ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಪುಸ್ತಕ ಓದುವ ಸಂಸ್ಕೃತಿ ಬೆಳೆಯಬೇಕು'

Srinivasa Murthy VN
Updated On : 21 May 2013, 10:34 am

ಕ.ಪ್ರ.ವಾರ್ತೆ ತುಮಕೂರು ಮೇ 21
ಎಲ್ಲಾ ವಯೋವಾನದವರಲ್ಲೂ ಕೂಡ ಪುಸ್ತಕ ಓದುವ ಸಂಸ್ಕೃತಿ ಬೆಳೆಯಬೇಕು ಎಂದು ಕವಿ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.
ಅವರು ಕುಣಿಗಲ್ ತಾಲೂಕು ಸೊಂದಲಗೆರೆಯಲ್ಲಿ ನಡೆದ ಸೊಂದಲಗೆರೆ ಲಕ್ಷ್ಮೀಪತಿ ಅವರ ಹವಳ ದ್ವೀಪ  ಕೃತಿ ಬಿಡುಗಡೆ ಹಾಗೂ ಪಟೇಲ್ ನಾರಸೀಗೌಡ ಸಾಂಸ್ಕೃತಿಕ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪುಸ್ತಕ ಓದುವುದರಿಂದ ನಮ್ಮ ಬುದ್ಧಿ ವಿಕಾಸವಾಗುವುದರ ಜತೆಗೆ ನಮ್ಮನ್ನು ಮಾನವೀಯಗೊಳಿಸುತ್ತದೆ ಎಂದು ನುಡಿದರು. ಅಮೆರಿಕಾ ದೇಶದಲ್ಲಿ ದುಡಿಮೆ ಮಾಡುವವನಿಗೆ ಹೆಚ್ಚು ಸಂಬಳ ಸಿಗುತ್ತದೆ. ಆದರೆ ನಮ್ಮ ದೇಶದಲ್ಲಿ ಓದಿದರೆ ಮಾತ್ರ ಹಣ ಸಿಗುತ್ತದೆ. ರಟ್ಟೆಯ ಬಲ ನಂಬಿದರೆ ಇಲ್ಲಿ ಯಾವ ಉಪಯೋಗವಿಲ್ಲ. ಹಾಗಾಗಿ ಈ ಗ್ರಾಮದ ಯುವಕರು ಹೆಚ್ಚೆಚ್ಚೆ ವಿದ್ಯಾವಂತರಾಗಬೇಕು ಎಂದು ಕರೆ ನೀಡಿದರು. ಸೊಂದಲಗೆರೆ ಲಕ್ಷ್ಮೀಪತಿ ಅವರು ಆರಂಭಿಸಿರುವ ಈ ಗ್ರಂಥಾಲಯವನ್ನು ಪ್ರತಿಯೊಬ್ಬರು ಉಪಯೋಗಿಸಿಕೊಳ್ಳಿ ಎಂದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ಮಾತನಾಡಿ ಈ ಪುಟ್ಟ ಗ್ರಾಮದಲ್ಲಿ ಗ್ರಂಥಾಲಯ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಸೊಂದಲಗೆರೆ ಲಕ್ಷ್ಮೀಪತಿ ಅವರ ಕಾಳಜಿಯಿಂದಾಗಿ ಈ ಗ್ರಾಮಕ್ಕೆ ಗ್ರಂಥಾಲಯ ಬಂದಂತಾಗಿದೆ. ಇದರ ಉಪಯೋಗವನ್ನು ಪ್ರತಿಯೊಬ್ಬರು ಪಡೆಯುವಂತಾಗಬೇಕು ಎಂದರು. ಕಾರ್ಯಕ್ರಮದ ನಂತರ ಕಥಾ ಕೀರ್ತನಕಾರ ಡಾ. ಲಕ್ಷ್ಮಣದಾಸ್ ಅವರು ಪಂಪನ ಕುರಿತು ಹರಿಕಥೆ ನಡೆಸಿಕೊಟ್ಟರು. ಕಾರ್ಯಕ್ರಮ ಆಯೋಜಕ ಸೊಂದಲಗೆರೆ ಲಕ್ಷ್ಮೀಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಾ ನಿರೂಪಿಸಿದರು.

ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶಿರಾ:
2013-14ನೇ ಸಾಲಿನಲ್ಲಿ ಶಿರಾ ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ (ಬಿ.ಸಿ.ಎಂ.) ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ನಡೆಯುತ್ತಿರುವ ಸ್ಥಳಗಳೆಂದರೆ ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿ ನಿಲಯ ಶಿರಾ, ದ್ವಾರನಕುಂಟೆ, ಬುಕ್ಕಾಪಟ್ಟಣ, ಕಟಾವೀರನಹಳ್ಳಿ, ಹೊಸೂರು, ಚಿಕ್ಕನಹಳ್ಳಿ, ಗೊಲ್ಲಹಳ್ಳಿ, ಶಿರಾ ಪಟ್ಟಣದ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ. ಸರ್ಕಾರ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ 5 ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸದರಿ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಸೇರಬಯಸುವ ವಿದ್ಯಾರ್ಥಿಗಳು ಆಯಾ ಊರಿನ ವಿದ್ಯಾರ್ಥಿ ನಿಲಯಗಳಲ್ಲಿ ಅಥವಾ ಪಟ್ಟಣದ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ಹಳೇ ಸರ್ಕಾರಿ ಆಸ್ಪತ್ರೆ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement