27 ರಂದು ಬೆಂಗಳೂರು ಚಲೋ
ಕ.ಪ್ರ.ವಾರ್ತೆ ತುಮಕೂರು ಮೇ 22
ಮೇ.27 ರಂದು ರಾಜ್ಯ ಸಿಪಿಐ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ರಾಜ್ಯ ಮುಖಂಡ ಎನ್. ಶಿವಣ್ಣ ತಿಳಿಸಿದರು.
ಅವರು ತುಮಕೂರಿನ ಪತ್ರಿಕಾ ಭವನದಲ್ಲಿ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 1996 ರ ಕಾಯ್ದೆಯಡಿಯಲ್ಲಿ ಹಲವಾರು ಸೌಲಭ್ಯಗಳನ್ನು ನೀಡಲು ಅನುಕೂಲವಾಗುವಂತೆ ಎಲ್ಲ ರಾಜ್ಯಗಳು ನಿಯಮಾವಳಿಗಳನ್ನು ರೂಪಿಸಿ, ಕಾರ್ಮಿಕ ಕಲ್ಯಾಣ ಮಂಡಳಿ ರಚಿಸಿ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಕೇರಳ, ತಮಿಳ್ನಾಡು, ಕರ್ನಾಟಕ ಹಾಗೂ ಇನ್ನಿತರೆ ಕೆಲವೇ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ, ಬಹುತೇಕ ರಾಜ್ಯಗಳು ಕಾಯ್ದೆ ಜಾರಿಗಾಗಿ ಪ್ರಯತ್ನವನ್ನೇ ಮಾಡಿಲ್ಲ. ಇನ್ನುಳಿದಂತೆ ಪ್ರಯತ್ನ ನಡೆದಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಶಿವಣ್ಣ ದೂರಿದರು.
ಕಾಯ್ದೆಯಡಿಯಲ್ಲಿ ಅಪಘಾತ ಪರಿಹಾರ, ಪಿಂಚಣಿ ಸೌಲಭ್ಯ, ವೈಧ್ಯಕೀಯ ಚಿಕಿತ್ಸೆ ಸಹಾಯ, ಶಿಕ್ಷಣಕ್ಕೆ ಸಹಾಯ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಮನೆ ಕಟ್ಟಲು ಅಥವಾ ಕೊಂಡು ಕೊಳ್ಳಲು ಧನಸಹಾಯ ಸೇರಿದಂತೆ ಹಲವಾರು ಸೌಲಭ್ಯಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿವೆ. ಹಾಲಿ ಸಿಗುತ್ತಿರುವ ಸೌಲಭ್ಯಗಳ ಮೊತ್ತವೂ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಾನ್ ಫೆಡರೇಷನ್ ರಾಷ್ಟ್ರೀಯ ಸಮ್ಮೇಳನವು ಮಾರ್ಚ್ 2013 ರಲ್ಲಿ ತಿರುಪತಿಯಲ್ಲಿ ನಡೆದು ದೇಶಾದ್ಯಂತ ಕಾಯ್ದೆಯ ಸಮರ್ಪಕ ಜಾರಿಗಾಗಿ, ಏಕರೀತಿಯ ಸೌಲಭ್ಯಗಳ ಜಾರಿಗಾಗಿ, ಅಪಘಾತ ಪರಿಹಾರ ಹೆಚ್ಚಳಕ್ಕಾಗಿ, ಪಿಂಚಣಿ ಮೊತ್ತ ಹೆಚ್ಚಳಕ್ಕಾಗಿ ಹಾಗೂ ಅಂತರಾಜ್ಯ ವಲಸೆ ಕಾರ್ಮಿಕರನ್ನು ರಾಷ್ಟ್ರೀಯ ಮಟ್ಟದಲ್ಲಿ ನೊಂದಾಯಿಸುವ ಹಾಗೂ ಇನ್ನಿತರೆ ಸೌಲಭ್ಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮೇ. 27 ರಂದು ಆಯಾ ರಾಜ್ಯಗಳ ರಾಜಧಾನಿಯಲ್ಲಿ ಸೆಕ್ರೆಟರಿಯೇಟ್ ಚಲೋ ನಡೆಸಲು ಕರೆ ನೀಡಿದೆ ಎಂದು ತಿಳಿಸಿದರು.
ಸಾವಿರಾರು ಮಂದಿ ಪಾಲ್ಗೊಳ್ಳಲ್ಲಿದ್ದಾರೆ: ಮೇ 27 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ರಾಜ್ಯದ ಮೂಲೆ -ಮೂಲೆಗಳಿಂದ ಬರುವ ಸಾವಿರಾರು ಕಟ್ಟಡ ಕಾರ್ಮಿಕರು ಮೆರವಣಿಗೆಯಲ್ಲಿ ಹೊರಟು, ಖೋಡೆ ವತ್ತ, ಆನಂದರಾವ್ ಸರ್ಕಲ್, ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕಾರ್ಪೋರೇಷನ್ ವೃತ್ತದ ಮೂಲಕ ಪುಟ್ಟಣ್ಣಚೆಟ್ಟಿ ಪುರಭವನ ತಲುಪಿ ಬೃಹತ್ ಸಾಮೂಹಿಕ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಟಿಯೂಸಿ ಸಂಘಟನೆಯ ರಾಜ್ಯ ನಾಯಕರು ಮಾತನಾಡಲಿದ್ದಾರೆ. ನಂತರ ಮನವಿ ಪತ್ರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲ್ಲಿಸಲಾಗುವುದು ಎಂದು ಶಿವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಎಐಟಿಯೂಸಿ ಪ್ರಧಾನ ಕಾರ್ಯದರ್ಶಿ ಗಿರೀಶ್, ಸಂಘಟನಾ ಕಾರ್ಯದರ್ಶಿ ಗೌಡರಂಗಪ್ಪ, ವಿ. ಚಿನ್ನಪ್ಪ, ಎನ್. ಶಶಿಕಾಂತ್, ಕಾರ್ಯದರ್ಶಿ ಧಾಮಸ್, ಖಜಾಂಚಿ ಅಶ್ವತ್‌ನಾರಾಯಣ್ ಇತರರು ಉಪಸ್ಥಿತರಿದ್ದರು.
ಬೇಡಿಕೆಗಳು
1. ಕಲ್ಯಾಣ ಯೋಜನೆಗಳ ಸೌಲಭ್ಯ ಹೆಚ್ಚಳ.
2. ಏಕರೀತಿಯ ಸೌಲಭ್ಯಕ್ಕೆ ಒತ್ತಾಯ.
3. ಶೇ. 1 ರ ಸೆಸ್ ಬದಲು ಶೇ. 2 ಸೆಸ್ ಸಂಗ್ರಹ.
4. ವಲಸೆ ಕಾರ್ಮಿಕರ ನೊಂದಾವಣೆ.
5. ಇಎಸ್‌ಐ, ಪಿಎಫ್, ಬೋನಸ್ ಸೌಲಭ್ಯ.
6. ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜಾ, 10 ಸಾವಿರ ರು. ಮಾಸಿಕ ಇತರೆ ಸೌಲಭ್ಯ.
7. ಪಿಂಚಣಿ ಮೊತ್ತ 3000 ಕ್ಕೆ ಏರಿಕೆ.
8. ಅಪಘಾತ ಮರಣಕ್ಕೆ 3 ಲಕ್ಷ, ಶಾಶ್ವತ ಅಂಗವೈಕಲ್ಯಕ್ಕೆ 5 ಲಕ್ಷ ರು.
9. ವೃತ್ತಿಪರ ತರಬೇತಿಗೆ ಕಾರ್ಯಾಗಾರ.
10. ವಿತರಣೆಯಲ್ಲಿ ವಿಳಂಬ ತಡೆ.
11. ಸೆಸ್ ಸಂಗ್ರಹ ನಿರ್ಮಾಣ ಅಂದಾಜು ಮೊತ್ತ 10 ಲಕ್ಷ ಮುಂದುವರಿಕೆ. 25 ಲಕ್ಷ ಮಿತಿ ಕೈಬಿಡುವುದು.
12. ವಯೋವುತಿ ಮೀರಿರುವ ಫಲಾನುಭವಿಗಳಿಗೆ ಕೂಡಲೇ ಪಿಂಚಣೆ ಮಂಜೂರು ಮಾಡುವುದು