ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಸೋಲು ಸೋಲಲ್ಲ: ಈಶ್ವರಪ್ಪ ಸ್ವಯಂ ವ್ಯಾಖ್ಯಾನ

Srinivasa Murthy VN
Updated On : 21 May 2013, 10:31 am

ಕ.ಪ್ರ.ವಾರ್ತೆ ತುಮಕೂರು ಮೇ 21
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವ ಬಗ್ಗೆ ಮಾಜಿ ಉಪಮುಖ್ಯಮಂತ್ರಿ, ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೊಸ ವ್ಯಾಖ್ಯಾನ ಮಾಡಿದ್ದಾರೆ.
ಬಿಜೆಪಿ ಸೋಲು ಸೋಲಲ್ಲ. ಆ ಸೋಲು ನಮಗೆ ಸೋಲೇ ಅಲ್ಲ. ಸೋಲು ನಮಗೆ ಹೊಸದಲ್ಲ. ಆದರೆ ಜನತೆಯ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಅವರು ತುಮಕೂರಿನ ಸಿದ್ಧಿವಿನಾಯಕ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಏರ್ಪಾಟಾಗಿದ್ದ ತುಮಕೂರು ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿಗೆ  ಸೋಲು ಹೊಸದಲ್ಲ.  ಸೋಲಿಗೆ ಕಾರಣ ಹುಡುಕುತ್ತಾ ಕೂರುವ ಕಾಲ ಇದಲ್ಲ. 1984 ರಲ್ಲಿ ಬಿಜೆಪಿ ಕೇವಲ 2 ಸಂಸದ ಸ್ಥಾನಗಳನ್ನು ಗೆದ್ದಿತ್ತು. ಆಗಲೂ ನಮ್ಮ ನಾಯಕರು ಪಲಾಯನ ಮಾಡಿರಲಿಲ್ಲ. ಇದೊಂದು ಸಹಜ ಪ್ರಕ್ರಿಯೆ. ಜನ ತೀರ್ಮಾನ ಕೊಟ್ಟಿದ್ದಾರೆ. ಅದನ್ನು ಗೌರವಿಸುತ್ತೇವೆ ಎಂದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಕೆಲ ವಿಚಿತ್ರ ರಾಜಕೀಯ ಬೆಳವಣಿಗೆಯಿಂದಾಗಿ ಪ್ರಮುಖ ಸ್ಥಾನದಲ್ಲಿದ್ದವರು, ಕ್ರಿಮಿನಲ್ ಕೇಸುಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದ ಮೇಲೆ ಉಂಟಾದ ಗೊಂದಲದಿಂದ ಕಾರ್ಯಕರ್ತರಲ್ಲಿ ಹಲವು ಅನುಮಾನಗಳು ಮೂಡಿದ ಕಾರಣ ಬಿಜೆಪಿಯ ಮತಬ್ಯಾಂಕ್ ವಿಭಜನೆಯಾಗಿ ಬಿಜೆಪಿ ಸೋಲನುಭವಿಸುವಂತಾಯಿತು. ಅಲ್ಲದೆ ವೈಯಕ್ತಿಕ ಪ್ರತಿಷ್ಠೆಗಾಗಿ ಪಕ್ಷವನ್ನು ವಿಭಜನೆ ಮಾಡಿದವರ ಸ್ಥಿತಿ ಇಂದು ಏನಾಗಿದೆ ಎಂಬುದನ್ನು ನಾವಿಂದು ನೋಡುತ್ತಿದ್ದೇವೆ ಎಂದು ಈಶ್ವರಪ್ಪ ವಿಶ್ಲೇಷಿಸಿದರು.
ಗುಂಪುಗಾರಿಕೆ, ಭ್ರಷ್ಟಾಚಾರದ ವಿರುದ್ಧ ಮತ: ಬಿಜೆಪಿಯಲ್ಲಿನ ಗುಂಪುಗಾರಿಕೆ, ಭ್ರಷ್ಟಾಚಾರದ ವಿರುದ್ಧ ಜನತೆ ಮತ ಚಲಾಯಿಸಿದರು ಎಂಬುದನ್ನು ಒಪ್ಪಿಕೊಂಡ ಈಶ್ವರಪ್ಪ, ಪಕ್ಷದೊಳಗಿನ ಗುಂಪುಗಾರಿಕೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪಾಠ ಕಲಿಯಬೇಕಿದೆ ಎಂದರು.
ಕಾಂಗ್ರೆಸ್ ಗೆಲವಲ್ಲ: ಕೆಜೆಪಿ - ಬಿಜೆಪಿ ನಡುವೆ ಮತ ವಿಭಜನೆಯಾದ ಪರಿಣಾಮ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸ್ವಂತ ಶಕ್ತಿಯಿಂದಾಗಲೀ, ಅಥವಾ ಹೋರಾಟ ಮಾಡಿಯೇ ಆಗಲಿ  ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಮತಬ್ಯಾಂಕ್ ವಿಭಜನೆ ಕಾಂಗ್ರೆಸ್ ಗೆಲವಿಗೆ  ಮೂಲ ಕಾರಣ. ಒಂದು ಬಾರಿ ಕಾಂಗ್ರೆಸ್ ಪಾದಯಾತ್ರೆ ಮಾಡಿದ್ದು ಬಿಟ್ಟರೆ, ಬೇರೆ ಹೋರಾಟವನ್ನೇ ಮಾಡಿಲ್ಲ ಎಂದು ಈಶ್ವರಪ್ಪ ವಿಶ್ಲೇಷಿಸಿದರು.
6 ಸೀಟಿಗಾಗಿ ಕೆಜೆಪಿ ಕಟ್ಟಬೇಕಿತ್ತಾ: ಕೇವಲ 6 ಸೀಟಿಗಾಗಿ ಯಡಿಯೂರಪ್ಪ ಕೆಜೆಪಿ ಕಟ್ಟಬೇಕಿತ್ತಾ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದ ಈಶ್ವರಪ್ಪ, ಬಿಎಸ್‌ವೈ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಕುರಿತಂತೆ, ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ವೆಂಕಯ್ಯ ನಾಯ್ಜು ಸ್ಪಷ್ಟವಾಗಿ ಹೇಳಿದ್ದಾರೆ. ಬಿಎಸ್‌ವೈ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಪ್ರಶ್ನೆಯೇ ಇಲ್ಲ. ಇದಕ್ಕೆ ತಮ್ಮ ಸಹಮತವಿದೆ ಎಂದರು.
ಹಾವೇರಿಯಲ್ಲೇ ಕೆಜೆಪಿ ಕೊನೆ: ಹಾವೇರಿಯಲ್ಲಿ ಹುಟ್ಟಿದ ಕೆಜೆಪಿ ಅಲ್ಲೇ ಕೊನೆಯಾಗಲಿದೆ. ಈಗ ಹಾವೇರಿಯಲ್ಲೇ ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ದವರು ಮತ್ತೆ ಬಿಜೆಪಿಗೆ ವಾಪಸ್ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕಿದೆ. ಹಾಗೂ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಬಿಜೆಪಿ ಸೇರ್ಪಡೆಯಾಗುವವರನ್ನು ಅತ್ಯಂತ ಎಚ್ಚರಿಕೆಯಿಂದ ಪರೀಕ್ಷಿಸಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕಿದೆ. ಈ ವಿಚಾರದಲ್ಲಿ ಜಿಲ್ಲಾ ನಾಯಕರು ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಡುವುದು ಸೂಕ್ತ. ಯಾರು ಬರಲಿ, ಬಿಡಲಿ ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕಾಗಿದೆ ಎಂದು ಈಶ್ವರಪ್ಪ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಹೊಸ ಸದಸ್ಯತ್ವ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಾಗೂ ನಂತರ ಹಲವಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಸದಸ್ಯತ್ವ ನೀಡುವ ನಿಟ್ಟಿನಲ್ಲಿ ಮೇ 24, 25, 26 ರಂದು ವಿಶೇಷ ನೋಂದಣಿ ಆಂದೋಲನವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏರ್ಪಡಿಸಲಾಗಿದೆ. ಇದರ ಜತೆಗೆ ಮೇ  31, ಜೂ. 1 ಹಾಗೂ 2 ರಂದು ಅವರಿಂದ ಸದಸ್ಯತ್ವ ಶುಲ್ಕ ಪಡೆದು ಅವರಿಗೆ ಪಕ್ಷದ ಸಿದ್ಧಾಂತಗಳ ಪರಿಚಯ ಮಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಬಿ.ಸಿ. ನಾಗೇಶ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಶ್ವತ್ಥನಾರಾಯಣ, ಮುಖಂಡರಾದ ಕೃಷ್ಣಪ್ಪ, ದೊಡ್ಡಮನೆ ಗೋಪಾಲಗೌಡ, ಬೈರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಇತರರು ಉಪಸ್ಥಿತರಿದ್ದರು.

ನನ್ನ ಸೋಲಿಗೆ ನಾನೇ ಕಾರಣ: ಕೆಎಸ್‌ಇ
ನನ್ನ ಸೋಲಿಗೆ ನಾನೇ ಕಾರಣ. ಇದಕ್ಕೆ ಬೇರೆಯವರನ್ನು ದೂಷಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ಅವರು ತುಮಕೂರಿನಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆ ಫಲಿತಾಂಶದ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೆಜೆಪಿಗೆ ಹೋಗಿದ್ದವರು ಮತ್ತೆ ಬಿಜೆಪಿಗೆ ಬರುತ್ತಿದ್ದಾರೆ. ಅವರ ಕುರಿತು ಎಚ್ಚರಿಕೆ ವಹಿಸಬೇಕಿದೆ ಎಂದರು. ಕೆಜೆಪಿ ಅಧ್ಯಕ್ಷ ಯಡಿಯೂರಪ್ಪನವರೇ ಹೇಳಿದ್ದಾರೆ. ಇದು ಕಾಂಗ್ರೆಸ್ ಗೆಲುವಲ್ಲ. ತಮ್ಮ ಗೆಲುವು ಎಂದು. ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದು ಬಿಟ್ಟರೆ, ಮತ್ಯಾವ ಹೋರಾಟ ಮಾಡಲಿಲ್ಲ. ಆದರೆ ಬಿಜೆಪಿಯಲ್ಲಿನ ಭಿನ್ನಮತ, ಗೊಂದಲದಿಂದ, ಮತ ವಿಭಜನಯಿಂದಾಗಿ ಕಾಂಗ್ರೆಸ್ ಅನಾಯಾಸವಾಗಿ ಗೆದ್ದು ಬರುವಂತಾಯಿತು ಎಂದು ಈಶ್ವರಪ್ಪ ವಿಶ್ಲೇಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement