ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾನಮತ್ತರಾಗಿ ಶಾಲೆಗೆ ಬರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ

Srinivasa Murthy VN
Updated On : 22 May 2013, 11:22 am

ಕ.ಪ್ರ. ವಾರ್ತೆ ಪಾವಗಡ ಮೇ 22
ಕರ್ತವ್ಯದ ವೇಳೆ ಪಾನಮತ್ತರಾಗಿ ಶಾಲೆಗೆ ಆಗಮಿಸುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಶಾಸಕ ಕೆ.ಎಂ.ತಿಮ್ಮರಾಯಪ್ಪ ಬಿಇಒ ಅವರಿಗೆ ಆದೇಶಿಸಿದರು.
ತಿಮ್ಮರಾಯಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ತಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಇಲಾಖಾವಾರು ಮಾಹಿತಿ ಪಡೆದು ಅವರು ಮಾತನಾಡುತ್ತಿದ್ದರು.
ತಾಲೂಕಿನ ಜನತೆ ಬದಲಾವಣೆ ಬಯಸಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ಅನುಗುಣವಾಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಶಾಸಕರು ಅಭಿವೃದ್ಧಿಯಲ್ಲಿ ಇಲಾಖೆಯ ಅಧಿಕಾರಿಗಳು ಪಾರದರ್ಶಕತೆ ಕಾಪಾಡಿ ಆಡಳಿತ ಯಂತ್ರಕ್ಕೆ ಸಹಕರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಪಟ್ಟಣ ಸೇರಿದಂತೆ ಗ್ರಾಮೀಣಾ ಪ್ರದೇಶಗಳಲ್ಲಿ ಕೆಲ ಶಿಕ್ಷಕರು ಪಾನಮತ್ತರಾಗಿ ಶಾಲೆಗಳಿಗೆ ಆಗಮಿಸುತ್ತಿದ್ದು ಅವರನ್ನು ಗುರುತಿಸಿ ವೈದ್ಯರಿಂದ ದೃಢೀಕರಿಸುವ ಮೂಲಕ ಮುಲಾಜಿಲ್ಲದೇ ಕ್ರಮ ಜರಿಗಿಸಿ ಮನೆಗಳಿಗೆ ಕಳುಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ.ನಾಗರಾಜಪ್ಪಗೆ ಆದೇಶಿಸಿದ ಅವರು ಶಿಕ್ಷಣಾ ಇಲಾಖೆಯ ಪೂರ್ಣ ಮಾಹಿತಿ ಪಡೆದರು.
ಶಾಲೆಗೆ ಸರಬರಾಜು: ಪ್ರಸಕ್ತ ಸಾಲಿನಲ್ಲಿ ಶೇ.30ರಷ್ಟು ಪಠ್ಯಪುಸ್ತಕ ಹಾಗೂ ಶಾಲಾ ಮಕ್ಕಳ ಸಮವಸ್ತ್ರಗಳು ಇಲಾಖೆಗೆ ಪೂರೈಕೆ ಆಗಿದ್ದು ಗುರುವಾರದಿಂದಲೇ ಶಾಲೆಗೆ ಸರಬರಾಜು ಮಾಡಲಾಗುವುದೆಂದ ಬಿಇಒ ಕಳೆದ ವರ್ಷ ಬಾಕಿ ಇದ್ದ 3150 ಸೈಕಲ್‌ಗಳ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವುದಾಗಿ ತಿಳಿಸಿದರು. ಹೆಚ್ಚುವರಿ ಶಿಕ್ಷಕರಿಗೆ ನಕ್ಸಲ್ ಪ್ಯಾಕೇಜ್‌ನಲ್ಲಿ ಬಿಡುಗಡೆಯಾದ ಹಣ ಹಾಗೂ 129ಮಂದಿ ಶಿಕ್ಷಕರ ಕೊರತೆ ಸೇರಿದಂತೆ ಇಲಾಖೆಯ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಶಾಲಾ ಅವರಣ ಬಿಸಿಯೂಟದ ಅಡಿಗೆ ಕೋಣೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಗುತ್ತಿಗೆ ಪದ್ಧತಿ ವಿರೋಧಿಸಿದ ಶಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಮೂಲಕ ಬಿಸಿಯೂಟದ ನಿರ್ವಹಣೆ ಹಾಗೂ ಸೇವಾಮನೋಭಾವ ಕುರಿತು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ತರಬೇತಿ ನೀಡಿ ಎಂದರು.
ಪಟ್ಟಣದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಬೇಕಾದರೆ ಪ್ರತಿ ದಿನ 2ಕಿಮೀ ನಡೆದುಕೊಂಡು ಹೋಗುವ ಅನಿವಾರ್ಯತೆ ಇದೆ ಎಂದ ತಿಮ್ಮರಾಯಪ್ಪ  ಶಾಲಾ ಕಾಲೇಜುವರೆಗೆ ಪ್ರತಿದಿನ 2 ಬಾರಿ ಸರ್ಕಾರಿ ಬಸ್ ನಿಯೋಜಿಸಿ ಎಂದು ಕೆಪಿಟಿಸಿಎಲ್ ತನಿಖಾಧಿಕಾರಿ ರಪೀಕ್ ಹುಸೇನ್ ಎಂಬುವರಿಗೆ ಆದೇಶಿಸಿದರು.
ಗಡಿ ಭಾಗಗಳ ಶಾಲೆಗಳಿಗೆ ನಿಗದಿತ ಅವಧಿಯೊಳಗೆ ತಲುಪಲು ಶಿಕ್ಷಕರು ಅನುಭವಿಸುವ ಯಾತನೆ ಹಾಗೂ ಬಸ್‌ಗಳ ಕೊರತೆಯಿಂದ ಗರ್ಭಿಣಿ ಮಹಿಳೆಯರು ಮತ್ತು ವೃದ್ಧರು ಹಾಗೂ ಅನಾರೋಗಕ್ಕೆ ತುತ್ತಾದವರು ಅನುಭವಿಸುವ ಪರಿಸ್ಥಿಯನ್ನು ವಿವರಿಸಿದ ಶಾಸಕರು ಪಟ್ಟಿ ನೀಡುವ ಮೂಲಕ ಕೂಡಲೇ ಗ್ರಾಮೀಣಾ ಸಾರಿಗೆ ಕಲ್ಪಿಸಿ ಎಂದು ಸಾರಿಗೆ ಅಧಿಕಾರಿಗಳಿಗೆ ಆದೇಶಿಸಿದರು.
ಬಿತ್ತನೆ ಬೀಜ: ಪ್ರಸಕ್ತ ಸಾಲಿನಲ್ಲಿ ತಾಲೂಕಿನ 65ಸಾವಿರ ಹೆಕ್ಟೆರ್ ಪ್ರದೇಶಕ್ಕೆ ಶೇಂಗಾ ಬಿತ್ತನೆ ಬೀಜ ಅವಶ್ಯಕತೆ ಇದ್ದು 8 ಸಾವಿರ ಬಿತ್ತನೆ ಕಡಲೇ ಕಾಯಿ ಸ್ಟಾಕ್ ಇದೆ ಎಂದ ಅವರು ಸಹಾಯಕ ನಿರ್ದೇಶಕ ಶ್ರೀಧರ್ ರೈತರಿಗೆ ಇಲಾಖೆಯಲ್ಲಿ ಲಭ್ಯವಿರುವ ಪೂರ್ಣ ಮಾಹಿತಿ ಬಗ್ಗೆ ಶಾಸಕರಿಗೆ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ 1ಕೋಟಿ ಹಾಗೂ ತಾ.ದೊಡ್ಡಹಳ್ಳಿಯಲ್ಲಿ ವಾಜಪೇಯಿ ವಸತಿ ಶಾಲೆ ನಿರ್ಮಾಣಕ್ಕೆ 10ಕೋಟಿ ಮಂಜೂರಾಗಿದ್ದು ನಿವೇಶನದ ಕೂರತೆ ಇದೆ ಎಂದ ಸಮಾಜ ಕಲ್ಯಾಣಾಧಿಕಾರಿ ಚೌದರಿ ನಿವೇಶನ ಕಲ್ಪಿಸಿದರೆ ಕೂಡಲೇ ಕೆಲಸ ಪ್ರಾರಂಭಿಸುವುದಾಗಿ  ತಿಳಿಸಿದರು. ಸಭೆಯಲ್ಲಿ ಜಲಾನಯನ, ಬೆಸ್ಕಾಂ, ಆರೋಗ್ಯ, ಜಿಪಂ, ತೋಟಗಾರಿಕೆ, ಪಶುವೈದ್ಯ, ಅಗ್ನಿಶಾಮಕ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿ ಪಡೆದ ತಿಮ್ಮರಾಯಪ್ಪ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವುದು, ಪದೇ ಪದೇ ಇಲಾಖೆ ಸುತ್ತ ಅಲೆಸುವುದು, ಇಲಾಖೆ ವ್ಯಾಪ್ತಿಯ ಕೆಲಸ ಕಾರ್ಯಗಳಲ್ಲಿ ವಿಳಂಬ ಮಾಡಿದರೆ ವರ್ಗಾವಣೆ ಮಾಡದೇ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ರಾಧಮ್ಮ ರಾಜ್ ಗೋಪಾಲ್, ಉಪಾಧ್ಯಕ್ಷ ಗೋವಿಂದಪ್ಪ, ಇಒ ರಂಗನಾಥ್, ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement