲಿದೆ.  

ಇಂದು ದೇವಸ್ಥಾನ ಕಳಸಾರೋಹಣ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಸತ್ತೇರಾಮನಹಳ್ಳಿ ಗ್ರಾಮದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದ ಕಳಸಾರೋಹಣ, ಕುಂಭಾಭಿಷೇಕ ಹಾಗೂ ಗಣಪತಿ ಪ್ರತಿಷ್ಠಾಪನಾ ಮಹೋತ್ಸವವು ಭಾನುವಾರ ಮತ್ತು ಮೇ 20ರಂದು ನಡೆಯಲಿದೆ.  ಗೋಮಾತೆ, ಗಂಗಾಪೂಜೆ, ವಾಸ್ತುಬಲಿ,  20ರಂದು ಮಹಾಗಣಪತಿ, ವಾಸ್ತು ನವಗ್ರಹ, ಮೃತ್ಯುಂಜಯ, ಶಾಂತಿ ಹೋಮ ನಡೆಯಲಿವೆ. ಶ್ರೀ ಚನ್ನಬಸವೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಶಿಖರ ಕಳಸಾರೋಹಣವು ಹೊನ್ನವಳ್ಳಿ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಲಿದ್ದಾರೆ. ಮಾಡಾಳಿನ ರುದ್ರಮುನಿ ಸ್ವಾಮೀಜಿ, ಕೆರೆಗೋಡಿ-ರಂಗಾಪುರ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ನಯ ಡಾ.ಅಭಿನವಮಲ್ಲಿಕಾರ್ಜುನಸ್ವಾಮೀಜಿ ಮತ್ತಿತರರು ಭಾಗವಹಿಸಲಿದ್ದಾರೆ.

22ರಂದು ದೂರವಾಣಿ ಅದಾಲತ್
ತುಮಕೂರು: ಬಿ.ಎಸ್.ಎನ್.ಎಲ್. ನ ತುಮಕೂರು ದೂರಸಂಪರ್ಕ ಮಹಾಪ್ರಬಂಧಕರ ಕಚೇರಿಯಲ್ಲಿ ಮೇ 22 ರಂದು ಬೆಳಿಗ್ಗೆ 11 ಗಂಟೆಗೆ ದೂರವಾಣಿ ಅದಾಲತ್ ನಡೆಯಲಿದೆ ಎಂದು ದೂರಸಂಪರ್ಕ  ಮಹಾಪ್ರಬಂಧಕರು ತಿಳಿಸಿದ್ದಾರೆ. ಅದಾಲತ್‌ಗೆ ಅರ್ಜಿ  ಸಲ್ಲಿಸುವ ಮೊದಲು ಕುಂದುಕೊರತೆ  ನಿವಾರಣೆಗೆ ಎಲ್ಲಾ ಸಾಮಾನ್ಯ ಮಾರ್ಗಗಳನ್ನು  ಕೈಗೊಂಡಿರಬೇಕು.  ಸಮಸ್ಯೆಯ ಪೂರ್ಣ  ವಿವರಗಳನ್ನೊಳಗೊಂಡ ಅರ್ಜಿಗಳನ್ನು  ಕಿರಿಯ ದೂರಸಂಪರ್ಕ ಅಧಿಕಾರ (ಪಿ.ಆರ್.) ಮಹಾ ಪ್ರಬಂಧಕರ ಕಚೇರಿ, ಬಿ.ಎಸ್.ಎನ್.ಎಲ್. ಅಶೋಕ ರಸ್ತೆ, ತುಮಕೂರು- ಇವರಿಗೆ ಮೇ 18ರ ಒಳಗೆ ತಲುಪುವಂತೆ ಕಳುಹಿಸಬೇಕು.  ಲಕೋಟೆಯ ಮೇಲೆ ದೂರವಾಣಿ ಅದಾಲತ್‌ಗೆ ಅರ್ಜಿ ಎಂದು ನಮೂದಿಸಬೇಕಾಗಿ ಅವರು ತಿಳಿಸಿದ್ದಾರೆ.

ಪ್ರೆಸಿಡೆನ್ಸಿ ಶಾಲೆಗೆ ಶೇ. 100 ಫಲಿತಾಂಶ
ಶಿರಾ: ಪಟ್ಟಣದ ದಿ ಪ್ರೆಸಿಡೆನ್ಸಿ ಶಾಲೆಯ 10 ನೇ ತರಗತಿಯ 2012-13ನೇ ಸಾಲಿನ ಐ.ಸಿ.ಎಸ್.ಸಿ. 10 ನೇ ತರಗತಿಯ ಪಲಿತಾಂಶ ಪ್ರಕಟಗೊಂಡಿದ್ದು ಶೇ. 100 ರಷ್ಟು ಪಲಿತಾಂಶ ಲಭ್ಯವಾಗಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎಂ.ಚಿದಾನಂದಗೌಡ ತಿಳಿಸಿದ್ದಾರೆ. ಐ.ಸಿ.ಎಸ್.ಸಿ. ವಿಭಾಗದ 10ನೇ ತರಗತಿಯಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 71 ಮಂದಿ ವಿದ್ಯಾರ್ಥಿಗಳ ಪೈಕಿ 21 ಮಂದಿ ಅತ್ಯುನ್ನತ, 40 ಮಂದಿ ಪ್ರಥಮ, ಹಾಗೂ 10 ಮಂದಿ ದ್ವಿತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಕಳೆದ 2008 ರಿಂದಲೂ ಐ.ಸಿ.ಎಸ್.ಸಿ. 10 ನೇ ತರಗತಿಯ ಪರೀಕ್ಷೆಯಲ್ಲಿ ಪ್ರೆಸಿಡೆನ್ಸಿ ಶಾಲೆಯು ಶೇ. 100 ರಷ್ಟು ಫಲಿತಾಂಶ ಪಡೆಯುತ್ತಲೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಗುಬ್ಬಿ:  ವೇಗವಾಗಿ ಚಲಿಸುತ್ತಿದ್ದ ಟ್ಯಾಂಕರ್ ಲಾರಿ ಹಾಗೂ ದ್ವಿಚಕ್ರ ವಾಹನ  ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುಬ್ಬಿ ತಾಲೂಕಿನ ಮತ್ತಿಘಟ್ಟ ಗೇಟ್ ಬಳಿ ನಡೆದಿದೆ. ತುಮಕೂರು ಭಾರತಿನಗರ ಬಡಾವಣೆಯ ನಿವಾಸಿ ನಾಗರಾಜು (35) ಮೃತಪಟ್ಟ ದುರ್ದೈವಿ. ಬೆಳಿಗ್ಗೆ ತುಮಕೂರಿನಿಂದ ಕಾರ್ಯ ನಿಮಿತ್ತ ತಮ್ಮ ದ್ವಿಚಕ್ರವಾಹನದಲ್ಲಿ  ದಬ್ಬೆಘಟ್ಟ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement