ವರದಕ್ಷಿಣೆ ಕಿರುಕುಳ: ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ
ಮಧುಗಿರಿ: ವಿವಾಹಿತ ಮಹಿಳೆಯೊಬ್ಬಳು ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಸಹಿಸಲಾರದೇ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಧುಗಿರಿಯಲ್ಲಿ ಭಾನುವಾರ ಬೆಳಿಗ್ಗೆ ಜರುಗಿದೆ. ಗಾಯಿತ್ರಿ (25) ಮೃತಪಟ್ಟ ರ್ದುದೈವಿ ಎಂದು ಗುರುತಿಸಲಾಗಿದ್ದು, ಪಾವಗಡ ಟೌನಿನ ಶ್ರೀರಾಮಪ್ಪ, ಲಕ್ಷ್ಮಮ್ಮ ದಂಪತಿಯ ಮಗಳು. ಮೂರು ವರ್ಷಗಳ ಹಿಂದೆ ಈಕೆಯನ್ನು ಮಧುಗಿರಿ ಪಟ್ಟಣದ ಲಕ್ಷ್ಮಣ, ಈರಮ್ಮ ಎಂಬ ದಂಪತಿಗಳ ಮಗ ಗುರುಪ್ರಸಾದ್ ಎಂಬಾತನಿಗೆ ವಿವಾಹ ಮಾಡಿ ಕೊಡಲಾಗಿತ್ತು. ಆಗಾಗ್ಗೆ ಗಂಡನ ಮನೆಯವರು ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಏನ್ನಲಾಗಿದ್ದು, ಈಕೆಗೆ ಒಂದು ಹೆಣ್ಣು ಮಗುವಿದೆ. ಗಾಯಿತ್ರಿ ಜೀವನದಲ್ಲಿ ಜಿಗುಪ್ಸೆಗೊಂಡು ಮಧುಗಿರಿ ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಹೊರ ವಲಯದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಮೃತಳ ತಂದೆ ಶ್ರೀರಾಮಪ್ಪ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರು. 10 ಲಕ್ಷ ಪರಿಹಾರಕ್ಕೆ ಸಿಐಟಿಯು ಆಗ್ರಹ
ತುಮಕೂರು: ನಗರದ ವಾರ್ಡ್ ನಂ.1 ರಲ್ಲಿ ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ನಡೆಯುವಾಗ ನಿರ್ಲಕ್ಷ್ಯದಿಂದ ವಿದ್ಯುತ್ ಹರಿದು ಬೆಸ್ಕಾಂ ನೌಕರ ಎಸ್.ಕೆ. ಸದ್ದಾಂ ಮೃತಪಟ್ಟಿದ್ದು ಈ ಘಟನೆಗೆ ಕಾರಣಕರ್ತರಾದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಬೆಸ್ಕಾಂ ನೌಕರನ ಅವಲಂಬಿತರಿಗೆ 10 ಲಕ್ಷ ರು. ಪರಿಹಾರ ನೀಡಬೇಕೆಂದು ಸಿಐಟಿಯು ಆಗ್ರಹಿಸಿದೆ. ನೌಕರರಿಗೆ ಯಾವುದೇ ಸೂಕ್ತ ರಕ್ಷಣಾ ಸಾಮಗ್ರಿಗಳಿಲ್ಲದೆ ಸಾವುಗಳು ಪದೇ ಪದೆ ನಡೆಯುತ್ತಿದೆ. ಬೆಸ್ಕಾಂ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದು ಇತ್ತೀಚಿಗೆ 3500 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕನ್ನು 5-6 ವರ್ಷಗಳ ಸೇವೆ ಮಾಡಿದ್ದವರನ್ನು ಕೆಲಸದಿಂದ ವಜಾಮಾಡಿದೆ. ಈ ಸಂಬಂದ ವಜಾ ಮಾಡಿರುವ ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಿಸಿಕೊಂಡು ಇಂಥಹ ಅವಘಡಗಳನ್ನು ತಪ್ಪಿಸಬೇಕೆಂದು ಸಿಐಟಿಯು ಆಗ್ರಹಿಸುತ್ತದೆ. ಇಂತಹ ಘಟನೆಗಳು ಮುಂದೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಸಂಬಂದಪಟ್ಟಂತಹ ಇಲಾಖೆಗಳು ಮುಂಜಾಗ್ರತ ಕ್ರಮವಹಿಸಬೇಕೆಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಅಂಧ ವಿದ್ಯಾರ್ಥಿಗಳಿಂದ ದಾಖಲಾತಿಗೆ ಅರ್ಜಿ ಆಹ್ವಾನ
ಕುಣಿಗಲ್: ಶ್ರೀ ಸಿದ್ದಗಂಗಾ ಮಠ ತುಮಕೂರು ಆಶ್ರಯದಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಕರ್ನಾಟಕ ನವಚೇತನ ಅಂಧಮಕ್ಕಳ ಪಾಠಶಾಲೆಗೆ 2013-14ನೇ ಸಾಲಿಗೆ ಅಂಧ ವಿದ್ಯಾರ್ಥಿಗಳಿಂದ ದಾಖಲಾತಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಸದರಿ ಶಾಲೆಯು ಸ್ವಂತ ಕಟ್ಟಡವನ್ನು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಈಗಾಗಲೆ ರಾಜ್ಯದ ವಿವಿಧೆಡೆ ಅಂಧವಿದ್ಯಾರ್ಥಿಗಳಿಗೆ ಒಂದರಿಂದ ಏಳನೇ ತರಗತಿವರೆಗೂ ಉಚಿತವಾಗಿ, ವಸತಿ, ಸಮವಸ್ತ್ರ, ಊಟೋಪಚಾರ ಜೊತೆಯಲ್ಲಿ ಶಿಕ್ಷಣ ನೀಡಿದೆ. 2013-14ನೇ ಸಾಲಿಗೆ ಅಂಧಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಶಾಲೆಗೆ ತಮ್ಮ ಮಕ್ಕಳನ್ನು ಸೇರಬಯಸುವ ಪೋಷಕರು 20-06-2013 ರಿಂದ 30-06-2013ರೊಳಗೆ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಲು ಕೋರಲಾಗಿದೆ. ಒಂದನೇ ತರಗತಿಗೆ ಸೇರಬಯಸುವ ಮಕ್ಕಳಿಗೆ 5 ವರ್ಷ 10 ತಿಂಗಳಿಂದ ಏಳು ವರ್ಷದ ವಯೋವಾನ ನಿಗದಿಗೊಳಿಸಿದ್ದು, ಬೇರೆ ತರಗತಿಗೆ ಸೇರಬಯಸುವ ವಿದ್ಯಾರ್ಥಿಗಳು ಈ ಹಿಂದೆ ವಿದ್ಯಾಭ್ಯಾಸ ಮಾಡಿರುವ ಶಾಲೆಯ ವರ್ಗಾವಣೆ ಪತ್ರ ಹಾಜರು ಪಡಿಸಬೇಕಾಗಿದ್ದು, ದಾಖಲಾದ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯದೆ, ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸಲಿದ್ದು, ಅಂಧ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸಂಗೀತ, ಊಟ, ಬಟ್ಟೆ, ಸೋಪು, ವಸತಿ ಸೌಕರ್ಯ ನೀಡಲಿದ್ದು ಹೆಚ್ಚಿನ ವಿವರಗಳಿಗೆ, ದೂರವಾಣಿ ಸಂ.08132 220550 ಅಥವಾ 98448 55643ಗೆ ಸಂಪರ್ಕಿಸುವಂತೆ ಮುಖ್ಯೋಪಾದ್ಯಾಯ ಸದಾಶಿವಯ್ಯ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.