ವೈರ್ಲೆಸ್ ವ್ಯವಸ್ಥೆ ನಿರ್ವಹಣೆ ಇಲ್ಲದೆ ಸೇವೆಗೆ ತೊಂದರೆ
ಕ.ಪ್ರ. ವಾರ್ತೆ ಕುಣಿಗಲ್ ಮೇ 22
ಪುರಸಭೆ ವತಿಯಿಂದ ನಾಗರಿಕರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 2009ರಲ್ಲಿ, ಲಕ್ಷಾಂತರ ರು. ವ್ಯಯ ಮಾಡಿ ಖರೀದಿಸಲಾದ ವೈರ್ಲೆಸ್ ವ್ಯವಸ್ಥೆ ಸಮರ್ಪಕ ನಿರ್ವಹಣೆ ಮಾಡದ ಕಾರಣ, ವೈರ್ಲೆಸ್ ವ್ಯವಸ್ಥೆ ಇದ್ದೂ ಇಲ್ಲದಂತಾಗಿ ಹಲವು ಮೂಲಭೂತ ಸೇವೆಗಳ ಪೂರೈಕೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಪುರಸಭೆ ವ್ಯಾಪ್ತಿಯಲ್ಲಿ ನೈರ್ಮಲ್ಯ ನಿರ್ವಹಣೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ನಾಗರಿಕರ ಸಮಸ್ಯೆಗಳಿಗೆ, ತುರ್ತಾಗಿ ಸ್ಪಂದಿಸುವ ಸಲುವಾಗಿ, ಸರ್ಕಾರ, ಸುಮಾರು 3.25 ಲಕ್ಷ ರು. ವೆಚ್ಚದಲ್ಲಿ ಆಗಸ್ಟ್ 31, 2009ರಲ್ಲಿ ಕುಣಿಗಲ್ ಪುರಸಭೆ ವ್ಯಾಪ್ತಿಯಲ್ಲಿ ವೈರ್ಲೆಸ್ ವಾಕಿಟಾಕಿ ವ್ಯವಸ್ಥೆ ಜಾರಿಗೆ ತಂದು, ಪುರಸಭೆ ವ್ಯಾಪ್ತಿಯ ಕುಡಿಯುವ ನೀರು ಪೂರೈಕೆಯ ನಾಲ್ಕು ಪಂಪ್ಹೌಸ್ಗಳು, ಕುಡಿಯುವ ನೀರು ವಿತರಣೆ ಹೊಣೆ ಹೊತ್ತಿರುವ ಲೈನ್ಮೆನ್, ಆರೋಗ್ಯ ನಿರೀಕ್ಷಕರು , ಮುಖ್ಯಾಧಿಕಾರಿ ಸೇರಿದಂತೆ ಅಧ್ಯಕ್ಷ, ಹಾಗೂ ಉಪಾಧ್ಯಕ್ಷರು ಬಳಸಲು ಸುಮಾರು 18 ಮೋಟರೋಲಾ ವಾಕಿಸೆಟ್ಗಳನ್ನು ವಿತರಿಸಲಾಗಿತ್ತು.
ಆಗಸ್ಟ್ 2009ರಲ್ಲಿ ಅಂದಿನ ಪುರಸಭಾಧ್ಯಕ್ಷೆ ರಾಜೇಶ್ವರಿ ಸುಗಂಧರಾಜು ವೈರ್ಲೆಸ್ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಪ್ರಾರಂಭದಲ್ಲಿ ವಾಕಿಟಾಕಿಗಳನ್ನು, ಕುಡಿಯುವ ನೀರು ಪೂರೈಕೆ ಸೇರಿದಂತೆ, ವಿವಿಧ ವಾರ್ಡ್ಗಳಲ್ಲಿ ಘನತ್ಯಾಜ್ಯ ವಿಲೆವಾರಿ ಹಾಗೂ ನೈರ್ಮಲ್ಯ ನಿರ್ವಹಣೆಗೆ ದೂರು ಪಡೆದು ಪುರಸಭಾ ಸಿಬ್ಬಂದಿ ಹಾಗೂ
ಜನಪ್ರತಿನಿಧಿಗಳು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಯಶಸ್ವಿಯಾಗಿ ಬಳಸಿ, ನಾಗರಿಕರಿಗೆ ಉತ್ತಮ ಸೇವೆ ನೀಡಲಾಯಿತು.
ಕಾಲ ಕಳೆದಂತೆ ವಾಕಿಟಾಕಿ ಸೆಟ್ಗಳನ್ನು ಪಡೆದಂತಹ ಲೈನ್ಮೆನ್ಗಳಾಗಲಿ, ಜವಾಬ್ದಾರಿಯುತ ಸಿಬ್ಬಂದಿ ಸೇರಿದಂತೆ ಜನಪ್ರತಿನಿಧಿಗಳು, ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ, ಲಕ್ಷಾಂತರ ರು. ವ್ಯಯಿಸಿ ಹಾಕಲಾದ ವೈರ್ಲೆಸ್ ವ್ಯವಸ್ಥೆ ಮೂಲೆಗುಂಪಾಯಿತು.
ಇದರಿಂದಾಗಿ ಕುಡಿಯುವ ನೀರು ವಿತರಣಾ ವ್ಯವಸ್ಥೆಗೆ ಭಾರಿ ತೊಡಕಾಗಿ ದಿನಂಪ್ರತಿ, ಪಂಪ್ಹೌಸ್ಗಳಿಂದ ಮುಖ್ಯ ಸರಬರಾಜು ಟ್ಯಾಂಕ್ಗಳಿಗೆ ನೀರು ಹರಿಸಲು ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದೆ ದಿನಂಪ್ರತಿ ಸಾವಿವಾರು ಲೀಟರ್ ಶುದ್ಧೀಕರಿಸಿದ ನೀರು ವೃಥಾ ಟ್ಯಾಂಕ್ ತುಂಬಿ ಚರಂಡಿ, ಮುಖ್ಯರಸ್ತೆಯಲ್ಲಿ ಹರಿಯುವಂತಾಗಿದೆ.
ಆರೋಪ: ವಾಕಿಟಾಕಿ ಅಸಮರ್ಪಕ ನಿರ್ವಹಣೆ ಬಗ್ಗೆ ಮುಖ್ಯಾಧಿಕಾರಿಗಳು ಸೇರಿದಂತೆ ಆಯಕಟ್ಟಿನ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ಕಾರಣ ಹುಡುಕಲು ಹೊರಟರೆ, ಮೊಬೈಲ್ ಆದರೆ ನಾಟ್ ರೀಚಬಲ್ ಅಥವಾ ಸ್ವಿಚ್ ಆಫ್ ಮಾಡಿಕೊಳ್ಳಬಹುದು. ಆದರೆ, ವಾಕಿಟಾಕಿ ಸೆಟ್ ಹಾಗೆ ಮಾಡುವಂತೆಯೂ ಇಲ್ಲ, ಅಲ್ಲದೆ ಪುರಸಭೆ ಮಿತಿಯಲ್ಲೆ ಇದ್ದು ಸೇವೆ ನೀಡಬೇಕಾಗುತ್ತದೆ. ಅದ್ದರಿಂದ ಕೆಲ ಸ್ವಾರ್ಥ ಸಾಧನೆಯ, ಮೈಗಳ್ಳ ಸಿಬ್ಬಂದಿಯಿಂದ ಲಕ್ಷಾಂತರ ರು. ವ್ಯಯಿಸಿ ಜಾರಿಗೆ ತಂದ ವೈರ್ ವ್ಯವಸ್ಥೆ ಮೂಲೆಗುಂಪಾಯಿತೆಂದು ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್, ವೈರ್ಲೆಸ್ ವ್ಯವಸ್ಥೆ ಬೇಕೆಂದೆ ಹಾಳುಗೆಡವಿರುವ ಬಗ್ಗೆ ಆರೋಪಿಸುತ್ತಾರೆ.
ಶೀಘ್ರ ಕ್ರಮ : ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುರಸಭೆ ಮುಖ್ಯಾಧಿಕಾರಿ ಶುಭಾ, ತಾವು ಕಳೆದೆರಡು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದು, ಅಧಿಕಾರ ವಹಿಸಿಕೊಂಡಾಗಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ವೈರ್ಲೆಸ್ ವ್ಯವಸ್ಥೆಯ ಬಗ್ಗೆ ಶೀಘ್ರವೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.