ಆನೆ ತುಳಿದವರಿಗೆ ತಿಂಗಳಲ್ಲಿ ಪರಿಹಾರ ನೀಡಿ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಮೇ 22
ಸರ್ಕಾರಿ ದಾರಿಯನ್ನು ಅಡ್ಡಗಟ್ಟಿರುವ ಪ್ರಕರಣ, ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಪ್ರವೇಶ ನಿರಾಕರಿಸಿರುವ ಬಗ್ಗೆ ದೂರು, ಯಾರದೋ ಜಮೀನನ್ನು ಯಾರಿಗೋ ಖಾತೆ ಮಾಡಿರುವ ಕಂದಾಯ ಇಲಾಖೆ ಹೊಣಗೇಡಿತನ, ಆನೆ ತುಳಿದು ಆರು ತಿಂಗಳಾದರು ಪರಿಹಾರ ನೀಡದಿರುವ ಅರಣ್ಯ ಇಲಾಖೆಯ ಬಗ್ಗೆ ಬಂದ ದೂರುಗಳನ್ನು ತುಮಕೂರು ಲೋಕಾಯುಕ್ತ ಉಪಾಧೀಕ್ಷರಾದ ಎಸ್.ಆರ್.ಸಿದ್ದಲಿಂಗಣ್ಣನವರ್ ವಿಚಾರಣೆ ನಡೆಸಿದರು.
ಕಂದಿಕೆರೆ ಹೋಬಳಿಯಲ್ಲಿ ಈ ಹಿಂದೆ ಆನೆಗಳ ಸಂಚಾರದ ಸಮಯದಲ್ಲಿ ಆನೆ ತುಳಿತಕ್ಕೊಳಗಾದ ಬರಶಿಡ್ಲಹಳ್ಳಿ ದೊಡ್ಡಯ್ಯ ಎಂಬುವರಿಗೆ ತಿಂಗಳಾದರು ಪರಿಹಾರದ ಹಣ ಬಂದಿಲ್ಲ ಎಂಬ ದೂರನ್ನು ಕೈಗೆತ್ತಿಕೊಂಡ ಅವರು ಒಂದು ತಿಂಗಳೊಳಗಾಗಿ ಪರಿಹಾರ ಧನ ನೀಡುವಂತೆ ತಾಕೀತು ಮಾಡಿದರು. ಹುಳಿಯಾರಿನ ಗುರುಪ್ರಸಾದ್ ಎಂಬುವರು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆಂಬ ಬಗ್ಗೆ ವಿದ್ಯಾವಾರಿಧಿ ಕೇಂದ್ರೀಯ ಶಾಲೆಯ ಬಗ್ಗೆ ನೀಡಿದ್ದ ದೂರಿನ ವಿಚಾರಣೆ ನಡೆಸಿ, ಸದರಿ ಸಮಸ್ಯೆಯನ್ನು ಪರಿಶೀಲಿಸಿ ದೂರುದಾರರಿಗೆ ಪರಿಹಾರ ದೊರಕಿಸಿಕೊಡುವಂತೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಸದರಿ ಶಾಲೆ ಕೇಂದ್ರೀಯ ಪಠ್ಯ ಕ್ರಮವನ್ನು ಅಳವಡಿಸಿ ಕೊಂಡಿರುವುದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇಷ್ಟಕ್ಕು ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ ಈಗಾಗಲೇ ನಾವು ಒಂದನೇ ತರಗತಿಗೆ ಸರ್ಕಾರದ ನಿಯಮಾವಳಿಯಂತೆ ಮಕ್ಕಳನ್ನು ದಾಖಾಲಾತಿ ಮಾಡಿಕೊಂಡಿರುವುದರಿಂದ ಪುನಃ ದಾಖಲಾತಿ ಮಾಡಿಕೊಳ್ಳುವ ಅವಕಾಶವಿಲ್ಲ, ಒಂದು ವೇಳೆ ಅರ್ಜಿದಾರರು ಬಯಸಿದಲ್ಲಿ ಮುಂದಿನ ವರ್ಷ ಅವರ ಮಗುವನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ ಎಂದು ಉತ್ತರಿಸಿದರು.
ಚರ್ಚಿಸುವೆ: ಅಂತಿಮವಾಗಿ ಜಿಲ್ಲಾ ಉಪನಿರ್ದೇಶಕರ ಬಳಿ ಈ ಬಗ್ಗೆ ಚರ್ಚಿಸುವುದಾಗಿ ಲೋಕಾಯುಕ್ತ ಅಧಿಕಾರಿ ತಿಳಿಸಿದರು.ಕಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 25 ರ ಭೂಮಿಯನ್ನು ದುರಸ್ತಿ ಮಾಡಿಕೊಡುವಂತೆ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿ ಮೂರು ವರ್ಷಗಳಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಯೋಗೀಶ್ ಎಂಬುವವರು ದೂರು ನೀಡಿದ್ದರು. ಈ ಬಗ್ಗೆ ಸದರಿ ದೂರನ್ನು ತಹಸೀಲ್ದಾರ್ ಅವರಿಗೆ ನೀಡಿ ಪ್ರಕರಣವನ್ನು ತುರ್ತಾಗಿ ಮುಗಿಸುವಂತೆ ಸೂಚಿಸಿದರು. ಶೆಟ್ಟೀಕೆರೆ ಗ್ರಾಮಪಂಚಾಯ್ತಿಯವರು ಮಾಕುವಳ್ಳಿ ಗ್ರಾಮದ ಬಸವಯ್ಯ ಎಂಬುವರು ನಿವೇಶನದ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರೂ ಸಹ ಅನಗತ್ಯ ವಿಳಂಬ ಮಾಡುತ್ತಿದ್ದು, ಸದರಿ ಅರ್ಜಿಯನ್ನು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ವರ್ಗಾಯಿಸಿ ಕಾನೂನು ಕ್ರಮ ಕೈಗೊಳ್ಳಳುವಂತೆ ತಿಳಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಮ್ಮ ವ್ಯಾಪ್ತಿಯಲ್ಲಿ ಬರುವ ದೂರುಗಳನ್ನು ವಿಲೇವಾರಿ ಮಾಡಿದ್ದು, ಕೆಲವು ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅಂತಹ ದೂರುಗಳನ್ನು ನಾವು ವಿಲೇವಾರಿ ಮಾಡಲು ಬರುವುದಿಲ್ಲ. ಉಳಿದಂತೆ ಕೆಲವು ಜಟಿಲ ಸಮಸ್ಯೆಗಳು ಉಳಿದಿದ್ದು ಅವುಗಳನ್ನು ಬಗೆಹರಿಸುವಂತೆ ಸಂಬಂದಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ, ಗ್ರೇಡ್-2 ತಹಸೀಲ್ದಾರ್ ಪುಟ್ಟರಾಮಯ್ಯ, ಸೇರಿದಂತೆ ತಾಲೂಕು ಮಟ್ಟದ ಹಲವಾರು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.